ಶಿವಮೊಗ್ಗದ ನಗರ ಕೋಟೆ ನನಗಿಷ್ಟ: ಸಿಂಧೂ ಪ್ರದೀಪ್ ಬರೆದ ಮಲೆನಾಡಿನ ಚಿತ್ರ
ಶಿವಮೊಗ್ಗ ಜಿಲ್ಲೆಯಿಂದ ಕುಂದಾಪುರ ರಸ್ತೆಯಲ್ಲಿ ಸುಮಾರು 84 ಕೀ ಮೀ ಸಾಗಿದರೆ ಈ ನಗರ ಕೋಟೆ ಸಿಗುತ್ತದೆ. ಹೊಸನಗರದಿಂದ 16 ಕೀ ಮೀ ದೂರದಲ್ಲಿ ಹೆದ್ದಾರಿಯ ಪಕ್ಕದಲ್ಲೇ ಸಿಗುವ ಈ ಜಾಗವನ್ನು ನೆನಪಿಸಿಕೊಂಡು 2020ಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಸಿಂಧೂ ಪ್ರದೀಪ್.
ಈ 2020ನೇ ವರ್ಷ ಎಲ್ಲರ ಜೀವನದಲ್ಲೂ ನಾನಾ ರೀತಿಯ ಬದಲಾವನಣೆಗಳನ್ನು ಉಂಟುಮಾಡಿದೆ. ಹೊರಗೆ ಓಡಾಡಲೂ ಭಯಪಡುತ್ತಿದ್ದ ದಿನಗಳು ಅದು. ತಿಂಗಳಿಗೆ ಒಮ್ಮೆ ಪ್ರವಾಸ ಮಾಡುತಿದ್ದ ನನಗೆ ಕಟ್ಟಿಹಾಕಿದ ಅನುಭವ.. ಲಾಕ್ ಡೌನ್ ಕಳೆದಮೇಲೆ ಪ್ರವಾಸ ಮಾಡಲು ನಾವು ಆಯ್ಕೆ ಮಾಡಿಕೊಂಡ ದಾರಿ ಎಂದರೆ ನಮ್ಮ ಸುತ್ತ ಮುತ್ತಲಿನ ಸ್ಥಳಗಳನ್ನು ಭೇಟಿ ನೀಡುವುದು, ಜನ ಸಂದಣಿ ಕಡಿಮೆ ಇರುವ ಸ್ಥಳಗಳ ಭೇಟಿ. ಹಾಗೆಯೇ ನಾವು ಎಲ್ಲೂ ಕೂಡ ಉಳಿಯುತಿರಲಿಲ್ಲ. ನಮ್ಮ ಪ್ರವಾಸವು ಒಂದು ದಿನಕ್ಕಷ್ಟೇ ಮೀಸಲಿರುತಿತ್ತು.
ಮಳೆಗಾಲದಲ್ಲಿ ಮಲೆನಾಡಿಗೆ ಭೇಟಿ ನೀಡುವುದೆಂದರೆ ಎಲ್ಲರಿಗೂ ಖುಷಿ ಹೀಗೆ ನನ್ನ ಹುಟ್ಟೂರು ಭದ್ರಾವತಿಗೆ ಸೆಪ್ಟೆಂಬರ್ ನಲ್ಲಿ ಭೇಟಿ ನೀಡಿದಾಗ ಮಳೆಯ ಆರ್ಭಟ ಸ್ವಲ್ಪ ಕಮ್ಮಿಯಾಗಿತ್ತು, ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿತ್ತು.. ಹೀಗೆ ಒಂದು ದಿನ ಎಲ್ಲಾದರೂ ಹೋಗಬೇಕೆಂದುಕೊಂಡು ನಗರ ಕೋಟೆಗೆ ಭೇಟಿ ನೀಡೋಣವೆಂದು ನಿರ್ಧರಿಸಿ ಹೊರಟೆವು..
ಶಿವಮೊಗ್ಗ ಜಿಲ್ಲೆಯಿಂದ ಕುಂದಾಪುರ ರಸ್ತೆಯಲ್ಲಿ ಸುಮಾರು 84 ಕೀ ಮೀ ಸಾಗಿದರೆ ಈ ನಗರ ಕೋಟೆ ಸಿಗುತ್ತದೆ.. ನಾನು ಚಿಕ್ಕವಳಾಗಿದ್ದಾಗ ವರ್ಷಕ್ಕೆ ಒಮ್ಮೆ ಕುಟುಂಬದವರೊಂದಿಗೆ ಕೊಲ್ಲೂರಿಗೆ ಭೇಟಿ ನೀಡುವುದು ರೂಢಿ. ಆಗ ದಾರಿಯಲ್ಲಿ ಸಾಗುವಾಗ ಎತ್ತರದಲ್ಲಿ ಕಾಣುವ ಈ ಕೋಟೆಯನ್ನು ನೋಡಿ ಆಕರ್ಷಿತಳಾಗಿದ್ದೆ. ಭೇಟಿನೀಡಬೇಕೆಂದು ತುಂಬಾ ಸಲ ಅನಿಸಿದ್ದು ಹೌದು.
ಬೆಳಗಿನ ಉಪಹಾರ ಮುಗಿಸಿ ಹೊರಟ ನಾವು ಹೊಸನಗರದಿಂದ 16 ಕೀ ಮೀ ಇರುವ ನಗರ ತಲುಪಿದಾಗ ಮಧ್ಯಾಹ್ನ 12 ಗಂಟೆ ಆಗಿತ್ತು, ಮಳೆ ಬರುವ ಮುನ್ಸೂಚನೆಯು ಇತ್ತು.. ಹೆದ್ದಾರಿಯ ಪಕ್ಕದಲ್ಲೇ ಸಿಗುವ ಈ ಕೋಟೆಯ ಬೃಹತ್ ಹೆಬ್ಬಾಗಿಲನ್ನು ಪ್ರವೇಶಿಸಿದಂತೆ ಹಸಿರಿನ ಹಾಸಿಗೆ ತೊಟ್ಟಂತೆ ಕೋಟೆಯ ಪಳಉಳಿಕೆಗಳು ಗೋಚರಿಸಿದವು, ಬೇರೆ ಯಾವ ಪ್ರವಾಸಿಗರು ಇರಲಿಲ್ಲ ಇದರಿಂದ ನಮಗೆ ನೆಮ್ಮದಿ ಹೆಚ್ಚಾಯಿತು.. ಮೇಲ್ನೋಟಕ್ಕೆ ಪಾಳು ಬಿದ್ದಂತಿರುವ ಈ ಕೋಟೆಯ ಇತಿಹಾಸ ಬಹಳ ರೋಚಕವಾದದ್ದು..
16ನೇ ಶತಮಾನದಲ್ಲಿ ಕೆಳದಿ ಸಂಸ್ಥಾನದ ರಾಜಧಾನಿಯಾಗಿದ್ದ ಇಕ್ಕೇರಿಯನ್ನು ಬಿಜಾಪುರದ ಸುಲ್ತಾನ ವಶಪಡಿಸಿಕೊಂಡಾಗ ಕೆಳದಿಯ ವೀರಭದ್ರ ನಾಯಕ ಈ ಕೋಟೆಯನ್ನು ನಿರ್ಮಿಸಿ ರಾಜಧಾನಿಯನ್ನಾಗಿ ಮಾಡಿದರು. ಆಗ ಈ ಊರು ಬಿದನೂರು ಎಂದೇ ಖ್ಯಾತಿ ಪಡೆದಿತ್ತು.. ವೀರಭದ್ರ ನಾಯಕರ ನಂತರ ಕೆಳದಿಯ ಶಿವಪ್ಪ ನಾಯಕ ಕೋಟೆಯನ್ನು ಅಭಿವೃದ್ದಿ ಪಡಿಸಿದರು.. ಘಟ್ಟದ ಕೆಳಗಿನಿಂದ ಬೇರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಿದನೂರು 16 ಹಾಗೂ 17 ನೇ ಶತಮಾನದ ಒಂದು ಬೃಹತ್ ವಾಣಿಜ್ಯ ನಗರವೂ ಆಗಿತ್ತು.. ರಾಜ ಶಿವಪ್ಪ ನಾಯಕ ಹಾಗೂ ರಾಣಿ ಕೆಳದಿ ಚೆನ್ನಮ್ಮ ಬಹಳಷ್ಟು ಶತ್ರುಗಳೊಂದಿಗೆ ಹೋರಾಟ ಮಾಡಿ ಈ ಕೋಟೆಯನ್ನು ಉಳಿಸಿಕೊಂಡಿದ್ದರು. ಆದರೆ 1763 ಅಲ್ಲಿ ಕೋಟೆ ಹೈದರ್ ಅಲಿಯ ವಶವಾಯಿತು.. ಯುದ್ಧದಲ್ಲಿ ಸೋಲುತ್ತಿದ್ದಾರೆಂದು ತಿಳಿದು ಕೆಳದಿಯ ಕೊನೆಯ ರಾಣಿ ಎಂದೇ ಕರೆಯಲ್ಪಡುವ ರಾಣಿ ವೀರಮ್ಮಾಜಿ ಕೋಟೆಗೆ ಬೆಂಕಿ ಹಚ್ಚಿ ಓಡಿ ಹೋದರೆಂದು ಇತಿಹಾಸ ಹೇಳುತ್ತದೆ.. ನಂತರ ಹೈದರ್ ಅಲಿ ಬಿದನೂರನ್ನು ಹೈದರ್ ನಗರ ಎಂದು ನಾಮಕರಣ ಮಾಡಿದನು.. ಅದೇ ಇಂದು ನಗರ ಎಂದು ಕರೆಯಲ್ಪಡುತ್ತಿದೆ.. ಮೈಸೂರು ಕದನದಲ್ಲಿ ಬಾರಿ ಹಾನಿಗೊಳಗಾದ ಈ ಕೋಟೆಯನ್ನು ಟಿಪ್ಪು ಸುಲ್ತಾನ್ ಸರಿಪಡಿಸಲು ಪ್ರಯತ್ನಿಸಿದರೂ ಅದು ಪೂರ್ಣವಾಗಿ ಸಾಧ್ಯವಾಗದೇ ಉಳಿದ ಪಾಳುಬಿದ್ದ ಸ್ಮಾರಕಗಳು ಇಂದಿಗೂ ಸಾಕ್ಷಿಯಾಗಿವೆ.. ಈಗಲೂ ಕಾಣ ಸಿಗುವ ನೀರಿನ ಕೊಳ, ದರ್ಬಾರ್ ಹಾಲ್, ಫಿರಂಗಿ, ಉಗ್ರಾಣಗಳು ನಮ್ಮ ನಾಡಿನ ಇತಿಹಾಸ ಎಷ್ಟು ಶ್ರೀಮಂತವಾದದು ಎಂದು ತೋರಿಸುತ್ತದೆ..
ಎಂಥಾ ರೋಚಕ ಇತಿಹಾಸ ಅಲ್ಲವೇ??.. ಬರೀ ದಾರಿಯ ಮಧ್ಯ ಸಿಗುವ ಒಂದು ಪಾಳುಬಿದ್ದ ಕೋಟೆಯ ಹಿಂದೆ ಇಷ್ಟು ದೊಡ್ಡ ಇತಿಹಾಸ ಇದೆ ಎಂದರೆ ಇದೆ ಥರದ ಬಹಳಷ್ಟು ಸ್ಥಳದ ಇತಿಹಾಸ ಊಹಿಸಲೂ ಅಸಾಧ್ಯ.. ಮಳೆಗಾಲದಲ್ಲಿ ಪೂರ್ಣವಾಗಿ ಹಸಿರಿನಿಂದ ಹೊದಿಕೆ ಉಟ್ಟಂತೆ ಕಂಡ ಈ ಕೋಟೆಯ ಎತ್ತರದ ತುದಿಯಲ್ಲಿ ನಿಂತರೆ ಸಂಪೂರ್ಣ ಪಶ್ಚಿಮ ಘಟ್ಟಗಳು ಗೋಚರಿಸುತ್ತದೆ, ದೂರದಲ್ಲಿ ಕೊಡಚಾದ್ರಿ ಬೆಟ್ಟವೂ ಕಾಣಿಸುತ್ತದೆ.
ಸುತ್ತಲೂ ಸುತ್ತಾಡಿ ಸ್ವಲ್ಪ ಸಮಯ ಕಳೆದ ನನಗೆ ಲಾಕ್ ಡೌನ್ ನಿಂದ ಬೇಸತ್ತು ಹೋಗಿದ್ದ ಮನಸ್ಸಿಗೆ ಹಿತ, ಕಣ್ಣಿಗೆ ಆಹ್ಲಾದಕರ ಅನುಭವ.. ನೀವು ಕೂಡ ಅಷ್ಟೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪ್ರವಾಸ ಮಾಡುವ ಅಗತ್ಯವಿಲ್ಲ ನಿಮ್ಮ ಸುತ್ತಮುತ್ತಲೂ ಇಂತಹದ್ದೇ ಬಹಳಷ್ಟು ಸ್ಥಳಗಳನ್ನು ಸಿಗುತ್ತವೆ ಅದನ್ನು ಭೇಟಿ ನೀಡಿ ಆ ಸ್ಥಳದ ಹಿಂದಿನ ಮಾಹಿತಿ ತಿಳಿದುಕೊಳ್ಳಿ, ಪ್ರವಾಸದ ಅನುಭವ ಅನುಭವಿಸಿ.. ಎಲ್ಲೇ ಪ್ರವಾಸ ಹೋದರೂ ಜವಾಬ್ದಾರಿಯುತವಾಗಿ ವರ್ತಿಸಿ.