ಶಬರಿಮಲೆಗೆ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ 2 ವಿಶೇಷ ರೈಲು ಆರಂಭ; ಇಲ್ಲಿದೆ ವಿವರ
ಕರ್ನಾಟಕದಿಂದ ಶಬರಿಮಲೆಗೆ ಈ ತಿಂಗಳಿನಲ್ಲಿ ತೆರಳುವ ಭಕ್ತರ ಸಂಖ್ಯೆ ಅಧಿಕ. ಅವರೆಲ್ಲರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ 2 ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
● ಉಜ್ವಲಾ.ವಿ.ಯು.
ಶಬರಿಮಲೆಗೆ ಕರ್ನಾಟಕದಿಂದ ತೆರಳುವ ಲಕ್ಷಾಂತರ ಭಕ್ತರಿಗಾಗಿ ಡಿಸೆಂಬರ್ ಮೊದಲ ವಾರದಿಂದ ಜನವರಿ ಮೂರನೇ ವಾರದವರೆಗೂ ವಿಶೇಷ ರೈಲುಗಳು ಸಂಚರಿಸುವೆ.ಈ ವರ್ಷ ಶಬರಿಮಲೆಯಲ್ಲಿ ಮಂಡಲ ದರ್ಶನವೂ ಸಹ ಆರಂಭಗೊಂಡಿದೆ.
ಆದ್ದರಿಂದ ಈ ವರ್ಷ ಭಕ್ತಾದಿಗಳು ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಸಾಧ್ಯತೆ ಇದೆ. ಯಾತ್ರಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೈರುತ್ಯ ರೈಲ್ವೆಯು ಈ ನಿರ್ಧಾರ ತೆಗೆದುಕೊಂಡಿದೆ.
ಹುಬ್ಬಳ್ಳಿಯಿಂದ ಕೇರಳದ ಕೊಟ್ಟಾಯಂವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು, ಅಲ್ಲಿ ಇಳಿದು 97 ಕಿ.ಮೀ ದೂರದ ಶಬರಿಮಲೆಗೆ ತಲುಪಬಹುದು.
ವಿಶೇಷ ರೈಲುಗಳ ಹೊರಡುವ ದಿನಾಂಕ ಮತ್ತು ವೇಳಾಪಟ್ಟಿ:
1.ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (07305): ( Hubli to Kerala Kottayam Special Train)
ಡಿಸೆಂಬರ್ 2 ರಿಂದ ಜನವರಿ 20ವರೆಗೆ ಸಂಚರಿಸಲಿದೆ. ಇದು ಹುಬ್ಬಳ್ಳಿಯಿಂದ ಬೆಳಗ್ಗೆ 10.30ಕ್ಕೆ ಹೊರಟು ಡಿ.3 ರಂದು ಬೆಳಗ್ಗೆ 8.15ಕ್ಕೆ ಕೊಟ್ಟಾಯಂಗೆ ತಲುಪಲಿದೆ.
2. ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (07307):
ಡಿಸೆಂಬರ್ 5 ರಿಂದ ಜನವರಿ 14ವರೆಗೂ ಸಂಚರಿಸಲಿದೆ. ಇದು ಹುಬ್ಬಳ್ಳಿಯಿಂದ ಬೆಳಗ್ಗೆ 11 ಗಂಟೆಗೆ ಹೊರಟು ಡಿ.7 ರಂದು ಬೆಳಗ್ಗೆ 8.15ಕ್ಕೆ ಕೊಟ್ಟಾಯಂಗೆ ತಲುಪಲಿದೆ.
ಯಾವ ಮಾರ್ಗಗಳಲ್ಲಿ ಸಂಚರಿಸಲಿದೆ?
ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೆ.ಆರ್.ಪುರಂ, ವೈಟ್‌ಫೀಲ್ಡ್, ಬಂಗಾರಪೇಟೆ, ಸೇಲಂ, ಈರೋಡ್, ಪೋತ್ತನ್ನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ ಮತ್ತು ಎರ್ನಾಕುಳಂ ಟೌನ್‌ಗಳು ನಿಲುಗಡೆಯ ಮಾರ್ಗವಾಗಿವೆ. ಕೇರಳದ ಕೊಟ್ಟಾಯಂ ಕೊನೆಯ ನಿಲ್ದಾಣವಾಗಿರುತ್ತದೆ.
ವಿಶೇಷ ರೈಲುಗಳ ಹಿಂದಿರುಗುವ ಮಾರ್ಗಗಳ ದಿನಾಂಕ ಮತ್ತು ವೇಳಾಪಟ್ಟಿ:
1.ಕೊಟ್ಟಾಯಂ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್(07306) : ಡಿ.3 ರಂದು ಕೊಟ್ಟಾಯಂನಿಂದ ಬೆಳಗ್ಗೆ 11 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 9.50ಕ್ಕೆ ಹುಬ್ಬಳ್ಳಿ ತಲುಪಲಿದೆ.
2. ಕೊಟ್ಟಾಯಂ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್(07308): ಡಿ.6ರಂದು ಕೊಟ್ಟಾಯಂನಿಂದ ಬೆಳಗ್ಗೆ 11 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 9.50ಕ್ಕೆ ಹುಬ್ಬಳ್ಳಿ ತಲುಪಲಿದೆ.
ಈ ವಿಶೇಷ ರೈಲುಗಳು ಒಂದು, ಎರಡನೇ ಮತ್ತು ಮೂರನೇ ಎಸಿ ಕೋಚ್ ಗಳು, 10 ಸ್ಲೀಪರ್ ಕೋಚ್‌ಗಳು ಮತ್ತು ನಾಲ್ಕು ಜನರಲ್ ಕೋಚ್‌ಗಳ ವ್ಯವಸ್ಥೆಯನ್ನು ಹೊಂದಿದೆ.
ನೈರುತ್ಯ ರೈಲ್ವೆ ಇಲಾಖೆಯಿಂದ ಶಬರಿಮಲೆಗೆ (Shabarimala) ಹೋಗಲು ಎರಡು ವಿಶೇಷ ರೈಲು ಆರಂಭಿಸಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಶಬರಿಮಲೆಗೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಅನುಕೂಲವಾಗಲಿ ಎಂದು ಸಾಲುಮರದ ತಿಮ್ಮಕ್ಕ ನೇತೃತ್ವದಲ್ಲಿ ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಂಘವು ರೈಲ್ವೆ ಇಲಾಖೆ ಹಾಗೂ ಕೇಂದ್ರ ಸಚಿವರಾಗಿದ್ದ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಇಲಾಖೆ ಎರಡು ವಿಶೇಷ ರೈಲು ಆರಂಭಿಸಿತ್ತು. ಅದರಂತೆ ಪ್ರಸ್ತುತ ವರ್ಷವೂ ಈ ಸೌಲಭ್ಯ ದೊರೆಯಲಿದೆ ಎಂದರು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.