ಏಕಾಂಗಿ ಸಂಚಾರಿಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆಸ್ಫೂರ್ತಿ ಗಾಥೆ

ಹಂಪಿಯಲ್ಲಿ ಒಬ್ಬಳೇ ಕಳೆದ ಮೂರು ದಿನ: ಪ್ರಜ್ಞಾ ಹೆಬ್ಬಾರ್ ಬರೆದ ಸೋಲೋ ಟ್ರಿಪ್ ಕಥನ

ಮೊದಲ ಬಾರಿಗೆ ಒಬ್ಬಳೇ ಊರು ಸುತ್ತಲು ಹೋದ ಕುತೂಹಲಕರ ಕತೆಯನ್ನು ಜ್ಯೋತಿನಿವಾಸ್ ಕಾಲೇಜಿನ ಇಂಗ್ಲಿಷ್ ಎಂಎ ವಿದ್ಯಾರ್ಥಿನಿ ಪ್ರಜ್ಞಾ ಹೆಬ್ಬಾರ್ ಬರೆದಿದ್ದಾರೆ. ಇವರು ಮೂಲತಃ ಪುತ್ತೂರಿನವರು. ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಉದಯೋನ್ಮುಖ ಬರಹಗಾರ್ತಿ ಎಂದೇ ಗುರುತಿಸಿಕೊಂಡಿದ್ದಾರೆ.

ಯಾವುದಾದರೂ ಪ್ರವಾಸಿ ತಾಣಕ್ಕೆ ಸೋಲೋ ಪ್ರವಾಸ ಕೈಗೊಳ್ಳಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಅದಕ್ಕಾಗಿ ನಾನು ಆರಿಸಿದ ಸ್ಥಳ ವಿಶ್ವಪಾರಂಪರಿಕ ತಾಣ ಹಂಪಿ.

ಅಂದು ತಾರೀಖು 26-12-2020. ಹಂಪಿಗೆ ಹೋಗೋಣ ಎಂದನ್ನಿಸಲು ಶುರುವಾಯಿತು. ರಾತ್ರಿ 8.15ರರ ಟ್ರೈನ್ ಗೆ ಟಿಕೆಟ್ ಬುಕ್ ಮಾಡಿದೆ. ಹಂಪಿಗೆ ಹತ್ತಿರವಿರುವ ರೈಲ್ವೇ ನಿಲ್ದಾಣ ಹೊಸಪೇಟೆ. ಮುಂಜಾನೆ 8.30 ಸುಮಾರಿಗೆ ಅಲ್ಲಿಗೆ ತಲುಪಿದೆ.

ಹೊಸಪೇಟೆಯಿಂದ ಕಮಲಾಪುರದಲ್ಲಿದ್ದ ಹೋಟೇಲ್ ಗೆ ಬಸ್ಸಲ್ಲಿ ಬಂದೆ. ಹೋಟೇಲ್ ಮಯೂರದಲ್ಲಿ ಡಾರ್ಮಿಟರಿ ಕಾಯ್ದಿರಿಸಿದ್ದೆ. ಒಂದಷ್ಟು ಫ್ರೀಲಾನ್ಸಿ ಕೆಲಸ ಮುಗಿಸಿ ಹಂಪಿ ಸ್ಥಳ ವೀಕ್ಷಣೆಗೆ ಸನ್ನದ್ಧಳಾದೆ. ಪ್ರಾರಂಭದಲ್ಲಿ ನಡೆದುಕೊಂಡೇ ಹೋದೆ.

ಚಂದ್ರಶೇಖರ ದೇವಾಲಯ, ಸರಸ್ವತೀ ದೇವಾಲಯ, ಅಷ್ಟಭುಜ ಸ್ನಾನದ ಗೃಹ ಮುಗಿಸಿ ರಾಣಿ ಸ್ನಾನ ಗೃಹಕ್ಕೆ ಬಂದಾಗ ಗೈಡ್ ಒಬ್ಬರು ಸಿಕ್ಕಿದರು, ನಾನು ಮರದ ನೆರಳಿನಲ್ಲಿ ಕುಳಿತು ವಸುಧೇಂದ್ರರ ತೇಜೋ ತುಂಗಭದ್ರಾ ಓದುತ್ತಿದ್ದೆ. ಅದನ್ನು ಗಮನಿಸಿದ ಗೈಡ್, ನಾನು ಅವರ ಅಭಿಮಾನಿ ಎಂದು ಮಾತಿಗಿಳಿದರು.

ಗೈಡ್ ಕೃಷ್ಣದೇವರಾಯನ ಸಾಹಸಗಾಥೆಗಳನ್ನು  ಹೇಳುತ್ತಿದ್ದಾಗ,  ಎಸ್ ಪಿಬಿ ಹಾಡಿದ, ವಿಷ್ಣು ನಟನೆಯ ಗಂಡರ ಗಂಡ ವೀರ ಪ್ರಚಂಡ, ಕೃಷ್ಣ ದೇವರಾಯ ಆಳಿದ ವೈಭವ ಕರ್ನಾಟಕದ ಇತಿಹಾಸದಲಿ. . . . ಹಾಡು ನೆನಪಾಯಿತು.

ಮಹಾನವಮಿ ದಿಬ್ಬ

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದಸರಾ ಉತ್ಸವ ನಡೆಯುತ್ತಿದ್ದ ತಾಣ. ಇದು ಹಂಪಿಯ ಪಾರ್ಲಿಮೆಂಟ್ ಕೂಡ ಹೌದು. ಮಂತ್ರಿಗಳು ಹಾಗೂ ಸೈನ್ಯಾಧಿಕಾರಿಗಳೊಂದಿಗೆ ಹಲವು ಪ್ರಮುಖ ವಿಚಾರಗಳ ಚರ್ಚೆಯನ್ನು ಅರಸರು ನಡೆಸುತ್ತಿದ್ದರು. ಹಾಗೆಯೇ ನೀರಿನ ಕಾಲುವೆ ಇಲ್ಲಿನ ವಿಶೇಷ ರಚನೆಗಳಲ್ಲಿ ಒಂದು. ಗುರುತ್ವಾಕರ್ಷಣ ಶಕ್ತಿಯನ್ನು ಆಧರಿಸಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿತ್ತು.

ಹಜಾರ ರಾಮಚಂದ್ರ ದೇವಾಲಯ

15ನೇ ಶತಮಾನದ ಪೂರ್ವದಲ್ಲಿ ಎರಡನೇ ದೇವರಾಯ ಈ ದೇವಾಲಯ ಕಟ್ಟಿಸಿದ. ಈ ದೇಗುಲವನ್ನು ಶ್ರೀ ರಾಮಚಂದ್ರ ಪ್ರಭುವಿಗೆ ಸಮರ್ಪಿಸಲಾಗಿದೆ. ದೇವಾಲಯದ ಸುತ್ತಲೂ ರಾಮಾಯಣದ ಕತೆಯನ್ನು ಕೆತ್ತಲಾಗಿದೆ.

ರಾಣಿ ಅರಮನೆಯ ಅಧಿಷ್ಠಾನ- ಕಮಲ್ ಮಹಲ್

ಇದು ಮಹಿಳೆಯರಿಗೆಂದೇ ಮೀಸಲಿಟ್ಟಿದ್ದ ಸ್ಥಳ. ಕಮಲ್ ಮಹಲ್ ನಲ್ಲಿ ಕೃಷ್ಣ ದೇವರಾಯನ ರಾಣಿ ವಿರಮಿಸುತ್ತಿದ್ದಳು. ಹಂಪಿಯ ಬಹುಚಂದದ ಕಟ್ಟಡಗಳಲ್ಲಿ ಇದೂ ಒಂದು. ಇಂಡೋ-ಇಸ್ಲಾಂ ಶೈಲಿಯಲ್ಲಿ ಇದನನು ಕಟ್ಟಲಾಗಿದೆ.

ಆನೆ ಶಾಲೆ

ರಾಜನ ಆನೆಗಳು, ಸೈನ್ಯದ ಪ್ರಮುಖ ಆನೆಗಳನ್ನು ಇಲ್ಲಿ ಕಟ್ಟಲಾಗುತ್ತಿತ್ತು.

ಯೋಗ ನರಸಿಂಹ- ಬಡವಿ ಲಿಂಗ

ಈಗ ಇರುವ ಯೋಗ ನರಸಿಂಹನ ಮೂರ್ತಿ ಪುರಾತತ್ವ ಇಲಾಖೆಯವರು ನವೀಕರಣ ಮಾಡಿದ್ದಾರೆ. ಮೊದಲು ಮೂರ್ತಿಯಲ್ಲಿ ತುಟಿಗಳಿರಲಿಲ್ಲ, ನರಸಿಂಹನಿಗೆ ಕಾಲುಗಳಿರಲಿಲ್ಲ, ಕೂತಿರಬೇಕಾದ ಲಕ್ಷ್ಮೀ ನೆಲದ ಮೇಲೆ ಬಿದ್ದಿದ್ದಳು. ನರಸಿಂಹನ ಮೂರ್ತಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರು. ಉತ್ಖನನದ ಸಂದರ್ಭದಲ್ಲಿ ಪುರಾತತ್ವ ಇಲಾಖೆಯವರು ತುಂಡುಗಳನ್ನು ಜೋಡಿಸಿದರು. ಮೊಣಕಾಲಿನ ಪಟ್ಟಿ ಇದ್ದ ಯೋಗಾಸನ ಭಮಗಿಯಲ್ಲಿ ಇದ್ದದ್ದರಿಂದ ನರಸಿಂಹ ಯೋಗ ನರಸಿಂಹನಾದ

ಬಡವಿ ಲಿಂಗ

3 ಮೀಟರ್ ಉದ್ದದ ಸಂಪೂರ್ಣ ಶಿವ ಲಿಂಗವನ್ನು ಬಡ ಮಹಿಳೆಯೊಬ್ಬಳು ಕಟ್ಟಿಸಿದಳು ಎಂಬ ಪ್ರತೀತಿ ಇದೆ. ಇದು ದಕ್ಷಿಣ ಭಾರತದ ಎರಡನೇ ದೊಡ್ಡ ಏಕಶಿಲಾ ಶಿವ ಲಿಂಗ. ಮೊದಲನೇಯದ್ದು ತಂಜಾವೂರಿನ ಬೃಹದೀಶ್ವರ.

ಮಾತಂಗ ಬೆಟ್ಟ

ಸೂರ್ಯೋದಯ ಸೂರ್ಯಾಸ್ತಗಳನ್ನು ಕಳೆಯಲು ತುಂಬಾ ಸುಂದರವಾಗಿರುವ ಜಾಗ ಮಾತಂಗ ಬೆಟ್ಟ. ಬೆಟ್ಟ ಏರಿ ಮೇಲೆ ತಲುಪಿದಾಗ ಸಂಪೂಣ್ ಹಂಪಿಯ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯಾಸ್ತ ವೇಳೆಗೆ ಮಾತಂಗ ಬೆಟ್ಟದ ತುತ್ತ ತುದಿಯಲ್ಲಿದೆ. ಅಷ್ಟರಲ್ಲಿ ದಾರಿ ತಪ್ಪಿಸು ದೇವರೇ ಖ್ಯಾತಿಯ ಲೇಖಕ ಮಂಜುನಾತ್ ಕಾಮತ್ ಕರೆ ಮಾಡಿದರು. ಅವರು ಮಾತಂಗ ಬೆಟ್ಟದಲ್ಲಿ ಒಂದು ರಾತ್ರಿ ಕಳೆದಿದ್ದ ರೋಚಕ ಕತೆ ಹೇಳಿದರು.

ವಿರೂಪಾಕ್ಷ

ಮಾತಂಗ ಬೆಟ್ಟದಿಂದ ಇಳಿದು ವಿರೂಪಾಕ್ಷನ ದರ್ಶನ ಪಡೆದೆ. ಹಂಪಿಯ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಈ ದೇವಾಲಯವನ್ನು ಹಲವು ರಾಜರು ಅಭಿವೃದ್ಧಿಗೊಳಿಸಿದ್ದಾರೆ. ಮೂರಉ ತಲೆಯ ಬಸವ ಮೂರ್ತಿ ಇಲ್ಲಿನ ವಿಶೇಷ, ಲಕ್ಷ್ಮೀ ಆನೆ ಭಕ್ತರಿಗೆ ಆಶೀರ್ವಾದ ಮಾಡುತ್ತದೆ.

ಅಲ್ಲಿಂದ ಗೈಡ್ ಬಸವೇಶ್ವರ ಖಾನಾವಳಿಗೆ ಡ್ರಾಪ್ ಮಾಡಿದರು. ಊಟ ಮಾಡಿ ಹೋಟೇಲ್ ಕಡೆ ಹೆಜ್ಜೆ ಹಾಕಿದೆ.

ಮಧ್ಯರಾತ್ರಿ ಸುಮಾರು 12.30 ಯಾರೋ ಬಂದು ಜೋರಾಗಿ ಬಾಗಿಲು ತಟ್ಟಿದರು. ಒಂದು ಕ್ಷಣ ನಿದ್ದೆಯಿಂದ ಎಚ್ಚರ ಆಗಿ ಸುಧಾರಿಸಿಕೊಂಡೆ. ಬಾಗಿಲು ತೆರೆದು ನೋಡಿದರೆ, ಒಬ್ಬಳು ಹುಡುಗಿ ನಿಂತಿದ್ದಳು. ನಾನು ಶೇರಿಂಗ್ ರೂಮ್ ತೆಗೆದುಕೊಂಡಿದ್ದೆ. ಆಕೆ‌ ಬಂದವಳೇ ಲಗೇಜ್ ಕೆಳಗಿರಿಸಿ ಸೀದಾ ಮಲಗಿದಳು. ಸುಸ್ತಾಗಿದೆ ಅಂತ ನೋಡುವಾಗಲೇ ಗೊತ್ತಾಯಿತು. ಸ್ವಲ್ಪ ಸಮಯದ ನಂತರ ಮಾತನಾಡಿಸುವ ಪ್ರಯತ್ನ ಮಾಡಿದೆ. ಆಕೆಯ ಬಗ್ಗೆ ‌ವಿಚಾರಿಸಿದಾಗ ತಿಳಿಯಿತು ನಾವಿಬ್ಬರು ಒಂದೇ ಪ್ರಾಯದವರು ಅಂತ. ಒಂದೇ ಕೋರ್ಸ್ ಕೂಡ! ಎಂಥ ಕಾಕತಾಳೀಯ ಅಲ್ವಾ?!

ಅವಳು ಮುಂಬೈಯಲ್ಲಿ ನೆಲೆಸಿರುವ ಪೋರಿ. ಸ್ನೇಹಿತರೊಂದಿಗೆ ಗೋವಾದಲ್ಲಿ ತಿರುಗಾಡುತ್ತಿದ್ದವಳು ಹಂಪಿ‌ ನೋಡಬೇಕೆಂಬ ಬಯಕೆಯಿಂದ ಹೀಗೆ ಮೂರು ನಾಲ್ಕು ಬಸ್ಸು ಬದಲಿಸಿ ಹಂಪಿಗೆ ಬಂದಿದ್ದಳು. ಕೊನೆಗೆ ಕೇಳಿದೆ, ನಾಳೆ ನಾವಿಬ್ಬರು ಜೊತೆಯಾಗಿ ಹೋಗೋಣವೇ. ಸರಿ ಅಂದಳು.

7.30 ಸುಮಾರಿಗೆ ಹೋಟೇಲ್ ಬಿಟ್ಟೆವು. ಹೊರಗಡೆ ತಿಂಡಿ ತಿಂದು ನಂತರ ಬಾಡಿಗೆಗೆ ಸ್ಕೂಟರ್ ತೆಗೆದುಕೊಳ್ಳಲು ಅಂಗಡಿಗೆ ಬಂದೆವು. ಅಂಜನಾದ್ರಿ ಬೆಟ್ಟಕ್ಕೆ ಪಯಣ ಶುರುಮಾಡಿದೆವು. ಅಂಜನಾದ್ರಿ ಬೆಟ್ಟಕ್ಕೆ ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ಕೂಡ ಭೇಟಿ ಕೊಟ್ಟಿದ್ದರು. 575 ಮೆಟ್ಟಿಲುಗಳನ್ನು ಏರಿ ತುತ್ತತುದಿ ತಲುಪಿದೆವು. ಅಲ್ಲಿನ ಟಾಪ್ ವ್ಯೂ ಕೂಡ ಸಖತ್ತಾಗಿದೆ. ನಂತರ ಸಣಾಪುರ ಸರೋವರಕ್ಕೆ ಹೋದೆವು. ಹಾ ಅಂದ ಹಾಗೆ ನನ್ನ ಹೊಸ ಗೆಳತಿಯ ಪರಿಚಯ ಮಾಡ್ಲಿಲ್ಲ ಅಲ್ವಾ. ಅನನ್ಯ ಅಂತ ಅವಳ ಹೆಸರು. ಪುಣೆಯಲ್ಲಿ ಓದುತ್ತಿದ್ದಾಳೆ.

ಅನನ್ಯನಿಗೆ cliff jumping ಮಾಡಬೇಕೆಂಬ ಆಸೆ. Life Jacket ಬಾಡಿಗೆಗೆ ಪಡೆದುಕೊಂಡು ಬಂದ್ವಿ. ಆದರೂ ಈಕೆಗೆ ಹಾರಲು ಹೆದರಿಕೆ. ಮತ್ತೆ ಬೋಟಿಂಗ್ ನವನನ್ನು ಕರೆದ್ವಿ. ಆತನ ಹೆಸರು ಮೌಜಸ್, ಸುಮಾರು 65 ಫೀಟ್ ಎತ್ತರಕ್ಕೆ ನೆಗೆಯಬಲ್ಲ. ಆತನ ವೀಡಿಯೋಗಳನ್ನು ಇಸ್ರೇಲಿ ಪ್ರವಾಸಿಗರು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಎರಡು ಬಾರಿ cliff jumping ನಂತರ, ಸೀದಾ ಅಲ್ಲೊಂದು ಪುಟ್ಟ ಫಾಲ್ಸ್ ಗೆ ಹೋದೆವು. ಅಲ್ಲಿ ತೆಪ್ಪದಲ್ಲಿ ಬೋಟಿಂಗ್ ಮಾಡಿದೆವು. ತಣ್ಣನೆಯ ಹರಿಯುವ ನೀರು.. ಅಂಬಿಗನಿಗೆ ಥ್ಯಾಂಕ್ಸ್ ಹೇಳಿ ವಿಠ್ಠಲ ದೇವಸ್ಥಾನಕ್ಕೆ ಬಂದೆವು. ಹಂಪಿಯ ಮುಖ್ಯ ಕೇಂದ್ರ ಅದು. ಕಲ್ಲಿನ ರಥ ಇದೆ. ತುಂಬಾ ಚೆನ್ನಾಗಿತ್ತು. ಮುಖ್ಯದ್ವಾರದಿಂದ ಸುಮಾರು 1.5ಕಿಮೀ ದೂರ. ನಡೆದುಕೊಂಡೇ ಹೋದೆವು. ಅಲ್ಲಿಂದ ಬರುವಷ್ಟರಲ್ಲಿ 3 ಗಂಟೆ ಕಳೆದಿತ್ತು. ಸ್ವಲ್ಪ ಹೊತ್ತು ಹುಲ್ಲಿನ ಹಾಸಿಗೆಯಲ್ಲಿ ವಿಶ್ರಾಂತಿ ಪಡೆದೆವು.

ಊಟದ ನಂತರ ಸೀದಾ ವಸ್ತು ಸಂಗ್ರಹಾಲಯಕ್ಕೆ ಬಂದೆವು. ಒಂದಷ್ಟು ಮೂರ್ತಿಗಳು, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬಳಸುತ್ತಿದ್ದ ಹಲವು ವಸ್ತುಗಳು ಇಲ್ಲಿವೆ. ನಂತರ ವಿರೂಪಾಕ್ಷಕ್ಕೆ ಬಂದೆವು. ಅಷ್ಟರಲ್ಲಿ 6 ಗಂಟೆ ಆಗಿತ್ತು. ಸೂರ್ಯಾಸ್ತ ನೋಡಿ,

ಮತ್ತೆ ಸ್ಕೂಟರ್ ತೆಗೆದುಕೊಂಡವನ ಬಳಿ ಬಂದೆವು. ಪಾನಿಪುರಿ ತಿಂದು ನಾವು ತಂಗಿದ ಹೋಟೇಲ್ ಗೆ ಹೆಜ್ಜೆ ಹಾಕಿದೆವು.

ಕೊನೆಯ ದಿನ ಸಾಸಿವೆಕಾಳು ಗಣಪತಿ, ಕಡಲೇಕಾಳು ಗಣಪತಿ, ಅಖಂಡ ಬಸವಣ್ಣ, ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದೆವು.

ಸಾಸಿವೆಕಾಳು ಗಣಪತಿ

ಸಾಸಿವೆಕಾಳು ಗಣಪತಿ 8 ಅಡಿ ಎತ್ತರವಿದೆ, ಗಣಪತಿಯ ಹೊಟ್ಟೆಯ ಸುತ್ತಲೂ ಬಿಗಿದಿರುವ ಹಾವಿನ ಆಕೃತಿಯನ್ನು ಕೆತ್ತಲಾಗಿದೆ, ಇದನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ.

ಕಡಲೇಕಾಳು ಗಣಪತಿ

ಕಡಲೇಕಾಳು  ರೂಪದಲ್ಲಿ ಇರುವ ಕಾರಣ ಈ ಹೆಸರಿನಲ್ಲಿ ಕರೆಯುತ್ತಾರೆ. ಸುಮಾರು 15 ಅಡಿ ಎತ್ತರವಿರುವ ಏಕಶಿಲಾ ಮೂರ್ತಿ.

ದೇಗುಲದ ಹಿಂದೆ ಗುಹೆಯ ತರ ಏನೋ ಕಾಣ್ತಾ ಇತ್ತು. ಅಲ್ಲಿಗೆ ಹೋದೆವಯ. ಬೃಹದಾಕಾರದ ಬಂಡೆಗಳ ನಡುವೆ ನಿರ್ಮಿತವಾದ ಜಾಗ ಒಂದು ನಿವಾಸದಂತೆ ಕಾಣುತ್ತಿತ್ತು. ಬಂಡೆಗಳ ಅಂತರದಲ್ಲಿ ಸೂರ್ಯನ ಕಿರಣಗಳು ಮುಖದ ಮೇಲೆ ಝಳಪಿಸುತ್ತಿತ್ತು. ಅಲ್ಲೇ ಒಂದು ಸಮತಟ್ಟು ಹಾಗ ಇತ್ತು. ಆದರೆ ಸಂಪೂರ್ಣ ಕಸ. ಒಂದಷ್ಟು ಬೀರ್ ಬಾಟಲಿಗಳು ಪ್ಲಾಸ್ಟಿಕ್ ಕಸ ಹೀಗೆ ಕಸದ ರಾಶಿಯೇ ಇತ್ತು. ನೋಡಿ ಅಸಹ್ಯ ಎನಿಸಿತು. ಇಂತಹ ಪ್ರೇಕ್ಷಣೀಯ ಸ್ಥಳಗಳಲ್ಲಿ ಗಲೀಜು‌ ಮಾಡಬಾರದೆಂಬ ಕನಿಷ್ಠ ಪ್ರಜ್ಞೆ ಪ್ರವಾಸಿಗರಿಗಿಲ್ಲ‌.

ಅಲ್ಲಿಂದ ಹೊಸಪೇಟೆಗೆ ಹೊರಟೆವು. ತಲುಪುವಾಗ ಮಧ್ಯಾಹ್ನ ಆಗಿತ್ತು. ನನ್ನ ಗೆಳೆಯ ಬಂದಿದ್ದ. ಖಾನಾವಳಿಗೆ ಕರೆದುಕೊಂಡು ಹೋಗಿ ಹೋಳಿಗೆ ಊಟ ಮಾಡಿಸಿದ. ನಂತರ ತುಂಗಭದ್ರಾ ಡ್ಯಾಮ್ ಗೆ ಭೇಟಿಕೊಟ್ಟೆವು. ತುಂಗಭದ್ರಾ ನದಿಯ ಹರಿವನ್ನು ಗೆಳೆಯ ವಿವರಿಸಿದ. ಅಷ್ಟರಲ್ಲಿ ಸಮಯದ ಮುಳ್ಳು ತಿರುಗುತ್ತಿತ್ತು. ಅನನ್ಯಾಳಿಗೆ ಮರಳಿ ಕಮಲಾಪುರಕ್ಕೆ ಹೋಗಿ ಅಲ್ಲಿಂದ ಬೋಟಿಂಗ್ ಪಾಯಿಂಟ್ ಹೋಗಬೇಕಿತ್ತು. ಅವಳನ್ನು ಕಳುಹಿಸಿಕೊಟ್ಟೆವು. ನಂತರ ನಾವು ಹೋಗಿದ್ದು ತುಂಗಭದ್ರಾ ತೀರಕ್ಕೆ. ತುಸು ಕಾಲ ಅಲ್ಲಿ ಇದ್ದು ನಂತರ ಒಂದು ಪಾರ್ಕಿಗೆ ಹೋದೆವು. ಮತ್ತೆ ಮಕ್ಕಳಾದೆವು. ಒಂದಷ್ಟು ಆಟ ಆಡಿದೆವು. ಅಲ್ಲಿಂದ ಸೀದಾ ಹೋಗಿದ್ದು ಹೊಸಪೇಟೆಯ ದೊಡ್ಡ ಗುಡ್ಡವೊಂದಕ್ಕೆ.. ಇಡೀ ಹೊಸಪೇಟೆ ನಗರ ಅಲ್ಲಿಂ‌ದ ಕಾಣಸಿಗುತ್ತದೆ.ನಂತರ ಹೋಗಿದ್ದು ತುಂಗಭದ್ರಾ ಪಾರ್ಕ್ ಗೆ. ಅಲ್ಲಿ aquarium museum, musical fountain ನೋಡಿದೆವು. ಅಷ್ಟರಲ್ಲಿ ನನ್ನ ಟ್ರೈನಿನ ಸಮಯ ಆಗುತ್ತಾ ಬಂದಿತ್ತು. ಅಲ್ಲಿಂದ ರೈಲ್ವೇ ನಿಲ್ದಾಣಕ್ಕೆ ನಮ್ಮ ಪಯಣ.  ನನ್ನ ಗೆಳೆಯ ಟ್ರೈನ್ ಹತ್ತಿಸಿ ನನಗೆ ವಿದಾಯ ಹೇಳಿದ. ಒಟ್ಟಿನಲ್ಲಿ 3 ದಿನಗಳ ಪ್ರವಾಸ ಅಲ್ಲಿಗೆ ಮುಗಿಯಿತು. ನಾ ಹೋದ ಮೊದಲ ಸೋಲೋ ಟ್ರಿಪ್ ತುಂಬಾ ಚೆನ್ನಾಗಿತ್ತು. ಪ್ರಾರಂಭದಲ್ಲಿ ಸಣ್ಣ ಅಳುಕಿತ್ತು. ನಂತರ ಟ್ರಿಪ್ ಮುಗಿಸಿದ ಮೇಲೆ ಪ್ರಪಂಚ ಪರ್ಯಟನೆ ಮಾಡಬೇಕೆಂಬ ಹೆಬ್ಬಯಕೆ ಉಂಟಾಯಿತು.

Related Articles

Leave a Reply

Your email address will not be published. Required fields are marked *

Back to top button