ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಎಂದೂ ಮುಗಿಯದ ಮೋಹ ಹಿಮಾಲಯ: ಭಾರತಿ ಬಿವಿ

ಹೆಸರು ಭಾರತಿ ಬಿ ವಿ.(Bharathi B V) ಮೂಲತಃ ಕೊಳ್ಳೆಗಾಲದವರು. ಬೆಳೆದಿದ್ದು ಮೈಸೂರಿನ(Mysore) ಸುತ್ತಮುತ್ತಲಿನ ಊರುಗಳು ಮತ್ತು ಬೆಂಗಳೂರು.(Bangalore) ಓದಿದ್ದು ಬಿ.ಕಾಂ. ಸಾಸಿವೆ ತಂದವಳು, ಮಿಸಳ್ ಭಾಜಿ, ಜಸ್ಟ್ ಮಾತ್ ಮಾತಲ್ಲಿ, ನಕ್ಷತ್ರಗಳ ಸುಟ್ಟ ನಾಡಿನಲ್ಲಿ, ಕಿಚನ್ ಕವಿತೆಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಹೊಟ್ಟೆಕಿಚ್ಚಾಗುವಂತೆ ಪ್ರವಾಸ ಹೋಗುವ, ಜನ ಮೆಚ್ಚುವಂತೆ ಬರೆಯುವ ಖ್ಯಾತ ಬರಹಗಾರ್ತಿ ಭಾರತಿ ಬಿವಿ ಹಿಮಾಲಯದ(Himalaya) ಬಗ್ಗೆ ಬರೆದಿರುವ ಬರಹ.

ನಮ್ಮ ದೇಶದಲ್ಲಿ ನನಗೆ ಎಂದೂ ಮುಗಿಯದ ಮೋಹವೆಂದರೆ ಹಿಮಾಲಯ. 

ಅಲ್ಲಿನ ಅಗಾಧತೆಯ ಎದುರು ನಾನು ಪುಟ್ಟ ಮಗುವಾಗುತ್ತೇನೆ

ಅಲ್ಲಿನ ಮೌನದ ಕಡಲಿನೆದುರು ನಾನು ಮೂಕವಾಗುತ್ತೇನೆ

ಅಲ್ಲಿನ ಬದುಕಿನ ಪಾಠಗಳೆದುರು ನಾನು ವಿಧೇಯ ವಿದ್ಯಾರ್ಥಿಯಾಗುತ್ತೇನೆ

ಎರಡು ಬಾರಿ ಹೋಗಿ ಬಂದಿರುವೆನಾದರೂ ಮತ್ತೊಮ್ಮೆ ಎಂದಾದರೂ ಅಲ್ಲಿಗೆ, ಮತ್ತೊಮ್ಮೆ ಎಂಥದ್ದು… ಸಮಯ ಸಿಕ್ಕಾಗೆಲ್ಲ ಅಲ್ಲಿಗೆ ಹೋಗುತ್ತಲೇ ಇರಬೇಕು ಎಂದುಕೊಂಡಿದ್ದೇನೆ. ಅದರಲ್ಲೂ ನಾವು ಕಾರ್ಗಿಲ್‌ನಿಂದ(kargil) ಶ್ರೀನಗರಕ್ಕೆ(shrinagar) ಹೊರಟ ದಿನದ ಆ ಒಂದು ‘ಸುವರ್ಣ ಕ್ಷಣದ’ ಬಗ್ಗೆ ನಿಮಗೆ ಹೇಳಲೇ ಬೇಕು… 

ಶ್ರೀನಗರದಿಂದ ಲೇಹ್‌ಗೆ(leh) ವಿಮಾನವಿದ್ದರೂ ನನಗೆ ರಸ್ತೆಯ ಮಾರ್ಗವಾಗಿ ಹೋಗಬೇಕೆಂಬ ಮಹದಾಸೆ. ಹಾಗಾಗಿ ಶ್ರೀನಗರದಿಂದ ಲೇಹ್ ಮತ್ತು ಅಲ್ಲಿಂದ ವಾಪಸ್ ಅದೇ ಮಾರ್ಗದಲ್ಲಿ ಬರುವ ಯೋಜನೆ  ಹಾಕಿ ಹೊರಟಿದ್ದೆವು. ಒಟ್ಟು 420 ಕಿಲೋಮೀಟರ್‌ ದೂರ. ನಮ್ಮ ಊರುಗಳ ಕಡೆಯಾದರೆ ಅದು ಸುಮಾರು 9-10 ಗಂಟೆಗಳ ಪ್ರಯಾಣವಷ್ಟೇ. ಆದರೆ ಹಿಮಾಲಯದಲ್ಲಿ ಹಾಗೆಲ್ಲ ಲೆಕ್ಕ ಹಾಕಲಾಗುವುದಿಲ್ಲ. 

ಪ್ರಯಾಣದ ಶುರುವಾತು ಮಾತ್ರ ನಮ್ಮ ಕೈಲಿರುತ್ತದೆ, ತಲುಪುವುದು ಎಷ್ಟು ಹೊತ್ತಿಗೆ ಎನ್ನುವುದು ಗೊತ್ತೇ ಆಗುವುದಿಲ್ಲ. ಅದರಲ್ಲೂ ಹಿಮಪಾತ ಶುರುವಾದರಂತೂ ಮುಗಿಯಿತು ಕಥೆ. ಗಂಟೆಗಟ್ಟಳೆ ನಿಂತಲ್ಲೇ ನಿಂತು, ಕೂತು, ತೆವಳಿ ಪ್ರಯಾಣ ಮಾಡಬೇಕಾಗುತ್ತದೆ. ಹಾಗಾಗಿ ತಲುಪುವ ಸಮಯ ಲೆಕ್ಕ ಹಾಕುವುದೇ ತಪ್ಪು. ಅದು ಬದುಕಿನ ಪ್ರಯಾಣದಂತೆ, ಅನಿರೀಕ್ಷಿತ, ನಿಗೂಢ, ಅನೂಹ್ಯ. ವರ್ಷದ ಕೆಲವು ತಿಂಗಳುಗಳು ಹಿಮಪಾತ ಹೆಚ್ಚಿರುವ ದಿನ ಕೊರಕಲಿನ ರಸ್ತೆಯಲ್ಲಿ ಎರಡೂ ಬದಿಯ ವಾಹನಗಳು ಓಡಾಡುವಂತೆಯೇ ಇರುವುದಿಲ್ಲ. ಹಾಗಾಗಿ ದಿನದ ಅರ್ಧ ಭಾಗ ಇತ್ತ ಕಡೆಯಿಂದ ಅತ್ತ ಕಡೆಗೂ, ಉಳಿದರ್ಧ ಭಾಗ ಅತ್ತ ಕಡೆಯಿಂದ ಇತ್ತ ಕಡೆಗೂ ವಾಹನಗಳು ಸಂಚರಿಸಬಹುದಷ್ಟೇ. 

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಅವತ್ತು ನಾವು ಲೇಹ್‌ನಿಂದ ಕಾರ್ಗಿಲ್‌ಗೆ ಹಿಂದಿರುಗಿ ಬಂದಿದ್ದೆವು. ಅಂದು ಅಲ್ಲಿಯೇ ಉಳಿದು, ಮರುದಿನ ಕಾರ್ಗಿಲ್‌ನಿಂದ ಶ್ರೀನಗರಕ್ಕೆ ಹೊರಡಬೇಕಿತ್ತು. ಮರುದಿನ ಅಂದರೆ, ನಡುರಾತ್ರಿಯ ಎರಡು ಘಂಟೆಗೇ ಹೊರಡಬೇಕಿತ್ತು. ಏಕೆಂದರೆ ಆ ನಂತರ ತುಂಬ ವಾಹನಗಳಾಗುತ್ತವೆಂದೂ, ಗಂಟೆಗಟ್ಟಳೆ ಕ್ಯೂನಲ್ಲಿ ಕಾಯಬೇಕಾಗುತ್ತದೆಂದೂ ಹೇಳಿ, ನಡುರಾತ್ರಿಯಲ್ಲಿಯೇ ನಮ್ಮನ್ನು ಸಿದ್ದವಾಗಿರಲು ಹೇಳಿದ್ದರು. ಕಾರ್ಗಿಲ್(kargil) ಸುತ್ತಿದ ನಂತರ ನಾವು ಮಲಗಿದಾಗಲೇ ಸುಮಾರು 10 ಗಂಟೆ. ಮಧ್ಯರಾತ್ರಿ 2ಕ್ಕೆ ಎದ್ದು ಹೊರಡಬೇಕಿತ್ತು. ನಮ್ಮ ಗೈಡ್ ಬಾಗಿಲು ಬಡಿದು ನಮ್ಮನ್ನು ಎಚ್ಚರಿಸಿದ ನಂತರ ಹಲ್ಲು ಉಜ್ಜಿದ್ದೊಂದೇ… ಅರೆನಿದ್ರೆಯಲ್ಲಿ ತೂರಾಡುತ್ತ ಎಲ್ಲರೂ ಬಸ್ ಏರಿದ್ದೆವು. ಚೆಕ್ ಪೋಸ್ಟ್ formalities ಎಲ್ಲ ಮುಗಿಸಿ ಬಸ್ ಹೊರಟಾಗ ಮೂರೂವರೆ.  

ನನಗೆ ಅವೇಳೆಯಲ್ಲಿ ಎಚ್ಚರವಾದರೆ ಮತ್ತೆ ಸುಲಭಕ್ಕೆ ನಿದ್ರೆ ಬರುವುದಿಲ್ಲ. ಹಾಗಾಗಿ ಕಿಟಕಿಯಾಚೆ ನೋಡುತ್ತ ಕುಳಿತೆ. ಬಸ್‌ನಲ್ಲಿ ಎಲ್ಲರೂ ನಿದ್ರೆಗಿಳಿದಿದ್ದರು. ಸದಾ ವಟಗುಟ್ಟುತ್ತಲಿರುವ ಜನರ ನಡುವೆ ಅಪರೂಪಕ್ಕೆ ಸಿಕ್ಕ ಮೌನವನ್ನು ನಾನು ಬಾಚಿ ತಬ್ಬಿ ಕುಳಿತಿದ್ದೆ. ಕಾರ್ಗತ್ತಲಿನಲ್ಲಿ ಏನೆಂದರೆ ಏನೂ ಕಾಣಿಸುತ್ತಿರಲಿಲ್ಲ. ಸುಮ್ಮನೆ ಹಾಗೆಯೇ ಕುಳಿತಿರುವಾಗಲೇ ಇದ್ದಕ್ಕಿದ್ದಂತೆ ಎಲ್ಲಿಂದಲೋ ಸಣ್ಣ ಬೆಳಕೊಂದು ಮೂಡಿದಂತಾಯಿತು. ‘ಅಯ್ಯೋ ನಿದ್ರೆಗಣ್ಣಿನಲ್ಲಿ ನನಗೆಲ್ಲೋ ಭ್ರಮೆ ಇರಬೇಕು. ಈ ಚಳಿಗಾಲದಲ್ಲಿ ನಡುರಾತ್ರಿಯಲ್ಲಿ, ಈ ಪರ್ವತದ ಹಾದಿಯಲ್ಲಿ ಯಾವ ಬೆಳಕು ಇರಲು ಸಾಧ್ಯ’ ಎಂದುಕೊಳ್ಳುವಾಗಲೇ ಆಗಸ ತಿಳಿಯಾಗಲಾರಂಭಿಸಿತು… ಬೆಳಕಿನ ಕಿರಣಗಳು! ಅರೆ ಇಷ್ಟು ಬೇಗ ಬೆಳಗಾಯಿತಾ ಎಂದುಕೊಳ್ಳುವಾಗಲೇ ಕಣ್ಣೆದುರು ಹಿಮಾಚ್ಛಾದಿತ ಪರ್ವತ ಶ್ರೇಣಿ ತೆರೆದುಕೊಳ್ಳಲಾರಂಭಿಸಿತು. ನೀಳ ಉಸಿರೆಳೆದುಕೊಂಡು ‘ವಾಹ್’ ಎಂದೆ. ಮುಂದಿನ ಸಾಲಿನಲ್ಲಿ ಎದ್ದೇ ಕುಳಿತಿದ್ದ ಅಮ್ಮನೂ ನನ್ನ ಉದ್ಗಾರ ಕೇಳಿ ‘ಹೇಗಿದೆ ಅಲ್ವಾ’ ಎಂದು ಪಿಸುಗುಟ್ಟಿದಳು. ನಂತರ ಇಬ್ಬರೂ ಮಾತೇ ಇಲ್ಲದೆ ಎರಡು ಗಂಟೆ ಕಾಲ ಆ ಘಳಿಗೆಯನ್ನು ಬಾಚಿ ಅಪ್ಪಿದ ಸಂದರ್ಭ ನೆನಪಾದರೆ ಈಗ ಬರೆಯುವಾಗಲೂ ರೋಮಾಂಚನ! ಅದನ್ನು… ಅಂಥ ಅತೀತವಾದ ಅನುಭವವೊಂದನ್ನು ಮತ್ತೊಮ್ಮೆ ಬದುಕಿನಲ್ಲಿ ಪಡೆಯಬೇಕು… ಒಂದೇ ಒಂದು ಸಲ ಎಂದುಕೊಳ್ಳುತ್ತಿರುತ್ತೇನೆ. ಯಾವುದನ್ನೇ ಆದರೂ ಉತ್ಕಟವಾಗಿ ಬಯಸಿದರೆ ಅದು ಕೈಗೂಡುತ್ತದಂತೆ! 

Travelling leaves you speechless, then turns you into a storyteller – ಎನ್ನುವ ಮಾತೊಂದಿದೆ

ಪ್ರಯಾಣವು ನನ್ನನ್ನು ಸದಾ ಮೂಕವಿಸ್ಮಿತಳಾಗಿಸುತ್ತಿರಲಿ ಮತ್ತು ಸದಾ ಕಥೆಗಾರಳನ್ನಾಗಿಸುತ್ತಲೇ ಇರಲಿ…

ಆಮೆನ್!

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button