ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲಿವೆಯೇ ಲಕ್ಕುಂಡಿ, ಶ್ರವಣಬೆಳಗೊಳ?;

ಹಾಸನದ ಶ್ರವಣಬೆಳಗೊಳ ಮತ್ತು ಗದಗ್ ಜಿಲ್ಲೆಯ ಲಕ್ಕುಂಡಿ ಸ್ಮಾರಕಗಳನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಆರಂಭಿಕ ಚಾಲನೆ ದೊರೆತಿದೆ.

ಉಜ್ವಲಾ ವಿ.ಯು.

ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು (DAMH) ಈ ಐತಿಹಾಸಿಕ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ (World Heritage Site) ಪಟ್ಟಿಗೆ ಸೇರ್ಪಡೆಗೊಳಿಸಲು ಬೇಕಾಗುವ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಮುಂದಾಗಿದೆ.

UNESCO ವಿಶ್ವ ಪರಂಪರೆಯ ತಾಣವಾಗಿ ಅಂತಿಮ ಘೋಷಣೆಗೆ ಪರಿಗಣಿಸಬೇಕಾದ ತಾಣಗಳನ್ನು ಮೊದಲು ತಾತ್ಕಾಲಿಕ ಪಟ್ಟಿಗೆ ಸೇರಿಸಲು ನಾಮನಿರ್ದೇಶನ ಮಾಡಬೇಕು. ಈಗಾಗಲೇ UNESCO ತಾತ್ಕಾಲಿಕ ಪಟ್ಟಿಯ ಅಡಿಯಲ್ಲಿ ಭಾರತದ 50 ಸ್ಮಾರಕಗಳಿವೆ.

Lakkundi Temple, Gadag

ಈ ಐತಿಹಾಸಿಕ ತಾಣಗಳನ್ನು ನಾಮನಿರ್ದೇಶನಗೊಳಿಸಲು, ತಾಣಗಳ ಕುರಿತು ಸಮಗ್ರ ಅಧ್ಯಯನ ನಡೆಯಬೇಕಿದೆ. ಇದಕ್ಕೆ ಸಂಬಂಧ ಪಟ್ಟಂತೆ ಸ್ಥಳದ ಅಧ್ಯಯನವನ್ನು ನಡೆಸಲು ಮತ್ತು ವಿವರವಾದ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (Archaeological Survey of India) ಸಲ್ಲಿಸಲು ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ.

ಸ್ಮಾರಕಗಳು ಕನಿಷ್ಠ ಒಂದು ವರ್ಷದವರೆಗೆ ತಾತ್ಕಾಲಿಕ ಪಟ್ಟಿಯ ಅಡಿಯಲ್ಲಿ ಇರುತ್ತವೆ. ಅವುಗಳನ್ನು ರಾಜ್ಯದ ಅಧಿಕೃತ ಸಂಸ್ಥೆ ASI ಪ್ರಸ್ತಾಪಿಸಬೇಕು. ಈ ಪ್ರಕ್ರಿಯೆಯು ವಿಸ್ತಾರವಾಗಿರುವುದು ಮಾತ್ರವಲ್ಲದೆ, ಸಮಯ ತೆಗೆದುಕೊಳ್ಳುತ್ತದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜ್ ತಿಳಿಸಿದ್ದಾರೆ.

Shravanabelagola, Hassan

ಈ ವರ್ಷ ಸೆಪ್ಟೆಂಬರ್‌ನಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಲಾದ ಬೇಲೂರು, ಹಳೇಬೀಡು 2014 ರಲ್ಲಿ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮನಿರ್ದೇಶನಗೊಂಡಿತ್ತು. ಅಂತೆಯೇ ಸೋಮನಾಥಪುರದ ಹೊಯ್ಸಳ ದೇವಾಲಯಗಳು ಸರಣಿ ನಾಮನಿರ್ದೇಶನದ ಅಡಿಯಲ್ಲಿ ಸೇರಿಸಲಾಗಿತ್ತು.

ತಾತ್ಕಾಲಿಕ ಪಟ್ಟಿಯಲ್ಲಿ ಒಂದು ವರ್ಷದ ನಿಗದಿತ ಅವಧಿಯನ್ನು ಪೂರ್ಣಗೊಳಿಸಿದ ಸ್ಮಾರಕವು ಅಂತಿಮ ಪಟ್ಟಿಗೆ ನಾಮನಿರ್ದೇಶನಗೊಳ್ಳಲು ಅರ್ಹತೆ ಪಡೆದಿದ್ದರೂ ಸಹ ಪ್ರಸ್ತುತ ವರ್ಷದಲ್ಲಿ ಯಾವ ಸ್ಮಾರಕವನ್ನು ನಾಮನಿರ್ದೇಶನ ಮಾಡಬೇಕು ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ಮತ್ತು ASI ತೆಗೆದುಕೊಳ್ಳುತ್ತದೆ.

ಶ್ರವಣಬೆಳಗೊಳವು (Shravanabelagola) ಪುರಾತನ ಜೈನ ಕ್ಷೇತ್ರವಾಗಿದ್ದು, ವಿಶ್ವದ ಅತಿ ಎತ್ತರದ ಗೊಮ್ಮಟೇಶ್ವರ ಪ್ರತಿಮೆಯನ್ನು ಹೊಂದಿದೆ. ಇದು 981 CE ಯಲ್ಲಿ ಪಶ್ಚಿಮ ಗಂಗರ ಕಾಲದಲ್ಲಿ ಕೆತ್ತಲ್ಪಟ್ಟಿದ್ದಾಗಿದೆ. ಪ್ರತಿಮೆಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಇಲ್ಲಿ ನಡೆಯುತ್ತದೆ. ಶತಮಾನಗಳ ಕಾಲದಿಂದಲೂ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಶ್ರವಣಬೆಳಗೊಳವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಎಲ್ಲಾ ಅರ್ಹತೆಯನ್ನು ಹೊಂದಿದೆ.

ಇನ್ನು ಲೊಕ್ಕಿ-ಗುಂಡಿ ಎಂದು ಶಾಸನಗಳಲ್ಲಿ ಉಲ್ಲೇಖವಾಗಿರುವ ಲಕ್ಕುಂಡಿ ಹೊಯ್ಸಳರ ಕಾಲದ ರಾಜಧಾನಿಯಾಗಿತ್ತು. ಹಾಗೂ ಕಳಚುರಿಗಳು, ದೇವಗಿರಿಯ ಯಾದವರ ಆಳ್ವಿಕೆಗೆ ಒಳಪಟ್ಟಿತ್ತು. ಇದು ದಾನಚಿಂತಾಮಣಿ ಅತ್ತಿಮಬ್ಬೆಯವರ ಕರ್ಮಭೂಮಿಯೂ ಹೌದು.

ಲಕ್ಕುಂಡಿ (Lakkundi) “ದೇವಾಲಯಗಳ ನಗರಿ” ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಸೋಮೇಶ್ವರ, ಕುಂಬರೇಶ್ವರ, ಮಾಣಿಕೇಶ್ವರ, ನಾಗನಾಥ, ನಾಗೇಶ್ವರ, ಕಾಶಿವಿಶ್ವೇಶ್ವರ, ಶಂಕರಲಿಂಗ, ಲಕ್ಷ್ಮೀನಾರಾಯಣ, ಗಣಪತಿ, ಚಂದ್ರಮೌಳೇಶ್ವರ, ಜೈನ ಬಸದಿ, ಬ್ರಹ್ಮ ಜಿನಾಲಯ, ಮುಸ್ಕಿನ ಬಾವಿ ಸೇರಿದಂತೆ 40 ಕ್ಕೂ ಹೆಚ್ಚು ದೇವಾಲಯಗಳ ನೆಲೆಯಾಗಿದೆ. 16 ಕ್ಕೂ ಹೆಚ್ಚು ಪುಷ್ಕರಣಿಗಳಿವೆ. ಆದರೆ ಸದ್ಯ 12 ದೇವಾಲಯಗಳು ಮಾತ್ರ ಕಾಣಬಹುದು. ಇಷ್ಟೆಲ್ಲ ಲಕ್ಷಣವನ್ನು ಹೊಂದಿರುವ ಲಕ್ಕುಂಡಿಯೂ ಸಹ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಲು ಎಲ್ಲಾ ಅರ್ಹತೆ ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button