“ಬಂಗಾರ ಕುಸುಮ”ದ ಜುಳು ಜುಳು ನಾದ; ಸಿಂಧು ಶ್ರೀಕರ್ ಬರೆದ ಚಂದದ ಲೇಖನ
ಮಳೆಗಾಲದ ಶೀತಲ ವಾತಾವರಣದ ನಡುವೆ ಎಲ್ಲಿಗೆ ಹೋಗುವುದೆಂಬ ಸಿಂಧು ಅವರ ಗೊಂದಲಕ್ಕೆ ಸಿಕ್ಕ ಪರಿಹಾರ “ಉತ್ತರ ಕನ್ನಡದ ಹಿಡನ್ ಜೆಮ್ “ಬಂಗಾರ ಕುಸುಮ ಜಲಪಾತ”. ಉಜಿರೆಯ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿ ಸಿಂಧು ಶ್ರೀಕರ್ ಬರೆದ ಲೇಖನ.
• ಸಿಂಧು ಶ್ರೀಕರ್
ಹೊರಗಡೆ ಮಳೆ ಸಣ್ಣದಾಗಿ ಹನಿ ಹಾಕ್ತಾ ಇತ್ತು, ಶೀತ, ಚಳಿ ಇಂಥ ವಾತಾವರಣದಲ್ಲೂ ಎಲ್ಲಿಯಾದರೂ ಹೊರಗೆ ಹೋಗೊ ಆಸೆ. ಆದ್ರೂ ಮಳೆಲಿ ಎಲ್ಲಿಗೆ ಹೋಗೋದು ಅನ್ನೋದೇ ಒಂದು ಗೊಂದಲ. ಈ ಗೊಂದಲಕ್ಕೆ ಪರಿಹಾರ ನೀಡಿದ್ದೇ “ನನ್ನ ಅಪ್ಪ”, ನಾನು ಕೇಳಿದ ಪ್ರಶ್ನೆಗೆ ಅವರಿಂದ ಸಿಕ್ಕ ಉತ್ತರ “ಬಂಗಾರ ಕುಸುಮ” ಇದೇನಿದು ಹೆಸರು ಹೊಸರೀತಿಯಾಗಿದೆಯಲ್ಲ? ಹೌದು. ಮಳೆಗಾಲದಲ್ಲಿ ಪ್ರವಾಸಿಗರು ಅತೀ ಹೆಚ್ಚಿನ ಪ್ರಮಾಣದಲ್ಲಿ ತೆರಳುವುದೇ ಜಲಪಾತಗಳಿಗೆ. ಬಂಗಾರ ಕುಸುಮವೂ ಸಹ ಒಂದು “ಹಿಡನ್ ಜೆಮ್” ಎಂದರೆ ತಪ್ಪಾಗಲಾರದೆನೋ.
ಉತ್ತರಕನ್ನಡ ಜಿಲ್ಲೆಯ ಮಾವಿನಗುಂಡಿ ಇಂದ 18 ಕಿ.ಮೀ. ದೂರದಲ್ಲಿರುವ ಈ ಜಲಪಾತ ತುಂಬಾ ವಿಶಿಷ್ಠವಾಗಿದೆ. ಇದರ ಬಗ್ಗೆ ತಿಳಿದುಕೊಂಡ ನಾನು ಚೊಟುವನ್ನು (ಗಾಡಿ) ತೆಗೆದುಕೊಂಡು ಬಂಗಾರ ಕುಸುಮದತ್ತ ಹೊರಟೆ. ದಾರಿಯುದ್ದಕ್ಕೂ ಹಸಿರು ತುಂಬಿತ್ತು. ದಾರಿ ತಿರುವುಗಳನ್ನು ಹೊಂದಿದ್ದರೂ ಬಂಗಾರ ಕುಸುಮವನ್ನು ನೋಡುವ ಕಾತುರತೆಯಲ್ಲಿ ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಹೀಗೆ ಮುಂದೆ ಸಾಗುತ್ತಿರುವಾಗ ದೂರದಲ್ಲೊಂದು ಜಲಪಾತ ಹರಿಯುತ್ತಿರುವುದು ಕಾಣಿಸುತ್ತಿತ್ತು. ಅದರ ಸ್ವಸ್ಥಳ ಎಲ್ಲಿದೆ ಎಂದು ನೋಡಲು ಮುಂದೆ ಸಾಗುತ್ತಿದ್ದೆ. ಆದರೆ ಎಲ್ಲಿಯೂ ಬಂಗಾರ ಕುಸುಮದ ಸುಳಿವೇ ಇಲ್ಲ.
ಮನೆಯಿಂದ ಹೊರಡುವಾಗ ನನ್ನ ಪ್ರಕಾರ ಬಂಗಾರ ಕುಸುಮ ಸುಲಭವಾಗಿ ಸಿಗುತ್ತದೆ. ಫಲಕಗಳಾದರೂ ಇರುತ್ತವೆ ಎಂದುಕೊಂಡಿದ್ದೆ. ಆದರೆ ಅಲ್ಲಿ ಹೋಗಿ ನೋಡಿದರೆ ಯಾವುದೇ ಸುಳಿವೂ ಇಲ್ಲ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ ಒಬ್ಬರು ನನ್ನ ಕಣ್ಣಿಗೆ ಬಿದ್ದರು ಅವರ ಬಳಿ ಕೇಳಿದಾಗ ಅವರು ಬಂಗಾರ ಕುಸುಮಕ್ಕೆ ಹೋಗುವ ದಾರಿ ತೋರಿಸಿದರು. ಅದು ವಾಹನ ತೆರಳುವ ದಾರಿ ಆಗಿರಲಿಲ್ಲ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು.
ಜಲಪಾತ ನೋಡುವ ತವಕದಲ್ಲಿ ಇದೆಲ್ಲ ಯಾವ ದೊಡ್ಡ ವಿಷಯ ಎನ್ನಿಸಿ ಅವರು ತೋರಿದ ದಾರಿಯಲ್ಲಿ ನಡೆದೆ. ತುಂಬಾ ದೂರ ಬಂದ ನಂತರವೂ ಜಲಪಾತ ಸಿಗಲಿಲ್ಲ ಕೇವಲ ಜಲಪಾತದಿಂದ ಹರಿದು ಬರುವ ಝರಿ ಕಾಣಿ ಸುತ್ತಿತ್ತು. ಕಲ್ಲು ಮುಳ್ಳಿನ ಕಾಡು ದಾರಿ ಅದು. ಜಲಪಾತ ನೋಡುವ ಹುಮ್ಮಸ್ಸಿನಲ್ಲಿ ಸುಸ್ತಾಗಿದ್ದು ಸಹ ತಿಳಿದಿರಲಿಲ್ಲ. ಆದರೆ ಮುಂದೆ ಸಾಗುತ್ತಾ ಹೋದಂತೆ ದಾರಿ ಮುಗಿಯದಂತೆ ಕಾಣಿಸಿತು. ಅಲ್ಲಿಗೆ ನನ್ನ ತವಕ,ಕಾತುರತೆ,ಹುಮ್ಮಸ್ಸು ಎಲ್ಲವೂ ಕ್ಷೀಣಿಸುತ್ತಾ ಬಂತು.
ಹೀಗೆ ಮುಂದೆ ಸಾಗಿ ತಲೆಯೆತ್ತಿ ನೋಡಿದಾಗ ಅಲ್ಲಿ ಗೋಚರವಾದ ದೃಶ್ಯ ಇನ್ನೂ ಕಣ್ಣುಕಟ್ಟಿದಂತಿದೆ. ಹಾಲಿನ ನೊರೆಯಂತೆ ಬಂಡೆಗಳ ಮಧ್ಯದಲ್ಲಿ ಹರಿದು ಬರುವ ಜಲಪಾತ, ಜಲಪಾತದಿಂದ ಹರಿದು ಬರುವ ನೀರು ಪರಿಶುದ್ಧವಾಗಿ ಮುಂದೆ ಸಾಗುವುದು, ಜಲಪಾತದಿಂದ ಬಿದ್ದ ನೀರು ಅಲ್ಲೇ ನಿಂತು ಅದರಲ್ಲೇ ಹುಟ್ಟಿಕೊಂಡು ಆಟವಾಡುವ ಪುಟ್ಟ ಪುಟ್ಟ ಮೀನುಗಳು, ಜಲಪಾತದ ಬೋರ್ಗರೆತಕ್ಕೆ ಬೇರೆ ಯಾವ ಶಬ್ದವೂ ಕೇಳದಿರುವುದು, ಈ ಕಾಡಿನ ಮಧ್ಯದಲ್ಲಿ ಪ್ರಶಾಂತವಾಗಿ ಹರಿಯುವ ಆ ಜಲಪಾತ ಸುತ್ತಲಿನ ಪ್ರಕೃತಿಯನ್ನು ನೋಡಲು ಎರಡು ಕಣ್ಣು ಸಾಲದು ಎಂದರೆ ಅತಿಶಯೋಕ್ತಿ ಆಗಲರದೆನೋ, ಇದನ್ನೆಲ್ಲ ನೋಡಿ ಇಷ್ಟು ದೂರ ಬಂದಿದ್ದಕ್ಕೂ ಸಾರ್ಥಕವಾಯಿತು ಎನ್ನಿಸಿತು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.