ವಿಂಗಡಿಸದ

ಸರ್ವಮಂಗಳೆಯ ಮಡಿಲಲ್ಲಿರುವ ಶಿವನ ಸನ್ನಿಧಿ ಪಲ್ಲಿಕೊಂಡೇಶ್ವರ: ತಿರುಪತಿ ಹೋಗುವವರು ಈ ದೇಗುಲ ದರ್ಶನ ಮಾಡಬಹುದು

ಸಾಮಾನ್ಯವಾಗಿ ನಾವು ಶಿವನನ್ನು ಲಿಂಗ ರೂಪದಲ್ಲಿ ನೋಡುತ್ತೇವೆ. ಆದರೆ ಈದಿನ ನಾವು ಪರಿಚಯ ಮಾಡುವ ಶಿವಾಲಯದಲ್ಲಿ ವಿಗ್ರಹ ರೂಪದಲ್ಲಿ ಶಿವನನ್ನು ನೋಡುತ್ತೇವೆ. ಈ ದೇವಾಲಯವಿರುವುದು ಆಂಧ್ರ ಪ್ರದೇಶದ ಚಿತ್ತೂರು(Chittoor) ಜಿಲ್ಲೆಯ ನಾಗಲಾಪುರ ಮಂಡಲಂನ ಸುರುಟಪಲ್ಲಿಯಲ್ಲಿ. ತಿರುಪತಿಯಿಂದ(Tirupati) ಚೆನ್ನೈಗೆ ತೆರಳುವ ದಾರಿಯಲ್ಲಿ 70ಕಿಮೀ ತೆರಳಿದರೆ ಈ ಊರು ಸಿಗುತ್ತದೆ.

ಪಲ್ಲಿಕೊಂಡೇಶ್ವರ ದೇವಾಲಯ(pallikondeswara temple surutapalli) ಎಂದು ಕರೆಯಲಾಗುವ ಈ ದೇಗುಲದಲ್ಲಿ ಸರ್ವಮಂಗಳಾ ದೇವಿಯ ಮಡಿಲಲ್ಲಿ ಮಲಗಿರುವ ಪಲ್ಲಿಕೊಂಡೇಶ್ವರನನ್ನು(ಶಿವನನ್ನು) ಕಾಣಬಹುದು. ಭಾರತದ ಎಲ್ಲಾ ದೇವಾಲಯಗಳಿಗಿರುವಂತೆ ಈ ದೇವಾಲಯಕ್ಕೂ ಒಂದು ಕೃತಯುಗದ ಹಿನ್ನೆಲೆ ಇದೆ. 

ವಿಷಕಂಠನ ಕತೆ

ನಮಗೆಲ್ಲ ತಿಳಿದಿರುವಂತೆ ದೇವ ದಾನವರು ಅಮೃತಕ್ಕಾಗಿ ಮಂದರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಂಡು ಕಡಲನ್ನು ಕಡೆಯುವಾಗ ಮೊದಲು ಕಾಲಕೂಟ ವಿಷ ಹೊರಬರುತ್ತದೆ. ಆಗ ದೇವತೆಗಳಲ್ಲಾ ಪ್ರಾರ್ಥನೆ ಮಾಡಲು ಆ ವಿಷವನ್ನು ಶಿವ ಪ್ರಾಶನ ಮಾಡುತ್ತಾನೆ. ಅದು ಆತನ ಕಂಠದಲ್ಲೇ ಉಳಿದು ಆತ ನೀಲಕಂಠನಾಗುತ್ತಾನೆ. 

ಈ ಘಟನೆಯ ನಂತರ ಶಿವ ಪಾರ್ವತಿಯರು ಕೈಲಾಸಕ್ಕೆ ಹಿಂತಿರುಗುವಾಗ ಸುರುಟಪಲ್ಲಿಯ ಬಳಿ ಬರುವಷ್ಟರಲ್ಲಿ ಅಂತಹ ಶಿವ ಕೂಡ ವಿಷ ಪ್ರಭಾವಕ್ಕೊಳಗಾಗಿ ಪ್ರಜ್ಞಾಹೀನನಾಗಿ ಸರ್ವಮಂಗಳೆಯ ಮಡಿಲಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಾನೆ. ಆಗ ಸರ್ವಮಂಗಳಾ ದೇವಿ ಆತನ ಕಂಠದಲ್ಲಿನ ಅಳಿದುಳಿದ ವಿಷ ಜೀರ್ಣವಾಗದಂತೆ ಈಶ್ವರನ ಕತ್ತನ್ನು ಬಿಗಿಯಾಗಿ ಹಿಡಿದು ಆ ವಿಷವನ್ನು ಅಮೃತವನ್ನಾಗಿ ಮಾರ್ಪಡಿಸುತ್ತಾಳೆ. ಹಾಗಾಗಿ ಆಕೆಯನ್ನು ಅಮುದಾದೇವಿ(ಮರಕದಾಂಬಿಕಾ) ಎಂದೂ ಕರೆಯುತ್ತಾರೆ. 

ದೇವಾನುದೇವತೆಗಳು ಬಂದ ಊರು

ಈ ಘಟನೆ ನಡೆದಾಗ ದೇವಾನುದೇವತೆಗಳು ಶಿವನನ್ನು ಪರಾಮರ್ಶಿಸಲು ಈ ಊರಿಗೆ ಬರುತ್ತಾರೆ. ಹಾಗಾಗಿ ಈ ಊರಿಗೆ ಸುರಕೋಟಿಪಲ್ಲಿ ಎಂದು ಆಗುತ್ತದೆ. ಆದರೆ ಇಂದು ಜನರ ಬಾಯಲ್ಲಿ ಅದು ಸುರುಟಪಲ್ಲಿ ಆಗಿದೆ. ಗರ್ಭಗುಡಿಯಲ್ಲಿ ಸರ್ವಮಂಗಳಾ ದೇವಿಯ ಮಡಿಲಲ್ಲಿ ಮಲಗಿರುವ ಪರಶಿವನ 12 ಅಡಿಯ ಸುಂದರ ವಿಗ್ರಹವನ್ನೂ ಹಾಗೂ ಸುತ್ತಲೂ ಋಷಿಗಳೂ ದೇವತೆಗಳೂ ಪ್ರಾರ್ಥಿಸುತ್ತಿರುವಂತೆ ಇದೆ. 

ಅಭಿಷೇಕ ಪ್ರಿಯನಾದ ಶಿವನಿಗೆ ಎಲ್ಲಾ ದೇವಾಲಯಗಳಲ್ಲಿ ನಡೆಯುವಂತೆ ಇಲ್ಲಿ ಅಭಿಷೇಕ ನಡೆಯುವುದಿಲ್ಲ. ಬದಲಾಗಿ ಹದಿನೈದು ದಿನಕ್ಕೊಮ್ಮೆ ತಮಿಳುನಾಡಿನಿಂದ ತರುವ ಚಂದನ ತೈಲವನ್ನು ಹಚ್ಚುತ್ತಾರೆ. ಇದರಿಂದ ಶಿವನ ದೇಹದಲ್ಲಿ ಇರಬಹುದಾದ ವಿಷದ ಪ್ರಭಾವ ಕಡಿಮೆ ಆಗುವುದೆಂದು ಪ್ರತೀತಿ. 

ಸರ್ವಮಂಗಳೆಯ ಮಡಿಲಲ್ಲಿ ಶಿವ

ಇಲ್ಲಿ ಮೊದಲು ಶಿವನ ಪ್ರಾಣ ಕಾಪಾಡಿದ ಮರಕದಾಬಿಂಕೆಯನ್ನು ದರ್ಶಿಸಿ ನಂತರ ಗರ್ಭಗುಡಿಯಲ್ಲಿ ಸರ್ವಮಂಗಳಾ ದೇವಿಯ ಮಡಿಲಲ್ಲಿ ಮಲಗಿರುವ ಪರಮಶಿವನನ್ನು ದರ್ಶಿಸಬೇಕಾಗುತ್ತದೆ. ಎಲ್ಲಾ ಶಿವಾಲಯಗಳಲ್ಲಿ ಶಿವನ ಎಡಕ್ಕೆ ದೇವಿಯ ವಿಗ್ರಹವಿದ್ದರೆ ಈ ದೇಗುಲದಲ್ಲಿ ಶಿವನ ಬಲಕ್ಕೆ ಅದೂ ಶಿವನ ವಿಗ್ರಹಕ್ಕಿಂತ ಒಂದು ಅಡಿ ಎತ್ತರದಲ್ಲಿ ದೇವಿ ಇದ್ದಾಳೆ. 

ದೇವಿಯ ಎದುರು ಯಾವುದೇ ವಾಹನವಿಲ್ಲ. ವಿಗ್ರಹದ ತಳದಲ್ಲಿ ಸಿಂಹದ ಗುರುತು ಇದ್ದು, ದ್ವಾರಪಾಲಕರ ಬದಲಾಗಿ ಕಾಮಧೇನು ಹಾಗೂ ಕಲ್ಪವೃಕ್ಷವಿದ್ದು ಇದು ಮರಕದಾಂಬಿಕೆಯು ಸಿರಿಯ ಪ್ರತೀಕವಾಗಿದ್ದಾಳೆ. ಗುಡಿಯ ಪ್ರಾಂಗಣದಲ್ಲಿ ಬೇರೆ ಬೇರೆ ದೇವತಾ ವಿಗ್ರಹಗಳಿದ್ದು, ಸಂದರ್ಶಕರನ್ನು ಭಕ್ತಿ ಭಾವದಲ್ಲಿ ಮೀಯಿಸುತ್ತವೆ. 

ಇದೇ ಗುಡಿಯಲ್ಲಿ ವಾಲ್ಮೀಕಿ ಪ್ರತಿಷ್ಟಿತ ಶಿವಲಿಂಗವೂ ಇದೆ. ಹಾಗೂ ಎಲ್ಲಾ ದೇವಾಲಯಗಳಲ್ಲಿ ಏಕಾಂಗಿಯಾಗಿ ಕಾಣುವ ದಕ್ಷಿಣಾಮೂರ್ತಿ ಇಲ್ಲಿ ಗೌರೀದೇವಿಯನ್ನು ಎಡಭಾಗದ ತೊಡೆಯ ಮೇಲೆಕುಳ್ಳಿರಿಸಿಕೊಂಡು ಕ್ಷೇತ್ರಕ್ಕೆ ಬರುವ ದಂಪತಿಗಳಿಗೆ ಅಭಯ ಕೊಡುತ್ತಿದ್ದಾನೆ. 

ಇಷ್ಟೆಲ್ಲಾ ವಿಶೇಷಗಳಿರುವ ಈ ದೇಗುಲ ಹಚ್ಚಹಸುರಿನ ನಡುವೆ ಕಂಗೊಳಿಸುತ್ತಿದ್ದು, 1344-77ರ ಮಧ್ಯೆ ವಿಜಯನಗರ ಸಾಮ್ರಾಜ್ಯದ ಹರೀಹರ ಬುಕ್ಕರಾಯರು ನಿರ್ಮಿಸಿದರೆಂದು ಆಧಾರಗಳು ದೊರೆತಿವೆ.

ಈ ಬಾರಿ ನೀವು ತಿರುಪತಿಗೆ ಭೇಟಿ ನೀಡಿದಾಗ ಈ ಕ್ಷೇತ್ರಕ್ಕೆ ಭೇಟಿ ನೀಡಿ. ಇಲ್ಲಿಗೆ ಭೇಟಿ ನೀಡಲು ತಿರುಪತಿ(tirupati) ಅಥವಾ ಚೆನ್ನೈ ನಿಂದ ಮೊದಲು ಚಿತ್ತೂರಿಗೆ ಹೋಗಿ ಅಲ್ಲಿಂದ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಹೊರಡುವ ಆಂಧ್ರ ಸಾರಿಗೆ ಬಸ್ ಹಿಡಿದು ಸುರುಟಪಲ್ಲಿ ತಲುಪಬಹುದು. ಶಿವ ಇಲ್ಲಿ ಮಲಗಿರುವ ಭಂಗಿಯಲ್ಲಿರುವುದರಿಂದ ಇದನ್ನು ಶಿವ ಶಯನ ಕ್ಷೇತ್ರ ಎಂದೂ ಕರೆಯುತ್ತಾರೆ.

ಸುವರ್ಣಲಕ್ಷ್ಮಿ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button