ಫೋಟೋಗ್ರಫಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದ ಕುಡ್ಲದ ಹುಡುಗ ಫೋಟೋಗ್ರಾಫರ್ ಅಪುಲ್ ಆಳ್ವ ಇರಾ
ಶಾಲೆಗೆ ಬರುತ್ತಿದ್ದ ದಿನ ಪತ್ರಿಕೆಯಲ್ಲಿನ ಫೋಟೋವನ್ನು ಕುತೂಹಲದಿಂದ ನೋಡುತ್ತಿದ್ದ ಹುಡುಗ, ಫೋಟೋ ಜರ್ನಲಿಸ್ಟ್ ಆಗುವ ಕನಸು ಕಂಡಿದ್ದರು. 17,000 ರೂಪಾಯಿಯಲ್ಲಿ ಕ್ಯಾಮೆರಾ ಖರೀದಿಸಿದ್ದ ಅಪುಲ್ ಆಳ್ವ, ಇಂದು ಪ್ರತಿಷ್ಠಿತ ನಿಕಾನ್ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಯುವ ಛಾಯಾಗ್ರಾಹಕರು ಅನೇಕರು. ಫೋಟೋಗ್ರಾಫರ್ ಸರಣಿಯ ವಿಶೇಷ, ಕರಾವಳಿಯ ಖ್ಯಾತ ಫೋಟೊ ಜರ್ನಲಿಸ್ಟ್ ಅಪುಲ್ ಆಳ್ವ ಇರಾ ಕುರಿತು ಬರಹ. ನಿಮಗೂ ಸ್ಪೂರ್ತಿಯಾಗಬಹುದು.
- ನವ್ಯಶ್ರೀ ಶೆಟ್ಟಿ
ಫೋಟೋಗ್ರಫಿ ಅನ್ನುವುದು ನಮ್ಮ ನೆನಪುಗಳನ್ನು ಅಚ್ಚಳಿಯದೇ ಉಳಿಯುವ ಹಾಗೆ ಮಾಡುವುದು. ನಮ್ಮ ಬದುಕಿನ ಒಂದೊಳ್ಳೆ ಕ್ಷಣಗಳನ್ನು ದಾಖಲೀಕರಿಸುವುದು ಫೋಟೋಗ್ರಫಿ. ಜನನ, ಮದುವೆ ,ಮರಣ ಈ ಮೂರು ಹಂತದಲ್ಲಿ ಫೋಟೋ ಅತ್ಯವಶ್ಯಕ. ಹಾಗಾಗಿ ನಮ್ಮ ಜೀವನದಲ್ಲಿ ಫೋಟೋಗ್ರಾಫರ್ (photographer)ಗೆ ಅತ್ಯಮೂಲ್ಯ ಸ್ಥಾನ.
ಕೆಲವರಿಗೆ ಹವ್ಯಾಸವಾಗಿ ಆರಂಭವಾಗುವ ಫೋಟೋ ತೆಗೆಯುವ ಆಸಕ್ತಿ, ಬದುಕಿನ ವೃತ್ತಿಯಾಗಿ ಬದಲಾಗುತ್ತದೆ. ಅದರಂತೆ ಕುತೂಹಲವಾಗಿ ಮೂಡಿದ ಆಸಕ್ತಿ ಇಂದು ಕರಾವಳಿಯ ಬಹು ದೊಡ್ಡ ಹೆಸರಾಗಿ ಬದಲಾಗಿದೆ. ಅವರೇ ಅಪುಲ್ ಆಳ್ವ ಇರಾ (Apul Alva Ira).
ಅಪುಲ್ ಆಳ್ವ , ಈ ಹೆಸರನ್ನು ಕೇಳದವರು ಕಮ್ಮಿ. ಕರಾವಳಿ ಮಂದಿಗೆ ಬಹು ಚಿರಪರಿಚಿತ ಹೆಸರು. ಅಪುಲ್ ಆಳ್ವ ಮೂಲತಃ ದಕ್ಷಿಣ ಕನ್ನಡದವರು. ಫೋಟೋ ಜರ್ನಲಿಸ್ಟ್ ( photo journalsit), ಮುಡಿಪು(mudipu) , ಕೊಣಾಜೆ, ಕೊಟ್ಟಾರ (kottara) ದಲ್ಲಿ ‘Apul Alva photography studio’ ಎನ್ನುವ ಸ್ವಂತ ಸ್ಟುಡಿಯೋವಿದೆ. ಇವರ ಗರಡಿಯಲ್ಲಿ ಪಳಗಿದ ಛಾಯಾಗ್ರಾಹಕರು ಅನೇಕರು. ಅನೇಕರಿಗೆ ಇವರು ಗುರು. ಆದರೆ ಫೋಟೋಗ್ರಫಿಯಲ್ಲಿ ನಾನಿನ್ನೂ ವಿದ್ಯಾರ್ಥಿ ಅನ್ನುವುದು ಅಪುಲ್ ಆಳ್ವ ಅವರ ಮಾತು.
ದಿಕ್ಕು ಬದಲಿಸಿದ ಘಟನೆಗಳು
ನಿಮಗೆಲ್ಲ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಮಂಗಳೂರಿ(Mangalore)ನ ಕೊಣಾಜೆ (konaje)ಯಲ್ಲಿ ಬೆಕ್ಕಿಗೆ ಕೊಂಬು ಬಂದು ಸುದ್ದಿಯಾಗಿತ್ತು. ರಾಜ್ಯಮಟ್ಟದ ಸುದ್ದಿ ಪತ್ರಿಕೆಗಳು ಆ ಸುದ್ದಿಯ ಬೆನ್ನು ಹತ್ತಿದ್ದರು. ಆದರೆ ಅವರಿಗೆ ಕೊಂಬು ಬೆಳೆದಿದ್ದ ಬೆಕ್ಕು ಕಾಣ ಸಿಗಲಿಲ್ಲ. ಆದರೆ ಆ ಬೆಕ್ಕಿನ ಫೋಟೋ ತೆಗೆದು ಆರ್ಕುಟ್ (orkut) ಅಲ್ಲಿ ಅಪ್ಲೋಡ್ (upload) ಮಾಡಿದ್ದ ಛಾಯಾಗ್ರಾಹಕ ಸಿಕ್ಕಿದ್ದರು. ಅವರೇ ಅಪುಲ್ ಆಳ್ವ. ಅಂದು ಅವರು ತೆಗೆದಿದ್ದ ಆ ಒಂದು ಫೋಟೋ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದು ಆಳ್ವ ಅವರ ವೃತ್ತಿ ಬದುಕಿಗೆ ದೊಡ್ಡ ಮೈಲುಗಲ್ಲು.
ನೀವುಇದನ್ನುಇಷ್ಟಪಡಬಹುದು: ಫೋಟೋಗ್ರಫಿಯಿಂದಲೇ ಬದುಕು ಬದಲಿಸಿಕೊಂಡ ಶೈನ್ ರಾಘು: ಇವರ ಡ್ರೋನ್ ಶಾಟ್ ಗಳನ್ನು ಸಿನಿಮಾದಲ್ಲಿ ನೀವು ನೋಡಿರಬಹುದು
ಅಪುಲ್ ಆಳ್ವರ ಬದುಕನ್ನು ಬದಲಾಯಿಸಿದ ಇನ್ನೊಂದು ಘಟನೆ , ಮಂಗಳೂರು ವಿಮಾನ ದುರಂತ ಪ್ರಕರಣ. 12 ವರ್ಷಗಳ ಹಿಂದೆ ನಡೆದಿದ್ದ ಈ ವಿಮಾನ ದುರಂತದ ಕೆಲವು ಫೋಟೋ ಸೆರೆ ಹಿಡಿದಿದ್ದರು ಅಪುಲ್ ಆಳ್ವ . ಅವರ ಆ ಫೋಟೋ ಗಳನ್ನು ದೊಡ್ಡ ಸುದ್ದಿ ಪತ್ರಿಕೆಗಳು ಬಳಸಿಕೊಂಡಿದ್ದರು.
ಅಪುಳ್ ಆಳ್ವ ಅವರ ಪ್ರಕಾರ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಛಾಯಾಗ್ರಾಹಕರು. ಪ್ರತಿಯೊಬ್ಬ ಛಾಯಾಗ್ರಾಹಕ ಯೋಚಿಸುವ ವಿಧಾನ ಬೇರೆ. ಒಂದೇ ಸ್ಥಳ , ಆದರೆ ಕಾಣುವ ನೋಟ ಭಿನ್ನ. ಒಬ್ಬ ಪ್ರತಿಭಾನ್ವಿತ ಫೋಟೋ ಗ್ರಾಫರ್ ಒಂದೇ ಸನ್ನಿವೇಶವನ್ನು ಬೇರೆ ಬೇರೆ ರೀತಿಯಲ್ಲಿ ಸೆರೆ ಹಿಡಿಯಬಲ್ಲ.
ಓದಿನ ದಿನಗಳಲ್ಲಿ ಹುಟ್ಟಿಕೊಂಡ ಆಸೆ
ಅಪುಲ್ ಆಳ್ವ ಫೋಟೋಗ್ರಾಫಿಯನ್ನು ವೃತ್ತಿ ಬದುಕನ್ನು ಆಯ್ಕೆ ಮಾಡಿಕೊಂಡ ಹಾದಿಯೇ ಸೊಗಸು. ಓದಿನ ದಿನಗಳಲ್ಲಿ ಶಾಲೆಗೆ ಬರುತ್ತಿದ್ದ ಪತ್ರಿಕೆಯನ್ನು ಗಮನಿಸುತ್ತಿದ್ದರು. ಪತ್ರಿಕೆಯನ್ನು ಓದುವುದಕ್ಕಿಂತ ಹೆಚ್ಚಾಗಿ ಅದರಲ್ಲಿ ಬರುವ ಫೋಟೋವನ್ನು ಕುತೂಹಲದ ಬೆರಗು ಕಣ್ಣಿನಿಂದ ನೋಡುತ್ತಿದ್ದರು. ತಾನು ಮುಂದೆ ಫೋಟೋ ಜರ್ನಲಿಸ್ಟ್ ಆಗಬೇಕು ಎನ್ನುವ ಕನಸು ಕಂಡಿದ್ದು ಆ ದಿನಗಳಲ್ಲಿ.
ಆ ದಿನಗಳಲ್ಲಿ ಮೊಬೈಲ್ ಫೋಟೊಗ್ರಾಫಿ(mobile photography) ಅವಕಾಶ ಕಡಿಮೆ. ಸತೀಶ್ ಇರಾ, ಜಿ.ಕೆ ಹೆಗ್ಡೆ, ಸುಧಾಕರ್ ಎರ್ಮಾಳ್, ಯಜ್ಞ ಮಂಗಳೂರು ಸೇರಿದಂತೆ ನಾನಾ ಫೋಟೋ ಜರ್ನಲಿಸ್ಟ್ ಅವರ ಫೋಟೋಗಳನ್ನು ಪತ್ರಿಕೆಯಲ್ಲಿ ಗಮನಿಸುತ್ತಿದ್ದರು. ಆ ಫೋಟೋ ನೋಡಿ ಹುಟ್ಟಿದ ಆಸಕ್ತಿ ಇಂದು ದೊಡ್ಡ ಛಾಯಾಗ್ರಾಹಕನಾಗಿ ಬೆಳೆಸಿದೆ. ಜೀವನದಲ್ಲಿ ಪ್ರತೀ ಹಂತದಲ್ಲೂ ಇವರ ಯಶಸ್ಸಿನ ಹಿಂದೆ ಇರುವ ಸ್ಪೂರ್ತಿ ಮಂಗಳೂರಿನ ಸುಧಾಕರ್ ಶೆಣೈ.
ಇವರು ಬಡ ಕುಟುಂಬದ ಹಿನ್ನಲೆಯಲ್ಲಿ ಬಂದವರು. ಬೆಂಗಳೂರಿನಲ್ಲಿ ವೃತ್ತಿ ಮಾಡುತ್ತಿದ್ದರು. ವಾಸವಿದ್ದ ರೂಮಿನ ಪಕ್ಕವಿರುವ ‘ಸುಷ್ಮಾ ಸ್ಟುಡಿಯೋ’ದಲ್ಲಿ ಫೋಟೋಗ್ರಾಫಿ ನೋಡುತ್ತಾ, ಆಸಕ್ತಿ ಇನ್ನಷ್ಟು ಹೆಚ್ಚಾಯಿತು. ಪುಟ್ಟ ಮೊಬೈಲ್ ನಲ್ಲಿ ಊರಿಗೆ ಬಂದಾಗ ನಿಸರ್ಗದ ಫೋಟೋ ಕ್ಲಿಕ್ಕಿಸುತ್ತಾ ಖುಷಿ ಪಡುತ್ತಿದ್ದರು.
ಒಮ್ಮೆ ಊರಿಗೆ ಬಂದಾಗ ಗೆಳೆಯ, ಪತ್ರಕರ್ತ ದಿನೇಶ್ ಜೊತೆ ಸೇರಿ ಕ್ಯಾಮೆರಾ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದರು. 17,000ರೂಪಾಯಿಯಲ್ಲಿ ಡಿಎಸ್ ಎಲ್ ಆರ್ (DSLR) ಖರೀದಿಸಿದ್ದ ಅಪುಲ್ ಆಳ್ವರ ಕ್ಯಾಮೆರಾ ಆ ದಿನಗಳಲ್ಲಿ ಅವರ ಊರಿನವರಿಗೆ ಕೌತುಕ. ಕ್ಯಾಮೆರಾ ನೋಡಲೆಂದೇ ಊರವರು ಮುಗಿಬಿದ್ದಿದ್ದರು. ಕ್ಯಾಮೆರಾ(camera) ಕೊಂಡ ಮಾರನೆಯ ದಿನವೇ ಮದುವೆಯಲ್ಲಿ ಫೋಟೋ ತೆಗೆದಿದ್ದರು. ಕ್ಯಾಮೆರಾ ಕೊಂಡ ಬಳಿಕ ಅಪುಲ್ ಆಳ್ವ ಅವರ ಮೊದಲನೇ ಸಂಪಾದನೆ 2000 ರೂಪಾಯಿ.
ಇವರ ಕನಸಿಗೆ ಮನೆಯವರು ಸದಾ ಬೆಂಬಲ. ಈ ಸುಂದರ ವೃತ್ತಿ ಬದುಕಿನ ಹಾದಿಯಲ್ಲಿ , ಈ ವೃತ್ತಿ ಆಯ್ಕೆ ಮಾಡಿ ತಪ್ಪು ಮಾಡಿದೆ ಎನ್ನುವ ಪಶ್ಚಾತಾಪ ಕಾಡಿಲ್ಲ. ಆದರೆ ಅವಮಾನ ಆಗಿದ್ದು, ಬೇಸರ ಆಗಿದ್ದು ಇದೆ. ಫೋಟೋ ಜರ್ನಲಿಸ್ಟ್ ಆದಾಗ ಜನರು ಮುಂದಿನ ಸಾಲಿನಲ್ಲಿ ಕೂರಿಸಿ ಮರ್ಯಾದೆ ಕೊಡುತ್ತಾರೆ. ಆದರೆ ಕೆಲವು ಕಡೆ ಕಡೆಗಣಿಸುತ್ತಾರೆ . ನಿಮ್ಮ ಬದುಕಿನ ಕ್ಷಣಗಳನ್ನು ನಿಮಗೆ ನೆನಪಲ್ಲಿ ಇಟ್ಟುಕೊಳ್ಳುವ ಹಾಗೆ ಮಾಡುವುದು ಫೋಟೋಗ್ರಾಫರ್. ಅವರನ್ನು ತುಚ್ಛವಾಗಿ ಕಾಣದೇ ಗೌರವಿಸಿ ಎನ್ನುವುದು ಇವರ ಕಳಕಳಿ.
ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವುದು ಇಷ್ಟ. ಪುಟ್ಟ ಕ್ಯಾಮೆರಾ , ಪುಟ್ಟ ಬ್ಯಾಗ್ ಹಿಡಿದು ಫೋಟೋಗ್ರಫಿ ಆರಂಭಿಸಿದ ಹುಡುಗ ಇಂದು ಅತ್ಯಾಧುನಿಕ ಕ್ಯಾಮೆರಾ ಹೊಂದಿದ್ದಾರೆ. ಫೋಟೋಗ್ರಫಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಪ್ರತಿಷ್ಠಿತ ನಿಕಾನ್ (Nickon) ಸದಸ್ಯತ್ವ ಪಡೆದು ಕೊಂಡಿದ್ದಾರೆ.
ಫೋಟೋಗ್ರಫಿಯಲ್ಲಿ ನಾನಾ ವಿಧ. ಇವರು ಎಲ್ಲ ರೀತಿಯ ಫೋಟೋಗ್ರಫಿ ಮಾಡಿ ಮುಗಿಸಿದ್ದಾರೆ. ಆದರೆ ನಾನಿನ್ನೂ ಕಲಿಯುತ್ತಿದ್ದೇನೆ. ಫೋಟೋಗ್ರಫಿ ಒಂದು ಸಾಗರವಿದ್ದಂತೆ. ಕಲಿಯಲು ಇನ್ನೂ ಇದೆ. ಎಷ್ಟೇ ದೊಡ್ಡ ಛಾಯಾಗ್ರಾಹಕನಾದರೂ ಇತರರಿಂದ ಸಲಹೆ ಪಡೆದುಕೊಳ್ಳಲು ಸಾಕಷ್ಟಿದೆ ಎನ್ನುತ್ತಾರೆ ಅಪುಲ್ ಆಳ್ವ.
ಎಲ್ಲರಿಗೂ ಎಲ್ಲವೂ ತಿಳಿದಿರುವುದಿಲ್ಲ. ಇನ್ನೊಬ್ಬರ ಬಳಿ ಕಲಿಯುತ್ತಾರೆ. ಕೆಲವರಿಗೆ ಕಲಿಯುವ ಆಸಕ್ತಿ ಇದ್ದರೆ, ಅವಕಾಶ ಕಡಿಮೆ. ಗುರಿಯಿದ್ದರೂ ಗುರುವಿನ ಕೊರತೆ. ಆದರೆ, ಆಳ್ವ ಅವರು ಅಂತಹ ಅದೆಷ್ಟು ಕಲಿಯುವ ಆಸಕ್ತಿ ಇರುವವರಿಗೆ ಗುರುವಾಗಿದ್ದಾರೆ. ತನಗೆ ತಿಳಿದಷ್ಟು ಖುಷಿಯಿಂದ ಹೇಳಿಕೊಡುತ್ತಾರೆ. ಇಂದಿನ ಅದೆಷ್ಟೋ ಯುವ ಛಾಯಾಗ್ರಾಹಕರು ಅಪುಲ್ ಗರಡಿಯಲ್ಲಿ ಪಳಗಿದವರು.
ಮರೆಯಲಾಗದ ಘಟನೆ
ಅಪುಲ್ ಆಳ್ವ ಅವರಿಗೆ ಅವರು ತೆಗೆದ ಎಲ್ಲಾ ಫೋಟೋ ಇಷ್ಟ. ಅದರಲ್ಲಿ ಸದಾ ನೆನಪಿನಲ್ಲಿ ಇರುವಂತದ್ದು ಪ್ರಧಾನಿ ಮೋದಿ ಅವರ ಫೋಟೋ. ಮೋದಿ ಅವರು ಉಡುಪಿ ಬಂದಾಗ, ಮೋದಿಯವರ ಫೋಟೋ ಕ್ಲಿಕ್ಕಿಸಿದ್ದರು. ಬಳಿಕ ಮಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಲಕ್ಷಾಂತರ ಜನ ಸೇರಿದ ಜಾಗದಲ್ಲಿ, ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೋದಿಗೆ ಫೋಟೋ ಹಸ್ತಾಂತರಿಸಿದರು. ಪ್ರಧಾನಿಗೆ ನೀಡಿದ ಉಡುಗೊರೆ, ನೆರೆದಿದ್ದ ಲಕ್ಷಾಂತರ ಜನರ ಚಪ್ಪಾಳೆ ವೃತ್ತಿ ಬದುಕಿನ ಅವಿಸ್ಮರಣೀಯ ಕ್ಷಣ.
ನಾವು ಫೋಟೋಗ್ರಫಿಯಲ್ಲಿ ಎಲ್ಲರಿಗಿಂತ ಭಿನ್ನವಾಗಿ ಯೋಚಿಸಬೇಕು. ಇತರರು ತೆಗೆದ ರೀತಿಯಂತೆ ನಾವು ತೆಗೆದರೆ ನಮ್ಮನ್ನು ಯಾರೂ ಗುರುತಿಸುವುದಿಲ್ಲ. ಎಲ್ಲರಿಗಿಂತ ಭಿನ್ನವಾಗಿ ನೀವು ಯೋಚಿಸಿದರೆ ಜನರು ನಿಮ್ಮನ್ನು, ನಿಮ್ಮ ಕೌಶಲ್ಯ ಗುರುತಿಸುತ್ತಾರೆ ಎನ್ನುತ್ತಾರೆ ಅಪುಲ್ ಆಳ್ವ. ಫೋಟೋ ತೆಗೆಯಲು ಬೇರೆ ಯಾವುದೇ ದೊಡ್ಡ ಸ್ಥಳ ಹುಡುಕಿಕೊಂಡು ಹೋಗಬೇಕೆಂದಿಲ್ಲ. ನಾವಿರುವ ಜಾಗದಲ್ಲಿಯೇ ಸುಂದರ ಫೋಟೋ ಕ್ಲಿಕ್ಕಿಸಬಹುದು. ಅದು ಛಾಯಾಗ್ರಾಹಕನಿಗೆ ಇರಬೇಕಾದ ಕೌಶಲ್ಯ.
ಕೆಲ ಯುವ ಛಾಯಾಗ್ರಾಹಕರು ಹಲವು ಕನಸಿನ ಜೊತೆ ಫೋಟೋಗ್ರಫಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹೆತ್ತವರಿಗೆ ಇಷ್ಟ ಇರುವುದಿಲ್ಲ. ನಿಮ್ಮ ಪ್ರತಿಭೆಯಿಂದ ನೀವು ಯಶಸ್ಸು ಪಡೆದರೆ ಹೆತ್ತವರು ಖುಷಿ ಪಡುತ್ತಾರೆ. ಛಾಯಾಗ್ರಹಣ ಒಂದು ಸವಾಲಿನ ಕೆಲಸ. ಕೇವಲ ಹಣ ಮಾಡುವ ಉದ್ದೇಶದಿಂದ ಬರುವ ಬದಲು, ಸಾಧಿಸುವ ಛಲ ಹೊಂದಿ ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎನ್ನುವ ಸಲಹೆ ನೀಡುತ್ತಾರೆ ಅಪುಲ್ ಆಳ್ವ.
ಇಂದು ಛಾಯಾಗ್ರಹಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಛಾಯಾಗ್ರಾಹಕ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ಇಲ್ಲವಾದಲ್ಲಿ ಆತನಿಗೂ ಕಷ್ಟ. ಹಿಂದೆಲ್ಲ ಯಾವುದಾದರು ಸುದ್ದಿ ಸಂಭವಿಸಿದರೆ ,ಅದರ ಮಾಹಿತಿಯನ್ನು ಮಾತ್ರ ಕೇಳುತ್ತಿದ್ದೇವೆ. ಆದರೆ ಇಂದು ಅದಕ್ಕೆ ಸಂಬಂಧಿಸಿದ ಫೋಟೋ (photo), ವಿಡಿಯೋ(video) ನಮಗೆ ಕ್ಷಣ ಮಾತ್ರದಲ್ಲಿ ಸಿಗುತ್ತದೆ.
ಅಪುಲ್ ಆಳ್ವ ಅವರಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. FIAP, PISA Gold ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದರೆ ಅವುಗಳಿಂದ ಹಿಗ್ಗಿಲ್ಲ.ತಾನಿನ್ನೂ ಕಲಿಯುವ ವಿದ್ಯಾರ್ಥಿಯೆಂದು ಭಾವಿಸಿ ಹೊಸತನ್ನು ಕಲಿಯುತ್ತಿದ್ದಾರೆ.
ಬುಡಕಟ್ಟು ಜನರು, ಆದಿವಾಸಿ ಜನರ ನಿತ್ಯ ಜೀವನದ ಕುರಿತಾಗಿ ಫೋಟೋ ತೆಗೆಯಬೇಕು ಅನ್ನುವ ಆಸೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಕೆಲಸ ಮಾಡಿದ್ದೂ, ದೊಡ್ಡ ಮಟ್ಟಿಗೆ ಯಶಸ್ಸು ಪಡೆಯುವ ಕನಸು ಹೊಂದಿದ್ದಾರೆ. ಇವರ ಕನಸಿಗೆ ಶುಭವಾಗಲಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.