ಕಾರು ಟೂರುದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ಶಿರೂರಿನಲ್ಲಿರುವ ಬೆಳ್ಳಿಗುಂಡಿ ಜಲಪಾತ ಕಲಿಸಿದ ಜೀವನ ಪಾಠ: ಮಲ್ಲೇಶ್ವರಂ ಹುಡುಗಿ ತನ್ಮಯ ಪ್ರಕಾಶ್ ಬರೆದ ಬೆರಗಿನ ಬರಹ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹುಟ್ಟಿ, ಮಲ್ಲೇಶ್ವರಂನಲ್ಲಿ ಬೆಳೆದು, ಶೇಷಾದ್ರಿಪುರಂ ಕಾಲೇಜಿನ ಸುತ್ತ ಮುತ್ತ ಓಡಾಡಿ, ಕ್ರಿಸ್ತ ಜಯಂತಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಕಡಲ ತೀರದ ಮಣಿಪಾಲದಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ತನ್ಮಯ ಪ್ರಕಾಶ್ ತಮ್ಮ ಮೊದಲ ಚಾರಣದ ಕತೆ ಬರೆದಿದ್ದಾರೆ. ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿನಲ್ಲಿ ಸುತ್ತಾಡಿ ಬೇಸರಗೊಂಡು ಊರಾಚೆ ಹೊರಟು ಪ್ರಕೃತಿ ವೈಭವಕ್ಕೆ ಮರುಳಾಗಿ ಬರೆದ ಬೆರಗಿನ ಬರಹ. 

ಝರಿ ಝರಿ ಹರಿಯುತ್ತಿದೆ ನೀರು, ಕುಹು ಕುಹು ಕೋಗಿಲೆಯ ಕೂಗು. ತಣ್ಣನೆಯ ಗಾಳಿ, ಹೆಜ್ಜೆ ಇಟ್ಟಂತೆ ಕೇಳುತ್ತಿದ್ದ ಎಲೆಗಳ ಬುಳು ಬುಳು ಶಬ್ದ..

ಹೀಗೆ ಸಾಗುತ್ತಿದ್ದ ಪಯಣವೇ ನನ್ನ ಮೊದಲ ಚಾರಣ..

ಕ್ರಿಸ್ಮಸ್ ರಜೆ ಇದ್ದ ಸಲುವಾಗಿ ನಾನು ಮತ್ತು ನನ್ನ ಸ್ನೇಹಿತರು ಹೋದದ್ದು ಬೆಳ್ಳಿಗುಂಡಿ ಜಲಪಾತಕ್ಕೆ(belligundi falls).. ರಜೆ ಎಂದಾಗ ತಿನ್ನಲು, ಸುತ್ತಾಡಲು ಬೆಂಗಳೂರಿನಲ್ಲಿ ಇದ್ದ ಮಾಲ್, ಕೆಫೆ,  ಹೋಟೆಲ್ ಗೆ ಹೋಗುವ ಅಭ್ಯಾಸ ಇದ್ದ ನನಗೆ, ನೇಸರದ ಶ್ರೀಮಂತಿಕೆಯನ್ನು ಸ್ವಾದಿಸಲು ಪೂರಕವಾಗಿದ್ದ ಟ್ರೆಕ್ ಆಹ್ಲಾದಗೊಳಿಸಿತ್ತು. ಕಾಂಕ್ರಿಟ್ ಕಾಡಿನಲ್ಲಿ ಬೇಸತ್ತು ಹೋಗಿದ್ದ ನಾನು, ಜಲಪಾತಕ್ಕೆ ಟ್ರೆಕ್ ಹೋಗೋಣ ಎಂದು ನನ್ನ ಸೀನಿಯರ್ ಹೇಳಿದ್ದನ್ನು ಕೇಳಿ ಕುಣಿದು ಕುಪ್ಪಳಿಸುವಷ್ಟು ಉಲ್ಲಾಸಗೊಂಡೆ. ಅದ್ಭುತ ವಾತಾವರಣ, ಸ್ವಲ್ಪ ಕ್ಲಿಷ್ಟ ಎನಿಸಿದ ಮಾರ್ಗ, ರೋಮಾಂಚನಗೊಳಿಸಿದ ಜಲಪಾತದ ದೃಶ್ಯ, ಎಲ್ಲದರ ಮಧ್ಯೆ ನನ್ನ ಯೋಚನೆ ಸಾಗಿದ್ದು, ಈ ಚಾರಣವು ಕಲಿಸಬಲ್ಲ  ಜೀವನ ಪಯಣದ ಪಾಠದ ಬಗ್ಗೆ.

ದಾರಿಯೇ ಸುಂದರ

ಬೆಳ್ಳಿಗುಂಡಿ ಜಲಪಾತ ಇರುವುದು ಕುಂದಾಪುರ ಸಮೀಪದ ಶಿರೂರಿನಲ್ಲಿ. ಉಡುಪಿಯಿಂದ ಕಾರವಾರ ರಸ್ತೆಯ ಮಧ್ಯೆ ಈ ಜಲಪಾತವಿದೆ. ಇದಕ್ಕೆ ಕುಡುಮಾರಿ ಜಲಪಾತ ಎಂದೂ ಕರೆಯುತ್ತಾರೆ. ಉಡುಪಿಯಿಂದ 80 ಕಿಮೀ ಸಾಗಿದರೆ ಶಿರೂರು ಸಿಗುತ್ತದೆ. ಅಲ್ಲಿಂದ ತೂದಳ್ಳಿ ರಸ್ತೆಯಲ್ಲಿ 12 ಕಿಮೀ ಸಾಗಿದರೆ ಅತ್ಯಾಡಿ ಸಿಗುತ್ತದೆ. ಅಲ್ಲಿಂದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಬೇಕು. ಎರಡು ಕಿಮೀ ಕಾಲು ದಾರಿ ಅಥವಾ ಕಾಡುದಾರಿ. ಅನಂತರ ಸುಮಾರು ಒಂದೂವರೆ ಕಿಮೀ ಹೊಳೆಯಲ್ಲಿ ಸಾಗಿದರೆ ಸಿಗುತ್ತದೆ ಬೆಳ್ಳಿಗುಂಡಿ. ಮೂರುನೂರು ಮೀಟರ್ ಎತ್ತರದಿಂದ ನೀರು ಬೆಳ್ಳಿ ಗೆರೆಯಂತೆ ಬೀಳುತ್ತಿರುತ್ತದೆ. ಅದನ್ನು ನೋಡುವುದೇ ಚೆಂದ. ಆ ರಮಣೀಯ ದೃಶ್ಯವನ್ನು ನೋಡುವ ಮೊದಲು ಟ್ರೆಕ್ ಮಾಡಿಕೊಂಡು ಸಾಗಬೇಕು.

ಟ್ರೆಕ್ ನಲ್ಲಿ ನಾವು ಇಡುವ ಪ್ರತಿಯೊಂದು ಹೆಜ್ಜೆಯು ಮುಖ್ಯ. ಆಲೋಚಿಸಿ ಧೃಡ ಹೆಜ್ಜೆ ಇಡುವುದು ಅಗತ್ಯ. ಹಾಗೆಯೇ ಜೀವನದಲ್ಲಿ ಪ್ರತಿ ಹೆಜ್ಜೆಗೂ ಅದರದ್ದೇ ಪ್ರಾಮುಖ್ಯತೆ ಇದೆ. ನಿಶ್ಚಲ ಮನಸ್ಸಿನಿಂದ ನಿರ್ಧರಿಸಿ ಸಾಗುವುದು ಅವಶ್ಯಕ, ಜೊತೆಗೆ ಅಸ್ಥಿರ ಕಲ್ಲಿನ ಮೇಲೆ ಹೆಜ್ಜೆ ಇಡದೆ, ಕಲ್ಲನ್ನು ಪರೀಕ್ಷಿಸಿ ಮುಂದುವರೆಯುವುದು ಅನಿವಾರ್ಯ. ಹಾಗೇನಾದರೂ ತಪ್ಪು ಲೆಕ್ಕಾಚಾರದಿಂದ ಎಡವಿ ಬಿದ್ದರೂ ಛಲ ಬಿಡದೆ ಆ ಸಂಗತಿಯನ್ನು ಪಾಠವಾಗಿ ಅರಿತು ಸಾಗಬೇಕು. 

ಅದೋ ದೂರದಲ್ಲಿ ಕಾಣುತ್ತಿದೆ ಬೆಳ್ಳಿ ಗೆರೆ

ಬೀಳುಗಳ ಜೀವನದಲ್ಲಿ ಸಹಜ, ಅದು ಜೀವನದ ಅಂಗವೇ ಹೌದು, ಆದರೆ ಅದರಿಂದ ಧೈರ್ಯ ಗೆಡಬಾರದು. ಏಳು ಬೀಳು ಚಾರಣದಲ್ಲಿ ಹಾಗೂ ಜೀವನದಲ್ಲಿ ಇರುತ್ತದೆ. ಚಾರಣದಲ್ಲಿ ತಲುಪುದಾಣ ಎಷ್ಟು ಮುಖ್ಯವೋ ಜೀವನದಲ್ಲಿ ಗುರಿಯು ಅಷ್ಟೇ ಪ್ರಾಮುಖ್ಯ. ಎಷ್ಟೇ ಕಷ್ಟವೆನಿಸಿದರೂ ಪಯಣವನ್ನು ಅರ್ಧಕ್ಕೆ ನಿಲ್ಲಿಸಬಾರದು. ಅರ್ಧದಲ್ಲಿ ಕೈ ಚೆಲ್ಲಿ ಕೂತವ ಕಾಣುವುದು, ಕೆಳಗೆ ಕಲ್ಲಿನ ಮೇಲೆ ಹರಿದು ಬಂದ ಝರಿ ಅಷ್ಟೇ. ನಿಜವಾದ ಜಲಪಾತದ ಸ್ವಾದ ಅರಿಯ ಬೇಕೆನಿಸಿದವ ಕಷ್ಟ ಕೂಟಲೆಗಳನ್ನು ಮೆಟ್ಟಿ ಮುನ್ನುಗ್ಗ ಬೇಕು. ನಮ್ಮೊಡನೆ ಕುಶಲ ಮಾರ್ಗದರ್ಶಿ ಇರಬಹುದು, ಜೊತೆಗೆ ಅನುಭವವುಳ್ಳ ಮಿತ್ರರು ಇರಬಹುದು ಆದರೆ ಎಲ್ಲದಕ್ಕಿಂತ ಹೆಚ್ಚು ಮಹತ್ವದ್ದು ನಮ್ಮ ಮೇಲೆ ನಮಗೆ ಇರುವ ನಂಬಿಕೆ ಮತ್ತು ಆತ್ಮ ಸ್ಥೈರ್ಯ. ನಾನು ಚಾರಣವನ್ನು ಮುಗಿಸಿಯೇ ತೀರುತ್ತೇನೆ ಎಂಬ ಹಠ ಒಂದು ದೊಡ್ಡ ಪಾಠ.

ನಮ್ಮ ಖುಷಿಗೆ ಪಾರವೇ ಇಲ್ಲ

ಜಲಪಾತ ತಲುಪಲು ಹಾದಿಯನ್ನು ಲೆಕ್ಕಕ್ಕಿರಿಸದೇ  ಓಡುವುದು ಮೂರ್ಖತನ. ಪಯಣದುದ್ದಕ್ಕೂ ಅನೇಕ ಅಚ್ಚರಿಗೊಳಿಸುವ ವಿಷಯಗಳು ಇರುತ್ತವೆ, ಅದನ್ನು ಅನುಭವಿಸಿ ಮುನ್ನಡೆಯಬೇಕು. ಹಾಗೆಯೆ ಜೀವನದಲ್ಲಿ ಗುರಿ ತಲುಪುವುದು ನಮ್ಮ ಧ್ಯೇಯವಾಗಿದ್ದರೂ, ಅದರ ಜೊತೆಗೆ ಪ್ರತಿ ಹೆಜ್ಜೆ, ಪ್ರತಿ ಕ್ಷಣ, ಪ್ರತಿ ಸಂದರ್ಭವನ್ನು ಅನುಭವಿಸುವುದೇ ನಿಜವಾದ ಜೀವನ..

ಚಾರಣದ ಹಾದಿಯು ಕಲಿಸಿದ ಪಾಠ, ತಲುಪುದಾಣದಲ್ಲಿದ್ದ ಜಲಪಾತದ ನೋಟ, ನೇಸರದ್ದಿಂದೊಳಗಾದ ತನ್ಮಯತೆ, ಮನಸ್ಸಿಗಾದ ತೃಪ್ತಿಯನ್ನು ವಿವರಿಸಲು ಪದಗಳೇ ಸಾಲದು..

Related Articles

Leave a Reply

Your email address will not be published. Required fields are marked *

Back to top button