ಇವರ ದಾರಿಯೇ ಡಿಫರೆಂಟುಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸ್ಫೂರ್ತಿ ಗಾಥೆ

ಆವತ್ತು ನಾನು ಜೀಮೂತವಾಹನನ ಹಾಗೆ ಸಾಯುತ್ತಿದ್ದೆ: ಜೋಗಿ

ನನ್ನ ಟ್ರೆಕ್ಕಿಂಗ್ ಹುಚ್ಚು ಶುರುವಾದದ್ದು ನಾನು ಎಂಟನೇ ತರಗತಿಯಲ್ಲಿದ್ದಾಗ. ಸಿಕ್ಕಸಿಕ್ಕ ಬೆಟ್ಟಗುಡ್ಡಗಳನ್ನು ಹತ್ತುವುದು. ಆ ಗುಡ್ಡಗಳ ಮೇಲೆ ರಾತ್ರಿಗಳನ್ನು ಕಳೆಯುವುದು, ಹತ್ತಾರು ಮೈಲಿ ನಡೆದುಕೊಂಡು ಹೋಗುವುದು, ಗೊತ್ತಿಲ್ಲದ ಕಾಡಿನಲ್ಲಿ ಮರೆಯಾಗುವುದು ಮುಂತಾದ ಚೇಷ್ಟೆಗಳನ್ನು ನಾನು ಮಾಡುತ್ತಿದ್ದೆ. ಎಷ್ಟೋ ಸಲ ಅಪ್ಪ ನಡುರಾತ್ರಿಯ ಹೊತ್ತಿಗೆ ತೆಂಗಿನ ಗರಿಗಳಿಂದ ಮಾಡಿದ ದೊಂದಿ ಹಿಡಿದುಕೊಂಡು ನನ್ನನ್ನು ಹುಡುಕುತ್ತಾ ಬಂದು, ನಮ್ಮನೆಯ ಎದುರಲ್ಲಿದ್ದ ಗುಡ್ಡದಲ್ಲಿ ಮಲಗಿದ್ದವನ್ನು ಎಬ್ಬಿಸಿ, ನಾಲ್ಕೇಟಿನ ಬಹುಮಾನ ನೀಡಿ ಎಳೆದುಕೊಂಡು ಬಂದು ಮನೆಯೊಳಗೆ ದಬ್ಬುತ್ತಿದ್ದರು.

ಈ ಚಾಳಿ ನಾನು ಉಪ್ಪಿನಂಗಡಿಗೆ ಬಂದ ನಂತರವೂ ಮುಂದುವರಿಯಿತು ಮತ್ತು ನನಗೊಬ್ಬ ಗೆಳೆಯನೂ ಸಿಕ್ಕಿದ. ಅವನೂ ನನ್ನ ತರಗತಿಯಲ್ಲೇ ಓದುತ್ತಿದ್ದ. ಅವನ ಹೆಸರು ಸುಬ್ರಾಯ. ಅವನಿಗೂ ಮನೆಯಲ್ಲಿರುವುದಕ್ಕೆ ಇಷ್ಟವಿರಲಿಲ್ಲ. ಆ ಕಾಲದಲ್ಲಿ ನಮ್ಮಿಬ್ಬರಿಗೂ ಇದ್ದ ಏಕೈಕ ಆಸ್ತಿಯೆಂದರೆ ಭಂಡ ಧೈರ್ಯ. ಅದರ ಜೊತೆಗೇ ಹುಟ್ಟಿದ್ದು ದೆವ್ವಗಳು ಇದ್ದಾವೋ ಇಲ್ಲವೋ ತಿಳಿದುಕೊಳ್ಳುವ ಹುಚ್ಚು.

ಚಿತ್ರ ಕೃಪೆ: ಗೀತಾ ವಸಂತ್ ಇಜಿಮಾನ್

ನಮ್ಮೂರಾದ ಉಪ್ಪಿನಂಗಡಿಯಿಂದ ಸುಮಾರು ಹನ್ನೆರಡು ಮೈಲಿ ದೂರದಲ್ಲಿ, ಬಂಟ್ವಾಳ- ಬೆಳ್ತಂಗಡಿ ರಸ್ತೆಯಲ್ಲಿ ಕಾರಿಂಜೇಶ್ವರ ದೇವಸ್ಥಾನ ಇತ್ತು. ಅದರ ಸುತ್ತಲೂ ದುರ್ಗಮವಾದ ಕಾಡು ಬೆಳೆದಿತ್ತು. ಕಾರಿಂಜೇಶ್ವರ ಕ್ಷೇತ್ರ ಮಂಗಗಳಿಗೆ ಬಹಳ ಪ್ರಸಿದ್ಧ. ಅಲ್ಲಿಗೆ ಯಾರೇ ಏನೇ ಒಯ್ದರು ಮಂಗಗಳು ಹೆದರಿಸಿ, ಬೆದರಿಸಿ ಕಿತ್ತುಕೊಳ್ಳುತ್ತಿದ್ದವು.

ಕಾರಿಂಜದ ಮಂಗಗಳನ್ನೂ ಯಾರೂ ಹೊಡೆಯುವಂತಿರಲಿಲ್ಲ. ಅವುಗಳಿಗೆ ಅಲ್ಲಿ ವಿಶೇಷ ಮಾನ್ಯತೆ. ಆ ಮಂಗಗಳ ನಾಯಕನನ್ನು ಕಾರಿಂಜ ದೊಡ್ಡ ಅಂತ ಕರೆಯುತ್ತಿದ್ದರು. ಭಕ್ತಾದಿಗಳು ಆ ಮಂಗಗಳ ಸಲುವಾಗಿಯೇ ವಾನರಾನ್ನ ಎಂಬ ಸೇವೆಯನ್ನೂ ಮಾಡಿಸಬಹುದಾಗಿತ್ತು. ದೇವರಿಗೆ ಮಾಡಿದ ನೈವೇದ್ಯದ ಅನ್ನವನ್ನು ಕೂಡ ಕೋತಿಗಳಿಗೇ ಕೊಡುವ ಪದ್ಧತಿ ಇತ್ತು.

ಚಿತ್ರ ಕೃಪೆ: ಗೀತಾ ವಸಂತ್ ಇಜಿಮಾನ್

ಆ ಕಾಲಕ್ಕೆ ಅಲ್ಲಿಗೆ ಪ್ರತಿದಿನ ಯಾರೂ ಹೋಗುತ್ತಿರಲಿಲ್ಲ. ಸುಮಾರು ಸಾವಿರ ಅಡಿ ಎತ್ತರದ ನಾನ್ನೂರು ಮೆಟ್ಟಿಲುಗಳ ಕಾರಿಂಜ ಬೆಟ್ಟದ ಬುಡದಲ್ಲೊಂದು ವಿಶಾಲವಾದ ಸರೋವರ ಇದೆ. ಅದನ್ನು ಗದಾತೀರ್ಥ ಅಂತಲೂ, ಗುಡ್ಡ ಹತ್ತುವಾಗ ನಡುವೆ ಸಿಗುವ ಪುಟ್ಟ ಕೊಳವನ್ನು ಉಂಗುಷ್ಠ ತೀರ್ಥ ಅಂತಲೂ ಕರೆಯುತ್ತಾರೆ. ಅದಕ್ಕೆಲ್ಲ ಒಂದೊಂದು ಕತೆಯೂ ಇದೆ. ನಾವು ಕೆಳಗಿರುವ ಗದಾತೀರ್ಥದಲ್ಲಿ ಎಷ್ಟು ಹೊತ್ತು ಬೇಕೋ ಅಷ್ಟು ಹೊತ್ತು ಈಜಾಡಿ, ನಂತರ ಗುಡ್ಡ ಹತ್ತುತ್ತಾ ಕಾಡಲ್ಲಿ ಸಿಕ್ಕ ಕೇಪಳ, ಪೇರಲೆಕಾಯಿ, ಅಬುಳಕ ಮುಂತಾದ ಹಣ್ಣುಗಳನ್ನು ತಿನ್ನುತ್ತಾ ನಾಲ್ಕೈದು ದಿನ ಅಲ್ಲೇ ಇರುತ್ತಿದ್ದೆವು. ಆ ಕಾಡು ನಮ್ಮ ಪಾಲಿಗೆ ದಂಡಕಾರಣ್ಯವೇ ಆಗಿತ್ತು.

ಒಂದು ಬೇಸಗೆಯಲ್ಲಿ ನಾನೂ ಸುಬ್ರಾಯನೂ ಅಲ್ಲಿಗೆ ಹೋಗಿದ್ದೆವು. ಹೋಗುವಾಗಲೇ ಒಂದು ಅಲ್ಯುಮಿನಿಯಂ ಪಾತ್ರೆ, ಒಂದು ಕಿಲೋ ಅಕ್ಕಿ, ಅಲ್ಲೇನಾದರೂ ಮೀನು ಸಿಕ್ಕರೆ ಬೇಯಿಸಿ ತಿನ್ನುವುದಕ್ಕೆ ಅಂತ ಮೆಣಸಿನಪುಡಿ, ಉಪ್ಪು, ಹುಣಸೇಹಣ್ಣು ಕಟ್ಟಿಕೊಂಡು ನಡೆದುಕೊಂಡೇ ಹೊರಟು ಬೆಟ್ಟ ಸೇರಿದೆವು. ಆವತ್ತು ಕಾರಿಂಜ ಬೆಟ್ಟ ಹತ್ತಿ, ಅಲ್ಲಿಂದ ಸುತ್ತಲಿನ ಜಗತ್ತನ್ನು ನೋಡುತ್ತಾ ಸಂತೋಷಪಟ್ಟು ಮಂಗಗಳನ್ನು ಕಿಚಾಯಿಸಿ, ಮಧ್ಯಾಹ್ನ ಅಲ್ಲಿಯ ಪುರೋಹಿತರು ಕೊಟ್ಟ ಅನ್ನವನ್ನೇ ಅವರ ಜೊತೆ ಕುಳಿತು ತಿಂದೆವು.

ಕಾರಿಂಜದ ಕೊಳ

ಕಾರಿಂಜ ಬೆಟ್ಟದ ಬುಡದಲ್ಲಿ ಸಣ್ಣಪುಟ್ಟ ಆರೆಂಟು ಎತ್ತರದ ಬಂಡೆಕಲ್ಲುಗಳಿದ್ದವು. ನಾವು ಗುಡ್ಡ ಹತ್ತುವಾಗೆಲ್ಲ ಅವು ನಮ್ಮನ್ನು ಅಣಕಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅವುಗಳ ಮೇಲೆ ಹತ್ತಬೇಕು ಅಂತ ನಾವು ಬಹಳ ದಿನಗಳಿಂದ ಯೋಚಿಸುತ್ತಿದ್ದೆವು. ಆವತ್ತು ಗುಡ್ಡದ ಮೇಲಿನಿಂದ ಅವುಗಳನ್ನು ನೋಡುತ್ತಿದ್ದ ಸುಬ್ರಾಯ ಇವತ್ತು ಈ ಬಂಡೆಕಲ್ಲುಗಳನ್ನು ಹತ್ತಿಯೇಬಿಡೋಣ ಅಂದ.

ಅದು ಡಿಸೆಂಬರ್ ತಿಂಗಳು. ಬೆಳ್ಳನೆಯ ಮೋಡಗಳಿರುವ ಆಕಾಶ. ಪ್ರಖರವಾದ ಹಗಲು.  ಗುಡ್ಡದ ತುದಿಯಿಂದ ಸುತ್ತಲಿನ ದಟ್ಟವಾದ ಕಾಡು ಸೊಗಸಾಗಿ ಕಾಣಿಸುತ್ತಿತ್ತು. ಹೂಬಿಟ್ಟ ಮರಗಳು, ಚಿಗುರುತ್ತಿರುವ ಮರಗಳು, ಎಲೆ ಉದುರಿಸಿದ ಮರಗಳೆಲ್ಲ ಸೇರಿಕೊಂಡು ಕಾಡಿನ ನೆತ್ತಿ ವರ್ಣರಂಜಿತವಾಗಿತ್ತು. ಆ ಬೆಟ್ಟದ ತುದಿಯಲ್ಲಿ ಗಾಳಿ ಬೀಸಿದಾಗ ಸಣ್ಣಗೆ ಮೈನಡುಗುತ್ತಿತ್ತು. ಅಂಥ ಹಿತವಾದ ವಾತಾವರಣ ನೋಡಿ ಖುಷಿಯಾಗಿ ನಾನು ಸುಬ್ರಾಯನ ಮಾತಿಗೆ ಒಪ್ಪಿಕೊಂಡೆ.

ಆವತ್ತು ಚೆನ್ನಾಗಿ ನಿದ್ದೆ ಮಾಡಿ, ಮಾರನೆಯ ಬೆಳಗ್ಗೆ ನಮ್ಮ ಸಾಹಸ ಆರಂಭಿಸಲು ನಿರ್ಧರಿಸಿದೆವು. ಸಂಜೆ ನಾವಿಬ್ಬರೂ ಗದಾತೀರ್ಥದಲ್ಲಿ ಈಜುತ್ತಾ ನಮ್ಮ ಸ್ನಾನದ ಟವೆಲ್ಲಿನಲ್ಲಿ ಮೀನು ಹಿಡಿಯಲು ಯತ್ನಿಸಿದೆವು. ಅದೇನೂ ಸುಲಭದ ಕೆಲಸ ಆಗಿರಲಿಲ್ಲ. ಕೊಳದ ಆಳದಲ್ಲಿ ಟವಲನ್ನು ಬಿಡಿಸಿ ಹಿಡಿದು, ಅದರೊಳಗೆ ಮೀನು ಬರುತ್ತಿದ್ದಂತೆ ಅದನ್ನು ಟಪ್ಪನೆ ಮುದುರಿ ಮೇಲೆತ್ತಬೇಕಿತ್ತು. ಸುಮಾರು ಹೊತ್ತು ಕಷ್ಟಪಟ್ಟ ನಂತರ ಆರೇಳು ಪುಟ್ಟ ಮೀನುಗಳೂ ಒಂದೆರಡು ದೊಡ್ಡ ಮೀನುಗಳೂ ಸಿಕ್ಕವು. ಅವನ್ನೆಲ್ಲ ಬಂಡೆಕಲ್ಲಿಗೆ ಉಜ್ಜಿ ಸ್ವಚ್ಛ ಮಾಡಿ ಸುಟ್ಟು ಗಂಜಿಯ ಜೊತೆ ತಿಂದೆವು.

ಬೆಳಗ್ಗೆ ಏಳು ಗಂಟೆಗೆ ಮತ್ತೆ ಗುಡ್ಡದ ತುದಿಗೆ ಹೋಗಿ ಅಲ್ಲಿಂದ ಒಂದೊಂದೇ ಬಂಡೆಕಲ್ಲುಗಳಿಗೆ ಇಳಿಯುತ್ತಾ ಹೋಗುವುದೆಂದು ತೀರ್ಮಾನಿಸಿದೆವು. ಯಾಕೆಂದರೆ ಅವುಗಳನ್ನು ಕೆಳಗಿನಿಂದ ಏರಲು ಬೇಕಾದ ಹತಾರುಗಳು ನಮ್ಮಲ್ಲಿರಲಿಲ್ಲ.  ತುಂಬ ಕಡಿದಾಗಿದ್ದ ಆ ಬಂಡೆ ಕಲ್ಲುಗಳನ್ನು ಬರಿಗೈಯಲ್ಲಿ ಏರುವುದು ಸಾಧ್ಯವೇ ಇರಲಿಲ್ಲ.

ನಾವು ಗುಡ್ಡದ ಮೇಲಿಂದ ಇಳಿಯುತ್ತಾ, ಒಂದು ಬಂಡೆಕಲ್ಲಿನಿಂದ ಇನ್ನೊಂದಕ್ಕೆ ನಿಧಾನವಾಗಿ ಜಾರಿಕೊಂಡು ಇಳಿಯುತ್ತಾ ಹೋದೆವು. ಆ ಗುಡ್ಡ ಹತ್ತಿ ನೋಡಿದರೆ ಒಂದು ಬಂಡೆಕಲ್ಲಿಗೆ ತಾಗಿಯೂ ತಾಗದಂತೆ ಹತ್ತಾರು ಬಂಡೆಕಲ್ಲುಗಳಿರುವುದು ಕಾಣಿಸುತ್ತದೆ. ಕೆಲವು ಬಂಡೆಕಲ್ಲುಗಳ ನಡುವೆ ದಾಟಲಿಕ್ಕೆ ಆಗದಷ್ಟು ಅಂತರವಿರುತ್ತದೆ. ನಡುವೆ ಹತ್ತಾರು ಅಡಿ ಆಳದ ಕಣಿವೆಯಿರುತ್ತದೆ. ಅಂಥ ಹೊತ್ತಲ್ಲಿ ಬೇರೊಂದು ಕಲ್ಲಿಗೆ ಇಳಿದು, ಅದನ್ನು ಬಳಸಿಕೊಂಡು ನಾವು ಹೋಗಬೇಕಾದ ಬಂಡೆಗೆ ಬರಬೇಕಾಗುತ್ತಿತ್ತು.

ಹೀಗೆ ಇಳಿದು ಕೊನೆಯ ಬಂಡೆಗೆ ಬರುವ ಹೊತ್ತಿಗೆ ಸುಮಾರು ಹತ್ತು ಗಂಟೆ ಆಗಿರಬೇಕು. ತಣ್ಣನೆಯ ಗಾಳಿಯಿತ್ತು. ಇಬ್ಬರೂ ಬಂಡೆಯ ಮೇಲೆ ಶವಾಸನದಲ್ಲಿ ಮಲಗಿದೆವು. ಕೊನೆಗೂ ಎಲ್ಲಾ ಬಂಡೆಗಳ ತುದಿಯನ್ನೂ ಸ್ಪರ್ಶಿಸಿದ ಹೆಮ್ಮೆ ನಮ್ಮದಾಗಿತ್ತು. ಅಲ್ಲೇ ಒಂದರ್ಧ ಗಂಟೆ ವಿಶ್ರಾಂತಿ ಪಡೆದುಕೊಂಡು ವಾಪಸ್ಸು ಹೋಗಲು ಶುರುಮಾಡಿದೆವು.

ಚಿತ್ರ ಕೃಪೆ: ಶೈನ್ ರಘು

ಆಗಲೇ ನಾವೆಂಥ ದಡ್ಡ ಕೆಲಸ ಮಾಡಿದ್ದೇವೆ ಅನ್ನುವುದು ಗೊತ್ತಾದದ್ದು. ಹಿಂತಿರುಗಿ ನೋಡಿದರೆ ನಾವು ಕುಳಿತುಕೊಂಡು, ಜಾರುತ್ತಾ, ಜಿಗಿದು ಇಳಿದ ಬಂಡೆಕಲ್ಲುಗಳು ನಮ್ಮ ಊಹೆಗೂ ನಿಲುಕದಷ್ಟು ಕಡಿದಾಗಿದ್ದೆವು. ಅಲ್ಲಿಂದ ಹೇಗೋ ಕೈ ಮೈ ತರಚಿಕೊಂಡು ಕೆಳಗೆ ಇಳಿದಿದ್ದೆವಾದರೂ ಮರಳಿ ಆ ದಾರಿಯಲ್ಲಿ ಹತ್ತಲು ಸಾಧ್ಯವೇ ಇರಲಿಲ್ಲ.

ನಾವು ನಿಂತಿದ್ದ ಬಂಡೆಕಲ್ಲಿನ ಅಂಚಿಗೆ ಬಂದು ನೋಡಿದೆವು. ಅದು ಕಡಿದಾಗಿತ್ತು ಮತ್ತು ಸುಮಾರು ಹದಿನೈದು ಅಡಿಯಷ್ಟು ಆಳವಿತ್ತು. ಕೆಳಗೆ ಕುರುಚಲು ಗಿಡಗಳು ಬೆಳೆದಿದ್ದವು. ಅವುಗಳ ಬುಡದಲ್ಲಿ ಏನಿದೆ ಅಂತಲೇ ಗೊತ್ತಿರಲಿಲ್ಲ.  ನಾವು ಸಿಕ್ಕಿಬಿದ್ದಿದ್ದೆವು.

(ಮುಂದಿನ ಭಾಗದಲ್ಲಿ: ದಿ ಗ್ರೇಟ್ ಎಸ್ಕೇಪ್)

ಜೋಗಿಯವರ ಪುಸ್ತಕಗಳನ್ನು ಓದಲು ಈ ಕೆಳಗೆ ಕೊಟ್ಟಿರುವ ಲಿಂಕಿಗೆ ಭೇಟಿ ಕೋಡಿ. ನೀವು ಪುಸ್ತಕ ಖರೀದಿಸುವಾಗ KT20 ಎಂಬ ಕೋಡ್ ನಮೂದಿಸಿದರೆ ನಿಮಗೆ ಶೇ.20 ರಿಯಾಯಿತಿ ಸಿಗುತ್ತದೆ.
ಲಿಂಕ್- https://bit.ly/3o7vIuX 

Related Articles

Leave a Reply

Your email address will not be published. Required fields are marked *

Back to top button