ನಗರ ಅರಣ್ಯೀಕರವನ್ನು ಉತ್ತೇಜಿಸಲು ಭಾರತದಾದ್ಯಂತ 63,000 ಕಿ.ಮೀ ಸಂಚರಿಸಿದ ಉದ್ಯಮಿ

ಕೇಂದ್ರದ “ದೇಖೋ ಅಪ್ನಾ ದೇಶ್” ಅಭಿಯಾನದಿಂದ ಪ್ರೇರಿತರಾದ ಪುಣೆ ಮೂಲದ ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ಭಾರತದಾದ್ಯಂತ ಒಂದೂವರೆ ವರ್ಷಗಳ ಕಾಲ ಸುದೀರ್ಘ ಏಕಾಂಗಿ ಯಾತ್ರೆಯನ್ನು ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
•ಉಜ್ವಲಾ ವಿ. ಯು
2021ರ ಅಕ್ಟೋಬರನಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದ ಇವರು, ತಮ್ಮ ಕ್ರೀಡಾ ಬಳಕೆಯ ವಾಹನ ಮಹೇಂದ್ರ ಥಾರ್ ( Mahendra Thar) ನಲ್ಲಿ 63,000 ಕಿಮೀ ದೂರವನ್ನು ಪ್ರಯಾಣಿಸಿದ್ದಾರೆ. ಇವರು ಭಾರತದಾದ್ಯಂತ ಒಟ್ಟು 104 ರಾಷ್ಟ್ರೀಯ ಉದ್ಯಾನವನಗಳು, 54 ಹುಲಿ ಸಂರಕ್ಷಿತ ಪ್ರದೇಶಗಳು, 32 ಆನೆ ಮೀಸಲು ಪ್ರದೇಶಗಳು ಮತ್ತು 40 ಕ್ಕೂ ಹೆಚ್ಚು ವಿಶ್ವ ಪರಂಪರೆಯ ತಾಣಗಳಿಗೆ ಭೇಟಿ ನೀಡಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಕರ್ಮಲಾವಾಲಾ ಅವರು ” ರಾಜಸ್ಥಾನದ ಶುಷ್ಕ ಮರುಭೂಮಿ ಯಿಂದ ಈಶಾನ್ಯದ ಸೊಂಪಾದ ಮಲೆನಾಡುಗಳವರೆಗೆ, ಎತ್ತರದ ಹಿಮಾಲಯ ಶಿಖರಗಳಿಂದ ಹಿಡಿದು, ಆಕರ್ಷಕ ಅಂಡಮಾನ್ ದ್ವೀಪದವರೆಗೆ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಭೂ ಪ್ರದೇಶಗಳನ್ನು ದಾಖಲಿಸುವುದು ಮತ್ತು ಜನರಿಗೆ ಅವುಗಳನ್ನು ಪರಿಚಯಿಸುವುದು ನನ್ನ ಗುರಿಯಾಗಿದೆ.” ಎಂದರು.

ಜನರು ಸಾಮಾನ್ಯವಾಗಿ ಪ್ರಕೃತಿಯ ಅದ್ಭುತಗಳನ್ನು ಅನ್ವೇಷಿಸಲು ಆಗ್ನೇಯ ದೇಶಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿಯೇ ವನ್ಯಜೀವಿಗಳು ಮತ್ತು ಪರಿಸರದ ಅದ್ಭುತಗಳನ್ನು ಅನ್ವೇಷಿಸಲು ಸಾಕಷ್ಟು ವಿಷಯಗಳಿವೆ ಎನ್ನುವುದು ಅವರ ಅಭಿಪ್ರಾಯ.
ತೆಹಝೂನ್ ಅವರು ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸಾಂಸ್ಕೃತಿಕ ಉಡುಪುಗಳನ್ನೇ ಆಯ್ದುಕೊಳ್ಳುತ್ತಾರೆ. ಹಾಗೂ ತಾವು ಕಂಡಂತಹ ರೋಮಾಂಚಕ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ಈ ಸುದೀರ್ಘವಾದ ಪ್ರವಾಸದಿಂದಾಗಿ ಭಾರತದ ಶ್ರೀಮಂತ ಪರಂಪರೆ ಮತ್ತು ಜೀವವೈವಿಧ್ಯತೆಯ ಕುರಿತು ಆಳವಾದ ಅಧ್ಯಯನ ಮಾಡಲು ಸಾಧ್ಯವಾಗಿದೆ ಅಂತೆ.
ನೀವು ಇದನ್ನೂ ಇಷ್ಟಪಡಬಹುದು: 21 ಎಕರೆ ಬಂಜರು ಭೂಮಿ ಖರೀದಿಸಿ, ಅದನ್ನು ನೈಸರ್ಗಿಕ ಕಾಡಾಗಿ ಪರಿವರ್ತಿಸಿದ, ಬೆಂಗಳೂರಿನ ಉದ್ಯಮಿ ಸುರೇಶ್ ಕುಮಾರ್

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಡ್ ರೆಕಾರ್ಡ್ಸ್ ಇಂಡಿಯಾ ಇವರ ಸಾಧನೆಯನ್ನು ಗುರುತಿಸಿ “ದೀರ್ಘ ನಿರಂತರ ಪರಿಶೋಧನಾ ಯಾತ್ರೆ” ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ.
ತಮ್ಮ ಸ್ವಾರ್ಥ ಸಾಧನೆಗಾಗಿ ಮರ ಗಿಡಗಳನ್ನು ಕಡಿದು, ಅಭಿವೃದ್ಧಿ ಎಂಬ ಹೆಸರಿನಲ್ಲಿ ಬರೀ ನಾಶವನ್ನೇ ಮಾಡುತ್ತಿರುವ ಈ ಕಾಲದ ಜನರ ನಡುವೆ, ತೆಹಝೂನ್ ಕರ್ಮಲಾವಾಲಾ ಅವರು ತಾವು ದಾಖಲಿಸಿರುವ ಪ್ರವಾಸದ ವಿಡಿಯೋಗಳ ವೆಬ್ ಸರಣಿ ಮತ್ತು ಫೋಟೋಬುಕ್ ಗಳ ಮೂಲಕ ತಮ್ಮ ಅನುಭವಗಳನ್ನು ಜನರೊಂದಿಗೆ ಹಂಚಿಕೊಂಡು ಅವರಲ್ಲಿ “ನಗರ ಅರಣ್ಯೀಕರಣದ ಕುರಿತಾದ ಅರಿವು ಮತ್ತು ಅದರ ಪ್ರಾಮುಖ್ಯತೆಯನ್ನು ಉತ್ತೇಜಿಸುವ ಮಹತ್ತರ ಉದ್ದಿಶ್ಯವನ್ನು ಹೊಂದಿದ್ದಾರೆ”.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ