ಮಹಾರಾಷ್ಟ್ರದ ಪ್ರಬಾಲ್ ಗಢದಲ್ಲಿ ಉಲ್ಕಾಪಾತ ನೋಡಿದ ಕ್ಷಣ: ರೋಚಕ ಟ್ರೆಕ್ಕಿಂಗ್ ಕತೆ ಬರೆದ ಶ್ರದ್ಧಾ ಶೇಖರ್ ಶೆಟ್ಟಿ
ಶ್ರದ್ಧಾ ಶೇಖರ್ ಶೆಟ್ಟಿ ಹುಟ್ಟೂರು ಕಾಪುವಿನ ಕರಂದಾಡಿ. ಕಾಲೇಜು ಓದಿದ್ದು ಶಿರ್ವದ ಸೈಂಟ್ ಮೇರಿ ಕಾಲೇಜಿನಲ್ಲಿ. ನೃತ್ಯದಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಹೊಂದಿರುವ ಲವಲವಿಕೆಯ ಹುಡುಗಿ ಶ್ರದ್ಧಾ ಶೆಟ್ಟಿ ಸದ್ಯ ಮುಂಬೈನಲ್ಲಿ ವೃತ್ತಿಯಲ್ಲಿದ್ದಾರೆ. ಪ್ರವಾಸವನ್ನು ಇಷ್ಟಪಡುವ, ಸದಾ ಖುಷಿಯಿಂದಿರಲು ಆಸೆ ಪಡುವ ಹುಡುಗಿ ಮಹಾರಾಷ್ಟ್ರದ ಪ್ರಬಾಲ್ ಗಢ ಕೋಟೆಗೆ ಟ್ರೆಕ್ಕಿಂಗ್ ಹೋದ ಕತೆಯನ್ನು ಬರೆದಿದ್ದಾರೆ.
ಪ್ರಬಾಲ್ ಗಢ ಕೋಟೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಒಂದು ಸುಂದರ ತಾಣ. ಶಿವಾಜಿ ಮಹಾರಾಜರಿಂದ ಹಿಡಿದು ಅನೇಕ ರಾಜರುಗಳ ಕತೆಯನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುವ ಈ ತಾಣ ಕಲ್ಲು ಕಲ್ಲಿನಲ್ಲೂ ಕತೆಗಳಿವೆ. ಸಮುದ್ರಮಟ್ಟದಿಂದ 700 ಮೀ ಎತ್ತರದಲ್ಲಿರುವ ಈ ಕೋಟೆ ಮೇಲೆ ಒಂದು ದೇಗುಲವಿದೆ. ಅಲ್ಲಿಗೆ ತಲುಪಿದರೆ ಅದ್ಭುತವಾದ ದೃಶ್ಯಾವಳಿಗಳು ಕಣ್ಣು ತುಂಬುತ್ತವೆ. ಟೆಂಟೆಕ್ಕಿಕೊಂಡು ಹೋಗಿ ಅಲ್ಲೇ ಒಂದು ದಿನ ಇದ್ದು ಬರಲು ಇದು ಹೇಳಿಮಾಡಿಸಿದ ಜಾಗ.
ಮುಂಬೈನ ಅಂಧೇರಿಯಿಂದ ಡಿಸೆಂಬರ್ 13ರ ಸಂಜೆ ಪ್ರೀತಿಯ ಕಸಿನ್ ಗಳ ಜೊತೆಗೆ ಪ್ರಬಾಲ್ ಗಢಕ್ಕೆ ಹೊರಟೆ. ನೈಟ್ ಓಟ್ ಟ್ರೆಕ್ ಆಗಿದ್ದರಿಂದ, ಪ್ರಬಾಲ್ ಗಢದ ಫೋಟೋ ನೋಡಿದ್ದರೆ, ಮೊದಲ ಅನುಭವ ಆಗಿದ್ದರಿಂದ ಎಲ್ಲರೂ ಎಕ್ಸೈಟ್ ಆಗಿದ್ದೆವು. ಮುಂಬೈ- ಪುಣೆ ಎಕ್ಸ್ ಪ್ರೆಸ್ ದಾರಿಯಲ್ಲಿ ಸಾಗಿ ವಾಶಿ, ಪನ್ ವೇಲ್ ದಾಟಿ ಠಾಕೂರ್ ವಾಡಿ ಎಂಬ ಗ್ರಾಮ ತಲುಪಿದೆವು. ಆ ಗ್ರಾಮ ಪನ್ ವೇಲ್ ನಿಂದ ಸುಮಾರು 25 ಕಿಮೀ ದೂರದಲ್ಲಿದೆ. ನನ್ನ ಜತೆ ಇದ್ದವರೆಲ್ಲಾ ಫನ್ನಿ ಫ್ರೆಂಡ್ಸ್. ಜರ್ನಿಯುದ್ದಕ್ಕೂ ಒಬ್ಬರು ಮತ್ತೊಬ್ಬರಿಗೆ ತಮಾಷೆ ಮಾಡುತ್ತಾ ಈ ಪಯಣ ಮನಸ್ಸಲ್ಲಿ ಉಳಿಯುಂತೆ ಮಾಡಿದರು.
ನಮ್ಮ ಟ್ರೆಕ್ಕಿಂಗ್ ಆರಂಭದ ಪಾಯಿಂಟಿಗೆ ತಲುಪುವಾಗ ಬೆಳಿಗ್ಗೆ ಎಂಟು ಗಂಟೆ ಆಗಿತ್ತು. ಭಯಂಕರ ಹುಮ್ಮಸ್ಸಿನೊಂದಿಗೆ ನಮ್ಮ ಗ್ಯಾಂಗ್ ಟ್ರೆಕ್ಕಿಂಗ್ ಶುರು ಮಾಡಿತು. ಎತ್ತರೆತ್ತರಕ್ಕೆ ಹೋಗುತ್ತಿದ್ದಂತೆ ತಂಪಾದ, ಹಿತವಾದ ಗಾಳಿ ನಮ್ಮ ಮೈ, ಮನಸ್ಸಿಗೆ ಸೋಕಲಾರಂಭಿಸಿತು. ಎತ್ತರದ ಬೆಟ್ಟ, ಕೆಳಕ್ಕೆ ಕಾಣಿಸುತ್ತಿದ್ದ ಪುಟ್ಟ ಹಳ್ಳಿಗಳು, ಜೋರಾದ ಗಾಳಿ ಎಲ್ಲವೂ ಸೇರಿ ನಮ್ಮನ್ನು ಮಂತ್ರಮುಗ್ಧಗೊಳಿಸಿದವು. ಆ ಖುಷಿಯಲ್ಲೇ ಕೆಳಗಿಳಿದು ಕ್ಯಾಂಪ್ ಹಾಕಿದೆವು.
ಅಲ್ಲಿ ನಮಗೊಬ್ಬ ವ್ಯಕ್ತಿ ಸಿಕ್ಕಿದರು. ಅವರು ನಮಗೆ ಕ್ಯಾಂಪ್ ಹಾಕಲು ನೆರವಾದರು. ರುಚಿಕಟ್ಟಾದ ಅಡುಗೆ ಮಾಡಿ ಹಾಕಿದರು. ರಾತ್ರಿ ಹೊತ್ತು ಕ್ಯಾಂಪ್ ಫೈರ್ ರೆಡಿ ಮಾಡಿಕೊಟ್ಟರು. ಆ ಕತ್ತಲಲ್ಲಿ, ಚಳಿಯಲ್ಲಿ, ಬೆಂಕಿಯ ಎದುರಲ್ಲಿ ನಾವು ಸಂತೋಷದಿಂದ ಹಾಡಿದೆವು, ನರ್ತಿಸಿದೆವು, ಮೇಲೆ ಕಪ್ಪು ಆಗಸದಲ್ಲಿ ಮಿನುಗುತ್ತಿದ್ದ ನಕ್ಷತ್ರರಾಶಿಗಳು ನಮ್ಮನ್ನು ನೋಡಿ ನಕ್ಕಂತೆ ಭಾಸವಾಯಿತು.
ಅವತ್ತು ರಾತ್ರಿ ವಿಸ್ಮಯವೊಂದು ಜರುಗಿತು. ನಾವು ಆಕಾಶ ನೋಡುತ್ತಿದ್ದಂತೆಯೇ ಉಲ್ಕಾಪಾತ ಸಂಭವಿಸಿತು. ಅದಕ್ಕೆ geminids meteor shower ಅಂತ ಕರೆಯುತ್ತಾರೆ. ಅದಂತೂ ನಮ್ಮ ಜೀವನದ ಮ್ಯಾಜಿಕ್ ಮೊಮೆಂಟ್ ಅಂತಲೇ ನಾನು ಭಾವಿಸಿದ್ದೇನೆ. ಆ ಕ್ಷಣ ಪ್ರತಿಯೊಬ್ಬರಿಗೂ ನೋಡಲು ಸಿಗುವುದಿಲ್ಲ.
ಮರುದಿನ ಬೆಳಿಗ್ಗೆ ಎದ್ದು ನಾವು ಕಲವಂತಿನ್ ದುರ್ಗ ನೋಡಲು ಅಣಿಯಾದೆವು. ಆ ದುರ್ಗವನ್ನು ಹತ್ತುವುದು ಸುಲಭವಾಗಿರಲಿಲ್ಲ. ಅಡ್ವೆಂಚರ್ ಇಷ್ಟ ಪಡುವವರಿಗೆ ಮಾತ್ರ ಈ ದುರ್ಗವನ್ನು ಹತ್ತುವುದು ಖುಷಿಯ ಸಂಗತಿ. ಈ ದುರ್ಗವನ್ನು ಹತ್ತುತ್ತಿದ್ದಂತೆ ಜೋರಾಗಿ ಮಳೆ ಸುರಿಯತೊಡಗಿತು. ಈ ವರ್ಷ ನಡೆದದ್ದೆಲ್ಲಾ ಅನಿರೀಕ್ಷಿತ ಘಟನೆಗಳೇ ಆದ್ದರಿಂದ ಡಿಸೆಂಬರ್ ನಲ್ಲಿ ಮಳೆ ಸುರಿದದ್ದರಲ್ಲಿ ಅಚ್ಚರಿ ಅನ್ನಿಸಲಿಲ್ಲ. ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವಂತೆ ಮಳೆ ದಾರಿಯ ಚೆಂದವನ್ನು ಹೆಚ್ಚಿಸಿತು.
ಆ ಬೆಳಗ್ಗು ನಮ್ಮ ದಾರಿಯಲ್ಲೆಲ್ಲಾ ಮಂಜು ಹಾಸಿತ್ತು. ಬಿಳಿಬಿಳಿ ಮಂಜಿನ ಚಾದರದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಮಂಜು ನಮ್ಮ ಸುತ್ತಲೂ ಹೊದ್ದುಕೊಂಡು ನಾವು ಬಿಳಿಯ ಜಾಕೆಟ್ ಧರಿಸಿದಂತೆ ಅನ್ನಿಸುವಂತಿತ್ತು. ತುಂಬಾ ಎಚ್ಚರಿಕೆಯಿಂದ ನಿಧಾನವಾಗಿ ದುರ್ಗದ ತುದಿ ತಲುಪಿದೆ. ಚೂರು ಎಚ್ಚರ ತಪ್ಪಿದರೂ ಆಚೆ ಪ್ರಪಾತ. ಆ ಕಣಿವೆ ನಮ್ಮನ್ನು ದಿಟ್ಟಿಸಿ ನೋಡುತ್ತಿತ್ತು. ನಾವು ಅದರತ್ತ ನೋಡಿಯೂ ನೋಡದಂತೆ ಮುಂದೆ ನಡೆದೆವು. ದುರ್ಗದ ತುದಿ ತಲುಪಿದಾಗ ಸುದೀರ್ಘ ನಿಟ್ಟುಸಿರು.
ನಂತರ ಎಲ್ಲರೂ ಒಟ್ಟು ಸೇರಿ ಊಟ ಮಾಡಿ ಭಾರವಾದ ಮನಸ್ಸಿನೊಂದಿಗೆ ವಾಪಸ್ ಹೊರಟೆವು. ಈ ಪಯಣ ನನ್ನ ಜೀವನದ ಅಮೂಲ್ಯ ನೆನಪಿನ ಭಾಗವಾಗಿ ಉಳಿದುಕೊಂಡಿದೆ.
ಒಳ್ಳೆಯ ನೆನಪುಗಳಿಗೆ ಕೃತಜ್ಞತೆ.
ಛಂದ