ವಿಂಗಡಿಸದ

ಎಲ್ಲಾ ದೇಶದ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ ಘೋಷಿಸಿದ “ಕೀನ್ಯಾ”

ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ದೇಶಗಳು ವೀಸಾ-ಮುಕ್ತ ಪ್ರವೇಶ ಘೋಷಿಸುವುದು ಸಾಮಾನ್ಯವಾಗುತ್ತಿದೆ. ಅಂತೆಯೇ ಈಗ “ಕೀನ್ಯಾ” (Kenya) ದೇಶವೂ ಕೂಡಾ ಎಲ್ಲಾ ಜಾಗತಿಕ ಪ್ರಯಾಣಿಕರಿಗೆ ಜನವರಿ 2024 ರಿಂದಲೇ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದೆ.

ಉಜ್ವಲಾ ವಿ ಯು

ಪ್ರವಾಸೋದ್ಯಮವನ್ನು ಹೆಚ್ಚಿಸುವ ಮತ್ತು ಜಾಗತಿಕ ಸಂಪರ್ಕಗಳನ್ನು ಉತ್ತೇಜಿಸುವ ನಿಟ್ಟಿನಿಂದ, ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಡಿಸೆಂಬರ್ 12 ರಂದು ನೈರೋಬಿಯಲ್ಲಿ ನಡೆದ ಜಮ್ಹುರಿ ದಿನ (ಸ್ವಾತಂತ್ರ್ಯ ದಿನಾಚರಣೆ) ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಿದರು.

“ಜನವರಿ 2024 ರಿಂದ, “ಕೀನ್ಯಾ” ವೀಸಾ-ಮುಕ್ತ (Visa Free Entry) ದೇಶವಾಗಲಿದೆ. ಕೀನ್ಯಾಕ್ಕೆ ಬರಲು ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಹೊರೆಯನ್ನು ಜಗತ್ತಿನ ಯಾವುದೇ ಮೂಲೆಯಿಂದ ಯಾವುದೇ ವ್ಯಕ್ತಿಯೂ ಇನ್ನು ಮುಂದೆ ಹೊರುವ ಅಗತ್ಯವಿಲ್ಲ,” ಎಂದು ರುಟೊ ಹೇಳಿದರು.

ಈ ಉಪಕ್ರಮವನ್ನು ಜಾರಿಗೊಳಿಸಲು, ಹೊಸದಾಗಿ ಡಿಜಿಟಲ್ ವೇದಿಕೆ (Digital Platform) ಯನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಪ್ರವೇಶ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುತ್ತಿದೆ.

Kenya Announces Visa Free entry for all Visitors from Jan 2024

ಈ ನವೀನ ಡಿಜಿಟಲ್ ವೇದಿಕೆಯು ಪ್ರಯಾಣಿಕರಿಗೆ ಎಲೆಕ್ಟ್ರಾನಿಕ್ ಪ್ರಯಾಣದ ಅಧಿಕಾರವನ್ನು ನೀಡುತ್ತದೆ ಮತ್ತು ವೀಸಾ (Visa application process) ಅರ್ಜಿ ಪ್ರಕ್ರಿಯೆಯ ತೊಡಕನ್ನು ತೆಗೆದುಹಾಕುತ್ತದೆ ಎಂದು ಕೀನ್ಯ ಅಧ್ಯಕ್ಷ ರುಟೊ ಅವರು ಹೇಳಿದ್ದಾರೆ.

ಪ್ರವಾಸಿಗರು, ಹೂಡಿಕೆದಾರರೊಂದಿಗಿನ ಸಂಪರ್ಕ ಹೆಚ್ಚಿಸಲು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಇಂಡೋನೇಷ್ಯಾ, ಸೆನೆಗಲ್ ಮತ್ತು ಕಾಂಗೋದ ನಾಗರಿಕರಿಗೆ ಕೀನ್ಯಾ ಈ ಹಿಂದೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಿತ್ತು.

ನಂತರ ನವೆಂಬರ್‌ನಲ್ಲಿ ಎಲ್ಲಾ ಆಫ್ರಿಕನ್ನರಿಗೆ ವೀಸಾ-ಮುಕ್ತ ಪ್ರಯಾಣವನ್ನು ಘೋಷಿಸಿತ್ತು. ಈಗ ಜಾಗತಿಕ ಮಟ್ಟದಲ್ಲಿ ಎಲ್ಲಾ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದೆ.

ಕೀನ್ಯಾ, ಅದರ ವೈವಿಧ್ಯಮಯ ಭೂದೃಶ್ಯಗಳು ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದು ಪ್ರವಾಸೋದ್ಯಮವನ್ನು ತನ್ನ ಆರ್ಥಿಕತೆಯ ಪ್ರಮುಖ ಅಂಗವಾಗಿ ಅವಲಂಬಿಸಿದೆ. ವೀಸಾವನ್ನು ಮನ್ನಾ ಮಾಡುವ ನಿರ್ಧಾರವು ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

“ಕೀನ್ಯಾವು ಮಾನವೀಯತೆಗೆ ಸರಳ ಸಂದೇಶವನ್ನು ಹೊಂದಿದೆ: ನಿಮ್ಮ ಮನೆಗೆ ಸ್ವಾಗತ!” ಎಂದು ಹೇಳುವ ಅಧ್ಯಕ್ಷ ರುಟೊ ಅವರ ಈ ಭಾವನೆಯು ಜಾಗತಿಕ ಪ್ರಯಾಣಿಕರಿಗೆ ಮುಕ್ತ ಮತ್ತು ಆಂತರಿಕ ವಾತಾವರಣವನ್ನು ಬೆಳೆಸುವ ದೇಶದ ಬದ್ಧತೆಯನ್ನು ಒತ್ತಿಹೇಳುತ್ತಿದೆ.

ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಕ್ಕಾಗಿ ತನ್ನನ್ನು ತಾನು ಉನ್ನತ ದೇಶವಾಗಿ ಇರಿಸಿಕೊಳ್ಳುವ ಕೀನ್ಯಾದ ಪ್ರಯತ್ನಗಳು ಇಲ್ಲಿ ಎದ್ದು ಕಾಣುತ್ತದೆ.

ಕೆಲವು ತಿಂಗಳ ಹಿಂದೆ ಶ್ರೀಲಂಕಾ, ಥೈಲ್ಯಾಂಡ್‌ ಮತ್ತು ಮಲೇಷಿಯಾ ದೇಶಗಳು ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದ್ದವು. ಈಗ ಕೀನ್ಯಾ ಕೂಡಾ ವೀಸಾ-ಮುಕ್ತ ಪ್ರವೇಶ ಘೋಷಿಸಿದ ದೇಶಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button