ಆ ಜರ್ಮನ್ ಲೇಡಿ, ಗಿಟಾರ್ ಬಾರಿಸುತ್ತಿದ್ದ ಯುವಕ, ಚಳಿಗಾಲದ ಗೋಕರ್ಣ: ಪ್ರಿಯಾ ಕೆರ್ವಾಶೆ ಬರಹ
ಗೋಕರ್ಣಕ್ಕೆ ಕಳೆದ ಬಾರಿ ಬಂದಿದ್ದಾಗ ಕಚ್ಚೆ ಪಂಚೆ, ಮೖಮೇಲೊಂದು ಶಾಲು ಹೊದೆದು ಓಡಾಡುತ್ತಿದ್ದ ಗ್ರಾಮಸ್ಥರ ಮಧ್ಯೆ ಚಿತ್ರ ವಿಚಿತ್ರ ಉಡುಗೆಗಳಲ್ಲಿ ಅಲೆಯುತ್ತಿದ್ದ ವಿದೇಶಿಗರು ಭಯಂಕರ ಕುತೂಹಲ ಮೂಡಿಸಿದ್ದರು. ಮತ್ತೆ ಅದೇ ಊರಿಗೆ ಅದೇ ಜಾಗಕ್ಕೆ ಹೋದಾಗ ಅಲ್ಲಿ ಕಂಡ ಚಿತ್ರಗಳು ಬೇರೆಯೇ ಆಗಿದ್ದವು.
‘ಬೆಂಗ್ಳೂರಲ್ಲಿ ಭಾರೀ ಅಲ್ವಾ ಕೊರೋನಾ ಕೇಸು, ಇಲ್ಲಿ ಒಂದೆ ಒಂದ್ ಕೇಸ್ ಇಲ್ಲ ಗೊತ್ತಾ?’
ಗೋಕರ್ಣದಲ್ಲೊಂದು ಮಧ್ಯಾಹ್ನ. ರೂಮ್ ಬುಕ್ಕಿಂಗ್ ನಲ್ಲೇನೋ ಯಡವಟ್ಟಾಗಿತ್ತು. ಲಾಬಿಯಲ್ಲಿ ಕೂತು ನೆಕ್ಸ್ಟ್ ಏನು ಅಂತ ತಲೆ ಕೆಡಿಸ್ಕೊಳ್ಳುತ್ತಿದ್ದೆ. ಆ ಹೊಟೇಲ್ ಹುಡುಗ ನಾನು ಹತ್ತು ವರ್ಷದಿಂದ ಪರಿಚಯವೇನೋ ಅನ್ನೋ ಹಾಗೆ ಮಾತಾಡ್ತಿದ್ದ.
“ಏ ಸುಳ್ಳು, ಅಷ್ಟು ಜನ ಫಾರಿನರ್ಸ್ ಬರ್ತಿರ್ತಾರೆ, ಕೊರೋನಾ ಇಲ್ವಾ..’ ಅಂದೆ.
“ಫಾರಿನರ್ಸ್ ಒಬ್ರೂ ಇಲ್ಲ ಗೊತ್ತಾ’ ಅಂದ. ಇದು ಮತ್ತೊಂದು ಸುಳ್ಳು, ಗೋಕರ್ಣದಲ್ಲಿ ಫಾರಿನರ್ಸ್ ಒಬ್ರೂ ಇಲ್ಲ ಅಂದ್ರೆ..
“ಕೆಲವ್ರಿದ್ದಾರೆ, ಕೊರೋನಾ ಬಂದಾಗ್ಲೂ ಡೆಲ್ಲಿ, ಬಾಂಬೆಯಲ್ಲೇ ಇದ್ದವರು. ಅವ್ರೀಗ ಇಲ್ಲಿಗೆ ಬಂದಿದ್ದಾರೆ’ ಕರೆಕ್ಷನ್ ಮಾಡಿದ. ಒಳಗೊಳಗೇ ನಿರಾಸೆಯಾಯ್ತು.
ಗೋಕರ್ಣಕ್ಕೆ ಕಳೆದ ಬಾರಿ ಬಂದಿದ್ದಾಗ ಕಚ್ಚೆ ಪಂಚೆ, ಮೖಮೇಲೊಂದು ಶಾಲು ಹೊದೆದು ಓಡಾಡುತ್ತಿದ್ದ ಗ್ರಾಮಸ್ಥರ ಮಧ್ಯೆ ಚಿತ್ರ ವಿಚಿತ್ರ ಉಡುಗೆಗಳಲ್ಲಿ ಅಲೆಯುತ್ತಿದ್ದ ವಿದೇಶಿಗರು ಭಯಂಕರ ಕುತೂಹಲ ಮೂಡಿಸಿದ್ದರು.
ಚಿಕ್ಕ ದೇವಸ್ಥಾನ ಜಗುಲಿಯಲ್ಲಿ ಉದ್ದುದ್ದ ನಾಮ ಹಾಕಿಕೊಂಡು ಗಂಟೆಗಟ್ಟಲೆ ತಾಳ ಹಾಕುತ್ತಾ ಕುಣಿಯುತ್ತಾ ಹಾಡುತ್ತಿದ್ದವರು, ಋಷಿಗಳಂತೆ ಜಟೆ ಬಿಟ್ಟು ಬಿಳಿ ಉಡುಗೆಯಲ್ಲಿ ಸೖಕಲ್ ತುಳಿಯುತ್ತಿದ್ದವರು, ಗೋಡೆಗಳಲ್ಲಿ ಚಂದದ ಚಿತ್ರ ಬರೆಯುತ್ತಿದ್ದವರು, ಯಾವುದೋ ಕಟ್ಟೆ ಮೇಲೆ ಕೂತು ಧ್ಯಾನಸ್ಥರಾಗುತ್ತಿದ್ದವರು..
ಕುಡ್ಲೆ ಬೀಚ್ ಗೆ ಬಂದರೆ ಅವರದೇ ಸಾಮ್ರಾಜ್ಯ. ಕಿಂಚಿತ್ತ್ ಬೊಜ್ಜೂ ಇಲ್ಲದ ಮೈಯನ್ನು ಟೂಪೀಸ್ ಗಳಲ್ಲಿ ಕವರ್ ಮಾಡಿ ಬೀಚ್ ಬದಿ ಬಿಸಿಲಿಗೆ ಮೈ ಕಾಯಿಸಿಕೊಳ್ಳುತ್ತಿದ್ದರು. ನಾವು ಬೀಚ್ ಬದಿ ಗುಡ್ಡಗಳಲ್ಲಿ ಟ್ರೆಕ್ ಮಾಡುವಾಗ ನಮಗೆ ಎದುರಾಗುತ್ತಿದ್ದವರು ಬಿಳಿ ಮೈಯ ವಿದೇಶಿಗರು ಮಾತ್ರ. ದಾರಿಯ ಬಗ್ಗೆ ಕನ್ ಫ್ಯೂಶನ್ ಇದ್ದಾಗ ಕರೆಕ್ಟಾಗಿ ಗೈಡ್ ಮಾಡಿ ದಾರಿ ತೋರಿಸಿದ್ದರು.
ಎಲ್ಲಕ್ಕಿಂತ ಹೆಚ್ಚಾಗಿ ಸಮುದ್ರದಂಡೆಯ ಸಂಜೆಗಳು. ಮರೆಯಾಗುವ ಸೂರ್ಯನನ್ನೇ ನೋಡುತ್ತಾ ತನ್ಮಯರಾಗಿ ಚಿತ್ರ ವಿಚಿತ್ರ ವಾದ್ಯ ನುಡಿಸುವವನೊಬ್ಬ. ಅವರ ಸುತ್ತ ಭಾರತೀಯರು, ವಿದೇಶಿಯರ ಗುಂಪು. ಆ ರಾಗ ಸಂಜೆಯ ರಾಗದೊಂದಿಗೆ ಬೆರೆತು ವಿಚಿತ್ರ ತನ್ಮಯತೆಯಲ್ಲಿ ಕಳೆದುಹೋಗುವಂತಾಗುತ್ತಿತ್ತು. ಆ ನಾದ ಮುಗಿದಾಗ ಇರುಳು, ಆಗಸದಲ್ಲಿ ಚಿಕ್ಕಿ ಚಂದ್ರಮರು. ಆತ ಮತ್ತೊಂದು ರಾಗದೊಂದಿಗೆ ತಣ್ಣನೆಯ ಇರುಳಿಗೆ ಕಚಗುಳಿ ಇಡುತ್ತಿದ್ದ.
ಈ ಬಾರಿ ಇಂಥದ್ದೇನೂ ಇರೋದಿಲ್ಲ, ಪರ್ವಾಗಿಲ್ಲ ಇರುವ ಎರಡು ದಿನದಲ್ಲಿ ಬೀಚು, ಗುಡ್ಡ, ಟ್ರೆಕ್ಕಿಂಗ್ ಅಂತ ಎಕ್ಸ್ ಪ್ಲೋರ್ ಮಾಡೋಣ ಅಂತ ನನಗೆ ನಾನೇ ಹೇಳಿಕೊಂಡೆ.
ಆ ನಡು ಮಧ್ಯಾಹ್ನ ಗೋಕರ್ಣದ ಬೀದಿಗಳು ಬಿಮ್ಮನೆ ಕೂತಿದ್ದವು. ಬೀದಿ ಬದಿ ಬಟ್ಟೆ ಮಾರುವವರ ಮಕ್ಕಳ ಆಟ ಬಿಟ್ಟರೆ ಬಿಕೋ ಎನ್ನುವ ರಸ್ತೆ, ಕಿರಿದಾದ ಗಲ್ಲಿಗಳು, ಓಣಿಗಳೆಲ್ಲ ಆ ಸ್ತಬ್ದತೆಯ ಭಾಗವೇ ಆಗಿದ್ದವು. ಒಂಥರಾ ಇಡೀ ಊರೇ ಆಕಳಿಸುತ್ತಾ ಕೂತ ಹಾಗೆ. ಬೀದಿ ಗೋಡೆಗಳ ಬಣ್ಣಗಳು ಮಂಕಾಗಿದ್ದವು. ನಾವು ಮಾತ್ರ ರೂಮಲ್ಲಿರಲೂ ಆಗದೇ, ಹೊರಗೆ ಓಡಾಡುವ ಉತ್ಸಾಹವೂ ಇಲ್ಲದೇ ಎಡೆಬಿಡಂಗಿಗಳ ಹಾಗೆ ರಸ್ತೆಯುದ್ದ ಕಾಲು ಹಾಕುತ್ತಾ ಬೀಚ್ ಬುಡಕ್ಕೆ ಬರುತ್ತಿದ್ದೆವು. ಸಮುದ್ರದ ಅಲೆಗಳು ನಿರಾಸೆ ಮಣಿಸಿ ಆಟಕ್ಕೆ ಕರೆಯುತ್ತಿದ್ದವು.
ಉಪ್ಪುಪ್ಪು ನೀರು ಉತ್ಸಾಹ ಮೂಡಿಸುತ್ತಿತ್ತು. ನೀರಿಂದೆದ್ದರೆ ಗಾಳಿಗೆ ನಡುಗುವ ಮೖ ಒಂಥರಾ ಹುಮ್ಮಸ್ಸು ತರುತ್ತಿತ್ತು.
“ಕಳೆದ ಸಲ ಇಷ್ಟೊತ್ತಿಗೆ ಇಲ್ಲಿ ನೋಡ್ಬೇಕಿತ್ತು ನೀವು, ಎಷ್ಟು ಜನ ಎಷ್ಟು ಜನ.. ಈ ಸಲ ಅವರಿಗೆ ಬರಲಾಗುತ್ತಿಲ್ಲ. ನಮ್ಮಲ್ಲೇ ಉಳಿದುಕೊಳ್ಳುತ್ತಿದ್ದವರೂ ಮುಂದಿನ ವರ್ಷ ಬರ್ತೇವೆ ಅಂತ ಮೇಲ್ ಮಾಡಿದ್ದಾರೆ. ಮುಂದಿನ ವರ್ಷ ಏನಾಗುತ್ತೋ ಯಾರಿಗೊತ್ತು..’ ಆ ರಾತ್ರಿ ಬೀಚ್ ಹೌಸ್ ನ ಓನರ್ ಮಗಳ ಜೊತೆಗೆ ಮಾತಾಡುತ್ತಿದ್ದೆ. ಅವಳಂತೂ ವರ್ಷಕ್ಕೊಮ್ಮೆ ಹಬ್ಬಕ್ಕೆ ಬರುವ ಬಂಧುಗಳು ಮಿಸ್ಸಾದ ಫೀಲ್ ನಲ್ಲಿ ಇದ್ದಳು.
ಬೀಚ್ ನತ್ತ ಮುಖ ಮಾಡಿ ನಿಂತ ಆ ಮನೆಯದು. ಎದುರು ಕೂತರೆ ಸಮುದ್ರದ ಗಾಳಿ ಮೖ ಅರಳಿಸುತ್ತದೆ. ಮುಂದೆ ನಾಲ್ಕೖದು ಮಕ್ಕಳು ಮೂರ್ನಾಲ್ಕು ನಾಯಿಗಳ ಮೖ ಮೇಲೆ ಬಿದ್ದು ಆಡುತ್ತಿದ್ದರು. ಅವುಗಳಲ್ಲೊಂದು ನಾಯಿ ನನ್ನ ಕಡೆ ನೋಡಿ ಗುರ್ರ್ ಅನ್ನುತ್ತಿತ್ತು.
‘ನಿಮ್ಮನೇದಾ?’ ಅಂದೆ. ‘ ಒಂಥರಾ ನಮ್ಮನೇದೇ. ಇವು ಹನ್ನೊಂದಿವೆ. ದಿನಾ ಊಟಕ್ಕೆ ಬಂದು ಹೋಗ್ತಿರುತ್ತವೆ’ ಅಂದಳಾಕೆ. ಅಂದರೆ ಈಕೆ ಹನ್ನೊಂದು ನಾಯಿ ಸಾಕ್ತಾಳಾ! ಅವಳಿಗದು ಅಂಥಾ ಕಷ್ಟ ಅಂತ ಅನಿಸುತ್ತಿರಲಿಲ್ಲ. ಆದರೆ ಆ ನಾಯಿಗಳ ಬಗ್ಗೆ ಅವಳು ಹೇಳಿದ ಕಥೆ ಬಹಳ ಇಂಟೆರೆಸ್ಟಿಂಗ್ ಅನಿಸಿತು.
‘ಇವೆಲ್ಲ ಕಳೆದ ಸಲ ಇಮಿಲಿಯಾ ಬಂದಾಗ ಇಲ್ ಬಿಟ್ಟು ಹೋಗಿದ್ದು..’ ಅಂದಳು. ಈ ಇಮಿಲಿಯಾ ಜರ್ಮನ್ ನವಳು. ಕೊರೋನಾ ಇಲ್ಲಾಂದ್ರೆ ಬಹುಶಃ ಈ ಹೊತ್ತಿನ ನಮ್ಮ ಹರಟೆಯಲ್ಲಿ ಸೇರಿಕೊಳ್ಳುತ್ತಿದ್ದಳೇನೋ..
ಈ ಇಮಿಲಿಯಾ ಕಳೆದ ಹಲವು ವರ್ಷಗಳಿಂದ ಡಿಸೆಂಬರ್ ಹೊತ್ತಿಗೆ ಗೋಕರ್ಣದಲ್ಲಿರುತ್ತಾಳೆ. ಅವಳು ಬಂದರೆ ಇಲ್ಲಿನ ಕೆಲವರ ಮುಖ ಅರಳುತ್ತದೆ. ಕೆಲವರು ತಿರಸ್ಕಾರದಲ್ಲಿ ನೋಡುತ್ತಾರೆ. ಕಾರಣ ಇಮಿಲಿಯಾಗೆ ಇರುವ ಒಂದು ವಿಚಿತ್ರ ಹವ್ಯಾಸ. ಮತ್ತೇನಲ್ಲ, ಗೋಕರ್ಣದ ಬೀದಿ ನಾಯಿಗಳ ಆರೈಕೆ ಮಾಡೋದು. ಗಲ್ಲಿ ಗಲ್ಲಿ ಅಲೆದು ಅಲ್ಲಿರುವ ನಾಯಿಗಳನ್ನೆಲ್ಲ ಮಾತನಾಡಿಸೋದು, ಅವುಗಳಿಗೆ ತಿಂಡಿ ಹಾಕೋದು, ಸಂಜೆ ಇವಳು ವಾಕಿಂಗ್ ಹೊರಟರೆ ಬೀದಿ ನಾಯಿಗಳೆಲ್ಲ ಇವಳ ಹಿಂದೆ. ಅವುಗಳ ಜಗಳ, ಗಲಾಟೆಯೂ ಹಿಂದಿದೆ.. ಸಮುದ್ರ ದಂಡೆಯಲ್ಲಂತೂ ನಾಯಿಗಳ ರಣ ಕಾಳಗ. ಕೊನೆಗೆ ಯಾವುದಾದರೂ ನಾಯಿಗೆ ಗಾಯವಾಗಿತೋ ಇವಳ ಬ್ಯಾಗ್ ನಿಂದ ಮೆಡಿಸಿನ್ ಕಿಟ್ ಹೊರ ಬರುತ್ತದೆ. ಅದರ ಆರೖಕೆ ಶುರುವಾಗುತ್ತೆ. ಇದೆಲ್ಲ ಇದ್ದದ್ದೇ ಹುಚ್ಚಾಟ ಅನ್ನೋ ಹಾಗಿಲ್ಲ. ಇಲ್ಲಿರುವ ಅಷ್ಟೂ ನಾಯಿಗಳನ್ನೂ ಒಂದೊಂದಾಗಿ ಪಕ್ಕದ ಗೋವಾಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಎಲ್ಲವಕ್ಕೂ ವ್ಯಾಕ್ಸಿನೇಶನ್ ಮಾಡಿಸುತ್ತಾಳೆ. ಹೆಣ್ಣು ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯೂ ಆಗುತ್ತದೆ. ಮತ್ತೆ ತಂದು ಇಲ್ಲಿ ಬಿಡುತ್ತಾಳೆ. ಕೆಲವೊಮ್ಮೆ ಬೆಂಗಳೂರಿಂದ ಇಲ್ಲಿಗೇ ಪ್ರಾಣಿ ವೖದ್ಯರನ್ನು ಕರೆಸೋದೂ ಇದೆ. ಅವಳು ನಾವೀಗ ಬೀಚ್ ಹೌಸ್ ನಲ್ಲೇ ಇರೋ ಕಾರಣ ಹತ್ತಾರು ನಾಯಿಗಳು ಇಲ್ಲೇ ಝಾಂಡಾ ಹೂಡುತ್ತವೆ. ಮನೆಯಿಂದ ಕೊಂಚವೇ ಆಚೆ ಇರುವ ಸಮುದ್ರ ತೀರದಲ್ಲಿ ನಾಯಿಗಳ ಜೊತೆ ಮಧ್ಯರಾತ್ರಿವರೆಗೂ ಕೂತಿರುತ್ತಾಳೆ. ಪ್ರಶಾಂತ ರಾತ್ರಿ, ಕತ್ತಲಲ್ಲಿ ಬೆಳ್ಳಗೆ ಹೊರಳುವ ಅಲೆಗಳು, ಆಕಾಶ ನೋಡುತ್ತಾ ಮರಳಲ್ಲಿ ಕೂರುವ ಇವಳು, ಅಕ್ಕ ಪಕ್ಕ ಬಿದ್ದುಕೊಂಡು ತೂಕಡಿಸುವ ನಾಯಿಗಳು..
[ಮುಂದಿನಭಾಗ- ಕಡಲ ಬದಿಯ ದಾರಿ ಎಷ್ಟು ದೂರ]