ನಡಿಗೆ ನಮ್ಮ ಖುಷಿಗೆಮ್ಯಾಜಿಕ್ ತಾಣಗಳುವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಎಂದಾದರೊಮ್ಮೆ ನೋಡಲೇಬೇಕಾದ ಸನ್ನಿಧಿ ಕುಂದಾಪುರ ಸಮೀಪದ ಕಲ್ಲು ಗಣಪತಿ ದೇಗುಲ: ನವ್ಯಶ್ರೀ ಶೆಟ್ಟಿ ಬರೆದ ನೆಮ್ಮದಿ ತಾಣದ ಪರಿಚಯ

ಉಡುಪಿಯಿಂದ ಪಯಣ ಬೆಳೆಸುವವರು ಬಾರ್ಕೂರು ಮಾರ್ಗವಾಗಿ ಬಂದರೆ ಪಡುಮುಂಡು ಗ್ರಾಮದಲ್ಲಿ ಸಿಗುವ, ಕುಂದಾಪುರ ಮಾರ್ಗವಾಗಿ ಬರೋರು ಮೊಗೆಬೆಟ್ಟು ಊರಿನ ತಲುಪಬಹುದಾದ ಕಲ್ಲು ಗಣಪತಿ ದೇಗುಲ ಸಮಾಧಾನ ಕೊಡುವ ಪ್ರಕೃತಿ ವಿಸ್ಮಯದ ತಾಣ. ಮುಗುಳುನಗೆ ಸಿನಿಮಾದ ಚಿತ್ರೀಕರಣ ಇಲ್ಲಿ ನಡೆದಿದೆ. ಈ ನೆಮ್ಮದಿಯ ಜಾಗವನ್ನು ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನವ್ಯಶ್ರೀ ಶೆಟ್ಟಿ ಪರಿಚಯಿಸಿದ್ದಾರೆ. 

ನಮ್ಮ ಹತ್ತಿರದಲ್ಲಿ ಕೆಲವೊಂದು ಪ್ರವಾಸಿ ಸ್ಥಳ ಇರುತ್ತದೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಯಾವಾಗಲಾದರೂ ಅಪರೂಪಕ್ಕೊಮ್ಮೆ ಹೋಗುತ್ತೇವೆ. ಆದರೆ  ಆ ಸ್ಥಳಕ್ಕೆ ಹೋದಾಗ ಮನಸ್ಸಿನಲ್ಲಿ ಏನೋ ಒಂದು ಪ್ರಶಾಂತತೆ. ಸಡನ್ ಆಗಿ ಯಾವುದೇ ಪ್ಲಾನ್ ಇಲ್ಲದೆ ಇಂತಹ ಸ್ಥಳಕ್ಕೆ ಹೋದರೆ ಆ ತಾಣ ಜೀವನದ ಒಂದಷ್ಟು ಖುಷಿ ಕ್ಷಣಗಳನ್ನು ಕಟ್ಟಿಕೊಡುತ್ತದೆ. ಯಾವಾಗಲೂ ಮನೆ, ಕಾಲೇಜ್, ಫ್ರೆಂಡ್ಸ್ ಎಂದು ಇರುತ್ತಿದ್ದ ನನಗೆ ನನ್ನ ಸುತ್ತಲೂರಿನ ಸೊಬಗನ್ನು ಪರಿಚಯಿಸಿದ್ದು ಕಲ್ಲು ಗಣಪತಿ ದೇವಸ್ಥಾನ.

 ಕಾಲೇಜ್ ರಜೆಯಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ರಜೆಯನ್ನು ಆರಾಮವಾಗಿ ಕಳೆದಿದ್ದೆವು. ಎಲ್ಲಿಗೂ ಹೋಗುವ ಯೋಚನೆ ಕೂಡಾ ಇರಲಿಲ್ಲ. ಆದರೆ ಮಧ್ಯಾಹ್ನ ಅಕ್ಕನ ಫ್ರೆಂಡ್ ಕರೆ ಮಾಡಿ, ನಿಮ್ಮ ಊರಿನ ಹತ್ತಿರದ ಕಲ್ಲು ಗಣಪತಿ ದೇವಸ್ಥಾನ ಹೋಗುವ  ಅಂದಿದ್ದರು. ಅವರು ಹೇಳಿದ್ದೇ ತಡ ಹೋಗುವ ಎಂದು ಒಕ್ಕೊರಲ ದ್ವನಿ ಮನೆಯಲ್ಲಿ ಮೊಳಗಿತು. ಮೇಘ, ಭಾಗ್ಯ, ಜೊತೆಗೆ ಪಕ್ಕದ ಮನೆಯ ಇಬ್ಬರ ಜೊತೆಗೆ ಕಲ್ಲು ಗಣಪತಿ ದೇವಸ್ಥಾನದತ್ತ ಪಯಣ.

ಕಲ್ಲು ಗಣಪತಿ.ದೇವಸ್ಥಾನ ನಮ್ಮ ಮನೆಯಿಂದ ಸುಮಾರು 10 ಕಿಮೀ ದೂರವಿರಬಹುದು. ಆದರೆ ಮೊದಲು ಒಮ್ಮೆ ಮಾತ್ರ ಹೋಗಿದ್ದೆ ಅಷ್ಟೇ. ಈ ದೇವಸ್ಥಾನ ಅಪ್ಪಟ ಹಳ್ಳಿ ಸೊಗಡಿರುವ ಊರಿನಲ್ಲಿದೆ. ಉಡುಪಿಯಿಂದ ಪಯಣ ಬೆಳೆಸುವವರು ಬಾರ್ಕೂರು ಮಾರ್ಗವಾಗಿ ಬಂದರೆ ಪಡುಮುಂಡು ಗ್ರಾಮದಲ್ಲಿ ಈ ದೇವಾಲಯವಿದೆ. ಕುಂದಾಪುರ ಮಾರ್ಗವಾಗಿ ಬರೋರು ಮೊಗೆಬೆಟ್ಟು ಊರಿನ ಮೂಲಕ ಈ ದೇವಾಲಯ ತಲುಪಬಹುದು.

ಅಕ್ಕ ಪಕ್ಕ ಗದ್ದೆಗಳು ಮಧ್ಯ ಕಿರಿದಾದ ರಸ್ತೆ.ದೇವಸ್ಥಾನಕ್ಕೆ ಹೋಗುವವರಿಗೆ ದೇವರ ದರ್ಶನ ಜೊತೆಗೆ ಪ್ರಕೃತಿ ತನ್ನಲ್ಲೇ ಬಚ್ಚಿಟ್ಟು ಕೊಂಡಿರುವ ಅಸಂಖ್ಯಾತ ಅದ್ಭುತಗಳ ದರ್ಶನವಾಗುತ್ತದೆ.

ಕಲ್ಲು ಗಣಪತಿ ದೇವಸ್ಥಾನ ಕೆಲವರಿಗೆ ಚಿರಪರಿಚಿತ ಹೆಸರು. ಈ ದೇವಾಲಯ ಬಂಡೆ ಕಲ್ಲಿನ ಮೇಲೆ ಸ್ಥಾಪಿತವಾಗಿದೆ. ಬಲಗಡೆ ಸೂರ್ಯ ಪುಷ್ಕರಣಿ ಕೆರೆ,ಎಡಗಡೆ ಚಂದ್ರ ಪುಷ್ಕರಣಿ ಕೂಡ ಇದೆ. ವರ್ಷದ ವಿಶೇಷ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ದೇವಸ್ಥಾನ ದ ಒಳಗಡೆ ಹೋಗುತ್ತಿದ್ದಂತೆ ಪ್ರಕೃತಿ ನಿರ್ಮಿತ ಬಂಡೆಗಳು ನಿಮ್ಮನ್ನು ಸ್ವಾಗತಿಸುತ್ತದೆ. ಮೂರು ಅಂತಸ್ತಿನ ಪ್ರಕೃತಿ ನಿರ್ಮಿತ ಕಲ್ಲು ಬಂಡೆಗಳ ನಡುವೆ ಇಲ್ಲಿ ಗಣಪತಿ ದೇವರಿದ್ದಾನೆ. ಗುಹಾಂತರ ದೇವಾಲಯ ಆಗಿರುವುದು ಇಲ್ಲಿನ ವೈಶಿಷ್ಟ್ಯ. ಹೊರಗಡೆಯಿಂದ ನೋಡಿದರೆ ಈ ದೇವಸ್ಥಾನದ ಕಲ್ಲು ಬಂಡೆಗಳ ಜೊತೆಗೆ ಪ್ರಕೃತಿಯ ನಡುವೆ ಹಸಿರು ಹೊದಿಕೆಯಿದ್ದಂತೆ ಕಾಣುತ್ತದೆ

ದೇವರ ದರ್ಶನ ಮಾಡಿ ಕೊಂಚ ದೂರ ಸಾಗಿದರೆ, ನಿಮ್ಮೆದುರು ಹಸಿರಿನ ಅದ್ಭುತ ಪ್ರಪಂಚವೇ ತೆರೆದುಕೊಳ್ಳುತ್ತದೆ. ಬಂಡೆಯ ಮೇಲೆ ಹತ್ತಿ ನೋಡಿದರೆ ಕಾಣಿಸುವ ಪಶ್ಚಿಮ ಘಟ್ಟಗಳು ಸಾಲು ನಿಮಗೆ ಬಹು ಹತ್ತಿರವಿದ್ದಂತೆ ಭಾಸವಾಗುತ್ತದೆ. ಜೊತೆಗೆ ಹಳ್ಳಿ ಪ್ರದೇಶ ಆಗಿರುವುದರಿಂದ ಸದಾ ಹಸಿರಾಗಿರುವ ಇಲ್ಲಿನ ಗದ್ದೆಗಳು ನಿಸರ್ಗ ಪ್ರಿಯರಿಗೆ ಖುಷಿ ನೀಡುತ್ತದೆ. ಮುಗುಳುನಗೆ ಸಿನಿಮಾದ ಹಾಡೊಂದು ಇಲ್ಲಿ ಚಿತ್ರೀಕರಣವಾಗಿದೆ.

ಆ ದಿನ ದಿಢೀರ್ ಪ್ಲಾನ್ ಆದರೂ ಕೂಡ, ಕಲ್ಲು ಗಣಪತಿ ದೇವಸ್ಥಾನಕ್ಕೆ ಹೋದದ್ದು ಖುಷಿ ಕೊಟ್ಟಿತ್ತು. ಹೊರ ಜಿಲ್ಲೆಯವರನ್ನು ಆಕರ್ಷಿಸುವ, ಪ್ರಕೃತಿಯ ಎಲ್ಲಾ ವೈಶಿಷ್ಟ್ಯವನ್ನು ಬಾಚಿದಂತೆ ಇರುವ ನಮ್ಮೂರಿನ ಸೌಂದರ್ಯವನ್ನು ಇಷ್ಟು ವರ್ಷದಲ್ಲಿ ಸರಿಯಾಗಿ  ನೋಡದೆ ಮಿಸ್ ಮಾಡಿಕೊಂಡೆ ಅನ್ನುವ ಪಶ್ಚಾತಾಪ ಜೊತೆಗೆ ಪ್ರವಾಸ ಮೊದಲು ನಮ್ಮೂರಿನ ವಿಶೇಷಗಳಿಂದ ಆರಂಭವಾಗಬೇಕು ಅನ್ನುವ ಬುದ್ಧಿ ಕೂಡಾ ಆ ದಿನ ಕಲಿಸಿ ಕೊಟ್ಟಿತ್ತು. ಅಲ್ಲಿನ ಪ್ರಶಾಂತತೆಯ ಮೌನ ಮನಸಿಗೆ ಶಾಂತತೆಯ ಭಾವನೆಗಳನ್ನು ಮೂಡಿಸಿತ್ತು.

ಪುಟಾಣಿ ಮಕ್ಕಳಿಂದ ಎಲ್ಲರಿಗೂ ಹಿಡಿಸುವ ಸ್ಥಳ. ಗಣಪತಿ ದೇವರ ಭಕ್ತರಿಗೆ, ನಿಸರ್ಗವನ್ನು ಇಷ್ಟ ಪಡುವವರಿಗೆ ಕಲ್ಲು ಗಣಪತಿ ದೇವಸ್ಥಾನ ಹೇಳಿ ಮಾಡಿಸಿದ ತಾಣ.

Related Articles

Leave a Reply

Your email address will not be published. Required fields are marked *

Back to top button