ಕೃಷ್ಣನೂರಿನ ಸುಂದರ ತಾಣಗಳಿವು. ನೀವೂ ಒಮ್ಮೆ ಭೇಟಿ ನೀಡಿ.
ಉಡುಪಿ ಎಂದಾಗ ನಮಗೆ ನೆನಪಾಗುವುದು ಅಲ್ಲಿನ ಕಡಲ ತೀರ. ತುಳು, ಕೊಂಕಣಿ ಭಾಷಿಗರು. ಕುಂದ ಕನ್ನಡ ಸೇರಿದಂತೆ ಕನ್ನಡದ ಬೇರೆ ಬೇರೆ ಪ್ರಾದೇಶಿಕ ಭಾಷೆ ಮಾತನಾಡುವ ಮಂದಿ . ಪ್ರವಾಸಿಗರನ್ನು ಆಕರ್ಷಿಸುವ ಬೀಚ್ ,ಧಾರ್ಮಿಕ ಕ್ಷೇತ್ರಗಳು. ಬೀಚ್, ಧಾರ್ಮಿಕ ಕ್ಷೇತ್ರಗಳ ಜೊತೆಗೆ ಉಡುಪಿಯಲ್ಲಿ ನೋಡಲೇಬೇಕಾದ ಕೆಲವು ತಾಣಗಳಿವೆ. ನೀವು ಕೃಷ್ಣನ ಊರಿಗೆ ಹೋದಾಗ ಈ ತಾಣಗಳನ್ನು ಒಮ್ಮೆ ನೋಡಿಕೊಂಡು ಬನ್ನಿ.
- ನವ್ಯಶ್ರೀ ಶೆಟ್ಟಿ
ಉಡುಪಿಯು, ಕೃಷ್ಣ ಮಠ, ಮಲ್ಪೆ ಕಡಲ ತೀರಗಳಿಂದ ಪ್ರಸಿದ್ದಿ ಪಡೆದುಕೊಂಡಿದೆ. ಬೀಚ್, ಧಾರ್ಮಿಕ ಸ್ಥಳಗಳು ಸೇರಿದಂತೆ ಉಡುಪಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹತ್ತು ಹಲವಾರು ತಾಣಗಳಿವೆ. ಇಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳಿವೆ, ಪ್ರಸಿದ್ಧ ವ್ಯಕ್ತಿಗಳ ಹುಟ್ಟೂರಿನಲ್ಲಿ ಅವರ ನೆನಪಿನ ಜೊತೆಗೆ, ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣಗಳಿವೆ. ನಿಮಗೆ ಮುದ ನೀಡುವ ದ್ವೀಪಗಳು, ಬಸದಿಗಳು, ಚರ್ಚ್ ಸೇರಿದಂತೆ ಉಡುಪಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಕೆಲವು ತಾಣಗಳ ಮಾಹಿತಿ ನಿಮಗಾಗಿ . ಕೃಷ್ಣನ ಊರಿಗೆ ಬಂದಾಗ ಒಮ್ಮೆ ನೋಡಿಕೊಂಡು ಬನ್ನಿ.
ಪಾಜಕ (pajaka)
ಪಾಜಕ ಎಂದಾಗ ನಮಗೆ ನೆನಪಾಗುವುದು ಮಧ್ವಾಚಾರ್ಯರು. ದ್ವೈತ ಮತದ ಸ್ಥಾಪಕರ ಹುಟ್ಟೂರು ಪಾಜಕ. ಕುಂಜರಗಿರಿಯ ಹತ್ತಿರದಲ್ಲಿದೆ. ಧಾರ್ಮಿಕ ಸ್ಥಳದ ಜೊತೆಗೆ ಮಧ್ವಾಚಾರ್ಯರ ಹುಟ್ಟೂರಿನ ಭಾವನಾತ್ಮಕ ನೆಲೆಯಲ್ಲಿ ಈ ತಾಣ ಗುರುತಿಸಿಕೊಂಡಿದೆ. ಇಲ್ಲಿ ಮಧ್ವರ ಪಾದ ಚಿಹ್ನೆಯಿದೆ. ಪಾಜಕ ಸುಂದರ ಕೊಳ, ಮಧ್ವಾಚಾರ್ಯರ ಮಂದಿರ ನಿಮ್ಮನ್ನೂ ಆಕರ್ಷಿಸುತ್ತದೆ. ನವೀಕರಣ ಹೊಂದಿರುವ ಪಾಜಕ ಸುಂದರವಾಗಿ ಕಾಣುತ್ತದೆ. ನೀವು ಕಟಪಾಡಿ ಮಾರ್ಗವಾಗಿ ಪಾಜಕ ತಲುಪಬಹುದು.
ಕತ್ತಲ ಬಸದಿ (dark basadi )
ಕತ್ತಲ ಬಸದಿ, ಉಡುಪಿಯಿಂದ 18 -20 ಕಿಮೀ ದೂರದಲ್ಲಿದೆ. ಆಧುನಿಕತೆಯ ಸ್ಪರ್ಶ ತಾಗದೇ ಅದೇ ಸಹಜ ಸೌಂದರ್ಯವನ್ನು ಹೊಂದಿರುವ ಒಂದು ಪ್ರವಾಸಿ ಸ್ಥಳ. ತುಳು ರಾಜರ ರಾಜಧಾನಿಯಾಗಿದ್ದ ಬಾರ್ಕೂರಿನಲ್ಲಿ(barkuru) ಈ ಕತ್ತಲ ಬಸದಿಯಿದೆ. ಇದೊಂದು ಸುಂದರ ಸ್ಥಳ. ಕಪ್ಪು ಶಿಲೆಗಳಿಂದ ನಿರ್ಮಾಣವಾದ ಕಾರಣಕ್ಕೆ ಕತ್ತಲ ಬಸದಿ ಎನ್ನುವ ಹೆಸರು . ತುಳು ಅರಸ ಅಳುಪನ ಕೊಡುಗೆ ಈ ಬಸದಿ.
ಇಲ್ಲಿ ಸಾಕಷ್ಟು ಪ್ರೀ ವೆಡ್ಡಿಂಗ್ ಶೂಟ್ ನಡೆಯುತ್ತದೆ. ಬಾರಕೂರಿನ ಮುಖ್ಯ ಪಟ್ಟಣದಲ್ಲಿ ನೀವು ಈ ಬಸದಿ ನೋಡಬಹುದು. ಬಾರ್ಕೂರಿನಲ್ಲಿ ಕತ್ತಲ ಬಸದಿ ಸೇರಿದಂತೆ ತುಳು ಅರಸರ ಹಲವು ಇತಿಹಾಸ ಕೊಡುಗೆ ಸಾರುವ ತಾಣಗಳಿವೆ. ನೀವು ಉಡುಪಿಯಿಂದ ಸಿದ್ದಾಪುರ (siddapura) ಹೋಗುವ ಮಾರ್ಗದಲ್ಲಿ ಸಾಗಿದರೆ ಈ ಬಸದಿ ತಲುಪಬಹುದು. ಉಡುಪಿಯಲ್ಲಿ ಕಾಲ ಕಾಲಕ್ಕೆ ಬಸ್ ಕೂಡ ಲಭ್ಯ.
ಅತ್ತೂರು ಚರ್ಚ್ (atturu church)
ಅತ್ತೂರು ಚರ್ಚ್ ನಲ್ಲಿ ನಡೆಯುವ ಉತ್ಸವ, ಉಡುಪಿಯ ಪ್ರಸಿದ್ಧ ಉತ್ಸವಗಳಲ್ಲಿ ಒಂದು . ಸರ್ವಧರ್ಮೀಯರು ಸೇರುವ ಜಾತ್ರೆ. ಈ ಅತ್ತೂರು ಚರ್ಚ್ ಇರುವುದು ಕಾರ್ಕಳ ತಾಲೂಕಿನಲ್ಲಿ. ಹಸಿರ ಮಡಿಲಿನಲ್ಲಿ ಇರುವ ಈ ಚರ್ಚ್ ರೋಮನ್ ಕ್ಯಾಥೋಲಿಕ್ (roman catholic)ದೇವಾಲಯ. ಅತ್ತೂರು ಚರ್ಚ್ ತನ್ನ ವಾರ್ಷಿಕ ಜಾತ್ರೆಗೆ ಹೆಸರುವಾಸಿ.
ಎಂಡ್ ಪಾಯಿಂಟ್ (end point)
ಇದು ಮಣಿಪಾಲ( manipal) ಜನರಿಗೆ ನೆಚ್ಚಿನ ತಾಣ. ಉಡುಪಿ ಜಿಲ್ಲೆಯ ಹೃದಯ ಎನ್ನುವಂತೆ ಮಣಿಪಾಲದ ಈ ಎಂಡ್ ಪಾಯಿಂಟ್ . ಸಂಜೆ ಸಮಯದಲ್ಲಿ ಎಂಡ್ ಪಾಯಿಂಟ್ ನೋಡುವುದೇ ಚಂದ. ಇದು ಉಡುಪಿಯ ಜೀವ ನದಿ ಸ್ವರ್ಣ ನದಿಯ (swarna river) ಹತ್ತಿರದಲ್ಲಿದೆ. ಇದು ಮಣಿಪಾಲದ ತುದಿಯಲ್ಲಿರುವ ಸ್ಥಳ. ವಿಶಾಲ ವಿಸ್ತಾರ ಹೊಂದಿರುವ ಪಾರ್ಕ್ ಎನ್ನುವಂತೆ ಭಾಸವಾಗುವ ಜಾಗ. ರಜತಾದ್ರಿ, ಮಣಿಪಾಲ ಎಂ. ಐ. ಟಿ (M.I.T) ಕ್ಯಾಂಪಸ್ ಮಾರ್ಗವಾಗಿ ನೀವು ಎಂಡ್ ಪಾಯಿಂಟ್ ತಲುಪಬಹುದು. ನಿಗದಿತ ಸಮಯದಲ್ಲಿ ಮಾತ್ರ ಇಲ್ಲಿ ಸುತ್ತಾಟಕ್ಕೆ ಅವಕಾಶ.
ನೀವುಇದನ್ನುಇಷ್ಟಪಡಬಹುದು: ಗುಂಡು ಪಾದೆಯಲ್ಲಿ ದುಂಡನೆಯ ಸೂರ್ಯ: ಉಡುಪಿಯಿಂದ ಕೊಂಚ ದೂರದಲ್ಲಿ ಅಪೂರ್ವ ಸೂರ್ಯ ದರ್ಶನ
ಕೂಸಳ್ಳಿ ಜಲಪಾತ (kusalli falls)
ದಟ್ಟ ಕಾನನದ ನಡುವೆ ಇರುವ ಸುಂದರ ತಾಣ ಕೂಸಳ್ಳಿ ಜಲಪಾತ. ಉಡುಪಿಯಿಂದ ಸುಮಾರು 120 ಕಿಮಿ ದೂರದಲ್ಲಿದೆ. ಬೈಂದೂರು(byandoor) ತಾಲೂಕಿನಲ್ಲಿದೆ. ಕಲ್ಲು ಬಂಡೆಗಳ ಕೆಳಗೆ ಧುಮ್ಮಿಕ್ಕಿ ಹರಿಯುವ ಜಲಪಾತ ರಮಣೀಯ ದೃಶ್ಯವನ್ನು ನೀಡುತ್ತದೆ. ನೀವೂ ಈ ದೃಶ್ಯ ಕಣ್ತುಂಬಿ ಕೊಳ್ಳಬೇಕಾದರೆ ಕೂಸಳ್ಳಿ ಗ್ರಾಮದಿಂದ 5 ಕಿಮಿ ನಡೆದುಕೊಂಡು ಸಾಗಬೇಕು. ಮಳೆಗಾಲ ಸಮಯದಲ್ಲಿ ಇಲ್ಲಿನ ಬಂಡೆಗಳು ಜಾರುವುದರಿಂದ ಕೊಂಚ ಕಷ್ಟ . ನವೆಂಬರ್ , ಡಿಸೆಂಬರ್ ತಿಂಗಳು ಇಲ್ಲಿ ಚಾರಣ ಮಾಡಲು ಹೇಳಿ ಮಾಡಿಸಿದ ಸಮಯ.
ಸೋಮೇಶ್ವರ ಅಭಯಾರಣ್ಯ (someshwara wildlife sanctuary)
ಸೋಮೇಶ್ವರ ಉಡುಪಿಯಿಂದ ಸುಮಾರು 40ಕಿಮೀ ದೂರದಲ್ಲಿದೆ. ಸೋಮೇಶ್ವರ ಅಭಯಾರಣ್ಯದಲ್ಲಿ ವೈವಿಧ್ಯಮಯ ಪ್ರಾಣಿ, ಪಕ್ಷಿ ಸಂಕುಲಗಳ ಜೊತೆಗೆ ವಿವಿಧ ಅಗಾಧವಾದ ಸಸ್ಯ ಸಂಪತ್ತನ್ನು ಕೂಡ ನೀವು ನೋಡಬಹುದು. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಅಭಯಾರಣ್ಯ ನಿತ್ಯ ಹರಿದ್ವರ್ಣ ಕಾಡಿನಿಂದ ಕೂಡಿದ್ದು, ಹಸಿರಿನ ಮೈ ಸಿರಿಯನ್ನು ಹೊದ್ದುಕೊಂಡಷ್ಟು ಬಹು ಸೊಗಸು.
ಸೇಂಟ್ ಮೇರಿಸ್ ದ್ವೀಪ (saint marris island)
ಮಲ್ಪೆಯ (malpe) ಕಡಲ ತೀರದಲ್ಲಿ ಕಂಡು ಬರುವ ಈ ಸೇಂಟ್ ಮೇರಿಸ್ ದ್ವೀಪ ನೋಡುವುದೇ ಸೊಗಸು. ಇದು ಇತ್ತೀಚಿನ ದಿನ ಮಾನಗಳಲ್ಲಿ ಸದ್ದಿಲ್ಲದೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಲ್ಪೆ ಕಡಲ ತೀರದಿಂದ 6 ಕಿಮೀ ದೂರವಿರುವ ಈ ದ್ವೀಪವನ್ನು ನೋಡಬೇಕಾದರೆ ನೀವು ದೋಣಿಯ ಮೂಲಕವೇ ಸಾಗಬೇಕು.
ಸುಂದರ ಪ್ರಕೃತಿಯ ನಡುವೆ ಸುಂದರ ದ್ವೀಪ ನೋಡಲು ದೋಣಿಯ ವಿಹಾರ ಸೊಗಸೇ ಬೇರೆ. ಇದನ್ನು ಕೋಕೊನೆಟ್ ದ್ವೀಪ ಎಂದು ಕೂಡ ಕರೆಯುತ್ತಾರೆ. ಈ ದ್ವೀಪದಲ್ಲಿ ಕಂಡು ಬರುವ ಶಿಲೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳು. ಇದು ಮಡಗಾಸ್ಕರ್ (madagaskar) ದೇಶದ ಉಪಖಂಡದೊಂದಿಗೆ ಹೊಂದಿಕೊಂಡಿದೆ ಎಂದು ಕೂಡ ಹೇಳುತ್ತಾರೆ. ಈ ಸುಂದರ ದ್ವೀಪಕ್ಕೆ ನೀವು ಉಡುಪಿ ಬಂದಾಗ ಮರೆಯದೇ ಒಮ್ಮೆ ಭೇಟಿ ನೀಡಿ.
ಕಾರಂತರ ಥೀಂ ಪಾರ್ಕ್, ಕೋಟ (karanth theme park ,kota)
ಕೋಟ , ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ ಹುಟ್ಟೂರು. ಅವರ ನೆನಪಿಗಾಗಿ ಥೀಂ ಪಾರ್ಕ್ ಆರಂಭಿಸಲಾಗಿದೆ. ಈ ಥೀಂ ಪಾರ್ಕ್ ನೋಡಿದಾಗ ಸಾಹಿತ್ಯ ಪ್ರೇಮಿಗಳಿಗೆ , ಕಾರಂತಜ್ಜನ ಸಾಹಿತ್ಯ ಕೃಷಿ ಒಮ್ಮೆಲೆ ನೆನಪಿನ ಪುಟದಿಂದ ಕಣ್ಮುಂದೆ ಹಾದು ಹೋಗುತ್ತದೆ. ಇಲ್ಲಿ ಕಾರಂತರ ನೆನಪುಗಳನ್ನು ಸಾರುವ ಚಿತ್ರಗಳಿವೆ, ಕೆಲವು ಪ್ರತಿಮೆಗಳಿವೆ. ಪುಟ್ಟದಾದ ಗ್ರಂಥಾಲಯ ಕೂಡ ನೀವು ನೋಡಬಹುದು.
ಥೀಂ ಪಾರ್ಕ್ ಒಳ ಹೊಕ್ಕುತ್ತಿದ್ದಂತೆ ನೀವು ಕರಾವಳಿಯ ಗಂಡು ಕಲೆ ಯಕ್ಷಗಾನದ ಪ್ರತಿಮೆ, ಕಲ್ಲಿನ ಉಯ್ಯಾಲೆ, ಪುಷ್ಕರಣಿಯ ಮಧ್ಯದಲ್ಲಿ ನಿಂತಿರುವ ಕಾರಂತರ ಪ್ರತಿಮೆ, ರಾಧಾ ಕೃಷ್ಣರ ತೂಗು ಉಯ್ಯಾಲೆಗಳು, ಹೀಗೆ ಹಲವು ಪ್ರತಿಮೆಗಳು ನಿಮ್ಮ ಕಣ್ಣು ಅತ್ತ ನೋಟ ಹಾಯಿಸುವಂತೆ ಮಾಡುತ್ತದೆ. ಇಲ್ಲಿ ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ , ಒಂದಿಲ್ಲೊಂದು ಸಾಹಿತ್ಯ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ನೀವು ಕೋಟ ಅಮೃತೇಶ್ವರಿ ದೇವಾಲಯ ಪಕ್ಕದಲ್ಲಿರುವ ಹಾದಿಯಲ್ಲಿ ಸಾಗಿದರೆ 5 ನಿಮಿಷ ದೂರದಲ್ಲಿ ನೀವು ಥೀಂ ಪಾರ್ಕ್ ತಲುಪಬಹುದು.
ಹೀಗೆ ಉಡುಪಿಯಲ್ಲಿ ಸಾಕಷ್ಟು ಸುಂದರ ತಾಣಗಳಿವೆ. ಅವುಗಳ ಪಟ್ಟಿ ಬಹು ದೊಡ್ಡದು. ನೀವು ಉಡುಪಿ ಬಂದಾಗ ಅಲ್ಲಿನ ಸುಂದರ ತಾಣಗಳಿಗೆ ಮರೆಯದೇ ಭೇಟಿ ನೀಡಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ