ಇವರ ದಾರಿಯೇ ಡಿಫರೆಂಟುವಿಂಗಡಿಸದಸ್ಫೂರ್ತಿ ಗಾಥೆ

ಎಲ್ಲಿಯೂ, ಎಂದಿಗೂ ಕರ್ತವ್ಯ ಮರೆಯದ ವೈದ್ಯರಿಗಿದೋ ನಮನ!

ಇಂದು ವೈದ್ಯರ ದಿನಾಚರಣೆ. ಈ ಜೀವವನ್ನು ಉಳಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತ ವೈದ್ಯರಿಗೆ ನಮನ ಸಲ್ಲಿಸುವ ದಿನವಿಂದು. ನಮ್ಮ ಕುಟುಂಬದ ನಂತರ, ನಮ್ಮ ಜೀವನದ ಬಗ್ಗೆ ಕಾಳಜಿ ಹೆಚ್ಚಿಸುವ, ಆರೋಗ್ಯ ಕಾಪಾಡಿಕೊಳ್ಳುವ ಪಾಠ ಹೇಳುವ, ಪ್ರಪಂಚದ ಪ್ರತಿಯೊಬ್ಬ ವೈದ್ಯರಿಗೂ ನಮ್ಮ ತಂಡದಿಂದ ಅಕ್ಷರ ನಮನ…

  • ವರ್ಷಾ ಉಜಿರೆ   

“ವೈದ್ಯೋ ನಾರಾಯಣೋ ಹರಿ” ಎಂಬ ಮಾತನ್ನು ಸುಖಾ ಸುಮ್ಮನೆ ಹೇಳಿಲ್ಲ ಎನ್ನುವುದನ್ನು ಕೊರೋನಾ ಕಾಲಘಟ್ಟ ಬಹಳ ಸುಲಭವಾಗಿ ಅರ್ಥ ಮಾಡಿಸಿಬಿಟ್ಟಿದೆ. ಯಾರೂ ಕಂಡೂ ಕೇಳರಿಯದ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ದೇಶದ, ಜನತೆಯ ಸೌಖ್ಯಕ್ಕಾಗಿ ದುಡಿದ ವೈದ್ಯರಿಗೆ ನಮನ ಸಲ್ಲಿಸುವ ದಿನವಿಂದು. ಹಾಗೆಂದು ಒಂದೇ ದಿನಕ್ಕೆ ಸೀಮಿತವಾಗುವಂಥದ್ದು ಅಲ್ಲ!

ಬಾಲ್ಯದಲ್ಲಿ ನಾವೆಲ್ಲರೂ ರೂಪಿಸಿಕೊಂಡ ಮೊದಲ ಗುರಿ ‘ನಾನು ಡಾಕ್ಟರ್ ಆಗಬೇಕು’. ಶಿಕ್ಷಕರನ್ನು ಬಿಟ್ಟರೆ ನಾವೆಲ್ಲಾ ಹೆಚ್ಚು ಪ್ರಭಾವಿತರಾಗಿದ್ದು ವೈದ್ಯರಿಂದ. ಮೂಲೆಯಲ್ಲೊಂದು ಮಂಚ, ಕೋಣೆಯ ತುಂಬಾ ಹತ್ತಾರು ಬಗೆಯ ಮಾತ್ರೆಗಳು, ಟ್ಯೂಬುಗಳು, ಔಷಧಿ ಸೀಸೆಗಳು, ಭಯ ಹುಟ್ಟಿಸುವ ಇಂಜೆಕ್ಷನ್, ತೂಕದ ಮಷೀನು, ಇವೆಲ್ಲದರ ನಡುವೆ ನಸು ನಗುತ್ತಾ ನಿಂತ ಶಾಂತ ಮೂರ್ತಿ ನಮ್ಮ ಡಾಕ್ಟರು.

National Doctors Day

ಕೊರೋನಾ ಬಂದ ಮೇಲಂತೂ ಅವರಿಗೆ ವಿಶ್ರಾಂತಿಯೇ ಇಲ್ಲದಂತಾಗಿದೆ. ಅದಕ್ಕೆ ಮುಂಚೆಯೂ ಅವರು ಅವಿರತವಾಗಿ ದುಡಿದವರೇ. ಆಗೆಲ್ಲಾ ನಾನು ಆಶ್ಚರ್ಯ ಪಡುವುದಿದೆ, ಇವರು ರಜೆಯನ್ನು, ವಿಶ್ರಾಂತಿಯನ್ನು ಬಯಸುವುದಿಲ್ಲವೇ?, ನಾವೆಲ್ಲರೂ ಹಂಬಲಿಸುವ ಸೋಶಿಯಲ್ ಲೈಫ್, ಮೀ ಟೈಮ್, ರೋಡ್ ಟ್ರಿಪ್ ಇವುಗಳಿಗೆ ಅವರ ಬದುಕಿನಲ್ಲಿ ಜಾಗವೇ ಇಲ್ಲವೇ? ಎಂದು. ಸತ್ಯವೇನೆಂದರೆ, ಇವೆಲ್ಲವನ್ನೂ ಅವರು ಅನುಭವಿಸುತ್ತಾರೆ. ಆದರೆ ಅಲ್ಲಿಯೂ ತಮ್ಮ ಕರ್ತವ್ಯವನ್ನು ಮರೆಯುವುದಿಲ್ಲ!

ವೈದ್ಯರ ಬದ್ಧತೆಗೆ ಸಾಕ್ಷಿಯಾದ ಜೀವಂತ ಘಟನೆಯಿದು. ಇದು ನಡೆದಿದ್ದು ಸುಮಾರು ೨ ವರ್ಷಗಳ ಹಿಂದೆ. ಭಾರತೀಯ ವೈದ್ಯ ದಂಪತಿಗಳು ಆಸ್ಟ್ರೇಲಿಯಾ ಮಹಿಳೆಯ ಪ್ರಾಣ ಉಳಿಸಿದ ಘಟನೆ, ಅದೂ ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಅನ್ನುವುದು ವಿಶೇಷ.

ನಿತಿನ್ ಮತ್ತು ನೀತಾ, ಮಹಾರಾಷ್ಟ್ರ ವೈದ್ಯ ದಂಪತಿಗಳು. ತಮ್ಮ ರಜಾ ದಿನಗಳನ್ನು ಆಸ್ಟ್ರೇಲಿಯಾದಲ್ಲಿ ಕಳೆದು, ಸಿಂಗಾಪೂರಿಗೆ ಪ್ರಯಾಣ ಬೆಳೆಸುತ್ತಿದ್ದ ಅವರಿಗೆ, ಹಾರುತ್ತಿರುವ ವಿಮಾನದಲ್ಲಿ ತಾವು ಒಂದು ಅಮೂಲ್ಯವಾದ ಜೀವವನ್ನು ಉಳಿಸುತ್ತೇವೆಂಬ ಕಲ್ಪನೆಯೂ ಇರಲಿಲ್ಲ!

National Doctors Day 2021

ವಿಮಾನ ಟೇಕ್ ಆಫ್ ಆದ ಒಂದು ಘಂಟೆಯ ಅವಧಿಯೊಳಗಡೆ, ೬೩ ವರ್ಷದ ಆಸ್ಟ್ರೇಲಿಯಾ ಮೂಲದ ಮಹಿಳೆ ಅನ್ನಿ, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆಂದು, ವಿಮಾನದಲ್ಲಿ ಯಾರಾದರೂ ವೈದ್ಯರಿದ್ದರೆ ಸಹಾಯ ಮಾಡಿರೆಂದು ವಿಮಾನದ ಸಿಬ್ಬಂದಿಗಳು ಘೋಷಿಸಿದರು. ಆ ಮಹಿಳೆ ಸಾಕಷ್ಟು ಬೆವರಿ ಪ್ರಜ್ಞೆ ತಪ್ಪಿದ್ದರು.

ಮರುಕ್ಷಣವೇ, ನಿತಿನ್ ಮತ್ತು ನೀತಾ ದಂಪತಿಗಳು ಕಾರ್ಯಪ್ರವೃತ್ತರಾಗಿ, ವಿಮಾನದಲ್ಲಿರುವ ಎಮರ್ಜೆನ್ಸಿ ಕಿಟ್ ಮೂಲಕ ಚಿಕಿತ್ಸೆಯನ್ನು ಪ್ರಾರಂಭಿಸಿಯೇ ಬಿಟ್ಟರು. ಅತೀ ಕಡಿಮೆ ವೈದ್ಯಕೀಯ ಉಪಕರಣಗಳು ಮತ್ತು ಅನ್ನಿ ಅವರ ಮೆಡಿಕಲ್ ಹಿಸ್ಟರಿಯ ಬಗ್ಗೆ ಇದ್ದ ತುಸು ಜ್ಞಾನ ಅವರಿಗೆ ಅಡ್ಡಿಯುಂಟು ಮಾಡಿದ್ದರೂ, ಅವರ ಚಿಕಿತ್ಸೆ ಕೊನೆಗೂ ಫಲಕಾರಿಯಾಯಿತು.

ನೀವುಇದನ್ನುಇಷ್ಟಪಡಬಹುದು: ವಿಮಾನ ಪ್ರಯಾದಲ್ಲಿ ಪ್ರಯಾಣಿಕರೊಬ್ಬರ ಜೀವ ಕಾಪಾಡಿದ್ದ ಡಾಕ್ಟರ್

ವಿಮಾನ, ಸಿಂಗಾಪೂರಿನ ಚಂಗಿ ವಿಮಾನ ನಿಲ್ದಾಣವನ್ನು ತಲುಪುವವರೆಗೂ ಆ ಮಹಿಳೆಯ ನಾಡಿಮಿಡಿತವನ್ನು ಗಮನಿಸುತ್ತಾ, ಆ ಅಮೂಲ್ಯ ಜೀವವನ್ನು ಉಳಿಸಿಯೇ ಬಿಟ್ಟರು! ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ, ಅಲ್ಲಿಯ ಆಸ್ಪತ್ರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕರೆದೊಯ್ಯಿತು.

National Doctors Day 2021

ಒಂದು ಪ್ರಾಣವನ್ನು, ಅದೂ ಹಾರುತ್ತಿರುವ ವಿಮಾನದಲ್ಲಿ ಉಳಿಸಿದ ಈ ದಂಪತಿಗಳಿಗೆ ವಿಮಾನದ ಪ್ರತಿಯೊಬ್ಬ ಪ್ರಯಾಣಿಕನೂ ಎದ್ದು ನಿಂತು ಗೌರವ ಸಲ್ಲಿಸಿದರು! ವಿಮಾನ ಸಂಸ್ಥೆಯ ವತಿಯಿಂದ ಗೌರವಾರ್ಥವಾಗಿ ಕಾಣಿಕೆಯನ್ನು ಪಡೆದರು.

ಇದು ಒಬ್ಬ ವೈದ್ಯನ ಬದ್ಧತೆಗೆ ಉತ್ತಮ ನಿದರ್ಶನ. ಇಂತಹ ಮಾನವೀಯ ಮತ್ತು ಬೆಳಕಿಗೆ ಬಾರದ ನಿದರ್ಶನಗಳ ನಡುವೆಯೂ, ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಕೆಟ್ಟ ಘಟನೆಗಳೂ ಕಣ್ಮುಂದೆ ಇವೆ. ಅವರ ಕೈಲಾದಷ್ಟು ಪ್ರಯತ್ನವನ್ನು ಮಾಡುವ ಅವರ ಶ್ರಮಕ್ಕೆ ಗೌರವ ಕೊಡಬೇಕೇ ಹೊರತು, ಚಿಕಿತ್ಸೆ ಫಲಕಾರಿಯಾಗದ್ದಕ್ಕೆ ವೈದ್ಯರೇ ಕಾರಣ ಎಂದು ದೂರುವುದು ಸರಿಯಲ್ಲ.

ಪ್ರಪಂಚದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ವೈದ್ಯನ ಕಡೆಯಿಂದ ತಪ್ಪಾಗುವುದಿಲ್ಲ ಎಂದಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಮುಂದುವರೆಯುವುದು ಉತ್ತಮ. 

ವೈದ್ಯರು ತಮ್ಮ ವೈಯಕ್ತಿಕ ಜೀವನವನ್ನು, ಕುಟುಂಬವನ್ನು ಲೆಕ್ಕಿಸದೆ, ರಜೆಯ ಅಥವಾ ಪ್ರವಾಸದ ಗುಂಗಿನಲ್ಲಿ ತಮ್ಮ ಕರ್ತವ್ಯವನ್ನು ಮರೆಯದೆ, ಸರಿಯಾದ ವೈದ್ಯಕೀಯ ಉಪಕರಣಗಳ ಲಭ್ಯತೆ ಇಲ್ಲದಿದ್ದರೂ, ಜೀವವನ್ನು ಉಳಿಸುವ ಕಾರ್ಯವಿದೆಯಲ್ಲಾ, ಅದಕ್ಕೆ ಎಷ್ಟು ನಮನ ಸಲ್ಲಿಸಿದರೂ ಸಾಲದು!

National Doctors Day 2021

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button