ಶೀಘ್ರದಲ್ಲೇ ಉತ್ತರಾಖಂಡನಲ್ಲಿ ಭಾರತದ ಮೊದಲ ಗೈರೋಕಾಪ್ಟರ್ ಸಫಾರಿ ಆರಂಭ:
ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ, ಉತ್ತರಾಖಂಡದ ಪ್ರವಾಸೋದ್ಯಮ ಇಲಾಖೆಯು ಗೈರೋಕಾಪ್ಟರ್ಗಳನ್ನು ಒಳಗೊಂಡಿರುವ ‘ಹಿಮಾಲಯ ಏರ್ಸಫಾರಿ’ ಅನ್ನು ಶೀಘ್ರದಲ್ಲೇ ಆರಂಭಿಸುತ್ತಿದೆ. ಇದು ದೇಶದಲ್ಲೇ ಮೊದಲ ಗೈರೋಕಾಪ್ಟರ್ ಸಫಾರಿಯಾಗಿದೆ.
● ಉಜ್ವಲಾ ವಿ.ಯು.
ರಾಜ್ಯದಲ್ಲಿ ಸಾಹಸ ಪ್ರವಾಸೋದ್ಯಮದ (Uttarakhand Tourism) ಪರಿಕಲ್ಪನೆಯನ್ನು ಮರುವ್ಯಾಖ್ಯಾನಿಸಲು ಉತ್ತರಾಖಂಡವು ವರ್ಷದ ಅಂತ್ಯದ ವೇಳೆಗೆ ಈ ಉಪಕ್ರಮವನ್ನು ಜಾರಿಗೆ ತರಬೇಕೆಂದು ಉತ್ತರಾಖಂಡ (Uttarakhand) ಹೂಡಿಕೆದಾರರ ಪ್ರವಾಸೋದ್ಯಮ ಅಧಿವೇಶನದಲ್ಲಿ ನಿರ್ಧರಿಸಲಾಗಿದೆ.
ಈ ರೋಮಾಂಚನಕಾರಿ ಅನುಭವವು ಪ್ರವಾಸಿಗರಿಗೆ ಹೊಸ ದೃಷ್ಟಿಕೋನದಲ್ಲಿ ಭವ್ಯವಾದ ಹಿಮಾಲಯದ (Himalayan) ಭೂದೃಶ್ಯವನ್ನು ಸಂಪೂರ್ಣ ವೈಮಾನಿಕವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಪ್ರವಾಸೋದ್ಯಮ ಇಲಾಖೆಯು ಗೈರೊಕಾಪ್ಟರ್ನ (gyrocopter rides) ಉದ್ಘಾಟನಾ ಹಾರಾಟ ಪರೀಕ್ಷೆಯನ್ನು ಶನಿವಾರ (ಡಿ.16) ಹರಿದ್ವಾರದಲ್ಲಿ ಯಶಸ್ವಿಯಾಗಿ ನಡೆಸಿದ್ದು, ಈ ಉಪಕ್ರಮವು ಉತ್ತರಾಖಂಡದ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಲಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ, ಏರ್ ಸಫಾರಿಯ ನಿರ್ದೇಶಕರಾದ ಖಾಸಗಿ ಕ್ರೀಡಾ ಕಂಪನಿಯ ಸಿಇಒ ಮನೀಶ್ ಸೈನಿ ಅವರು, “ಇದು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾದಾದ್ಯಂತ ಈ ರೀತಿಯ ಉದ್ಘಾಟನಾ ಸೇವೆ ಮೊಟ್ಟಮೊದಲನೆಯದ್ದಾಗಿದೆ.
ಈ ತಿಂಗಳ ಅಂತ್ಯದ ವೇಳೆಗೆ ಇವು ಹಾರಾಟವನ್ನು ಪ್ರಾರಂಭಿಸಲಾಗುವುದು, ಈ ಬೆಳವಣಿಗೆಯು ರಾಜ್ಯದ ಪ್ರವಾಸೋದ್ಯಮ ಕೊಡುಗೆಗಳಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ” ಎಂದಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಸಚಿವರಾದ ಸತ್ಪಾಲ್ ಮಹಾರಾಜ್ ಅವರು ಸಾಹಸ ಕ್ರೀಡೆಗಳು ಮತ್ತು ತೀರ್ಥಯಾತ್ರೆಗಳನ್ನು ಉತ್ತೇಜಿಸಲು, ಪ್ರವಾಸಿಗರಿಗೆ ಪ್ರವೇಶಿಸಬಹುದಾದ ಮತ್ತು ತಡೆರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
ಭವಿಷ್ಯದಲ್ಲಿ ಕೈಲಾಸ ಮತ್ತು ಓಂ ಪರ್ವತವನ್ನು “ಶಿವ ನಗರಿ”ಯಾಗಿ ಮತ್ತು ಕಾರ್ಬೆಟ್ ಮತ್ತು ಸೀತಾಬನಿಯನ್ನು “ಸಮಗ್ರ ಪ್ರಾಣಿ ಸಾಮ್ರಾಜ್ಯ”ವಾಗಿ ಅಭಿವೃದ್ಧಿಪಡಿಸುವ ಯೋಜನೆಗಳ ಬಗ್ಗೆ ಅವರು ವಿವರಿಸಿದರು.
ಪ್ರಾಯೋಗಿಕ ಹಾರಾಟದ ಭಾಗವಾಗಿದ್ದ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರ್ನಲ್ ಅಶ್ವಿನಿ ಪುಂಡಿರ್ ಅವರು, “ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಲ್ಲಿ “ಹಿಮಾಲಯನ್ ಏರ್ ಸಫಾರಿ ಯೋಜನೆ”ಯನ್ನು (Himalayan Air safari) ಗೈರೋಕಾಪ್ಟರ್ ಸಹಾಯದಿಂದ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.” ಎಂದರು.
ಮುಂದುವರೆದು ಅವರು, ಈ ಯೋಜನೆಯಲ್ಲಿ, ಪ್ರವಾಸಿಗರು ಗೈರೊಕಾಪ್ಟರ್ನಲ್ಲಿ ಒಂದು ಸ್ಥಳದಿಂದ ಹಾರುತ್ತಾ, ಹಿಮಾಲಯದ ಶಿಖರಗಳು ಮತ್ತು ನದಿಗಳ ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಾರೆ. ನಂತರ ಮತ್ತೊಂದು ತಾಣವನ್ನು ತಲುಪಿ, ಸ್ವಲ್ಪ ಸಮಯದ ನಂತರ ತಮ್ಮ ಮೂಲ ಸ್ಥಳಕ್ಕೆ ಹಿಂತಿರುಗುತ್ತಾರೆ.” ಎಂದು ತಿಳಿಸಿದರು.
ಜರ್ಮನಿಯಿಂದ ಅತ್ಯಾಧುನಿಕ ಗೈರೊಕಾಪ್ಟರ್ಗಳನ್ನು ಖರೀದಿಸಲಾಗಿದೆ ಮತ್ತು ಇದರ ಕಾರ್ಯಾಚರಣೆಯನ್ನು ಆರಂಭದಲ್ಲಿ ಪರಿಣಿತ ತರಬೇತಿ ಪಡೆದ ಜರ್ಮನ್ ಪೈಲಟ್ಗಳು ಮುನ್ನಡೆಸುತ್ತಾರೆ.
ನಾಗರಿಕ ವಿಮಾನಯಾನ ಇಲಾಖೆ ಮತ್ತು ಜಿಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ವಿವಿಧ ರಮಣೀಯ ಸ್ಥಳಗಳಲ್ಲಿ ವಿಶೇಷ ಏರ್ಸ್ಟ್ರಿಪ್ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಈಗಾಗಲೇ ನಡೆಯುತ್ತಿವೆ.
ಚಿಕ್ಕದಾದ, ಆಹ್ಲಾದಕರವಾದ ಗೈರೊಕಾಪ್ಟರ್ ಸವಾರಿಯು, ಉತ್ತರಾಖಂಡದ ಕಡಿಮೆ-ಪ್ರಸಿದ್ಧ, ಗುಪ್ತ ಸ್ಥಳಗಳನ್ನು ಅನ್ವೇಷಿಸಲು ಪ್ರವಾಸಿಗರಿಗೆ ಅನನ್ಯ ಅವಕಾಶವನ್ನು ಇದು ಒದಗಿಸುತ್ತದೆ.
ಈ ಸಾಹಸೋದ್ಯಮವು ಕೇವಲ ಒಂದು ರಮಣೀಯ ಪ್ರವಾಸಕ್ಕಿಂತ ಹೆಚ್ಚಾಗಿ ಹಿಂದೆಂದೂ ಕಾಣದಷ್ಟು ಹಿಮಾಲಯವನ್ನು ಅನುಭವಿಸಲು ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.