ದೆಹಲಿಯಲ್ಲಿದೆ ಉಡುಪಿಯ ಉರುಗಳು.
ಮೆಕ್ಕೆಕಟ್ಟು ದೇವಾಲಯ ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿನ ಕೆಲವು ಮೂರ್ತಿಗಳು ದೆಹಲಿಯಲ್ಲಿವೆ. ಜೀರ್ಣಾವಸ್ಥೆಯಲ್ಲಿರುವ ಮರದ ಮೂರ್ತಿಗಳನ್ನು ತೆಗೆದು ಹೊಸ ಮೂರ್ತಿಗಳನ್ನು ಪ್ರತಿಷ್ಟಾಪಿಸುವಾಗ ಹಳೆಯ ಮೂರ್ತಿಗಳನ್ನು ವಿಸರ್ಜಿಸುವ ಬದಲು ದೆಹಲಿಯ National Handicrafts and Handlooms ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸಕ್ಕೆ ಮೆಕ್ಕಿಕಟ್ಟು ಒಂದು ಮೈಲಿಗಲ್ಲು.
ಮಂಜುನಾಥ್ ಕಾಮತ್
ಮಿಕ್ಕವರು ಮೀರಲಾಗದ ಕಟ್ಟು ಶಿರಿಯಾರದ ಮೆಕ್ಕಿಕಟ್ಟು. ಮರದ ಮೂರ್ತಿಗಳ ದೇವಸ್ಥಾನ . ಕಲಾಸಕ್ತರಿಗೆ ಪ್ರಾಚೀನ ಕಲೆಯಾಗಿ, ಇತಿಹಾಸಕ್ತರಿಗೆ ಬಾರ್ಕೂರರಸನ ಭಕ್ತಿಯ ಕುರುಹಾಗಿ, ಭಕ್ತರಿಗೆ ಶಕ್ತಿಯಾಗಿ ಮೆಕ್ಕಿಕಟ್ಟಿನ ಮರದ ಮೂರ್ತಿಗಳು ಅಭಯ ನೀಡುತ್ತಿವೆ. ಆ ದೇವಸ್ಥಾನದ ಪ್ರಧಾನ ದೇವರು ನಂದಿಕೇಶ್ವರ, ಗರ್ಭಗುಡಿಯೊಳಗೆ ವಿವಿಧ ಭಂಗಿಯಲ್ಲಿರುವ ನಂದಿ ಹಾಗೂ ಇನ್ನಿತರ ಗಣಗಳೊಡನೆ ಆರಾಧಿಸಲ್ಪಡುತ್ತಾನೆ. ಆ ಮೂರ್ತಿಯ ಪಕ್ಕದಲ್ಲೇ ಪಂಚಮುಖ ನಂದಿಯ ಮೇಲೆ ಕುಳಿತ ಪಾರ್ವತಿಯ ಅಭಯವೂ ಇದೆ.
ಉರುಶಾಲೆ
ನಂದಿಕೇಶ್ವರ ದೇವಸ್ಥಾನದ ಗರ್ಭಗುಡಿಯ ಒಳಗೆ, ಗರ್ಭಗುಡಿಯ ಮೇಲೆ ಹಾಗೂ ಪಕ್ಕದ ಕೊಣೆಯಲ್ಲಿ ಒಟ್ಟು 178 ಮರದ ಮೂರ್ತಿಗಳಿವೆ. ಅವುಗಳನ್ನು ಉರುಗಳೆನ್ನುತ್ತಾರೆ. ಅವನ್ನಿರಿಸಿದ ಕೋಣೆಗೆ ಉರುಶಾಲೆ ಎನ್ನುತ್ತಾರೆ. ಅಲ್ಲಿ 2 ಅಡಿಯಿಂದ ಹಿಡಿದು ಸುಮಾರು 20 ಅಡಿ ಎತ್ತರದ ಉರುಗಳಿವೆ. ಅವೆಲ್ಲವುಗಳ ಮೈ ಬಣ್ಣ ಕೆಂಪು. ಅವುಗಳ ಆಭರಣ, ಬಟ್ಟೆ, ಆಯುಧಗಳು ವಿವಿಧ ಬಣ್ಣಗಳಿಂದ ಕಂಗೊಳಿಸುತ್ತವೆ.
ಈ ದೇವಾಲಯಕ್ಕೆ ಸಾವಿರ ವರುಷಗಳ ಇತಿಹಾಸವಿದೆ. ಆದರೆ ನಾವಿಂದು ಕಾಣುವ ಉರುಗಳು ಅಷ್ಟು ಹಳೆಯದಲ್ಲ. ಎಲ್ಲಾ ಮೂರ್ತಿಗಳು ಮರದವಾಗಿರುವುದರಿಂದ ಒಂದಲ್ಲ ಒಂದು ದಿನ ಅವು ಹಾಳಾಗುವಂತವು, ಗೆದ್ದಲು ತಿಂದು ಹುಡಿಯಾಗುವಂತಹದು. ಹೆಚ್ಚೆಂದರೆ ಒಮ್ಮೆ ಮಾಡಿದ ಮೂರ್ತಿಗಳು 100-150 ವರ್ಷಗಳು ಬರಬಹುದು. ಹಿಂದೆ ಮೂರ್ತಿಗಳನ್ನಿಡಲು ಕೋಣೆಯೂ ಇರಲಿಲ್ಲವಂತೆ. ಮಳೆಗಾಲದಲ್ಲಿ ಅವೆಲ್ಲವೂ ನೀರನ್ನು ಹೀರಿಕೊಂಡು ಕ್ರಮೇಣ ಲಡ್ಡಾಗುತ್ತಿದ್ದವಂತೆ. ಆದರೀಗ ಮಳೆ ಹನಿಯೂ ಸೋಕದಂತಹ ಕೋಣೆ ಇದೆ. ಹಿಂದಿನಂತೆ ನೈಸರ್ಗಿಕ ಬಣ್ಣವನ್ನು ಬಳಿಯದೇ ರಾಸಾಯನಿಕ ಪೈಂಟ್ ಬಳಸುವುದರಿಂದ ಒಂದೈವತ್ತು ವರ್ಷ ಹೆಚ್ಚು ಬಾಳಿಕೆ ಬರಬಹುದೆನ್ನತ್ತಾರೆ ಅರ್ಚಕರು. ಈಗ ಇರುವ ಉರುಗಳು 1970ರಲ್ಲಿ ಪುನರ್ರಚನೆಗೊಂಡವುಗಳು.
ನೀವು ಇದನ್ನು ಇಷ್ಟ ಪಡುಬಹುದು :ಉಡುಪಿಯ ಗುಡ್ಡಟ್ಟುವಿನಲ್ಲಿದೆ ಕಲ್ಲು ಬಂಡೆಗಳ ನಡುವೆ ಮೂಡಿಬಂದ ಗಣಪ.
ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸಕ್ಕೆ ಮೆಕ್ಕಿಕಟ್ಟು ಒಂದು ಮೈಲಿಗಲ್ಲು.
ಸತತ ನಾಲ್ಕು ವರ್ಷಗಳ ಕಾಲ ಬಸ್ರೂರು ಹಾಗೂ ಉಪ್ಪುಂದದ ಗುಡಿಗಾರರ ತಂಡ ರಚಿಸಿದ ಮೂರ್ತಿಗಳು. ವಿಶೇಷವೆಂದರೆ ಈ ಉರುಗಳನ್ನು ಗುಡಿಗಾರರೇ ಮಾಡಬೇಕು. ಶಿಲ್ಪಕಲೆ ಗೊತ್ತಿರುವ ಇತರರು ಮಾಡುವಂತಿಲ್ಲ. ಹಳೆಯ ಮೂರ್ತಿಗಳನ್ನು ಕಂಡು, ಅವುಗಳಂತೆಯೇ ಕೆತ್ತುವುದು ಅವರ ಕೆಲಸ. ಹಳೆಯ ಮೂರ್ತಿಗಳಷ್ಟೇ ಎತ್ತರ, ವಿನ್ಯಾಸ, ರೂಪ, ಭಾವನೆಗಳನ್ನು ನೀಡುವುದು ಸುಲಭದ ಕೆಲಸವೇನಲ್ಲ. 1909ರಲ್ಲಿ ರಿಪೇರಿಗೊಂಡ ಉರುಗಳನ್ನು 1970ರಲ್ಲಿ ಸಂಪೂರ್ಣವಾಗಿ ಬದಲಾಯಿಸಲಾಯಿತು. ಹೊಸತನ್ನು ಕೆತ್ತಲಾಯಿತು. ಆ ಸಂಧರ್ಭ ಇದ್ದ ಹಳೇ ಮೂರ್ತಿಗಳನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಲಾಯಿತಂತೆ. ಅದರ ಹಿಂದಿನ ಶಕ್ತಿ ಕಮಲಾ ದೇವಿ ಚಟ್ಟೋಪಾಧ್ಯಾಯ. ಹೊಸ ಮೂರ್ತಿಗಳಿಗೆ ಬೇಕಾದ ಮರ ಮತ್ತು ಬಣ್ಣಗಳನ್ನು ಸರಕಾರದಿಂದ ಪಡೆದು, ಬದಲಾಗಿ, ಹಳೆಯ ಮೂರ್ತಿಗಳನ್ನು ಸರಕಾರಕ್ಕೆ ನೀಡಲಾಯಿತಂತೆ. ಅವೀಗ ದೆಹಲಿಯ National Handicrafts and Handlooms ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ . ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸಕ್ಕೆ ಮೆಕ್ಕಿಕಟ್ಟು ಒಂದು ಮೈಲಿಗಲ್ಲು.
ಕರಾವಳಿಯ ಅನೇಕ ದೇವಸ್ಥಾನಗಳಲ್ಲಿ ಮರದ ಮೂರ್ತಿಗಳಿವೆ. ಆದರೆ ಮೆಕ್ಕಿಕಟ್ಟಿನಲ್ಲಿರವಷ್ಟು ಸಂಖ್ಯೆಯಲ್ಲಿ, ಇಲ್ಲಿರುವಷ್ಟು ವಿಭಿನ್ನ ರೂಪದ ಉರುಗಳು ಬೇರೆಡೆ ಕಂಡು ಬರುವುದಿಲ್ಲ. ಕೆಂಬಣ್ಣದ, ಗಣಗಳ ರೂಪಗಳನ್ನು ಮತ್ತಷ್ಟು ವಿರೂಪಗೊಳಿಸಿ ಭಯದಿಂದ ಭಕ್ತಿ ಪಸರಿಸುವ ಅಮೌಖಿಕ ಸಂವಹನ ಈ ದೇವಸ್ಥಾನದ ವಿಶೇಷ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.