ಮಂಡ್ಯ ಜಿಲ್ಲೆಯಲ್ಲಿ ಪತ್ತೆಯಾದ ಮೂರು ಹೊಯ್ಸಳರ ಕಾಲದ ಶಾಸನಗಳು:
ಮಂಡ್ಯ ಜಿಲ್ಲೆ ಚಿನಕುರುಳಿ ತಾಲೂಕಿನ ರಾಗಿಮುದ್ದನಹಳ್ಳಿ ಮತ್ತು ಡಿಂಕಾ ಗ್ರಾಮಗಳ ನಡುವಿನ ಜಮೀನಿನಲ್ಲಿ ಹೊಯ್ಸಳರ ಕಾಲದ ಮೂರು ಅಪರೂಪದ ಶಿಲಾ ಶಾಸನಗಳನ್ನು (Hoysala Inscription) ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಸಿ.ಎ.ಶಶಿಧರ ಮತ್ತು ತಂಡ ಪತ್ತೆ ಹಚ್ಚಿದೆ.
● ಉಜ್ವಲಾ ವಿ.ಯು.
ಸಿ.ಎ.ಶಶಿಧರ ಮತ್ತು ತಂಡವು ಮಂಡ್ಯ ಜಿಲ್ಲೆಯ ಈ ಸ್ಥಳಗಳಲ್ಲಿ ಹಲವು ತಿಂಗಳುಗಳಿಂದ ಸಂಶೋಧನೆ ಕೈಗೊಂಡಿದ್ದರು. ಅವರ ಸಂಶೋಧನೆಯ ಫಲವೆಂಬಂತೆ ರಾಗಿಮುದ್ದನಹಳ್ಳಿಯ ಬೃಂದಾವನ ಕಟ್ಟೆ, ಮಹದೇವಪ್ಪ ಎಂಬುವವರ ಕೃಷಿ ಭೂಮಿ ಹಾಗೂ ಗೋಮಾಳದಲ್ಲಿ ಶಿಥಿಲಗೊಂಡ ಈಶ್ವರ ದೇವಾಲಯದಲ್ಲಿ ಮೂರು ಅಪರೂಪದ ಶಿಲಾಶಾಸನಗಳು ಪತ್ತೆಯಾಗಿವೆ.
ಕ್ರಿ.ಶ.12ನೇ ಶತಮಾನದಲ್ಲಿ ಕೆತ್ತಲಾದ ಆಸಿತಾಂಗ ಭೈರವ, ಆತ್ಮಬಲಿ, ಸಪ್ತಮಾತೃಕೆ, ಭೈರವಿ, ಯಾಕಿನಿ ಎಂಬ ಯೋಗಿನಿಯ ಶಿಲ್ಪಗಳು ಪತ್ತೆಯಾಗಿದ್ದು, ಅವುಗಳ ಜೊತೆಗೆ ಶಿಲ್ಪ ಪಟ್ಟಿಕೆಗಳೂ ಸಹ ಸಿಕ್ಕಿವೆ.
ಭೈರವ ಶಿಲ್ಪದಲ್ಲಿ ಎರ್ಜೋಜ, ಬೈಚೋಜ ಎಂಬ ಶಿಲ್ಪಿಗಳ ಹೆಸರು ಉಲ್ಲೇಖವಾಗಿದ್ದು, ಹೀಗೆ ಶಿಲ್ಪದಲ್ಲಿ ತಂದೆ ಮತ್ತು ಮಗನ ಹೆಸರು ಇರುವುದು ತುಂಬಾ ಅಪರೂಪ ಎಂದು ಸಂಶೋಧಕ ಸಿ.ಎ.ಶಶಿಧರ ತಿಳಿಸಿದರು.
ಜಮೀನಿನ ಮಾಲೀಕ ಮಹದೇವಪ್ಪ, ಮುಖಂಡರಾದ ಶಿವಣ್ಣ ಅವರ ಅನುಮತಿ ಪಡೆದು ಹುದುಗಿದ್ದ ಶಿಲ್ಪಗಳನ್ನು ಹೊರತೆಗೆದು, ಶಾಸನಗಕ್ಷ ಪಡಿಯಚ್ಚು ತೆಗೆದುಕೊಳ್ಳಲಾಗಿದೆ.
ಈಶ್ವರ ದೇವಾಲಯದ ಸಪ್ತ ಮಾತೃಕೆಯರ ಶಿಲ್ಪ ಪಟ್ಟಿಕೆಯಲ್ಲಿ ಆಯಾ ದೇವತೆಗಳನ್ನು ಪ್ರತಿನಿಧಿಸುವ ಪುರುಷ ದೇವರ ಹೆಸರು ಇರುವುದು ಇದೇ ಮೊದಲ ಬಾರಿ ಎಂದು ಸಂಶೋಧಕರು ತಿಳಿಸಿದ್ದಾರೆ.
ರಾಗಿ ಮುದ್ದನಹಳ್ಳಿಯ ಬೃಂದಾವನದಲ್ಲಿ ಭೈರವಿಯರ ಶಾಸನೋಕ್ತ ಶಿಲ್ಪ ದೊರೆತಿದೆ, ಇದನ್ನು ಸಪ್ತ ಮಾತೃಕೆಯರು ಶಿಲ್ಪಗಳೆಂದು ತಪ್ಪಾಗಿ ಭಾವಿಸಲಾಗಿತ್ತು.
ಈ ಶಿಲ್ಪದಲ್ಲಿ ಶಿಲ್ಪಿಗಳಾದ ಬೈಚೋಜ, ಎರ್ಜೋಜ ಎಂಬ ತಂದೆ ಮಗ ಸೇರಿ ನಿರ್ಮಿಸಿರುವ ಉಲ್ಲೇಖವಿದ್ದು, ಇದರ ಜೊತೆಗೆ ಇದನ್ನು ಮದಿಗೊಂಡ ಎಂಬುವವರ ಮಗ ಸಿಂದಾಗೌಡ ಎಂಬುವವರು ಮಾಡಿಸಿದರೆಂಬ ದಾನಿಗಳ ವಿವರವನ್ನೂ ಸಹ ನೀಡಲಾಗಿದೆ.
ಹಿಂದೆ ಹೊಯ್ಸಳ ಕಾಲದಲ್ಲಿ ರಾಗಿ ಮುದ್ದನಹಳ್ಳಿ ಮತ್ತು ಡಿಂಕಾ ಗ್ರಾಮಗಳ ಮಧ್ಯದಲ್ಲಿ “ಮೂಡಲಹಳ್ಳಿ “ಎಂಬ ಗ್ರಾಮವಿತ್ತು.
ಅದು ಹೊಯ್ಸಳರ ಕಾಲದ ಶೈವ ಕೇಂದ್ರವಾಗಿತ್ತು. ಅಲ್ಲಿ ಭೈರವ ಆರಾಧನೆ ನಡೆಸಲಾಗುತ್ತಿತ್ತು. ಶಿವಲಿಂಗ, ಬಸವ, ಭೈರವ, ಮತ್ತು ಆತನ ಪರಿವಾರವು ಶಿಲ್ಪಗಳಲ್ಲಿ ಇವೆ.
ಭೈರವರಲ್ಲಿ 8 ವಿಧಗಳಿವೆ. ಅವುಗಳಲ್ಲಿ ಒಂದಾದ ಅಸಿತಾಂಗ ಭೈರವನ ಶಿಲ್ಪ ಮಾತ್ರ ಸಿಕ್ಕಿದೆ. ಜೊತೆಗೆ ಭೈರವಿಯರ ನಾಲ್ಕು ಶಿಲ್ಪಗಳೂ ಕೂಡ ದೊರೆತಿದ್ದು, ಭೈರವಿಯರ ಆರಾಧನೆಯ ಕುರಿತು ಪುರಾವೆ ಲಭಿಸಿದೆ.
ಈ ಶಿಲ್ಪಗಳು ಇರುವ ಕಡೆ ಯೋಧರು ತಲೆ ಕತ್ತರಿಸಿ ಕೊಳ್ಳುವ ಹರಕೆ ಹೊರುತ್ತಿದ್ದರಂತೆ ಮತ್ತು ಈಗ ಆ ಮೂಡಲಹಳ್ಳಿ ಗ್ರಾಮವು ನಾಶಗೊಂಡು, ಅಲ್ಲಿದ್ದ ಜನರು ರಾಗಿ ಮುದ್ದನಹಳ್ಳಿ ಮತ್ತು ಡಿಂಕಾದ ಕಡೆ ಸ್ಥಳಾಂತರವಾಗಿದ್ದಾರೆ ಎಂದು ಸಂಶೋಧಕರು ತಿಳಿಸಿದರು.
ಈ ಅಪರೂಪದ ಶಿಲಾಶಾಸನದ ಪತ್ತೆಯ ಭಾಗವಾಗಿದ್ದ ಸಂಶೋಧಕ ಸಿ.ಎ.ಶಶಿಧರರು ತಮ್ಮ ತಂಡದ ಪರಿಶ್ರಮವನ್ನು ಶ್ಲಾಘಿಸಿದರು.
ಜೊತೆಗೆ ಕ್ಷೇತ್ರಾನ್ವೇಷಣೆಗೆ ಅನುಮತಿ ನೀಡಿದ ಸಿಐಐಎಲ್‌ನ ನಿರ್ದೇಶಕ ಶೈಲೇಂದ್ರ ಮೋಹನ್ ಹಾಗೂ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಮಾರ್ಗದರ್ಶನ ನೀಡಿದ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಎನ್.ಎಸ್.ಅನ್ನಪೂರ್ಣ, ಎ.ಪಿ.ರಕ್ಷಿತ್, ಶಶಿಕುಮಾರ್ ಅವರ ನೆರವನ್ನು ಕೂಡಾ ಸ್ಮರಿಸಿದರು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.