ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಇಂದಿನಿಂದ ನವರಾತ್ರಿ ಆರಂಭ: ಕರ್ನಾಟಕದ ದೇವಿ ದೇವಾಲಯಗಳಲ್ಲಿ ನಡೆಯಲಿದೆ ಅದ್ದೂರಿ ದಸರಾ ಉತ್ಸವ

ಇಂದಿನಿಂದ “ನವರಾತ್ರಿ” ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಆರಂಭಗೊಳ್ಳಲಿದೆ. ಉತ್ಸವಕ್ಕೆ ನಾಡಿನ ಪ್ರಮುಖ ದೇವಿ ದೇವಾಲಯಗಳು ಸಜ್ಜಾಗಿವೆ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಈ ದೇವಾಲಯಗಳ ಅದ್ದೂರಿ ದಸರಾ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

• ಉಜ್ವಲಾ.ವಿ.ಯು

ನಮ್ಮ ನಾಡಿನಲ್ಲಿ ಅದ್ದೂರಿ ದಸರಾ ಉತ್ಸವ (Dussehra Festival)ವನ್ನು ಆಚರಿಸುವ ಸುಪ್ರಸಿದ್ಧ ಮೈಸೂರು, ಶೃಂಗೇರಿ ಮತ್ತು ಕುದ್ರೋಳಿ ದೇಗುಲಗಳ ದಸರಾ ವೈಭವದ ಕುರಿತಾದ ಮಾಹಿತಿ ಇಲ್ಲಿದೆ.

1. ಮೈಸೂರು ದಸರಾ:

Mysore dasara Ambari Utasva

ಕನ್ನಡಿಗರಿಗೆ “ದಸರಾ” ಎಂದಾಕ್ಷಣ ನೆನಪಾಗುವುದು “ಮೈಸೂರು ದಸರಾ”. ಮೈಸೂರು ಅಷ್ಟೇನು ಆಡಂಬರ ಹೊಂದಿರದ ಸರಳವಾದ ನಗರ. ಆದರೆ ದಸರಾ ಹಬ್ಬದಲ್ಲಿ ಮಾತ್ರ ಬೀದಿ ಬೀದಿಗಳಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸುವ ಮೂಲಕ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ದಸರಾ ಸಂಭ್ರಮ ಆಚರಣೆಗೆ ಮೈಸೂರು ಸಜ್ಜಾಗಿದೆ. ಸಾಂಸ್ಕೃತಿಕ ಉಪ ಸಮಿತಿಯಿಂದ ಇಂದಿನಿಂದ 23ರವರೆಗೆ ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. 4000ಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗಿ ಆಗಲಿದ್ದಾರೆ. ಈ ವರ್ಷದ ದಸರಾ ಉತ್ಸವವನ್ನು ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟಿಸಿದ್ದಾರೆ. ಇಂದಿನಿಂದ ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ ಸಂಗೀತ ಸಭಾ, ಚಿಕ್ಕಗಡಿಯಾರ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಸುಗಮ ಸಂಗೀತ, ನೃತ್ಯ ರೂಪಕ, ಸ್ಯಾಕ್ಸೋಫೋನ್, ವೀಣಾ ವಾದನ, ಸಾಂಪ್ರದಾಯಿಕ ಗೀತೆಗಳು, ಭಕ್ತಿಗೀತೆ, ವಾದ್ಯ, ಸೂತ್ರ ಸಲಾಕೆ ಗೊಂಬೆಯಾಟ, ಯಕ್ಷಗಾನ, ಡೊಳ್ಳು ಕುಣಿತ, ಕೋಲಾಟ, ಸುಗ್ಗಿ ಕುಣಿತ ಇತ್ಯಾದಿ ಕಾರ್ಯಕ್ರಮ 9 ದಿನಗಳ ಕಾಲ ನಡೆಯಲಿದೆ. ರಂಗಮಂದಿರಗಳಲ್ಲಿ ನಾಟಕ ಪ್ರದರ್ಶನಗಳು ನಡೆಯಲಿದೆ. ಮೈಸೂರಿನ ಅರಮನೆಯ ಮುಂಭಾಗದಲ್ಲಿ ಸಂಗೀತ ವಾದ್ಯ ನೃತ್ಯ ಪ್ರದರ್ಶನಗಳು ನಡೆಯಲಿದೆ. ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ 9 ದಿನಗಳವರೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶೈಲಿಯ ಊಟೋಪಚಾರ ತಯಾರಿಸುವ ಆಹಾರ ಮಳಿಗೆಗಳನ್ನು ನಿರ್ಮಿಸುವ ಮೂಲಕ “ಆಹಾರ ಮೇಳ” ವನ್ನು ಮಾಡಲಾಗುತ್ತದೆ. ಚಾಮುಂಡಿ ದೇವಾಲಯದಲ್ಲಿಯೂ ದೇವಿ ಪ್ರತೀ ದಿನ ವಿಶೇಷ ಅಲಂಕಾರ, ಪೂಜೆ ಸಲ್ಲುತ್ತದೆ. ವಿಜಯ ದಶಮಿಯಂದು ಅದ್ದೂರಿಯಾಗಿ “ಅಂಬಾರಿ ಉತ್ಸವ”ವನ್ನು ಆಚರಿಸಲಾಗುತ್ತದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ.

ನೀವು ಇದನ್ನೂ ಇಷ್ಟಪಡಬಹುದು: ವಿದ್ಯಾ ದೇವತೆ ಶಾರದಾಂಬೆಯ ನಾಡಿನ ಎರಡು ಮುಖ್ಯವಾದ ದೇಗುಲಗಳು

2. ಶೃಂಗೇರಿ ಶರನ್ನವರಾತ್ರಿ ಉತ್ಸವ:

Sringeri Sharannavaratri Utsava

ಶೃಂಗೇರಿ ಶಾರದಾ ಮಠದಲ್ಲಿ ಇಂದಿನಿಂದ ಅ.23ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ನಿನ್ನೆ ಅ.14 ರಂದು ಶಾರದಾಂಬೆಗೆ ಮಹಾಭಿಷೇಕ ನೆರವೇರಿದ್ದು, ಶಾರದೆಯು ಜಗತ್ಪ್ರಸೂತಿಕಾ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ಇಂದು ಬ್ರಾಹ್ಮೀ ಅಲಂಕಾರ, ಅ.16 – ಹಂಸವಾಹಿನಿ ಅಲಂಕಾರ, ಅ.17 – ಮಾಹೇಶ್ವರಿ, ಅ.18- ಮಯೂರವಾಹಿನಿ, ಅ.19 – ವೈಷ್ಣವಿ, ಅ.20 – ವೀಣಾ ಶಾರದೆ, ಅ.21 – ಮೋಹಿನಿ ಅಲಂಕಾರ, ಅ.22 – ರಾಜರಾಜೇಶ್ವರಿ, ಅ.23 – ಸಿಂಹವಾಹಿನಿ ಅಲಂಕಾರ, ಅ.24 – ಗಜಲಕ್ಷ್ಮೀ ಅಲಂಕಾರಗಳಿಂದ ಕಂಗೊಳಿಸುವ ತಾಯಿಯನ್ನು ನೋಡಲು ಲಕ್ಷಾಂತರ ಜನ ಸೇರುತ್ತಾರೆ. ಅಂತೆಯೇ ಮಠದ ವತಿಯಿಂದ ಶತಚಂಡಿಕಾ ಯಾಗ, ಶಮೀ ಪೂಜೆ, ಸಂಜೆಯ ಹೊತ್ತು ಬೀದಿ ಉತ್ಸವ, ದರ್ಬಾರ್, ಅಷ್ಟಾವಧಾನ ಸೇವೆ, ಪಾರಾಯಣ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ. ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅ.25 ಏಕಾದಶಿಯಂದು ಶ್ರೀ ಶಾರದಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತದೆ.

3. ಕುದ್ರೋಳಿ ಗೋಕರ್ಣನಾಥೇಶ್ವರ ದಸರಾ:

Kudroli Gokarnath Temple Navaratri Utsav

“ಮಂಗಳೂರು ದಸರಾ” (Mangalore dasara) ಎಂದು ಪ್ರಸಿದ್ಧವಾದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ದಸರಾ ಉತ್ಸವವು ಇಡೀ ಮಂಗಳೂರು ವಿಜೃಂಭಣೆಯಿಂದ ಆಚರಿಸುವ ದಸರಾ ಮಹೋತ್ಸವವಾಗಿದೆ. ದೇವಾಲಯವನ್ನು ಮಾತ್ರವಲ್ಲದೇ ಮಂಗಳೂರಿನ ಪ್ರತೀ ಬೀದಿಗಳೂ ದೀಪಾಲಂಕಾರಗಳಿಂದ ಅಲಂಕರಿಸಲಾಗುತ್ತದೆ. ನವರಾತ್ರಿಯ ಹತ್ತು ದಿನವೂ ದೇವಾಲಯದಲ್ಲಿ ವಿವಿಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಂದು (ಅ.15ರಂದು) ಬೆಳಗ್ಗೆ ಶಾರದೆ, ಗಣಪತಿ ಸಹಿತಿ ನವದುರ್ಗೆಯವರ ಮೂರ್ತಿ ಪ್ರತಿಷ್ಠಾಪನೆ ನಡೆದು, ದಸರಾ ಮಹೋತ್ಸವಕ್ಕೆ ಚಾಲನೆ ಮಾಡಲಾಗಿದೆ. ದಸರಾ ಮೆರವಣಿಗೆಯ ದಿನದಂದು ಮಂಗಳೂರಿನ ಜನರು ಮನೆ, ಅಂಗಡಿ, ಕಟ್ಟಡಗಳನ್ನು ಅಲಂಕರಿಸಿ ಮೆರವಣಿಗೆಯನ್ನು ಸ್ವಾಗತಿಸುತ್ತಾರೆ. ಬೇರೆ ಬೇರೆ ಊರುಗಳಿಂದಲೂ ಭಕ್ತಾದಿಗಳು ಆಗಮಿಸಿ ಈ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಮೆರವಣಿಗೆಯಲ್ಲಿ ನವದುರ್ಗೆಯವರ ಮೂರ್ತಿಯೊಂದಿಗೆ ಶಾರದಾ ದೇವಿ, ಗಣಪತಿ ಮೂರ್ತಿಯನ್ನು ಸಹ ಇರುತ್ತದೆ. ಛತ್ರಿ ಚಾಮರಗಳು, ಚಂಡೆ ಮದ್ದಳೆ, ಸಾಂಪ್ರದಾಯಿಕ ನೃತ್ಯ, ಯಕ್ಷಗಾನ, ವಿಭಿನ್ನ ಬಗೆಯ ಟ್ಯಾಬ್ಲೋಗಳು, ಹುಲಿವೇಷ, ಕರಗ, ತೊಟ್ಟಿರಾಯ, ಗೊಂಬೆಗಳು, ಡೊಳ್ಳು ಕುಣಿತ, ಬ್ಯಾಂಡ್ ಇತರೆ ಮನರಂಜನೆಗಳು ಉತ್ಸವದ ಮುಂದೆ ಇದ್ದು, ಮೆರವಣಿಗೆಗೆ ಮತ್ತಷ್ಟು ರಂಗನ್ನು ತರುತ್ತವೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅವುಗಳಲ್ಲಿ ಮೂರು ಸುಪ್ರಸಿದ್ಧ ದೇವಾಲಯಗಳ ದಸರಾ ಮಾಹಿತಿ ಇಲ್ಲಿದೆ. ಸಾಧ್ಯವಾದರೆ ಈ ವರ್ಷದ ನವರಾತ್ರಿ ಉತ್ಸವದಲ್ಲಿ ಈ ದೇವಾಲಯಗಳನ್ನು ಭೇಟಿ ನೀಡಿ, ದಸರಾ ವೈಭವಕ್ಕೆ ಸಾಕ್ಷಿಯಾಗಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button