ಇಟಲಿ ತೋರಿಸ್ತೀನಿ ಬನ್ನಿ: ಶ್ರೀಕೃಷ್ಣ ಕುಳಾಯಿ ಬರೆಯುವ ವಿಶ್ವ ಪರ್ಯಟನೆ ಸರಣಿ ಭಾಗ 1
ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀಕೃಷ್ಣ ಕುಳಾಯಿ ಮೂಲತಃ ಮಂಗಳೂರಿನವರು. ಪ್ರವಾಸ ಅಂದ್ರೆ ನಿದ್ದೆಯಲ್ಲೂ ಎದ್ದು ಕೂರುವ ಶ್ರೀಕೃಷ್ಣ ಬರೆಯುವ ವಿಶ್ವ ಪರ್ಯಟನೆ ಸರಣಿಯ ಮೊದಲ ಕಂತು.
ನಾವು ಇಟಲಿಯ ವೆನಿಸ್ ಗೆ(Venice) ಹೋದಾಗ ಸುತ್ತ ಮುತ್ತಲಿನ ಊರುಗಳಿಗೆ ಹೋಗಬೇಕೆಂದು ಬಯಸಿದ್ದೆವು. ವೆನಿಸ್ ನ ಹೊರ ಭಾಗದ ಮೇಸ್ಟ್ರೇಯಲ್ಲಿ ಉಳಕೊಂಡಿದ್ದೆವು. ಅಲ್ಲಿಂದ ಪಡೋವಾ ಊರಿಗೆ ಹೋದ ನಾವು, ಊರಲ್ಲಿನ ಮುಖ್ಯ ಸ್ಕ್ವೇರ್/ ವೃತ್ತ ಕಂಡು ಇಷ್ಟ ಪಟ್ಟೆವು. ಪಡೋವಾದಲ್ಲಿ(padova) ಯುರೋಪಿನ ಬಹು ದೊಡ್ಡ ಸ್ಕ್ವೇರ್ ಇದೆ. ಉತ್ತಮ ಚರ್ಚ್ ಗಳಿವೆ. ಬುದ್ದ ಎಂಬ ಇಂಡಿಯನ್ ರೆಸ್ಟೋರೆಂಟ್ ಲ್ಲಿ(Indian restaurent) ರಾತ್ರಿಯ ಭೋಜನ ಮಾಡಿದೆವು. ಇಲ್ಲೂ ನಮಗೆ ನಮ್ಮ ರುಚಿಯಾದ ಭಾರತೀಯ ಊಟ ದೊರಕಿತು.
ನೀವು ಇದನ್ನು ಇಷ್ಟಪಡಬಹುದು: 4 ವರ್ಷ, 17 ದೇಶ, ಸುತ್ತಾಟದಲ್ಲಿಯೇ ದಿನ ಕಳೆಯುತ್ತಿರುವ ಅವಿನಾಶ್, ರುಚಿಕ
ಮರುದಿನ ನನ್ನ ಇಟಲಿಯ ಸ್ನೇಹಿತ ಮಾರ್ಕೊ ಸಲಹೆಯಂತೆ, ಡೋಲಮಿಟಿಸ್ ಪರ್ವತ(dolomites) ಪ್ರದೇಶಕ್ಕೆ ಭೇಟಿ ಕೊಡಲು ನಿರ್ಧರಿಸಿದ್ದೆ. ಡೋಲಮಿಟಿಸ್ ಇಟಲಿಯ ಈಶಾನ್ಯ ಭಾಗದಲ್ಲಿರುವ ಶಿಖರ ಶ್ರೇಣಿ. ಇದು ಬೇರೆ ಆಲ್ಫ್ ಶಿಖರಗಳಿಂದ ವಿಭಿನ್ನವಾಗಿದೆ. ಇದನ್ನು “ಪೇಲ್ ಮೌಂಟನ್”(Pale Mountain) ಅಂತಲೂ ಕರೆಯುತ್ತಾರೆ. ವೆನಿಸ್ ನಿಂದ 2 ಗಂಟೆ ಗಳ ಕಾಲ ಡ್ರೈವ್ ಮಾಡಿದರೆ ಈ ಶಿಖರ ಶ್ರೇಣಿಗಳ ಸಿಗುತ್ತವೆ. ದ್ವಿತೀಯ ಮಹಾಯುದ್ದದ ಸಮಯದಲ್ಲಿ ಈ ಸ್ಥಳ ಪ್ರಮುಖ ಪಾತ್ರ ವಹಿಸಿತ್ತು.
ಬೇರೆ ದೇಶಗಳಿಂದಲೂ ಬಂದರು ಸ್ನೇಹಿತರು
ಮೊದಲೇ ನಿರ್ಧರಿಸಿದ್ದಂತೆ ಚಿಕ್ಕ ಗುಂಪಿನ ಟೂರ್ ತೆಗೆದುಕೊಂಡಿದ್ದೆವು. ಹಿಂದಿನ ದಿನ ಸಂಜೆ ಫೋನ್ ಮಾಡಿ, ಡ್ರೈವರ್ ಮರುದಿನ ನಮ್ಮನ್ನು ಹೋಟೆಲ್ ನಿಂದ ಕರೆದೊಯ್ಯುವುದಾಗಿ ಹೇಳಿದ. ಹೇಳಿದಂತೆ ಮರುದಿನ ಸರಿಯಾದ ಸಮಯಕ್ಕೆ ಹೋಟೆಲ್ ಬಳಿ ಕಾಯುತ್ತಿದ್ದ. ವೆನಿಸ್ ಪೋರ್ಟ್(Venice Port) ಬಳಿ ಇನ್ನೂ ಕೆಲವರನ್ನು ಸೇರಿಸಿ, 8 ಜನರ ಪುಟ್ಟ ಗ್ರೂಪ್ ನೊಂದಿಗೆ ದೊಡ್ಡ ಕಾರಲ್ಲಿ ಹೊರಟೆವು. ಮಿಕ್ಕ 6 ಜನರಲ್ಲಿ,ಇಬ್ಬರು ಇಂಗ್ಲೆಂಡ್ ನಿಂದ(England) ಬಂದಿದ್ದರೆ, ಉಳಿದವರು ಆಸ್ಟ್ರೇಲಿಯದಿಂದ(Australia) ಬಂದಿದ್ದರು. ಜೊತೆಗೆ ಇನ್ನೊಂದು ಮಿನಿ ಬುಸ್ ನಮ್ಮನ್ನು ಹಿಂಬಾಲಿಸುತಿತ್ತು .
ಅವನು ಆ ಟ್ರಾವೆಲ್ಸ್ ಯಜಮಾನ ಆಗಿದ್ದು, ಡ್ರೈವ್ ಮಾಡುತ್ತಾ, ಗೈಡ್ ಆಗಿ ನಮಗೆ ವಿಶೇಷತೆಗಳನ್ನು ಹೇಳುತ್ತಿದ್ದ. ವೆನಿಸ್ ಒಳಗೆ ಕಾರ್ ತೆಗೆದುಕೊಂಡು ಹೋಗಲಾಗುವುದಿಲ್ಲ ಎಂದು ಬಹು ದೊಡ್ಡ ಕಾರ್ ಪಾರ್ಕಿಂಗ್ ಅನ್ನು ತೋರಿಸಿದ. ವೆನಿಸ್ ಬಗ್ಗೆ ಹೇಳುವಾಗ ಅವನಿಗೆ ಬಲು ಹೆಮ್ಮೆ. ಮುಂದೆ ದೂರ ಹೋದಂತೆಲ್ಲ, ಬೆಟ್ಟ ಗುಡ್ಡಗಳ ಸಮೀಪ ನಾವು ಸಾಗತೊಡಗಿದೆವು. ಹೋದಾಗ ಮೊದಲು ನೋಡಿದ್ದು “ಲಾಗೊ ಡಿ ಸಂತ ಕ್ರೋಸೀ” ಎಂಬ ಪುಟ್ಟ ಸರೋವರ. ಬೆಟ್ಟಗಳ ಪ್ರತಿಬಿಂಬ ಎದ್ದು ಕಾಣಿಸುತಿತ್ತು.
ಮುಂದೆ ಹೋಗಿ ವಿಶ್ರಮಿಸಿದ್ದು ‘ಕರ್ಟೀನ ದೆ ಅಂಪ್ರೆಸ್ಸೋ’. ಇದು ಸುತ್ತ ಬೆಟ್ಟಗುಡ್ಡಗಳ ನಡುವೆ ಇರುವ ಸುಂದರ ಊರು. 1956ರಲ್ಲಿ ಇಲ್ಲಿ ಒಲಿಂಪಿಕ್ ಕ್ರೀಡೆ ನಡೆಸಲಾಗಿತ್ತು. ಹಿಮಪರ್ವತಗಳ ಮೇಲೆ ಸ್ಕೀಯಿಂಗ್ ಮಾಡಲು ಇದು ಹೆಸರಾಗಿದೆ. ನಾವು ಹೋಗಿದ್ದು ಏಪ್ರಿಲ್ ತಿಂಗಳು. ಅದೇನೋ ಅಂದು ಜನವಸತಿ ಭಾರೀ ಕಡಿಮೆ. ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು. ಮಧ್ಯಾಹ್ನ ಹನ್ನೆರಡಾಗಿದ್ದರೂ ಊರಲ್ಲಿ ಜನಗಳೇ ಇಲ್ಲ. ನಮಗೆ ವಿರಾಮ ಸಮಯವಿದ್ದರಿಂದ ಊರು ತುಂಬಾ ಸುತ್ತಾಡಿದೆವು. ಈ ಊರಿಂದ 45 ನಿಮಿಷ ಡ್ರೈವ್ ಮಾಡಿದರೆ ಆಸ್ಟ್ರೀಯ(Austria) ದೇಶ ಸಿಗುತ್ತದೆ.
ಹಿಮ ಬಿದ್ದ ದಾರಿ
ಊರಿನ ಚರ್ಚ್ ನೋಡಲು ಚೆನ್ನಾಗಿದೆ. ಎಲ್ಲೆಡೆ ಮರದಿಂದ ಕಟ್ಟಿಸಿದ ಕಟ್ಟಡಗಳು ಮುದ್ದಾಗಿ ಕಾಣಿಸುತ್ತವೆ. ಇವು ದೂರದಿಂದ ನೋಡಿದರೆ ಗೊಂಬೆಗಳಂತೆ ಕಾಣುತ್ತದೆ. ಹೊಸದಾಗಿ ಕಟ್ಟಿಸಲ್ಪಡುವ ಕಟ್ಟಡಗಳು ಹಳೆಯ ಶೈಲಿಯಲ್ಲಿ ಮರದಿಂದ ಕಟ್ಟಿಸಲ್ಪಟ್ಟಿವೆ. ಬೆಟ್ಟದ ಮೇಲೊಂದು ಮನೆ ಮಾಡಲು ಎಲ್ಲರಿಗೂ ಆಸೆ ಮೂಡಿಸುವಂತಿದೆ. ಯಾರಿಗೆ ಬೇಡ.
ಅಲ್ಲಿಂದ ಮುಂದೆ ಹೋಗಿ ಡೋಲಮಿಟಿಸ್ ನ((dolomites)) ಸುಂದರ ಶಿಖರಗಳು ಕಾಣುವ ಸ್ಥಳಕ್ಕೆ ಹೋದೆವು. ಸುತ್ತ ನೋಡಿದಾಗ ಎರಡು ತೆರನಾದ ಪರ್ವತಗಳು. ಒಂದು ಹಿಮದ ನಡುವೆ ಮಿಂದಂತಿದ್ದಾರೆ, ಇನ್ನೊಂದು ಕಂದು ಗುಲಾಬಿ ಮಿಶ್ರಿತ ಕಲ್ಲಲ್ಲಿ ಕೆತ್ತಿದಂತಿದ್ದವು. ಈ ಪರ್ವತಗಳ ನಡುವೆ ಹಚ್ಚ ಹಸುರು. ನಡು ನಡುವೆ ಮರದಿಂದ ಮಾಡಿದ ಮನೆಗಳು. ಅಲ್ಲಿ ಉಳಿದುಕೊಂಡರೆ ಇನ್ನೂ ಚೆನ್ನಾಗಿತ್ತೇನೋ.
ಮುಂದೆ ನಮ್ಮನ್ನು ಡ್ರೈವ್ ಮಾಡುತ್ತಾ ಕರೆದೊಯ್ದಾಗ ದಾರಿಯಲ್ಲಿ ಸ್ವಲ್ಪ ಸ್ವಲ್ಪ ಹಿಮ ಬಿದ್ದಂತಿತ್ತು. ಮೊದಲು ನಂಬಲಾಗಲಿಲ್ಲ. ಇದು ಕನಸೋ ನಿಜವೋ . ನಮ್ಮ ಜೊತೆಗಾರರು ಜೋರಾಗಿ ಕಿರುಚ ತೊಡಗಿದರು. ನಮ್ಮ ಉತ್ಸಾಹ ಕಂಡು ಡ್ರೈವರ್ ಮುಗುಳ್ನಗುತಿದ್ದ.
ನೋಡು ನೋಡುತಿದ್ದಂತೆ ನಾವು ಪರ್ವತ ಸಾಲಿನ ನಡುವಿನ ಒಂದು ರಸ್ತೆಗೆ ಬಂದೆವು. ನಮ್ಮ ವಾಹನ ನಿಲ್ಲಿಸಿ ಇಳಿದಾಗ, ಕಣ್ಣನ್ನೇ ನಂಬಲಾಗಲಿಲ್ಲ, ಒಂದೆಡೆ ಹಿಮ ಮೆದ್ದ ಪರ್ವತಗಳು. ಇನ್ನೊಂದೆಡೆ ರಸ್ತೆ. ಅದರ ನಡುವೆ ಹಾಲು ಹೆಪ್ಪುಗಟ್ಟಿದಂತಿದ್ದ ಹಿಮ ಸರೋವರ. ನೀರಿನ ಮೇಲೆ ಕುದುರೆಗಳು ಓಡಾಡುವುದೆಂದರೆ ಇಲ್ಲೆ! ಚಳಿಗಾಲದಲ್ಲಿ ಈ ಸರೋವರದ ಮೇಲೆ ಪೋಲೋ ಆಟ ಆಡುತ್ತಾರಂತೆ. ಇದು ಮಿಸಿರಿನಾ ಸರೋವರ. ಏಪ್ರಿಲ್(2015) ತಿಂಗಳಲ್ಲೂ ಎಲ್ಲೆಲ್ಲಿ ಹಿಮ. ಪಕ್ಕದಲ್ಲಿ ಆಸ್ತಮ ಪೀಡಿತರ ಚಿಕಿತ್ಸೆಗೆ ನೀಡುವ ಕಟ್ಟಡ ಇದೆ. ಅಲ್ಲಿನ ವಾತಾವರಣಕ್ಕೆ ವಿಶೇಷತೆ ಇದೆಯಂತೆ.
ಅಲ್ಲಿ ಇದ್ದ ಅಂಗಡಿಗೆ ಹೋಗಿ ಪುಟ್ಟದೊಂದು ಸೌವನಿಯರ್ ಕೊಂಡೆ. ಅಂಗಡಿಯ ಒಡತಿ ನಸುನಗುತ್ತಾ ಭಾಷೆ ಬರದಿದ್ದರೂ, ನಾವು ಕೊಂಡ ವಸ್ತುವಿನ ಮೇಲಿದ್ದ ಹೂವಿನ ಚಿತ್ರದ ಬಗ್ಗೆ, ಇಂಗ್ಲಿಷ್ ಮಿಶ್ರಿತ ತನ್ನದೇ ಭಾಷೆಯಲ್ಲಿ, ಅವು ಇಲ್ಲಿನ ವಿಶೇಷ ಹೂವುಗಳು ಎಂದಳು. ಇನ್ನೊಂದು ಬದಿಗೆ ನಡೆದು ಬಂದಾಗ, ಆ ಸರೋವರದ ವಿಹಂಗದ ನೋಟ.ಕಲಾವಿದನ ಕುಂಚದಲ್ಲಿ ವರ್ಣ ಚಿತ್ರ ಬಿಡಿಸಿದಂತೆ. ಇದೇನೋ ಮಾಯಕವೋ. ನಾನು ಭೇಟಿ ಮಾಡಿದ ಉತ್ತಮ ಸ್ಥಳಗಳಲ್ಲಿ ಇದೂ ಒಂದು. ಹಾಗೆ ನಿಂತು ನೋಡುತಿದ್ದರೆ, ಮರೆಯಲಾಗದ ಕನಸಿನ ಲೋಕ. ಶ್ವೇತ ವರ್ಣದ ಮೋಡಗಳು, ಹಿಮ ಸರೋವರ, ಪರ್ವತಗಳು, ನಡುವೆ ತೇಲಿದಂತೆ ಕಾಣುವ ಪುಟ್ಟ ಕಟ್ಟಡಗಳು. ಜೊತೆಗೆ ಬೀಸುತಿದ್ದ ತಂಗಾಳಿ.
ಎಷ್ಟು ಫೋಟೋ ಕ್ಲಿಕ್ಕಿಸಿದರೂ ಮನಸ್ಸಿಗೆ ಸಾಕಾಗುತಿಲ್ಲ. ಮುಂದೆ ಹೋಗುತ್ತಾ ಇನ್ನೊಂದು ಸರೋವರ ವನ್ನು ನೋಡಿದವು, ಅದು ಪಾಚಿ ಮಿಶ್ರಿತ ಬಣ್ಣದಲ್ಲಿತ್ತು. ಪಕ್ಕದಲ್ಲಿ ಪರ್ವತಗಳು.
ಚಿತ್ರಕಾರನ ಊರು
ಅಲ್ಲಿಂದ ಮುಂದೆ ಬಂದು “ಪಿವೆ ಡಿ ಕಾದೊರೆ”(pieve di cadore italy) ಎಂಬ ಹಳ್ಳಿಗೆ ಭೇಟಿ ನೀಡಿದೆವು. ಅದು ಟೀಟೈನ್ ಎಂಬ ಚಿತ್ರಕಾರ ಹುಟ್ಟಿದ ಸ್ಥಳ. ಅವನ ಮನೆಯಿನ್ನೂ ಇದೆ. ಊರು ಪುಟ್ಟದಾಗಿದೆ. ಅಲ್ಲೊಂದು ಚರ್ಚ್ ಗೆ ಭೇಟಿ ನೀಡಿದ್ದೆವು. ಪುಟ್ಟ ಕೋಟೆಯಂತೆ ಕಾಣುತಿದ್ದ ಕಟ್ಟದಲ್ಲಿದ್ದ ಕಾಫಿ ಶಾಪ್ ನಲ್ಲಿ ಕುಳಿತು ಕಾಫಿಯ ಸವಿ ರುಚಿ ಹೀರಿದೆವು. ಆಗ ಸಂಜೆಯಾಗುತಲಿತ್ತು. ಆ ಊರಿನ ಇನ್ನೊಂದೆಡೆ ಇರುವ ಸರೋವರ “ಲಾಗೊ ಡಿ ಕಾದೊರೆ”(lago di centro cadore) ಚೆನ್ನಾಗಿದೆ.
ಈ ದಾರಿ ಬೇಸಿಗೆಯಲ್ಲಿ ವಾಹನಗಳಿಂದ ತುಂಬಿ ತುಳುಕುತಿರುತ್ತದೆ. ನೀವು ಬಂದ ಈ ದಿನ ತುಂಬಾ ಚೆನ್ನಾಗಿದೆ. ಮೋಡಗಳಿಲ್ಲದೆ, ವಾತಾವರಣ ಚೆನ್ನಾಗಿದ್ದು, ತುಂಬಾ ಅನುಕೂಲಕರವಾಗಿದೆ” ಎಂದು ಡ್ರೈವರ್ ಹೇಳಿದಾಗ ನಂಬಲಾಗಲಿಲ್ಲ. ಒಳಗಡೆ ತೃಪ್ತ ಭಾವ. ನಿಜ.. ಅಂದು ವಾಹನಗಳ ದಟ್ಟಣೆ ಇರಲಿಲ್ಲ.
ಆ ದಿನದ ರಸಘಳಿಗೆಯ ಅನುಭವ, ಇಟಲಿಯ ವಿಶೇಷತೆಯನ್ನು ಮನದಲ್ಲಿ ತುಂಬಾ ಸ್ಮರಣೀಯವಾಗಿ ಮಾಡಿತು. ಉತ್ತಮ ಮಾಹಿತಿ ನೀಡುತ್ತಾ ಚೆನ್ನಾಗಿ ಸ್ಥಳಗಳ ಪರಿಚಯಿಸಿದ ಡ್ರೈವರ್/ ಗೈಡ್ ಗೆ ಧನ್ಯವಾದ ಹೇಳುತ್ತಾ, ವೆನಿಸ್ ನಲ್ಲಿ ಇಳಿದು, ತೇಲುವ ನಗರದಲ್ಲಿ, ಸಂಜೆಯ ಸೊಬಗನ್ನು ಸವಿಯುತ್ತಾ, ಸೂರ್ಯಾಸ್ತದ ಸಮಯದಲ್ಲಿ, ಕಳೆದು ಹೋಗುವ ವೆನಿಸ್ ನ ಬೀದಿಗಳಲ್ಲಿ ನಡೆಯತೊಡಗಿದೆವು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.