ಮೈಸೂರಿನ ಬೆಟ್ಟದಪುರದ ಚೆಂದದ ಬೆಟ್ಟ ಶ್ರೀಗಿರಿ ಬೆಟ್ಟ: ಡಾ.ವಿನಯ್ ಪರಿಚಯಿಸಿದ ಕುಟುಂಬ ಸಮೇತ ಹೋಗಬಹುದಾದ ನೆಮ್ಮದಿ ತಾಣ
ಮಾನವ ಆಧುನಿಕ ಯುಗದಲ್ಲಿ ಎಷ್ಟೇ ಮುಂದುವರಿದರೂ ಕೂಡ ,ಪ್ರಕೃತಿಯ ಮುಂದೆ ಮಾನವ ಕೂಸು ಎನ್ನುವ ಮಾತಿದೆ. ಈ ಮಾತು ಶ್ರೀ ಗಿರಿ ಬೆಟ್ಟಕ್ಕೆ ಭೇಟಿ ನೀಡಿದರೆ ಅನುಭವಕ್ಕೆ ಬರುತ್ತದೆ. ಮೈಸೂರಿನ ಯೋಗಾನಂದ, ಡಾ. ವಿನಯ್ ಎಂ.ಆರ್ ಹಾಗೂ ನಂದೀಶ್ ಕುಟುಂಬದವರು ಇತ್ತೀಚೆಗೆ ಮೈಸೂರಿನ ಸಿಡಿಲು ಮಲ್ಲಿಕಾರ್ಜುನ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ವಿಶೇಷತೆಗಳನ್ನು ಡಾ. ವಿನಯ್ ಎಂಆರ್ ಹಂಚಿಕೊಂಡಿದ್ದಾರೆ.
ಯಾವುದಾದರೊಂದು ದಿನ ಇದ್ದಕ್ಕಿದ್ದಂತೆ ಎದ್ದು ಎಲ್ಲಾದರೊಂದು ಬೆಟ್ಟ ಹತ್ತಿ ಸುಮ್ಮನೆ ಕೂತು ಬರಬೇಕು ಎಂದು ತುಂಬಾ ಅನ್ನಿಸುತ್ತಿರುತ್ತದೆ. ನಾವು ದೂರದೂರದ ಬೆಟ್ಟಗಳನ್ನು ಯೋಚಿಸುತ್ತಿರುತ್ತೇವೆ. ಹತ್ತಿರದ ಬೆಟ್ಟವನ್ನೇ ಮರೆತಿರುತ್ತೇವೆ. ಇನ್ಯಾವತ್ತೋ ಆ ಬೆಟ್ಟಕ್ಕೆ ಹೋದಾಗ ಛೇ ಇಷ್ಟು ದಿನ ಈ ಬೆಟ್ಟವನ್ನು ನಾವು ದೂರ ಇಟ್ಟುಬಿಟ್ಟಿದ್ದೆವಲ್ಲ ಎಂದನ್ನಿಸಲು ಶುರುವಾಗುತ್ತದೆ. ಅಂಥದ್ದೊಂದು ಬೆಟ್ಟ ಶ್ರೀಗಿರಿ ಬೆಟ್ಟ.
ಮಲ್ಲಯ್ಯನ ಬೆಟ್ಟ, ಗಿರಿ ಬೆಟ್ಟ, ಸಿಡಿಲು ಮಲ್ಲಿಕಾರ್ಜುನ ಬೆಟ್ಟ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯುವ ಬೆಟ್ಟವಿದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿರುವ ಬೆಟ್ಟದಪುರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 4290 ಅಡಿಗಳಷ್ಟು ಎತ್ತರದಲ್ಲಿದೆ.
ಇದು ಮೈಸೂರು ಜಿಲ್ಲೆಯಲ್ಲೇ ಅತ್ಯಂತ ಎತ್ತರವಾದ ಬೆಟ್ಟ ಎಂದರೆ ನೀವು ನಂಬಬೇಕು. ಎಲ್ಲಿ ನೋಡಿದರೂ ಸುತ್ತಲೂ ಕಲ್ಲು ಬಂಡೆಗಳು. ನೋಡಲು ಕಣ್ಣುಗಳೆರಡು ಸಾಲದು ಎನ್ನುವಂತೆ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಸವಿಯಬಹುದಾದ, ಸುತ್ತಲೂ ಹಸಿರು ಹೊದಿಕೆಯಿಂದ ಬಂಡೆಗಳನ್ನ ಅಲಂಕರಿಸಿರುವ ದೃಶ್ಯಗಳು ಕಂಡು ಬರುವ ರಮಣೀಯ ತಾಣ ಈ ಶ್ರೀಗಿರಿ ಬೆಟ್ಟ. .
ಚೆಂದ ಅನುಭವವಿಸುವವರೂ ಇಲ್ಲಿ ಬರಬಹುದು. ಜತೆಗೆ ಇದು ಧಾರ್ಮಿಕ ಸ್ಥಳವೂ ಹೌದು. ಇಲ್ಲಿ ವರ್ಷದಲ್ಲಿ 2 ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ದೀಪಾವಳಿಯ ಸಮಯದಲ್ಲಿನ ಅಮಾವಾಸ್ಯೆಯ ದಿನ ನಡೆಯುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಗಿರಿಜಮ್ಮ ಉತ್ಸವ ಮತ್ತು ಬಸವನ ಮೆರವಣಿಗೆ ಹಾಗೂ ಫೆಬ್ರವರಿಯಲ್ಲಿ ನಡೆಯುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಮತ್ತು ಶ್ರೀ ಗಿರಿಜಮ್ಮನವರ ಕಲ್ಯಾಣ ಮಹೋತ್ಸವ ರಥೋತ್ಸವ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ.
ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳಿಗೆ ಕೇವಲ 18 ಕಿ.ಮೀ. ದೂರದಲ್ಲಿದೆ ಈ ಬೆಟ್ಟ. ಬೆಂಗಳೂರಿನಿಂದ ಮೈಸೂರಿಗೆ ಹೋದವರು ಕೂಡ ಈ ಬೆಟ್ಟಕ್ಕೆ ಭೇಟಿ ನೀಡಿ ಬರಬಹುದು. ಕುಟುಂಬ ಸಮೇತವಾಗಿ ಒಂದು ದಿನದ ಪ್ರವಾಸ ಕೈಗೊಳ್ಳಲು ಇಚ್ಛಿಸುವವರಿಗೆ ಈ ಬೆಟ್ಟ ಉತ್ತಮ ಸುರಕ್ಷಿತ ತಾಣ. ಇಂದಿನ ಯಾಂತ್ರಿಕ ಜೀವನದಲ್ಲಿ ಒತ್ತಡದ ಬದುಕಿನ ನಡುವೆ ಶ್ರೀ ಗಿರಿ ಬೆಟ್ಟ ಮನಸಿಗೆ ಶಾಂತಿ ಜೊತೆಗೆ ಉಲ್ಲಾಸ, ಹೊಸ ಚೈತನ್ಯವನ್ನು ನೀಡುವಂತಿದೆ.
ಒಮ್ಮೆಯಾದರೂ ನೀವು ಶ್ರೀ ಗಿರಿ ಬೆಟ್ಟ ಹತ್ತಿ ಪ್ರಕೃತಿಯ ಸೌಂದರ್ಯವನ್ನೇ ಬಾಚಿಕೊಂಡ ಹಾಗೆ ಇರುವ ಬೆಟ್ಟದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಿ. ಜೊತೆಗೆ ಮಲ್ಲಿಕಾರ್ಜುನ ಸ್ವಾಮಿ, ಗಿರಿಜಮ್ಮನವರ ಆಶೀರ್ವಾದವನ್ನು ಪಡೆದುಕೊಳ್ಳಿ.