ಕಾಡಿನ ಕತೆಗಳುಬೆರಗಿನ ಪಯಣಿಗರುವಿಸ್ಮಯ ವಿಶ್ವಸ್ಫೂರ್ತಿ ಗಾಥೆ

ಕಾಡು ಕಥೆಗಳ ಜಾಡು ಹಿಡಿದು- 1: ಹಾರ್ನ್ ಬಿಲ್ ಹಕ್ಕಿಗಳ ಕಾಡಿನಲ್ಲಿ – ಶ್ರದ್ಧಾ ಕುಕ್ಕುಜೆ

“ನಮಸ್ತೆ! ಪ್ರಯಾಣ ಹೇಗಿತ್ತು? ಆರಾಮಿದಿರಾ? ತಗೊಳಿ, ಹರ್ಬಲ್ ಟೀ! ಇದು ನಮ್ಮ ಕಾಡುಮನೆ ಸ್ಪೆಷಲ್!” 

ಡೇವಿಡ್ ಅಣ್ಣನ ಹರ್ಬಲ್ ಟೀ!

ಹೀಗೆ ಲವಲವಿಕೆಯಿಂದ ಮಾತನಾಡಿಸುವ ಡೇವಿಡ್ ಅಣ್ಣ ಎರಡೇ ನಿಮಿಷದಲ್ಲಿ ಆಪ್ತರಾಗುತ್ತಾರೆ. ಪ್ರಯಾಣದ ಸುಸ್ತು ಏನೋ ಸ್ವಲ್ಪ ಇತ್ತು; ಹತ್ತು ಗಂಟೆ, ಬೆಂಗಳೂರಿನಿಂದ ಬಸ್ಸಲ್ಲಿ ಅರೆ ನಿದ್ದೆ ಮಾಡಿಕೊಂಡು ಬಂದಿದ್ದೆ. ಆದ್ರೆ, ಡೇವಿಡ್ ಅಣ್ಣ ಕೊಟ್ಟ ಹರ್ಬಲ್ ಟೀ ಯ  ತಾಜಾತನ, ಉತ್ಸಾಹದ ಕಣಗಳನೆಲ್ಲ ಒಂದೇ ಕ್ಷಣದಲ್ಲಿ ತಟ್ಟಿ ಎಬ್ಬಿಸಿತು. ಮಣಭಾರದ ಬ್ಯಾಗನ್ನು ಕೆಳಗಿಳಿಸಿ,

ಮೈಮುರಿದುಕೊಂಡೇ, ಸುತ್ತ ಕಣ್ಣುಹಾಯಿಸಿದೆ.

ಕಾಡು! ಕಾಡು! ಕಾಡು! ಕಾಡಿನ ಮೌನ ಹಾಗೂ ಹಾಡಿನ ಸಮ್ಮಿಲನದಲ್ಲಿ ತಾನೂ ಒಂದಾದ ಸುಂದರ ರಾಗ ಕಾಡುಮನೆ! ನರಸಿಂಹ ಭಟ್ಟರ ಕಾಡಿನ ಪ್ರೀತಿಯನ್ನ ಜೀಕುವ ತೊಟ್ಟಿಲು. ಪತ್ರಿಕೋದ್ಯಮ ವೃತ್ತಿಗೆ ವಿದಾಯ ಹೇಳಿ, ಕಾಡಿನ ಜೊತೆ ಒಡನಾಟ ಹೆಚ್ಚಿಸಿಕೊಳ್ಳುವ, ಇತರರಿಗೆ ಅದರ ಪ್ರೀತಿ ಹಚ್ಚುವ ಕಾರ್ಯಕ್ಕೆ ಕೈ ಹಾಕಿ ಸುಮಾರು ಹದಿನಾಲ್ಕು ವರ್ಷಗಳೇ ಕಳೆದಿವೆ. ಬಂದವರನ್ನೆಲ್ಲ ಕಾಡು ಸುತ್ತಿಸಿ, ಗಿಡ- ಮರ – ಹಕ್ಕಿಯ ಗೀಳು ಹಿಡಿಸಿ, ಮೈಗೂಡಿಸಿಕೊಂಡ ಜ್ಞಾನವನ್ನೆಲ್ಲ ಪ್ರೀತಿಯಿಂದ ಎರೆದು, ಮತ್ತೆ ಬನ್ನಿ ಅಂತ ಹೇಳಿ ಕಳುಹಿಸೋದರಲ್ಲೇ ಅವರಿಗೆ ಜೀವನ ಪ್ರೀತಿ.

ಕಾಡುಮನೆಯಲ್ಲಿಯ ನನ್ನ ಮನೆ!

ಅರ್ರೇ! ನಾನು ಇದೆಲ್ಲ ಎಲ್ಲಿ ಎತ್ತ ಅಂತ ಹೇಳೋದನ್ನೇ ಮರೆತೆ! ಕಾಡುಮನೆ… ಬೆಂಗಳೂರಿನವರಿಗೆ ಕೊಂಚ ದೂರವೇ ಎನಿಸುವ ಉತ್ತರ ಕನ್ನಡ ಜಿಲ್ಲೆಯ, ಜೊಯಿಡಾ ತಾಲೂಕಿನಲ್ಲಿದೆ. ಮೊದಲು ದಾಂಡೇಲಿ- ಅಂಶಿ ಹುಲಿ ಸಂರಕ್ಷಿತ ಪ್ರದೇಶ(dandeli anshi tiger reserve) ಎಂದು ಹೆಸರು ಪಡೆದಿದ್ದ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಡಲಲ್ಲಿ ಇರೋದು ಜೊಯಿಡಾ.(joida) ಕಾಳಿಯ ಸೆರಗಲ್ಲಿ ಬದುಕು ಕಂಡುಕೊಂಡಿರುವ ಅನೇಕ ಹೋಂಸ್ಟೇ ಗಳಲ್ಲಿ ಕಾಡುಮನೆಯೂ ಒಂದು. ಆದರೆ ಎಲ್ಲರಂತಲ್ಲ ನಮ್ಮ ಕಾಡುಮನೆ. ಇಡೀ ದೇಶದಲ್ಲೇ ಅತ್ಯಂತ ಜವಾಬ್ದಾರಿಯುತ ಪ್ರವಾಸೋದ್ಯಮ ನಡೆಸುತ್ತಿರುವ ಉನ್ನತವಾದ ಹೋಂಸ್ಟೇ ಗಳಲ್ಲಿ ಒಂದಾದ, ಹಾಗಂತ ಅನೇಕ ಪ್ರಶಸ್ತಿಗಳನ್ನು ಪಡೆದ ಕಾಡುಮನೆ, ಬರೀ ಹೋಂಸ್ಟೇ ಅಲ್ಲ, ಅದೊಂದು ಬೆರಗಿನ ಅನುಭವಗಳ ಆಗರ. 

ಹೆಜ್ಜೆಗಳ ಜಾಡು ಹಿಡಿದು..

ಸರಿ, ಈಗ ನನ್ ಕಥೆ ಹೇಳ್ತೀನಿ ಕೇಳಿ.

ಬೆಳಬೆಳಗ್ಗೆ ದಾಂಡೇಲಿಯಲ್ಲಿ ಬಸ್ಸಿಳಿದ ನನಿಗೆ ಕಾಡುಮನೆಗೆ ಹೋಗೋದಿಕ್ಕೆ ಲೋಕಲ್ ಬಸ್ಸುಗಳು ಸಿಗೋದಿಲ್ಲ ಅಂತ ಗೊತ್ತಿತ್ತು. ಮುನ್ನೂರು ರೂಪಾಯಿ ಕೊಟ್ಟು ರಿಕ್ಷಾ ಹತ್ತಿ ಹೋಗೋದೇ ಅಂತ ನಿದ್ದೆ ಕಣ್ಣುಗಳಲ್ಲಿ ರಿಕ್ಷಾ ಸ್ಟಾಂಡ್ ಕಡೆ ನಡೆಯುತ್ತಿದ್ದ ನನಗೆ ಶ್ರೀನಿವಾಸಣ್ಣನ ಕರೆ ಬಂತು, ತಲ್ಪಿದ್ರಾ.. ಏನು ಕಥೆ ಅಂತ. ಕಾಡುಮನೆಯ ಎಲ್ಲಾ ಬುಕಿಂಗ್ ನೊಡ್ಕೊಳ್ಳೋಡು ಅವ್ರೆ. ಪ್ರವಾಸಿಗರು ಏನೂ ತೊಂದರೆ ಇಲ್ಲದೆ ಕಾಡುಮನೆ ತಲುಪುವ ಹಾಗೆ ನೋಡಿಕೊಳ್ಳುವ ಕೆಲಸ ಅವರ ಅನೇಕ ಜವಾಬ್ದಾರಿಗಳಲ್ಲಿ ಒಂದು. ನಾನು ರಿಕ್ಷಾ ಹುಡುಕ್ತಾ ಇದೀನಿ ಅಂದಾಗ, “ಅಯ್ಯೋ, ನಾನಿಲ್ಲೆ ದಾಂಡೇಲಿಲಿ ಇದೀನಿ, ಕಾಡುಮನೆ ಕಡೆ ಹೊರಟೆ, ನನ್ ಜೊತೆಗೆ ಬನ್ನಿ” ಅಂದ್ರು. ಎಂಥಾ ಟೈಮಿಂಗ್ ನೋಡಿ..ರಿಕ್ಷಾ ಬಿಟ್ಟು ಬೈಕ್ ಹತ್ತಿದೆ. ಹಳ್ಳಿ – ಕಾಡಿನ ದಾರಿಯ ಸವಾರಿಯ ಜೊತೆಗೆ ಶ್ರೀನಿವಾಸಣ್ಣನ ಕತೆಗಳೂ ಫ್ರೀ!

ಕಾಡುಮನೆಯ ಕಾಡುದಾರಿ

ದಾಂಡೇಲಿ ಇಂದ ಸುಮಾರು 10-12 ಕಿ.ಮೀ ಕಾಡುಮನೆಗೆ. ಡಾಮರು ರಸ್ತೆಯಿಂದ ಬಲಕ್ಕೆ ಮಣ್ಣು ದಾರಿ, ಬರೀ ಕಾಡು. ಅಲ್ಲೆಲ್ಲೋ ಮಧ್ಯದಲ್ಲಿ ಹಂಚು ಕಂಡಿತು. ಕಾಲುದಾರಿ, ಬರಿ ಹಸಿರಿನದೇ ಸ್ವಾಗತ. ಅಲ್ಲಿ ಹರ್ಬಲ್ ಟೀ ಜೊತೆಗೆ ನಗು ಹಂಚಿದವರು ಡೇವಿಡ್ ಅಣ್ಣ.

ಉಳಿದುಕೊಳ್ಳೋದಿಕ್ಕೆ ಮಣ್ಣಿನ ಇಟ್ಟಿಗೆಗಳ ತಂಪು ಕೊಠಡಿ. ಸುತ್ತ ಬಿದಿರು. ಅದರತ್ತ, ಬೇರೇನೂ..ಕಾಡು! ಪಕ್ಕದಲ್ಲೇ ಹರ್ಬಲ್ ಸ್ನಾನದ ಮನೆ. ಮುಂದೆ ಹೋದ್ರೆ ಊಟದ ಮನೆ. ಅದಕ್ಕೆ ಅಂಟಿಕೊಂಡೇ ಮಣ್ಣಿನ ಹಳೇ ಮನೆ: ಕಾಡುಮನೆಯ ಮೊದಲ ಕೂಸು. ಚಂದದ ಜಗುಲಿ, ಮನೆ ಸುತ್ತ ಹೂವಿನ ಗಿಡಗಳು, ಮಧ್ಯೆ ಹಕ್ಕಿಗಳಿಗೆ ನೀರು – ಧಾನ್ಯ ಇಡಲು ಮಣ್ಣಿನ ಬೊಗಸೆಗಳು. ಟೆಂಟು, ರಾತ್ರಿ ಬಾನ್ಫೈರ್ ಹಾಕಲು ದೊಡ್ಡ ಅಂಗಳ. ಸದಾ ಕಾಡು ಹಕ್ಕಿಗಳ ಖಚೇರಿ. ಸೂಕ್ಷ್ಮವಾಗಿ ಕೇಳಿಸಿಕೊಂಡರೆ ಕ್ರಿಮಿ ಕೀಟಗಳು ಗುಂಯ್ಯಿ ಅಂತವೆ. ಇನ್ನೂ ಸೂಕ್ಷವಾಗಿ ಕಿವಿಯಾಲಿಸಿದರೆ, ಬಾರ್ಕಿಂಗ್ ಜಿಂಕೆಯ ಕೂಗು ಕೇಳಿಸಬಹುದು! ರುಚಿ – ರುಚಿಯಾಗಿ ಉತ್ತರಕನ್ನಡದ ಅಡುಗೆ ಮಾಡಿ ಕೊಡಲು ರವಿಯಣ್ಣ, ಲಕ್ಷ್ಮಿ ಅಕ್ಕ, ಕವಿತಕ್ಕ, ಡೇವಿಡ್ ಅಣ್ಣ ಮತ್ತು ಜೋಸೆಫ್! ಕಾಡು ಸುತ್ತಿ, ಅಲ್ಲಿಯ ಜನರ ಜೊತೆ ಇದ್ದು, ಅವರ, ಅವರ ಮೂಲಕ ಕಾಡಿನ ಕಥೆಗಳನ್ನ ಕೇಳಿ ಹೋಗೊದಿಕ್ಕೆ ಬಂದ ನನಿಗೆ, ಇನ್ನೇನು ಬೇಕು ಹೇಳಿ?

ಹೊಟ್ಟೆಗೆ ಪ್ರೀತಿ!

ಮಧ್ಯಾಹ್ನ ನರಸಿಂಹ ಸರ್ ಬಂದ್ರು. ನಾನಂತೂ ಅವ್ರನ್ನ ಭೇಟಿ ಆಗಿ, ನೂರೆಂಟು ಪ್ರಶ್ನೆಗಳನ್ನ ಕೇಳೋದಕ್ಕೆ, ಅವರ ಕಾಡಿನ ಅನುಭವಗಳನ್ನ ಆಲಿಸೋದಕ್ಕೆ ಬಹಳ ಉತ್ಸುಕಳಾಗಿದ್ದೆ. ಅಲ್ಲಿನ ಪರಿಸರದ ಬಗ್ಗೆ ಗಾಢವಾಗಿ ತಿಳಿದುಕೊಂಡಿದ್ದರು. ಅಲ್ಲಿಯ ಪ್ರತಿ ಜೀವಸಂಕುಲದ ಬಗ್ಗೆ ಅಪಾರ ಪ್ರೀತಿ – ಜ್ಞಾನ ಹೊಂದಿದ್ದರು. ಶಾಂತ ಮನುಷ್ಯ, ಆದ್ರೆ ಪ್ರತಿ ಮಾತಿನಲ್ಲೂ ಕಾಡಿನ ಬಗೆಗಿನ ಬೆರಗನ್ನು ಹೆಚ್ಚಿಸುತ್ತಿದ್ದರು.

ರಾತ್ರಿ ಊಟದ ಮಾಡಿ, ಹರಟೆ ಹೊಡೆಯುತ್ತಾ ಎಲ್ಲರೊಂದಿಗೆ ಕೇರಂ ಆಟ. ಲಕ್ಷ್ಮಿ ಅಕ್ಕ ಅಂತೂ ಚಾಂಪಿಯನ್. ಮಾತು – ನಗುವಿನ ಜೊತೆ ಕಾಡಿನ ರೋಚಕ ಕಥೆಗಳ ನಡುವೆ ಕಾಡುಮನೆ ಇನ್ನಷ್ಟು ಆಪ್ತವಾಗಿತ್ತು. 

ಹೆಜ್ಜೆಗಳ ಜಾಡು ಹಿಡಿದು..

ಮರುದಿನ ಬೆಳಗ್ಗೆ ಎಚ್ಚರವಾದಂತೆ ಹಕ್ಕಿಗಳದ್ದೇ ಸುಪ್ರಭಾತ. ಎದ್ದದ್ದೇ, ಮತ್ತೆ ಪಚ್ಚೆ ಕಾನನದೊಳಗೆ ಮುಳುಗುವ ಹುರುಪು. ಈಸೂರ್ಯೋದಯ ನೋಡಲು ಕಾಡೊಳಗೆ ಸಣ್ಣ ಚಾರಣ. ಡೇವಿಡ್ ಅಣ್ಣ, ಜೋಸೆಫ್ ಅದರ ರೂವಾರಿ. ಇಬ್ಬರೂ ಪಕ್ಷಿ ಪ್ರೇಮಿಗಳು. ಡೇವಿಡ್ ಅಣ್ಣನಿಗೆ ಪಕ್ಷಿಗಳ ಛಾಯಾಗ್ರಹಣದಲ್ಲಿ ಬಹಳ ಆಸಕ್ತಿ. ಜೋಸೆಫ್ ಚಿಕ್ಕವ, ಡೇವಿಡ್ ಅಣ್ಣನನ್ನು ನೋಡಿ ಕಲಿಯುತ್ತಿದ್ದ. ದೇಶದ ಒಂಭತ್ತು ಹಾರ್ನ್ – ಬಿಲ್ ಜಾತಿಯ ಹಕ್ಕಿಗಳ ಪೈಕಿ, ನಾಲ್ಕು ಬರೀ ಈ ಕಾಡು ಪ್ರದೇಶದಲ್ಲಿ ಕಾಣಸಿಗುತ್ತವೆ. ಅಲ್ಲದೆ, ಹೆಸರೇ ಹೇಳುವಂತೆ ಹುಲಿ – ಚಿರತೆಗಳಿಗೆ ಈ ಕಾಡು, ಮನೆ. ಕಾಡು ಪ್ರಾಣಿಗಳ ಹೆಜ್ಜೆಗುರುತುಗಳ ಜಾಡು ಹಿಡಿದು, ಕಾಣ ಸಿಕ್ಕ ಹಕ್ಕಿಗಳ ಪರಿಚಯ ಮಾಡಿಕೊಂಡು, ಬಂಡೆ ಕಲ್ಲಿನ ಹತ್ತಿರ ಬಂದದ್ದಾಯ್ತು. ಕಾಡಿನ ನೀರವತೆ ಮನಸ್ಸಿಗೆ ಅಘಾಧವಾದ ಖುಷಿಯ ಅನುಭವ ಕೊಟ್ಟಿತು. ಮುಖದ ಮೇಲೆ ಎಳೆಬಿಸಿಲು , ಮೆಲ್ಲನೆ ಬೀಸುವ ಗಾಳಿ, ಕಾಡು ಹಕ್ಕಿಗಳ ಸಮ್ಮೇಳನ.

ಹಕ್ಕಿಮನೆಯ ಅಂಗಳದಲ್ಲಿ

ಹೇಳಿದಾಗೆ, ಕಾಡುಮನೆಯಿಂದ ಐದು ನಿಮಿಷಗಳ ಕಾಲುನಡಿಗೆ ದೂರದಲ್ಲಿ ಇನ್ನೊಂದು ಮನೆ ಇದೆ. ಪಕ್ಕದಲ್ಲೇ ಅಡಿಕೆ ತೋಟ. ಅಲ್ಲಿ ಸುಮಾರು ಅರವತ್ತು ಮಂದಿ ಉಳಿದುಕೊಳ್ಳೋದಕ್ಕೆ ವ್ಯವಸ್ಥೆ ಇದೆ, ನರಸಿಂಹ ಭಟ್ಟರು ಅದಕ್ಕೆ ಹಕ್ಕಿಮನೆ ಅಂತ ಹೆಸರಿಟ್ಟಿದ್ದಾರೆ. 

ನನಿಗೆ ಕಾಡುಮನೆ ಮತ್ತು ಅದರ ಸುತ್ತ ಮುತ್ತಲಿನ ಪರಿಸರ ಬಿಟ್ಟು ಬೇರೆಲ್ಲೂ ಹೋಗುವ ಉದ್ದೇಶ ಇರಲಿಲ್ಲ. ಸುಮ್ಮನೆ ಮರಗಳನ್ನೇ ದಿಟ್ಟಿಸುತ್ತ, ಕಾಡಿನತ್ತ ನಡೆಯುತ್ತ ಅರ್ಧ ದಿನ ಕಳೆದೆ. ಲಂಗೂರ್ ಗಳ ಒಂದು ಸಂಸಾರವೇ ಒಂದು ಮರದಲ್ಲಿ ಬೀಡು ಬಿಟ್ಟಿದ್ದವು. ಸುಮ್ಮಗೆ ಮೇಲೆ ಕೆಳಗೆ ಬೆರಗಿನಿಂದ ಕಾಡು ನೋಡುತಿದ್ದ ನನ್ನನ್ನು ನೋಡಿ, ನರಸಿಂಹ ಸರ್ ನಗು ಬಂತೇನೋ, ” ಬಾ, ನಿಂಗೆ ಒಂದಷ್ಟು ಹಕ್ಕಿಗಳ ಪರಿಚಯ ಮಾಡಿಕೊಡುತ್ತೇನೆ” ಅಂತ, ದುರ್ಬೀನು ಹಿಡಿದು, ನಂಗೂ ಒಂದು ಕೈಗೆ ಕೊಟ್ಟು, ಕಾಡು ದಾರಿ ಹಿಡಿದರು. ಅಲ್ಲಿಯ ವನ್ಯ ಜೀವಿಗಳ ಬಗ್ಗೆ ಇನ್ನಷ್ಟು ವಿಸ್ಮಯಗಳನ್ನು ತೆರೆದಿಟ್ಟರು! ಬರ್ಡ್ ವಾಚಿಂಗ್ ನ ಅ..ಆ.. ಇ.. ಈ ಹೇಳಿಕೊಟ್ರು! ಅದೇ ಮೊದಲ ಬಾರಿ ಅನ್ಸುತ್ತೆ ನಾನು ಒಂದೇ ಗಂಟೆಯಲ್ಲಿ ಹದಿನೈದಕ್ಕೂ ಹೆಚ್ಚು ಜಾತಿಯ ಹಕ್ಕಿಗಳ ಕಂಡು ಪರಿಚಯ ಮಾಡಿಕೊಂಡದ್ದು. ಭಾರಿ ಅಪರೂಪದ ಚಿಟ್ಟೆಗಳನ್ನು ನೋಡಿದ್ವಿ. ಗ್ರೇ ಪೈಡ್ ಹಾರ್ನ್ಬಿಲ್ ಹಕ್ಕಿಗಳು ಅದರ ಗೂಡಲ್ಲಿ ಕಾಣಸಿಕ್ಕವು. ಮಲಬಾರ್ ಅಳಿಲು ಗೂಡು ಕಟ್ಟುವ ಪರಿ, ಹಾರ್ನ್ – ಬಿಲ್ ಹಕ್ಕಿಯ ಜೀವನ ಗಾಥೆ..ಹೀಗೆ ಕಾಡಿನ ವೈಶಿಷ್ಟ್ಯ ಗಳ ಬಗ್ಗೆ ನವಿರು ನವಿರಾಗಿ ಬಿಡಿಸುತ್ತಾ ಹೋಗುತ್ತಾರೆ ನರಸಿಂಹ ಭಟ್ಟರು. 

ಹಸಿರು, ಬರೀ ಹಸಿರು!

ಅಲ್ಲೇ, 3 ಕಿ. ಮೀ. ದೂರದಲ್ಲಿ ಕಾಳಿ ನದಿ ಅಣೆಕಟ್ಟು ಇದೆ. ಸೂರ್ಯಾಸ್ತ ನೋಡಲು ಅದೇ ಬೆಸ್ಟ್ ಜಾಗ! ಅಲ್ಲೊಂದು ಇಂಟರೆಸ್ಟಿಂಗ್ ಕಥೆ ಇದೆ. ಆ ಅಣೆಕಟ್ಟು ಇರುವ ನದಿಯ ಭಾಗದಲ್ಲಿ ಮೊದಲು ಸೂಪ ಅನ್ನೋ ಹಳ್ಳಿ ಇತ್ತಂತೆ. ಈಗ ಮುಳುಗಿ ಹೋಗಿದೆ. ಅಲ್ಲಿನ ಜನರು ರಾಮನಗರ ಅಂತ ಪಕ್ಕದ ಹಳ್ಳಿಗೆ ವಲಸೆ ಹೋಗಿದ್ದಾರೆ. ಆದರೆ ಸೂಪಾದ ನಿಖರ ಪರಿಚಯ ಇರುವ ಜನರು ಇಂದಿಗೂ ನದಿಯ ಮಧ್ಯದವರೆಗೂ, ಹಳೇ ಹಳ್ಳಿಯ ದಾರಿ ಮೇಲೆ ನಡೆಯಬಲ್ಲರಂತೆ. 

ಕಾಳಿಯ ಸೆರಗಲ್ಲಿ

ಇದೆಲ್ಲ ಒಂದು ಕಡೆ. ಕಾಡುಮನೆಯಿಂದ ಸುಮಾರು 9 ಕಿ.ಮೀ. ದೂರದಲ್ಲಿ ಹನಿ ಪಾರ್ಕ್ ಇದೆ. ಜೇನುನೊಣಗಳ ಬಗ್ಗೆ, ಪ್ರಕೃತಿಯ ಅಸ್ತಿತ್ವಕ್ಕೆ ಅದರ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ನರಸಿಂಹ ಭಟ್ಟರ ಒಂದು ಯಶಸ್ವೀ ಪ್ರಯತ್ನ.  ಜೇನು ಕೃಷಿಯ ಬಗ್ಗೆ, ಒಂದು ಗಂಟೆಯ ನಿರೂಪಣೆ ಕೊಡುತ್ತಾರೆ. ಜೇನನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಮಾತ್ರ ನೋಡಿದವರಿಗೆ, ಖಂಡಿತ ಇದೊಂದು ವಿಶೇಷ ಅನುಭವ. 

ಹನಿ ಪಾರ್ಕ್!

ಕಾಡುಮನೆ ತೊರೆದು, ಬೆಂಗಳೂರಿನ ನನ್ನ ಗೂಡಿಗೆ ಮರಳುವ ದಿನ. ರಾತ್ರಿಯೆಲ್ಲಾ ಪ್ರಯಾಣ ಮಾಡಿ ಬೆಳಗ್ಗೆ ಆಫೀಸಿಗೆ ಹೋಗಿ ಲ್ಯಾಪ್ಟಾಪ್ ಮುಂದೆ  ಕೂರುವ ವಾಸ್ತವತೆ ಒಂದೆಡೆ, ‘ ಎಲ್ಲಾ ಬಿಟ್ಟು ಇಲ್ಲೇ ಕಾಡು ಸುತ್ತಿಕೊಂಡು ಇದ್ದು ಬಿಡೆ’ ಅನ್ನೋ ಮನಸಿನ ಹುಚ್ಚು ಗೋಳು ಇನ್ನೊಂದೆಡೆ! ಮುಂದಿನ ವರ್ಷ ಖಂಡಿತ ವಾಪಸ್ ಬರುತ್ತೇನೆ ಎಂದು ಹೊರಟವಳಿಗೆ ಕೊರೋನದ ಧಿಡೀರ್ ಪ್ರವಾಸದ ಬಗ್ಗೆ ಅರಿವೆಲ್ಲಿತ್ತು ಹೇಳಿ!

ಬಂಡೆ ಮೇಲಿಂದ

ಹೊಸವರ್ಷ ಕೈಗೆಟಕುವಷ್ಟು ಹತ್ತಿರದಲ್ಲಿದೆ. ಕೊರೋನ ದಯೆ ತೋರೀತು ಎಂಬ ಆಶಾಭಾವನೆಯಲ್ಲಿ, ಇನ್ನಷ್ಟು ಕಾಡು ನೋಡುವ ಹಂಬಲದಲ್ಲಿ…

– ನಾನು ಮತ್ತು ಈ ವರ್ಷ ಹೋಗದೆ ಉಳಿದ ಪ್ರವಾಸಗಳ ಪಟ್ಟಿ!

Related Articles

One Comment

Leave a Reply

Your email address will not be published. Required fields are marked *

Back to top button