ಲಾಕ್ ಡೌನ್ ತೆರವಿನ ಆಹ್ಲಾದಕರ ಪ್ರವಾಸ
ಲಾಕ್ಡೌನ್ ತೆರವುಗೊಂಡಿದ್ದೇ ಯಾವುದೇ ತಯಾರಿಗಳಿಲ್ಲದೆ ಧಿಢೀರನೆ ಗೆಳತಿಯರೊಡನೆ ಹೊನ್ನಾವರದ ಕಾಂಡ್ಲಾ ವನ ಹಾಗೂ ಇಕೋ ಬೀಚ್ ಸುತ್ತಿದ ನೆನಪುಗಳನ್ನ ಹಂಚಿಕೊಂಡ ಬರಹ.
- ಮಧುರಾ ಎಲ್ ಭಟ್
ನಾವು ಪ್ರವಾಸ / ಪ್ರಯಾಣವನ್ನು ಇಷ್ಟಪಡುವ ಪ್ರವಾಸಿಗರಲ್ಲಿ ಎರಡೂ ರೀತಿಯ ವಿಭಾಗಗಳನ್ನು ಕಾಣುತ್ತೇವೆ. ಒಂದು ಕಾರಣವಿರಲಿ ಇಲ್ಲದೆ ಇರಲಿ, ವೈಕಲ್ ಅನ್ನು ತೆಗೆದುಕೊಂಡು ಸೋಲೋ ರೈಡ್ ಹೋಗುವಂತದ್ದು / ಹಾಗೆ ಸುಮ್ಮನೆಯಾದರೂ ಯಾವುದೇ ಪ್ಲಾನ್ ಮಾಡದೆ ಪ್ರವಾಸ ಮಾಡುವಂತದ್ದು.
ಇನ್ನೊಂದು ತುಂಬಾ ಪ್ಲಾನ್ ಮಾಡಿ ಎಲ್ಲಿಗೆ, ಯಾವ ಸಮಯದಲ್ಲಿ, ಯಾವಾಗ ಹೋಗಬೇಕು ಎಂದೆಲ್ಲ ಯೋಚಿಸಿ, ಚರ್ಚಿಸಿ ಪ್ರವಾಸ ಮಾಡುವಂತದ್ದು. ಆದರೆ ನನ್ನ ಅನುಭವದ ಹಾಗೆ ನಾನು ಮಾಡಿದ ಪ್ರವಾಸವೆಲ್ಲ ಹಿಂದೂ ಮುಂದು ಯೋಚಿಸದೆ ಮಾಡಿದ ಪ್ರವಾಸವೇ ಆಗಿದೆ.
ಅದರಲ್ಲಿಯೂ ಹೆಚ್ಚಿನದು ನಮ್ಮ ಕಾಲೇಜ್ ಪ್ರವಾಸಗಳು. ಆದರೇನು ಮಾಡುವುದು ಈ ಲಾಕ್ ಡೌನ್ ನಿಂದಾಗಿ ಆ ಪ್ರವಾಸಗಳನ್ನು ನೆನಪಿಸಿಕೊಂಡು ಕಣ್ಣನ್ನು ತುಂಬಿಸಿಕೊಳ್ಳಬೇಕಷ್ಟೆ.
ಈ ಕಾಲೇಜ್ ಮಿತ್ರರೆಲ್ಲ ಸೇರಿ ಮಾಡುವ ಪ್ರವಾಸಕ್ಕೂ, ಮನೆಯ ಹತ್ತಿರದ ಮಿತ್ರರೆಲ್ಲ ಸೇರಿ ಮಾಡುವ ಪ್ರವಾಸಕ್ಕೂ ತುಂಬಾನೆ ವ್ಯತ್ಯಾಸವಿದೆ. ಇಂದು ನಾನು ನಿಮಗೆ ಈ ಲಾಕ್ ಡೌನ್ ಸ್ವಲ್ಪ ಸಡಿಲ ಆದಾಗ ಮನೆಯಲ್ಲಿ ಕುಳಿತುಕೊಳ್ಳಲಾಗದೆ, ಬಾಲ ಸುಟ್ಟ ಬೆಕ್ಕಿನಂತೆ ಓಡಾಡಿ ಪ್ರವಾಸಕ್ಕೆ ಹೋಗಲೇಬೇಕು ಎಂದು ಹಠ ಮಾಡಿ ಹೋದ ಇಕೋ ಬೀಚ್ ಮತ್ತು ಕಾಂಡ್ಲಾ ವನದ ಅನುಭವವನ್ನು ನಿಮ್ಮ ಮುಂದೆ ಇಡುತ್ತೇನೆ.
ಲಾಕ್ ಡೌನ್ ತೆರವುಗೊಂಡಿದ್ದೇ ಕಾಂಡ್ಲಾ ವನಕ್ಕೆ ಪ್ರವಾಸ
ಮನೆಯಲ್ಲಿ ಕುಳಿತು ಬೇಸರ ಬಂದಿದ್ದರಿಂದ ಆಗತಾನೆ ಲಾಕ್ ಡೌನ್ ಕೂಡಾ ತೆರವು ಆಗಿದ್ದರಿಂದ ನಾನು ಮತ್ತು ನನ್ನ ಮಿತ್ರರೆಲ್ಲಾ ಸೇರಿ ಪ್ರವಾಸಕ್ಕೆ ಹೋಗಲು ನಿರ್ಧರಿಸಿದೆವು. ನಾವು ಮೊದಲು ಪ್ರವಾಸ ಮಾಡಲು ಬಯಸಿದ್ದ ಜಾಗ ಕಾಂಡ್ಲಾ ವನ. ಅದು ನಮ್ಮ ಹೊನ್ನಾವರ ತಾಲೂಕಿನಿಂದ ಸುಮಾರು 9 ಕೀ. ಮೀಟರ್ ಅಷ್ಟೆ. ಹಾಗಾಗಿ ತುಂಬಾ ದೂರವು ಅಲ್ಲ, ಹತ್ತಿರವೂ ಅಲ್ಲ ಆದರೂ ನಮ್ಮ ತೃಪ್ತಿಗೆ ಒಂದು ಪ್ರವಾಸ ಆದಂತೆ ಆಗುತ್ತದೆ ಎಂದೂ ನವೆಂಬರ್ 9ರಂದು ಹೊರಟೆವು.
ಆವತ್ತು ನಮಗೆ ಇದ್ದ ಒಂದು ಅಡಚಣೆ ಅಂದರೆ ನಮಗೆಲ್ಲ ಆನ್ಲೈನ್ ತರಗತಿಗಳು ಪ್ರಾರಂಭವಾಗಿದ್ದವು. ಹಾಗಾಗಿ ನಾವೆಲ್ಲಾ ನಮ್ಮ ತರಗತಿ ಮುಗಿಸಿ 11 ಗಂಟೆಗೆ ಕುಮಟಾದಿಂದ ಹೊನ್ನಾವರಕ್ಕೆ ಹೋದವು. ಹೊನ್ನಾವರದಿಂದ ಭಟ್ಕಳದ ಬಸ್ ಹಿಡುದು ಕಾಂಡ್ಲಾವನದ ಸಮೀಪವೇ ಇಳಿದುಕೊಂಡೆವು.
ದಾರಿ ತಿಳಿಯದೆ ಹೈರಾಣು
ಮನೆಯಿಂದ ಕಾಂಡ್ಲಾವನ ಎಂಬ ಬೋರ್ಡ್ ಕಾಣುವವರೆಗೂ ನಮ್ಮ ಪ್ರಯಾಣ ಸುಗಮವಾಗೇ ಸಾಗಿತ್ತು. ಆದರೆ ಅಲ್ಲಿಂದ ನಮ್ಮ ನಿಜವಾದ ಪ್ರಯಾಣ ಪ್ರಾರಂಭವಾಗಿದ್ದು. ಏಕೆಂದರೆ ನಮಗ್ಯಾರಿಗೂ ಕಾಂಡ್ಲಾವನದ ದಾರಿಯೇ ತಿಳಿದಿರಲಿಲ್ಲ. ನಾವು ಗೂಗಲ್ ಮತ್ತು ನಮಗಿಂತ ಮೊದಲು ಹೋದವರ ಮಾತನ್ನು ಕೇಳಿ ಅಲ್ಲಿಗೆ ಬಂದುದ್ದು. ಕಾಂಡ್ಲಾವನ ಎಂಬ ಬೋರ್ಡ್ನಿಂದ ನೇರ ಹೋದಾಗ ನಮಗೆ ಎರಡು ಕವಲು ದಾರಿಗಳು ಕಾಣಿಸಿದವು. ಅದರಲ್ಲಿ ಯಾವುದು ನಾವು ಹೋಗಬೇಕಾದ ಜಾಗದ್ದು ಯಾವುದು ಅಲ್ಲ ಎಂಬುದು ನಮಗೆ ಸರಿಯಾಗಿ ತಿಳಿಯಲಿಲ್ಲ.
ನೀವು ಇದನ್ನು ಇಷ್ಟಪಡಬಹುದು: ಅದ್ಭುತ ಅನುಭವಗಳ ಮೂಟೆ ದೇವರ ಕಾಡು ಚಾರಣ
ಅದರ ಮೇಲೆ ನಾವು ಇರುವುದು ಬರಿ ಹುಡುಗಿಯರೇ. ನಮ್ಮ ಮನೆಯಲ್ಲಂತೂ ನಮಗೆ ಹತ್ತರಿಂದ ಹದಿನೈದು ಭಾರಿ ಕೇಳಿದ್ದರು ದಾರಿ ಗೊತ್ತಿದೆಯೇ? ಎಂದೂ ನಾವು ಗೊತ್ತಿಲ್ಲದೇ ಇದ್ದರೂ ಗೊತ್ತಿಲ್ಲ ಎಂದರೇ ಹೋಗಲು ಬಿಡುವುದಿಲ್ಲವೆಂದು, ಕೇಳಿದಕ್ಕೆಲ್ಲಾ ತಲೆಯಾಡಿಸಿದ್ದೆವು. ಆದರೆ ಈಗ ಮಾತ್ರ ದಾರಿ ತಿಳಿಯುತ್ತಿಲ್ಲ ಮತ್ತೊಂದು ಕಡೆ ಫೋನು ಸರಿ ಕೆಲಸ ಮಾಡುತ್ತಿಲ್ಲ. ಆದರೂ ಹಾಗೂ ಹೀಗೋ ಮಾಡಿ ದಾರಿಯಲ್ಲಿ ಬರುವ ಗಾಡಿಯನ್ನೆಲ್ಲ ಅಡ್ಡ ಹಾಕಿ, ಅಂತೂ ಕಾಂಡ್ಲಾವನದ ದಾರಿ ಕಂಡುಕೊಂಡೆವು.
ಅಪರಿಚಿತ ದಾರಿ ಸರಿ ಜಾಗಕ್ಕೆ ಕರೆದುಕೊಂಡು ಹೋದ ಖುಷಿ
ಹಾಗೆ ದಾರಿ ತಿಳಿದ ಖುಷಿಗೆ ಕಾಂಡ್ಲಾವನದ ಹತ್ತಿರ ಹೋದರೆ ಅದರ ಒಳಕ್ಕೆ ಹೋಗಲು ಎರಡು ದಾರಿಗಳಿದ್ದವು. ಈಗ ಮತ್ತದೆ ಸಮಸ್ಯೆ ಯಾವುದು ಬುಡ ಯಾವುದು ಕೊನೆ ಎಂದು. ಆದರೆ ಈಗ ಯಾರನ್ನಾದರೂ ಕೇಳೋಣ ಅಂದರೆ ಅಲ್ಲಿಗೆ ಯಾರೂ ಬರುತ್ತಲೂ ಇರಲಿಲ್ಲ. ಮತ್ತೆ ನಾವೇ ಮನಸ್ಸು ಮಾಡಿ ಒಂದು ದಾರಿ ಹಿಡಿದು ಮುಂದೆ ಸಾಗಿದೆವು. ಹಾಗೆ ಸಾಗುತ್ತ ಹೋದಹಾಗೆ ನಮ್ಮನ್ನು ಸ್ವಾಗತಿಸಿದ್ದು ಕಂಡ್ಲಾವನ ಎಂಬ ದೊಡ್ಡದಾದ ಬೋರ್ಡ್. ಆಗ ಹೋದ ಜೀವ ಮತ್ತೆ ಬಂದ ಹಾಗೆ ಭಾಸವಾಯಿತು.
ಸುಂದರ ತಾಣ ಕಾಂಡ್ಲಾ ವನ
ಕಾಂಡ್ಲಾವನ ಎನ್ನುವುದು ನೋಡಲು ತುಂಬಾ ಸುಂದರವಾಗಿ ಕಾಣುವ ಜಾಗ. ಆಕಡೆ ಈಕಡೆ ನೀರು ಮತ್ತು ಮಧ್ಯ ಸೇತುವೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಬರಿ ಕಾಂಡ್ಲಾ ಗಿಡಗಳೇ ಇದೆ. ಮತ್ತು ಯಾರದೇ ಸದ್ದು ಗದ್ದಲಗಳು ಇಲ್ಲ ಅಲ್ಲಿ. ನಾವು ನಮ್ಮ ಕಣ್ಣು ತುಂಬುವಷ್ಟು ಕಾಂಡ್ಲಾ ಗಿಡವನ್ನು ಅಲ್ಲಿನ ಸೌಂದರ್ಯವನ್ನು ನೋಡಿದೆವು. ಹಾಗೆ ಲಾಕ್ ಡೌನ್ ಪ್ರವಾಸದ ಸವಿ ನೆನಪಿಗಾಗಿ ಒಂದಿಷ್ಟು ಫೋಟೋ, ಸೆಲ್ಫಿಗಳನ್ನೂ ತೆಗೆದುಕೊಂಡೆವು.ನಂತರ ಅಲ್ಲಿಂದ ನಮ್ಮ ಪಯಣ ಸಾಗಿದ್ದು ಕಾಂಡ್ಲಾವನದ ತದ್ವಿರುದ್ದವಿರುವ ಇಕೋ ಬೀಚ್ ಕಡೆಗೆ.
ತೃಪ್ತಿ ತಂದ ಇಕೋ ಬೀಚ್ ಅನುಭವ
ಆ ಮಟ ಮಟ ಮಧ್ಯಾಹ್ನದಲ್ಲಿಯೂ ನಮಗೆ ಆ ಬೀಚ್ ಅನ್ನು ನೋಡುವ ಆಸೆ ಆಗಿತ್ತು. ಹಾಗೆ ನಡೆದುಕೊಂಡು ಹೋಗಿ ಬೀಚ್ ಹತ್ತಿರ ಇರುವ ಕ್ಯಾಂಟೀನ್ ಕಡೆಗೆ ಹೋದೆವು. ಬೆಳಗ್ಗೆಯಿಂದ ಏನು ತಿನ್ನದೇ ಹೊಟ್ಟೆಯಲ್ಲೆಲ್ಲ ಇಲಿ ಓಡಾಡಿದ ಹಾಗೆ ಆಗುತ್ತಿತ್ತು. ಆ ಕ್ಯಾಂಟೀನ್ ಹತ್ತಿರ ಹೋಗಿ ಆರ್ಡರ್ ಮಾಡಲು ಮೆನು ಕಾರ್ಡ್ ನೋಡಿದರೆ ಅಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಒಟ್ಟೊಟ್ಟಿಗೆ ಇತ್ತು.
ಈ ಸಸ್ಯಾಹಾರಿ ಪ್ರವಾಸಿಗಳಿಗೆ ಆಹಾರದ ವಿಷಯಕ್ಕೆ ಇದೊಂದೇ ತೊಂದರೆ ಅನ್ಸತ್ತೆ ನನ್ನ ಪ್ರಕಾರ. ಹಾಗೆ ಏನು ತಿನ್ನಲಾರದೆ ಬಿಡಲಾರದೆ ಒಂದು ಐಸ್ಕ್ರೀಮ್ ತಿಂದೆ ತೃಪ್ತರಾದೆವು. ನಂತರ ಇಕೋ ಬೀಚಿನ ಸೌಂದರ್ಯ ಸವಿದು ಅಲ್ಲಿನ ಪಾರ್ಕ್ನೊಳಗೆ ಸುತ್ತಾಡಿ ಅಲ್ಲಿಯೂ ಒಂದಿಷ್ಟು ಫೋಟೋ, ಸೆಲ್ಫಿ ತೆಗೆದುಕೊಂಡು ಅಲ್ಲಿಂದಲೂ ಹೊರೆಟೆವು. ಆಗ ಸರಿ 4 ಗಂಟೆ ಆಗಿತ್ತು. ಅಲ್ಲಿ ಬಸ್ಗಾಗಿ ತುಂಬಾ ಕಾದೆವು ಆದರೆ ಯಾವುದೆ ಬಸ್ ಸಿಗದೆ ಇದ್ದಿದ್ದರಿಂದ ಆಟೋ ಮಾಡಿಕೊಂಡೆ ಹೊನ್ನಾವರದ ತನಕ ಸಾಗಿದೆವು.
ಹೀಗೆ ನಮ್ಮ ಪ್ರವಾಸ ಒಂದು ತರ ರೋಮಾಂಚನಕಾರಿಯಾಗಿ, ತುಂಬಾ ಖುಷಿ ಸಂತೋಷ ತಮಾಷೆಯಿಂದ ಕುಡಿತ್ತು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ
Nice