ಫೆ.1 ರಿಂದ ಎಂಟು ತಿಂಗಳು ಕುಮಾರ ಪರ್ವತ ಚಾರಣ ನಿಷೇಧ; ಕಾರಣ ಇಲ್ಲಿದೆ
ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ (Kukke Subramanya Temple) ಬಳಿ ಇರುವ ಕುಮಾರ ಪರ್ವತ ಚಾರಣಕ್ಕೆ (Kumara Parvatha Trek) ಫೆಬ್ರುವರಿ 1 ರಿಂದ ನಿಷೇಧ ಹೇರಲಾಗಿದೆ.
ಅಲ್ಲದೇ ಸದ್ಯ ಜಿಲ್ಲಾದ್ಯಂತ ಬಿರುಬಿಸಿಲಿನ ವಾತಾವರಣ ಇರುವ ಮತ್ತು ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಕಾರಣ ಅಕ್ಟೋಬರ್ ತನಕ ಅಥವಾ ಮುಂದಿನ ಆದೇಶದವರೆಗೆ ಕುಮಾರ ಪರ್ವತ ಚಾರಣ ನಿಷೇಧ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಜ.26ರಂದು ಒಂದೇ ದಿನದಲ್ಲಿ 1,000ಕ್ಕೂ ಅಧಿಕ ಮಂದಿ ಚಾರಣಿಗರು ಕುಮಾರ ಪರ್ವತಕ್ಕೆ ಭೇಟಿ ನೀಡಿದ್ದರು. ಇದು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಮುಂದಿನ ಋತುವಿನಿಂದ ಚಾರಣಕ್ಕೆ ಭೇಟಿ ನೀಡುವವರಿಗೆ ಆನ್ ಲೈನ್ ಬುಕ್ಕಿಂಗ್ ಗೆ (Online Booking) ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ.
ಈ ವರ್ಷದ ಚಾರಣ ಅವಧಿ ಮುಗಿದಿದ್ದು, ಪರ್ವತದ ಹುಲ್ಲುಗಾವಲು ಸಂಪೂರ್ಣ ಒಣಗಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ಬೇಗೆಯಿಂದಾಗಿ ಬೆಂಕಿ ಅನಾಹುತ ಸಂಭವಿಸದಿರುವಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಇದೆ.
ಇತ್ತೀಚಿಗೆ ಪರ್ವತಕ್ಕೆ ಭೇಟಿ ನೀಡುವ ಚಾರಣಿಗರ ಸಂಖ್ಯೆಯೂ ಅಧಿಕವಾಗಿದ್ದು, ನೀರಿನ ಸಮಸ್ಯೆಯೂ ಎದುರಾಗುತ್ತಿದೆ.
ಚಾರಣಿಗರು ತಂಗುವ ಗಿರಿಗದ್ದೆ ಮತ್ತು ಇತರ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರು ಒದಗಿಸಲೂ ಸಹ ತೊಂದರೆ ಉಂಟಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಪುಷ್ಪಗಿರಿ ಬೆಟ್ಟಗಳು (Pushpagiri Hills) ಎಂದು ಕರೆಯಲ್ಪಡುವ ಕುಮಾರ ಪರ್ವತ ಅತ್ಯಂತ ಸುಂದರ ಮತ್ತು ಸಾಹಸಮಯ ಚಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಅಪಾರ ಜನಪ್ರಿಯತೆ ಪಡೆದಿರುವ ಈ ಚಾರಣಕ್ಕೆ ಜನಪ್ರಿಯತೆಯೇ ಶಾಪವೆಂಬಂತಾಗಿದೆ.
ದಿನೇ ದಿನೇ ಹೆಚ್ಚುತ್ತಿರುವ ಚಾರಣಿಗರ ಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯ ಮತ್ತು ಇತರೆ ಸಮಸ್ಯೆಗಳೂ ಹುಟ್ಟುಕೊಳ್ಳುತ್ತಿವೆ. ಇದು ಪರಿಸರವಾದಿಗಳಲ್ಲೂ ಆತಂಕ ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ದಿನಕ್ಕೆ 600 ಮಂದಿಗಷ್ಟೇ ಚಾರಣಕ್ಕೆ ಅವಕಾಶ ನೀಡುವಂತೆ ಅರಣ್ಯ ಇಲಾಖೆಯು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಅದರಲ್ಲೂ ಇನ್ನು ಮುಂದೆ ಕುಮಾರ ಪರ್ವತ ಮಾತ್ರವಲ್ಲದೇ ಎಲ್ಲಾ ಕರ್ನಾಟಕದ ಚಾರಣಗಳಲ್ಲೂ ಆನ್ ಲೈನ್ ಬುಕಿಂಗ್ ಖಡ್ಡಾಯಗೊಳಿಸುವ ಸಾಧ್ಯತೆ ಇದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.