ಬೆಂಗಳೂರಿನ ಮೂವರು ಹುಡುಗಿಯರು ೨೦ ದಿನ ಕರ್ನಾಟಕ ಸುತ್ತಿದ ಪಯಣದ ಕಥೆ
ಬಾಲ್ಯದಲ್ಲಿ ಕುಟುಂಬದ ಜೊತೆಗೆ ದೇವಸ್ಥಾನಕ್ಕೆ ಹೋಗುವ ನಮಗೆ ಒಂದು ರೀತಿಯ ಅಸಡ್ಡೆ. ಆದರೆ ನಾವು ಬೆಳೆದಂತೆ ಪಾರಂಪರಿಕ ತಾಣಗಳ ಕುರಿತು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಮೂಡುತ್ತದೆ. ಇದೇ ಕುತೂಹಲದಿಂದ ೨೦ ದಿನ ಕರ್ನಾಟಕ ಸುತ್ತಿದ ಬೆಂಗಳೂರು ಹುಡುಗಿ ಸಾಹಿತಿ ಮತ್ತು ಸ್ನೇಹಿತೆಯರ ಪಯಣದ ಕಥೆ.
- ನವ್ಯಶ್ರೀ ಶೆಟ್ಟಿ
ಕಳೆದ ತಿಂಗಳ ಡಿಸೆಂಬರ್ ನಲ್ಲಿ ಸಾಹಿತಿ ಸೇರಿದಂತೆ ಮೂವರು ಸ್ನೇಹಿತೆಯರು ಕಾರಿನಲ್ಲಿ ಪ್ರವಾಸಕ್ಕೆ ಹೊರಟಿದ್ದರು. ಅದು ಸುಮಾರು ೨೦ ದಿನಗಳ ಕಾಲದ ಕರ್ನಾಟಕ ಪ್ರವಾಸ. ಬಾಲ್ಯದಲ್ಲಿ ಅಪ್ಪ ಅಮ್ಮ ಜೊತೆ ದೇವಸ್ಥಾನಗಳಿಗೆ ಹೋಗುವಾಗ ಆಸಕ್ತಿ ಇರುತ್ತಿರಲಿಲ್ಲ. ದೇವಸ್ಥಾನಕ್ಕೆ ಎನ್ನುವ ಅಸಡ್ಡೆ ನಮ್ಮಲ್ಲಿ ಮೂಡುತ್ತಿತ್ತು. ಆದರೆ ನಾವು ಬೆಳೆದಂತೆ ಕರ್ನಾಟಕದ ಇತಿಹಾಸ , ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿತ್ತು. ಆ ಕಾರಣಕ್ಕಾಗಿ ನಾವು ಹೊರಟಿದ್ದು ಕರ್ನಾಟಕದ ಪಾರಂಪರಿಕ ತಾಣಗಳನ್ನು ನೋಡುವುದಕ್ಕೆ ಎನ್ನುತ್ತಾರೆ ಸಾಹಿತಿ. ೨೦ ದಿನಗಳ ಪ್ರವಾಸದಲ್ಲಿ ಕರ್ನಾಟಕದ ಹಲವು ತಾಣಗಳನ್ನು ನೋಡಿದ್ದಾರೆ ಸಾಹಿತಿ ಹಾಗೂ ಅವರ ಸ್ನೇಹಿತೆಯರಾದ ಅನುಷಾ ಮತ್ತು ಶಿವಾನಿ.
ಮೊದಲು ಹೋಗಿದ್ದು ವಿಶ್ವ ಪಾರಂಪರಿಕ ತಾಣ ಹಂಪಿಗೆ(hampi).
ಬೆಂಗಳೂರಿನಿಂದ ಹೊರಟ ಅವರ ಮೊದಲ ಪಯಣ ಹೊರಟಿದ್ದು ವಿಶ್ವ ಪಾರಂಪರಿಕ ತಾಣ ಹಂಪಿಗೆ. ಮೂವರು ಸ್ನೇಹಿತೆಯರು ಮೂರು ದಿನ ಹಂಪಿಯಲ್ಲಿ ಕಳೆದಿದ್ದರು. ಹಂಪಿ ನೋಡಿದಷ್ಟು ನೋಡಬೇಕು ಎಂದೆನಿಸುವ ತಾಣ. ಹಂಪಿಯಲ್ಲಿ ವಿರುಪಾಕ್ಷ(virupaksha), ಕಡ್ಲೆ ಕಾಯಿ ಗಣೇಶ , ಅಂಜನಾದ್ರಿ(anjanadri), ವಿಠಲ ದೇವಸ್ಥಾನ(vitala temple),ಉಗ್ರ ನರಸಿಂಹ ದೇವಸ್ಥಾನ, ಬಡವಿ ಲಿಂಗ ಸೇರಿದಂತೆ ಹಲವು ತಾಣಗಳನ್ನು ಕಣ್ತುಂಬಿ ಕೊಂಡಿದ್ದರು.
ಮೂವರು ಕೂಡ ಹೋಗುವ ಮುನ್ನವೇ , ತಾವು ಹೋಗುವ ಜಾಗಗಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿ , ಆ ಸ್ಥಳದ ವಿಶೇಷ ಖಾದ್ಯಗಳ ಅನುಭವ ಪಡೆಯಬೇಕು ಎಂದು ಮೊದಲೇ ನಿರ್ಧರಿಸಿದ್ದರು ಹಂಪಿಯಲ್ಲಿ ಮೂರು ದಿನ ಹೆಚ್ಚಾಗಿ ಕಳೆದಿದ್ದು ಅಲ್ಲಿನ ಸ್ಥಳೀಯರ ಜೊತೆ. ಹಂಪಿಯಲ್ಲಿ ಪಾರಂಪರಿಕ ತಾಣಗಳನ್ನು ನೋಡುವುದರ ಜೊತೆಗೆ ಆಸು ಪಾಸಿನ ಜಾಗದಲ್ಲಿ ನಿಮಗೆ ಮನೋರಂಜನಾ ಆಟಗಳನ್ನು ಆಡುವ ಸ್ಥಳಗಳು ಕೂಡ ಇದೆ. ಸಾನಪೂರ ಕೆರೆ( sanapura lake)ಯಲ್ಲಿ ನೀವು ಕ್ಲಿಫ್ ಡೈವಿಂಗ್ (cliff diving ) ಮತ್ತು ಕೋರೆಕಲ್ ರೈಡ್ (coracle ride) ಹೀಗೆ ಒಂದಷ್ಟು ಮನೋರಂಜನಾ ಆಟಗಳನ್ನು ನೀವು ಆಡಬಹುದು.
ಹಂಪಿ ಬಳಿಕ ಹೊರಟಿದ್ದು ಬಾದಾಮಿ, ಐಹೊಳೆ ಪಟ್ಟದಕಲ್ಲು
ಮೂರು ದಿನಗಳ ಕಾಲ ಹಂಪಿಯ ಸೌಂದರ್ಯ ಅನುಭವಿಸಿದ್ದ ಮೂವರು ಗೆಳತಿಯರು ನಂತರ ಹೊರಟಿದ್ದು ಬಾದಾಮಿ ,ಐಹೊಳೆ ಮತ್ತು ಪಟ್ಟದಕಲ್ಲು ನೋಡಲು. ಆದರೆ ಹೋಗುವ ಮಾರ್ಗದಲ್ಲಿ ನಿಂತಿದ್ದು ಇಳಕಲ್ಲಿನಲ್ಲಿ(ilakallu). ಇಳಕಲ್ಲು ಸೀರೆ ಜಗತ್ಪ್ರಸಿದ್ಧ. ಅಲ್ಲಿ ಸೀರೆಗಳನ್ನು ಮಗ್ಗದಲ್ಲಿ ನೇಯ್ದು ಕೊಡುತ್ತಾರೆ. ಆದರೆ ಇತ್ತೀಚೆಗೆ ಕೊಂಚ ಕಮ್ಮಿಯಾಗಿದೆ. ಮಗ್ಗದಲ್ಲಿ ನೇಯುವ ಸೀರೆಯನ್ನು ನೋಡುವ ಕುತೂಹಲವಿದ್ದ ಮೂವರು ,ಅಲ್ಲಿನ ಸ್ಥಳೀಯರೊಬ್ಬರು ಮಗ್ಗದಲ್ಲಿ ನೇಯುತ್ತಿದ್ದ ಸೀರೆಯನ್ನು ನೋಡಿ ಖುಷಿ ಪಟ್ಟಿದ್ದರು.
ಬಳಿಕ ತಲುಪಿದ್ದು ಬಾದಾಮಿಗೆ(badami). ಅಲ್ಲಿ ನಾಲ್ಕು ಗುಹಾಂತರ ದೇವಾಲಯ (cave temple) ವಿದೆ. ಬೆಳಿಗ್ಗಿನ ಸಮಯದಲ್ಲಿನ ಅಲ್ಲಿ ಹೆಚ್ಚಾಗಿ ಜನರಿರುವುದಿಲ್ಲ . ಹಾಗಾಗಿ ಬೆಳಿಗ್ಗೆ ಹೋದರೆ ಉತ್ತಮ . ಬೆಳಗ್ಗಿನ ಸೂರ್ಯೋದಯ ಅಲ್ಲಿ ನೋಡಲು ಚೆಂದ. ಅಲ್ಲಿ ಕುಳಿತು ನೀವು ಪ್ರಕೃತಿ ನೋಡಿದರೆ ಅದು ನಿಮಗೆ ಇನಷ್ಟು ರಮಣೀಯವಾಗಿ ಕಾಣುತ್ತದೆ. ಜೊತೆಗೆ ಅಲ್ಲಿ ನಿಮಗೆ ಅಗಸ್ತ್ಯ ನದಿ ಕೂಡ ಕಾಣುತ್ತದೆ.
ಅಗಸ್ತ್ಯ(agastya ) ನದಿಯ ಅಚೆಗೆ ಭೂತನಾಥ್ ದೇವಸ್ಥಾನವಿದೆ (bhutanath temple). ಅಲ್ಲಿಗೆ ವಾಹನಗಳು ಹೋಗುವುದಿಲ್ಲ . ನಡೆದುಕೊಂಡೇ ಹೋಗಬೇಕು. ಅಲ್ಲಿನ ಅಗಸ್ತ್ಯ ಕೆರೆಯಲ್ಲಿ ನಿಮಗೆ ಭೂತನಾಥ ದೇವಸ್ಥಾನದ ನೆರಳು ಕಾಣಿಸುತ್ತದೆ. ಆ ದೇವಸ್ಥಾನದ ಚಿತ್ರ ತುಂಬಾ ಚೆಂದ ಅನ್ನುತ್ತಾರೆ ಸಾಹಿತಿ.
ಬಾದಾಮಿಯ ನಂತರ ಮೂವರ ಪಯಣ ಹೊರಟಿದ್ದು ,ಐಹೊಳೆ(aihole) ಪಟ್ಟದಕಲ್ಲು(pattadakallu) ಗೆ. ಕರ್ನಾಟಕದಲ್ಲಿ ರಾಜ ಮನೆತನಗಳು ಇಲ್ಲಿ ಆಳ್ವಿಕೆ ನಡೆಸಿದ್ದರು ಎನ್ನುವುದನ್ನು ಪ್ರತಿರೂಪ ಈ ಊರುಗಳು. ಇಂದು ಈ ತಾಣಗಳು ಅದೇ ಸೌಂದರ್ಯವನ್ನು ಉಳಿಸಿಕೊಂಡು ಬಂದಿದೆ.
ಈ ಜಾಗದಲ್ಲಿ ಜೋಳದ ರೊಟ್ಟಿ ಪ್ರಸಿದ್ಧ. ಅಲ್ಲಿ ಮಹಿಳೆಯರು ಬುಟ್ಟಿಗಳಲ್ಲಿ ಜೋಳದ ರೊಟ್ಟಿ ಹಿಡಿದುಕೊಂಡು ಮಾರಾಟಕ್ಕೆ ಬರುತ್ತಾರೆ. ಸಾಹಿತಿ ಹಾಗೂ ಸ್ನೇಹಿತೆಯರು ಬುಟ್ಟಿ ಜೋಳದ ರೊಟ್ಟಿ ಕೂಡ ರುಚಿ ಕಂಡು ಖುಷಿ ಪಟ್ಟರು
ಶಿರಸಿ(sirsi), ಬನವಾಸಿಯಲ್ಲಿ(banavasi) ಕಳೆದ ನೆನಪುಗಳು
ಸೌಂದರ್ಯದ ತಾಣಗಳನ್ನು ನೋಡಬೇಕು ಎನ್ನುವ ಮೂವರ ಆಸೆಯಂತೆ ಮುಂದಿನ ಪಯಣ ಹೊರಟಿದ್ದು ಶಿರಸಿ ಹಾಗೂ ಬನವಾಸಿ ಕಡೆ . ಅಲ್ಲಿ ಸಹಸ್ರ ಲಿಂಗ ದೇವಸ್ಥಾನ ಪ್ರಸಿದ್ದಿ . ಅಲ್ಲಿನ ನೀರು ಹರಿಯುತ್ತಿರುತ್ತದೆ. ಆ ವೇಳೆ ನಿಮಗೆ ಅಲ್ಲಲ್ಲಿ ಲಿಂಗ ಕಾಣಿಸಿಕೊಳ್ಳುತ್ತದೆ. ಅವುಗಳನ್ನು ನೋಡುವುದೇ ಚೆಂದ.
ಕರ್ನಾಟಕದ ಅಪರೂಪದ ದೇವಸ್ಥಾನಗಳಲ್ಲಿ ಶಿರಸಿಯ ಮಾರಿಕಾಂಬ(marikamba) ಕೂಡ ಒಂದು. ಶಿರಸಿಯಲ್ಲಿ ಮಾರಿಕಾಂಬ ದೇವಸ್ಥಾನ ಕೂಡ ಪ್ರಸಿದ್ದಿ. ಅಲ್ಲಿಗೆ ಭೇಟಿ ನೀಡಿದ್ದ ಸಾಹಿತಿ ಮತ್ತೆ ಅವರ ಸ್ನೇಹಿತರು ಅಲ್ಲಿನ ವಿಶೇಷತೆಗಳನ್ನೆಲ್ಲ ಕೇಳಿ ತಿಳಿದುಕೊಂಡಿದ್ದರು. ಅರ್ಚಕರ ಜೊತೆ ಮಾತನಾಡುತ್ತಾ ಗಾಂಧೀಜಿ (gandhiji) ದೇವಸ್ಥಾನಕ್ಕೆ ಬಂದ ಕಥೆ , ನಂತರದ ಬದಲಾವಣೆ, ಅಲ್ಲಿನ ಒಂದಷ್ಟು ಕಥೆಗಳನ್ನು ಕೇಳಿ ತಿಳಿದುಕೊಂಡರು.
ನೀವುಇದನ್ನುಇಷ್ಟಪಡಬಹುದು: ಒಂದು ಟ್ರಿಪ್ಪಿನ ಕಥೆ ; ಮೂರು ದಿನ… ನೂರು ನೆನಪು…!
ಶಿರಸಿಯಿಂದ ಮೂರು ಜನ ಸ್ನೇಹಿತೆಯರ ಪಯಣ ಹೊರಟಿದ್ದು ಬನವಾಸಿಯ(banavsi) ಕಡೆಗೆ. ಬನವಾಸಿ ಕರ್ನಾಟಕದ ಅತ್ಯಂತ ಪ್ರಾಚೀನ ಊರುಗಳಲ್ಲಿ ಒಂದು. ಅಲ್ಲಿ ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಸುಂದರ ಬನವಾಸಿಯಲ್ಲಿ ಮಧುಕೇಶ್ವರ ದೇವಸ್ಥಾನ(madhukeshwara) ಹೆಸರು ವಾಸಿ
ಮಧುಕೇಶ್ವರ ದೇವಸ್ಥಾನದಲ್ಲಿ ಶಿವನ ಎದುರಿಗೆ ನಂದಿಯಿದೆ. ನಂದಿಯ ಒಂದು ಕಣ್ಣು ಶಿವನೆಡೆಗೆ ಇದ್ದರೆ, ಇನ್ನೊಂದು ಕಣ್ಣು ಅಲ್ಲಿ ಹತ್ತಿರದಲ್ಲಿರುವ ಪಾರ್ವತಿ ದೇವಿಯ ದೇವಸ್ಥಾನದತ್ತಿದೆ. ಇದು ಇಲ್ಲಿನ ವಿಶೇಷ. ಇದರ ಜೊತೆಗೆ ಇಲ್ಲೊಂದು ಗಣೇಶನ ದೇವಸ್ಥಾನವಿದೆ . ಅಲ್ಲಿ ಅರ್ಧ ಗಣೇಶನಿದ್ದರೆ , ಉಳಿದ ಅರ್ಧ ಗಣೇಶ ಇರುವುದು ಕಾಶಿಯಲ್ಲಿ.
ಮೂವರು ಸ್ನೇಹಿತೆಯರು ಹೋದ ದೇವಸ್ಥಾನಗಳ ಅರ್ಚಕರ ಬಳಿ ಅಲ್ಲಿನ ವಿಶೇಷತೆಗಳನ್ನು ಕೇಳಿ ತಿಳಿದುಕೊಳ್ಳುವುದು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬನವಾಸಿಯಲ್ಲಿ ಪರಿಚಯದ ಅರ್ಚಕರ ಮನೆಯಲ್ಲಿ ಮಾರನೆಯ ದಿನ ತಿಂಡಿ ತಿಂದು ,ಹಂಚಿನ ಮನೆಯ ಸೌಂದರ್ಯ ಜೊತೆಗೆ ಅಕ್ಕಿ ರೊಟ್ಟಿ , ಕಾಡಿನ ಜೇನಿನ ಸವಿಯನ್ನು ಸವಿದ್ದರು ಸಾಹಿತಿ ಮತ್ತು ಅವರ ಸ್ನೇಹಿತೆಯರು.
ಉಡುಪಿಗೆ (udupi) ಮುಂದಿನ ಪಯಣ ಬೆಳೆಸಬೇಕಿದ್ದ ಮೂವರು ಹಾದಿಯಲ್ಲಿ ನೋಡಿದ್ದು ಒಂದು ಜೈನ ದೇವಸ್ಥಾನ. ಹಳ್ಳಿಯಲ್ಲಿರುವ ಆ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರವಾಸಿಗರು ಬರುವುದಿಲ್ಲ. ಆದರೆ ಆ ದೇವಸ್ಥಾನ ತುಂಬಾ ವಿಶೇಷ.
ಕೃಷ್ಣ ಮಠದಲ್ಲಿ(krishna mata) ಊಟ ಮಾಡಿದ ಖುಷಿ.
ಉಡುಪಿ ಹೋಗುವ ದಾರಿಯಲ್ಲಿ ಕೂಡ್ಲು ತೀರ್ಥ ನೋಡಿ (kudlu thertha falls) , ಸೀತಾ ನದಿ ಕಣ್ತುಂಬಿಕೊಂಡು ಮೂವರು ಹೋಗಿದ್ದು ಕೃಷ್ಣ ಮಠಕ್ಕೆ. ಸಾಹಿತಿ ಅನೇಕ ಬಾರಿ ಉಡುಪಿ ನೋಡಿದ್ದಾರೆ. ಕೃಷ್ಣ ಮಠದಲ್ಲಿ ಊಟ ಮಾಡುವುದು ಸಾಹಿತಿಗೆ ಖುಷಿ. ಅಲ್ಲಿ ಊಟ ಮಾಡಿ ನಂತರ ಹೊರಟಿದ್ದು ಕಾರ್ಕಳ(karkala) ಕಡೆಗೆ.
ಮಾಳದ(mala) ಮಣ್ಣ ಪಾಪು ಹೋಂ ಸ್ಟೇಯಲ್ಲಿ(manna paapu home stay) ಆ ದಿನ ಉಳಿದ ಸಾಹಿತಿ ಮತ್ತೆ ಅವರ ಸ್ನೇಹಿತೆಯರು ,ಮಾರನೆಯ ದಿನ ಹೋಗಿದ್ದು ಸುಂದರ ವರಂಗ(varanga) ಬಸದಿಗೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವರಂಗ ಜೈನ ಬಸದಿ , ಸಾಹಿತಿ ಮತ್ತು ಅವರ ಸ್ನೇಹಿತೆಯರಿಗೂ ಪ್ರಿಯವಾಗಿತ್ತು. ಜೈನ ಬಸದಿ ನೋಡಿ ನಂತರ ಹೊರಟಿದ್ದು ಆಗುಂಬೆಯ ಕಡೆಗೆ
ಆಗುಂಬೆಯಲ್ಲೊಂದು(agumbe) ಅಜ್ಜಿ ಮನೆ ಹೋಟೆಲ್
ಆಗುಂಬೆಯಲ್ಲಿ ಅಜ್ಜಿ ಮನೆ ಎನ್ನುವ ಪುಟ್ಟದಾದ ಹೋಟೆಲ್ ಇದೆ. ಕಸ್ತೂರಿ(kasturi) ಎನ್ನುವವರು ಆ ಹೋಟೆಲ್ ನಡೆಸುತ್ತಾರೆ. ಅಲ್ಲಿ ಸಾಂಪ್ರದಾಯಿಕ ಸಸ್ಯಾಹಾರಿ ಎಲೆ ಊಟವನ್ನು ನಿಮಗೆ ಬಡಿಸುತ್ತಾರೆ. ಇಲ್ಲಿನ ಇನ್ನೊಂದು ವಿಶೇಷ ಅಂದರೆ ನೀವು ಊಟಕ್ಕೆ ಎಷ್ಟು ಹಣ ಬೇಕು ಎಂದು ಯಾರೂ ಕೇಳುವುದಿಲ್ಲ. ನಿಮಗೆ ಎಷ್ಟು ಕೊಡಬೇಕು ಅನ್ನಿಸುತ್ತದೆಯೂ ಅಷ್ಟು ಕೊಡಬಹುದು. ಕೊಡದೆಯೂ ಹೋಗಬಹುದು. ಆದರೆ ಅಲ್ಲಿನ ಊಟ ತುಂಬಾ ರುಚಿ.
ಶೃಂಗೇರಿಯತ್ತ(shringeri) ಪಯಣ.
ಉಡುಪಿಯಲ್ಲಿ ಸುತ್ತಾಟ ಮುಗಿಸಿ ಮೂವರು ಹೊರಟಿದ್ದು ಶೃಂಗೇರಿಯ ಕಡೆಗೆ. ಅಲ್ಲಿ ದೇವಸ್ಥಾನವನ್ನು ನೋಡಿ, ಸಿರಿಮನೆ ಫಾಲ್ಸ್ (sirimane falls) ನಲ್ಲಿ ಸಮಯ ಕಳೆದರು ಮೂವರು. ಆ ದಿನ ಸ್ನೇಹಿತೆಯ ಅಜ್ಜಿ ಮನೆಯಲ್ಲಿ ಉಳಿದ ಮೂವರು ಹೊರಟಿದ್ದು ಹೊರನಾಡ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ(horanadu annapurneshwari temple). ಅಲ್ಲಿನ ದೇವರ ದರ್ಶನ ,ಊಟದ ಬಳಿಕ ಮತ್ತೆ ಪಯಣ ಕಳಸದತ್ತ(kalasa). ಕಳಸದಲ್ಲಿ ಉಳಿದು ,ಮಾರನೆಯ ದಿನ ಕೊಟ್ಟಿಗೆಹಾರದ(kottigehara) ರುಚಿಕಟ್ಟಾದ ನೀರುದೋಸೆ ರುಚಿ ನೋಡಿ ಮೂವರು ಹೊರಟಿದ್ದು ಬೆಂಗಳೂರಿಗೆ.
೨೦ ದಿನ ಮೂವರು ಹುಡುಗಿಯರು ಕರ್ನಾಟಕದ ತಾಣಗಳನ್ನು ಸುತ್ತುವುದು ಮಾತ್ರವಲ್ಲದೇ ಅಲ್ಲಿನ ಸಂಸ್ಕೃತಿಯನ್ನು ,ಅಲ್ಲಿನ ಜನರ ಜೀವನಶೈಲಿ ಅರಿತುಕೊಳ್ಳುವುದು ವಿಶೇಷ. ೨೦ ದಿನ ಕರ್ನಾಟಕದ ಪಾರಂಪರಿಕ ತಾಣ ಸುತ್ತಿದ ಮೂವರು ಹುಡುಗಿಯರು ಎಲ್ಲರಿಗೂ ಪ್ರೇರಣೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.