ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ಕಂಡು ಬನ್ನಿ
ಜೋಗ ಶಿವಮೊಗ್ಗ ಜಿಲ್ಲೆಯಲ್ಲಿರುವ ಜಲಪಾತ. ಕರ್ನಾಟಕದ ನಯಾಗರ ಅಂತಲೇ ಕರೆಯುತ್ತಾರೆ. ಈ ಜಾಗಕ್ಕೆ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋದ ಅನುಭವವನ್ನು ಕೆ. ಎಂ.ಪವಿತ್ರಾ ಬರಹದ ರೂಪದಲ್ಲಿ ಸ್ವಾಧ ಭರಿತವಾದ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಬಹಳ ದಿನಗಳ ಆಸೆಯಿತ್ತು. ಜೋಗಕ್ಕೊಮ್ಮೆ ಹೋಗಬೇಕೆಂದು. ತಡಮಾಡದೆ ಹೊರೆಟೆವು. ಮೊದಲು ವರದಳ್ಳಿ (Varadahalli) ಯ ಶ್ರೀಧರ ಸ್ವಾಮಿಗಳ ಆಶ್ರಮ ದಲ್ಲಿ ಪೂಜೆಯನ್ನು ಸಲ್ಲಿಸಿ , ಅಲ್ಲಿನ ಶಾಂತವಾದ ವಾತಾವರಣದಲ್ಲಿ ವಿಹಾರವನ್ನು ಮುಗಿಸಿ, ಊಟ ಮಾಡಿ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂದಿನ ಸವಾರಿ ಜೋಗ ಜಲಪಾತದ (Jog falls) ಕಡೆಗೆ ಹೊರಟಿತು.. ಜೋಗ ವನ್ನು ತಲುಪುವಸ್ಟರಲ್ಲಿ ಸಂಜೆ 5.30 ಆಗಿತ್ತು. ಸಿಕ್ಕಾಪಟ್ಟೆ ಪ್ರವಾಸಿಗರು ಜೋಗದ ಸೌಂದರ್ಯವನ್ನು ಸವಿಯಲೆಂದು ಬಂದಿದ್ದರು. ನಾವು ಟಿಕೆಟ್ ಅನ್ನು ತೆಗೆದುಕೊಂಡು ಹೊರಟೆವು. ಆ ಜನಜಂಗುಳಿಯ ಮದ್ಯದಲ್ಲಿ ಎತ್ತರವಾದ ಜಲಪಾತವನ್ನು ನೋಡುವುದು ಕಷ್ಟಕರವಾಗಿತ್ತು.
ಕರ್ನಾಟಕದ ನಯಗಾರ ( Karnataka Niagara)ಎಂದೇ ಖ್ಯಾತಿ ಪಡೆದ ಜೋಗ ಜಲಪಾತವು ಕರ್ನಾಟಕದ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar)ತಾಲ್ಲೂಕಿನಲ್ಲಿದೆ. ಪ್ರತಿ ಸೆಕೆಂಡಿಗೆ 34 ಲಕ್ಷ ಟನ್ ನೀರು ಬೀಳುತ್ತದೆ. ದೇಶದಲ್ಲಿಯೇ ದೊಡ್ಡ ಪ್ರಮಾಣದ ಜಲವಿದ್ಯುತ್ ಪೂರೈಸುವ ಪ್ರದೇಶವೂ ಇದಾಗಿದೆ.
ನಾಲ್ಕು ಜಲಪಾತಗಳೂ ಸೇರಿ ಒಂದು ಜಲಪಾತವಾಗಿ ರೂಪುಗೊಂಡಿದೆ. ರಾಜ, ರಾಣಿ, ರೋರೆರ್, ರಾಕೆಟ್. ಮಳೆಗಾಲದಲ್ಲಿ ತುಂಬಿ ಹರಿಯುವ ಜೋಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ.ಶರಾವತಿ ನದಿಯೇ ಜೋಗ ಜಲಪಾತಕ್ಕೆ ಮೂಲ. 929 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ ಜೋಗದಷ್ಟು ಇಲ್ಲ.ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು.
ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು 829 ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕೆಳಗೆ ಬೀಳುತ್ತದೆ. ಮೂರನೇಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ರಾಣಿ ಜಲಪಾತ ಬೀಳುವ ರಭಸದಿಂದೇಳುವ ನೊರೆಯಿಂದ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.
ಮುಂಗಾರು ಋತುವಿನಲ್ಲಿ ಇಲ್ಲಿಗೆ ಭೇಟಿ ನೀಡಿದರೆ, ಪ್ರವಾಸಿಗರಿಗೆ ಈ ಜಲಪಾತದ ಸೌಂದರ್ಯದ ರೋಚಕತೆಯ ಅನುಭವ ಮುದ ನೀಡುತ್ತದೆ. ಧುಮ್ಮಿಕಿ ಹರಿಯುವ ಜಲಪಾತದ ನೀರು, ಹಾಲಿನಂತಹ ನೊರೆ, ಆಗ್ಗಾಗೆ ಮೂಡುವ ಕಾಮನ ಬಿಲ್ಲು, ಮಳೆ, ಸುತ್ತ ಹಚ್ಚ ಹಸಿರಿನ ರಾಶಿ, ಇಂಥಹ ಅನುಭವ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ.
ನೀವು ಇದನ್ನು ಓದಬಹುದು : 15 ಸಾವಿರವಿದ್ದರೆ ಸಾಕು ಈ ದೇಶಗಳಿಗೆ ವಿಮಾನದಲ್ಲಿ ಹೋಗಬಹುದು
ಜೋಗ ಜಲಪಾತವನ್ನು ಗೇರುಸೊಪ್ಪಾ ಜಲಪಾತ( Gerusoppa falls)ಎಂದೂ ಕರೆಯುತ್ತಾರೆ. ಏಕೆಂದರೆ ಇದು ಗೇರುಸೊಪ್ಪ ಪ್ರದೇಶದಲ್ಲಿದೆ. ಇದು ನಮ್ಮ ದೇಶದ ಅತಿ ಎತ್ತರದ ಜಲಪಾತವಾಗಿದೆ. ಈ ಜಲಪಾತದ ವೈಶಿಷ್ಟ್ಯವೆಂದರೆ, ಇಲ್ಲಿ ನೀರು ನೇರವಾಗಿ ಬೀಳುತ್ತದೆ. ನಡುವೆ, ಬಂಡೆಗಳ ಮೇಲೆ ಹರಿಯುವುದಿಲ್ಲ. ಹೀಗಾಗಿ ಇದರ ಸೌಂದರ್ಯ ವರ್ಣನಾತೀತವಾಗಿದೆ.
ತಲುಪುವ ಮಾರ್ಗ : ಹತ್ತಿರದ ರೈಲು ನಿಲ್ದಾಣ:(Railway )ತಾಳಗುಪ್ಪ,(Talaguppa) ಶಿವಮೊಗ್ಗ ಜಿಲ್ಲೆ. ಇಲ್ಲಿಗೆ ಬೆಂಗಳೂರು ಹಾಗು ಮೈಸೂರಿನಿಂದ ( Bengaluru and Mysuru)ರೈಲು ಸಂಪರ್ಕ ಇದೆ. ಸಮೀಪದ ವಿಮಾನ ನಿಲ್ದಾಣ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ರಸ್ತೆ ಮೂಲಕ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 206, ಬೆಂಗಳೂರಿನಿಂದ 378 ಕಿಮೀ (ಬೆಂಗಳೂರು-ಶಿವಮೊಗ್ಗ-ಸಾಗರ-ಜೋಗ), ಸಾಗರದಿಂದ 45 ಕಿಮೀ, ಸಿದ್ದಾಪುರ 21 ಕಿಮೀ, ಹೊನ್ನಾವರ 56 ಕಿಮೀ
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.