ಆಹಾರ ವಿಹಾರವಿಂಗಡಿಸದಸಂಸ್ಕೃತಿ, ಪರಂಪರೆ

ಕಡಲೆಕಾಯಿ ಪರಿಷೆಗೆ ನಿನ್ನೆ ಅದ್ದೂರಿ ಚಾಲನೆ; ನೀವೂ ಪರಿಷೆಗೆ ಬನ್ನಿ- ಕೈಚೀಲ ತನ್ನಿ

ಐತಿಹಾಸಿಕ ಕಡಲೆಕಾಯಿ ಪರಿಷೆಗೆ (Basavangudi Kadalekai Parishe 2023) ಬಸವನಗುಡಿಯಲ್ಲಿ ನಿನ್ನೆ (Dec 11) ಅಧಿಕೃತ ಚಾಲನೆ ನೀಡಲಾಯಿತು. “ಪರಿಷೆಗೆ ಬನ್ನಿ ಕೈ ಚೀಲ ತನ್ನಿ” ಎಂಬ ಅಭಿಯಾನದೊಂದಿಗೆ ಈ ವರ್ಷದ ಜಾತ್ರೆಯನ್ನು ಆಯೋಜಿಸಲಾಗಿದೆ.

ಉಜ್ವಲಾ ವಿ.ಯು.

ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಷೆಯನ್ನು ಉದ್ಘಾಟಿಸಿದರು. ಇಂದಿನಿಂದ ಮೂರು ದಿನಗಳ ಕಾಲ (Dec 13ವರೆಗೆ) ನಡೆಯುವ ಈ ಪರಿಷೆಗೆ ಸುಮಾರು ಆರರಿಂದ ಏಳು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.

ಪರಿಷೆ ಸೋಮವಾರದಿಂದ ಅಧಿಕೃತವಾಗಿ ಚಾಲನೆಗೊಂಡಿದ್ದರೂ, ವಾರಾಂತ್ಯವಿದ್ದ ಕಾರಣ ಶನಿವಾರದಿಂದಲೇ ಜನರು ಬಸವನಗುಡಿಯತ್ತ ಬರುತ್ತಿದ್ದಾರೆ.

ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಿಂದ ವ್ಯಾಪಾರಿಗಳು ಭಾಗಿ:

ದೊಡ್ಡಬಳ್ಳಾಪುರ, ಕನಕಪುರ, ರಾಮನಗರ, ಮಾಗಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳು ಆಗಮಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳ ವ್ಯಾಪಾರಿಗಳೂ ಇದ್ದಾರೆ.

Basavangudi Kadalekai Parishe 2023

ಪರಿಷೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ತೆಲಂಗಾಣ ಆಂಧ್ರ ಪ್ರದೇಶದಂತಹ ಹೊರ ರಾಜ್ಯಗಳಿಂದಲೂ ಕಡಲೆಕಾಯಿ ವ್ಯಾಪಾರಿಗಳು ಬಂದಿದ್ದು, ವಿವಿಧ ಬಗೆಯ ಹಸಿ, ಒಣ ಮತ್ತು ಹುರಿದ ಕಡಲೆಕಾಯಿಗಳು ಇಲ್ಲಿ ಲಭ್ಯವಿದೆ.

ಪರಿಷೆಯಲ್ಲಿ ಕಡಲೆಕಾಯಿ ಮಾತ್ರವಲ್ಲದೇ ಆಟಿಕೆ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕೆ ವಸ್ತುಗಳ ಮಳಿಗೆ, ಬಗೆ ಬಗೆಯ ತಿಂಡಿ-ತಿನಿಸುಗಳ ಮಳಿಗೆಗಳು ಸಹ ಜನರನ್ನು ಆಕರ್ಷಿಸುತ್ತಿವೆ.

Groundnut Fair at Basavangudi

ಭದ್ರತೆ:

ಭದ್ರತೆಯ ದೃಷ್ಟಿಯಿಂದ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 200 ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಬುಲ್ ಟೆಂಪಲ್ ಸುತ್ತಲಿನ ರಸ್ತೆಗಳನ್ನು ವಾಹನ ಸಂಚಾರಕ್ಕಾಗಿ ಮುಚ್ಚಿ ಪರ್ಯಾಯ ಮಾರ್ಗಗಳನ್ನು ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಪರಿಷೆಯಲ್ಲಿ ಜರುಗುತ್ತಿರುವ ಇನ್ನಿತರ ಕಾರ್ಯಕ್ರಮಗಳು:

ದೊಡ್ಡಗಣಪನಿಗೆ (Dodda Ganapati Temple) ಪ್ರತಿ ವರ್ಷದಂತೆ ಈ ಬಾರಿಯೂ ಬರೋಬ್ಬರಿ 75 ಕೆಜಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಣ್ಣೆ ಅಲಂಕೃತ ಗಣೇಶನ ದರ್ಶನ ಪಡೆದರು. ಭಾನುವಾರ ದೊಡ್ಡ ಗಣಪತಿ ಮತ್ತು ಬಸವನಿಗೆ ಕಡಲೆಕಾಯಿ ಅಭಿಷೇಕ ನೆರವೇರಿತು.

Dodda Ganapati Temple, Basavangudi

ನಿನ್ನೆ (ಡಿಸೆಂಬರ್ 11, ಸೋಮವಾರ) ಪರಿಷೆಯ ಅಂಗವಾಗಿ ಸಂಜೆ 6ಕ್ಕೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು.

ಕಹಳೆ ಬಂಡೆ ಉದ್ಯಾನದಲ್ಲಿ ಸಂಜೆ ಮೇಖಲಾ ಅಗ್ನಿಹೋತ್ರಿ ತಂಡದಿಂದ ನಾದ–ನಿನಾದ ಕಾರ್ಯಕ್ರಮ ನಡೆದರೆ, ನರಸಿಂಹಸ್ವಾಮಿ ಉದ್ಯಾನದಲ್ಲಿ ಸಿರಿಕಲಾ ಮೇಳ ತಂಡದಿಂದ ಯಕ್ಷಗಾನ ಜರುಗಿತು.

Kempambudhi kere Teppotsava

ಇಂದು (ಡಿ.12ರ ಮಂಗಳವಾರ) ಸಂಜೆ ಕಹಳೆ ಬಂಡೆಯಲ್ಲಿ ನಾಟ್ಯ ಭೈರವಿ ಶಾಲೆ ತಂಡದಿಂದ ನೃತ್ಯ, ನರಸಿಂಹ ಸ್ವಾಮಿ ಉದ್ಯಾನದಲ್ಲಿ ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ ನಡೆಯಲಿದೆ.

“ಪರಿಷೆಗೆ ಬನ್ನಿ-ಕೈಚೀಲ ತನ್ನಿ” ಎಂಬ ಅಭಿಯಾನದೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪರಿಷೆಯನ್ನು ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆ ಮಾಡುವ ಉದ್ದೇಶದಿಂದ ಹಸಿರು ದಳ, ಅದಮ್ಯ ಚೇತನ ಸೇರಿದಂತೆ 10 NGOಗಳ ಸಹಾಯ ಪಡೆದುಕೊಳ್ಳಲಾಗಿದೆ.

ವರ್ಷಕ್ಕೊಮ್ಮೆ ನಡೆಯುವ ಶತಮಾನಗಳ ಇತಿಹಾಸ ಹೊಂದಿರುವ ಕಡಲೆಕಾಯಿ ಪರಿಷೆ ಇನ್ನು ಡಿಸೆಂಬರ 13ರವರೆಗೆ ನಡೆಯಲಿದೆ.

Big Bull Temple, Basavangudi

ನೀವೂ ದೊಡ್ಡ ಗಣಪತಿ ಮತ್ತು ಬಸವನ ಆಶೀರ್ವಾದ ಪಡೆದು, ಕಡಲೆಕಾಯಿಯನ್ನು ಖರೀದಿಸಿ.ಮನೆಯಿಂದ ಪ್ಲಾಸ್ಟಿಕ್ಮುಕ್ತ ಬಟ್ಟೆ ಕೈ ಚೀಲವನ್ನು ತೆಗೆದುಕೊಂಡು ಹೋಗಲು ಮರೆಯದಿರಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button