ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದಸೂಪರ್ ಗ್ಯಾಂಗು

ಸ್ನೇಹಿತನ ಮದುವೆ ನೆಪದಲ್ಲಿ ಸ್ನೇಹಿತರ ಜೊತೆಗೂಡಿ ವಿರಾಜಪೇಟೆಯ ವಿಹಂಗಮ ವಿಹಾರ: ವಿಜಯ್ ಬರೆದ ಚೇತೋಹಾರಿ ಬರಹ

ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟು. ಊರು ಸುತ್ತೋದು ಅಂದ್ರೆ ಖುಷಿ. ಮಡದಿ ಮಕ್ಕಳ ಸಂತೋಷದಲ್ಲಿ ತನ್ನ ಖುಷಿಯನ್ನು ಕಾಣುವ ವಿಜಯ್ ಗೆ ಜಗತ್ತಲ್ಲಿರುವವರೆಲ್ಲಾ ಖುಷಿಯಾಗಿರಬೇಕು ಎಂಬ ಹಂಬಲ. ಲೆಕ್ಕಗಳಲ್ಲಿ ಮುಳುಗಿರುವ ಜೀವ ಈಗ ಕತೆ ಬರೆಯುತ್ತಿದೆ. ವಿರಾಜಪೇಟೆ ಸುತ್ತಿದ ಕತೆಯನ್ನು ಆಹ್ಲಾದಕರ ಶೈಲಿಯಲ್ಲಿ ಹೇಳಿದ ರೀತಿ ನಿಮಗೆ ಇಷ್ಟವಾಗಬಹುದು.        

ಸುಮಾರು ಒಂದು ತಿಂಗಳ ಹಿಂದೆ ನನ್ನ ಸ್ನೇಹಿತ ಮನಿಶ್ ಪೊನ್ನಪ್ಪನ ಮದುವೆ ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಎಂಬ ಮದುವೆಯ ಕರೆಯೋಲೆ ನಮ್ಮ ಕೈ ಸೇರಿದಾಗಿನಿಂದ ನನ್ನ ಹಾಗೂ ಉಳಿದ ನಾಲ್ಕು ಜನ ಸ್ನೇಹಿತರಿಗೆ (ವಿನಯ್, ವಿಶ್ರಾಂತ್, ಕಿರಣ್ ಮತ್ತು ಬಾಲಾಜಿ) ಡಿಸೆಂಬರ್ 16 ಮತ್ತು 17ನೇ ದಿನಾಂಕದ ಬಗ್ಗೆ ಅತಿಯಾದ ಕುತೂಹಲ.

Vijay M R

ಏನಾದರು ಮಾಡಿ ಈ ಸುಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಬೆಂಗಳೂರು ಹಾಗೂ ಕೆಲಸದ ಜಂಜಾಟದಿಂದ ಸ್ವಲ್ಪ ಬಿಡುವು ತೆಗೆದುಕೊಂಡು ಪೊನ್ನಪ್ಪನ ಮದುವೆಯ ನೆಪದಲ್ಲಿ ಸ್ನೇಹಿತರ ಜೊತೆಗೂಡಿ ಮಜಾ ಮಾಡಿಕೊಂಡು, ಕಾವೇರಿ ನದಿಯಲ್ಲಿ ಸ್ವಲ್ಪ ಈಜಿ ಮಿಂದು ಬರುವ ಇಂಗಿತವೇ ಹೊರತು ಬೇರೆ ಯಾವುದೇ ಆಲೋಚನೆ ಇರಲಿಲ್ಲ! ಸರ್ವೇ ಸಾಮಾನ್ಯವಾಗಿ ನಾವು ಎಷ್ಟೇ ಉಪಾಯ ಮಾಡಿದರೂ ಇಂತಹ ಪ್ರವಾಸಗಳಿಗೆ ಹೇಳಿದಷ್ಟು ಜನ ಬರದೇ ಕೊನೆ ಗಳಿಗೆಯಲ್ಲಿ ಕಾರಣ ಹೇಳಿ ಕೈ ಕೊಡುವವರೇ ಹೆಚ್ಚು, ಹಾಗಾಗಿ ನಮಗೆ ಮೊದಲೇ ಇಬ್ಬರ ಮೇಲೆ ಸ್ವಲ್ಪ ಸಂದೇಹವಿತ್ತು. ಅಂದಾಜಿಸಿದಂತೆ ಕಿರಣ್ ಹಾಗು ಬಾಲಾಜಿ ನಮ್ಮ ಈ ಪ್ರವಾಸದ ಒಂದು ದಿನ ಮೊದಲು ಕೆಲಸದ ಕಾರಣ ಹೇಳಿ ಕೊಂಡಿ ಕಳಚಿಕೊಂಡರು. 

ನಾನು ನನ್ನ ಸ್ನೇಹಿತ ವಿನಯ್ ಬೆಳಿಗ್ಗೆ ಸರಿಯಾಗಿ 6 ಗಂಟೆಗೆ ಅವನ ಗಿರಿನಗರ ಮನೆಯ ಹತ್ತಿರದಿಂದ ನಮ್ಮ ಮೂರು ದಿನಗಳ ಪ್ರವಾಸವನ್ನ ಶುರುಮಾಡುವುದು ಮತ್ತು ವಿಶ್ರಾಂತ್ ನೇರವಾಗಿ ಮಂಗಳೂರಿನಿಂದ ನೇರವಾಗಿ ಮದುಮಗ ನಮಗಾಗಿ ಕಾದಿರಿಸಿರುವ “ಕಾವೇರಿ ಪೊಲೆಕೆರೆ”(cauvery polekare) ಎಂಬ ಕಾಫಿ ತೋಟದ ಮಾಲೀಕರ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಲ್ಲಿಗೆ ಬರಲು ನಿರ್ಧರಿಸಿದ್ದೆವು. ನನ್ನ ಸಮಯ ವ್ಯರ್ಥದಿಂದ ಹತ್ತು ನಿಮಿಷ ವಿಳಂಬವಾಗಿ ಶುರುಮಾಡಿ ಗಿರಿನಗರದಿಂದ ಹೊರಟಮೇಲೆ, ನನ್ನ ಹಾಗೂ ಸ್ನೇಹಿತನ ಕುಶಲೋಪರಿಗಳ ವಿಚಾರಗಳ ಮಧ್ಯೆ ನಮ್ಮ ಹೊಟ್ಟೆ ಚುರುಗುಡಲು ಶುರುಮಾಡಿಯಾಗಿತ್ತು. 

ಹೇಳಿ ಕೇಳಿ ನಾವು ಹೊರಟಿದ್ದು ಮೈಸೂರು ರಸ್ತೆಯಲ್ಲಿ ಹಾಗಾಗಿ ನಮ್ಮ ಕಣ್ಣುಗಳನ್ನು ಬಿಡದಿ ತಟ್ಟೆ ಇಡ್ಲಿ ನಾಮಫಲಕಗಳಿಂದ ತಡೆದಿಟ್ಟುಕೊಳ್ಳುವುದು ಸ್ವಲ್ಪ ಕಷ್ಟ ಸಾದ್ಯವಾಯಿತಾದರೂ ನಮ್ಮ ಹಸಿವಿಗೆ ಅದೂ ಒಂದು ಕಾರಣವಾಯಿತು. ಕೋವಿಡ್ ಹಾವಳಿ ಶುರುವಾದಮೇಲೆ ಜನಜಂಗುಳಿಯಿರುವ ಆ ಹೋಟೆಲ್ಗಳತ್ತ ಮನಸ್ಸು ಮಾಡೋದು ಕಷ್ಟವೇ ಸರಿ. ಹಾಗಾಗಿ ನಾವು ಚನ್ನಪಟ್ಟಣದ(channapatna) ನಂತರ ಸಿಗುವ ಶಿವಳ್ಳಿ ಹೋಟೆಲ್(hotel shivalli) ಬಳಿ ನಿಲ್ಲಿಸಿ ನಿತ್ಯ ಕರ್ಮಗಳನ್ನು ಮುಗಿಸಿ, ಸ್ವಲ್ಪ ನಮ್ಮ ಹೊಟ್ಟೆಯ ಹಸಿವನ್ನು ನೀಗಿಸುವ ಮನಸ್ಸು ಮಾಡಿಯಾಗಿತ್ತು. 

ಶಿವಳ್ಳಿ ಹೋಟೆಲ್ ಅಂದರೆ ನನಗೆ ಬೆಳ್ಳಂಬೆಳಿಗ್ಗೆಯೇ ಇಷ್ಟವಾಗುವುದು ಅವರ ಬಿಸಿ ಬೇಳೆ ಬಾತ್ ಮತ್ತು ಬಿಸಿ ಬಿಸಿ ಫಿಲ್ಟರ್ ಕಾಫಿ, ಹಾಗಾಗಿ ಖಾಲಿಯಿದ್ದ ಮೇಜು ಹುಡುಕಿ ಕೂತಾಗಿತ್ತು. ಮೊದಲೇ ಹಸಿದ ಹೊಟ್ಟೆ ಆದರೆ ಸುಮಾರು ಐದು ನಿಮಿಷ ಯಾರೂ ನಮ್ಮನ್ನ ಕೇಳೋರೇ ಇರಲಿಲ್ಲ. ಹಾಗಾಗಿ ನಾನೇ ಅಲ್ಲಿ ಬಿಲ್ಲಿಂಗ್ ಕೌಂಟರ್ ಬಳಿ ನಿಂತಿದ್ದ ಮಧ್ಯಮ ವಯಸ್ಸಿನ ವ್ಯಕ್ತಿಯನ್ನು ಕರೆದು ಅಣ್ಣ ನಮಗೆ ಒಂದು ಪ್ಲೇಟ್ ಬಿಸಿಬೇಳೆ ಬಾತ್ ಮತ್ತು ಇಡ್ಲಿ ವಡಾ ಕೊಡಿ ಅಂದೆ. ಆದರೆ ಆ ವ್ಯಕ್ತಿ ಸರ್ ಕ್ಷಮಿಸಿ ಇನ್ನು ಸಮಯ 7 ಗಂಟೆ ಹಾಗಾಗಿ ಬಿಸಿಬೇಳೆ ಬಾತ್ ಇಲ್ಲ ಬದಲಾಗಿ ಬಿಸಿ ಬಿಸಿ ಪೊಂಗಲ್ ಇದೆ ಎಂದ. ನಾನು ಅದನ್ನು ಸಮ್ಮತಿಸಿ ಬೆಳಗ್ಗಿನ ಚಳಿಯಲ್ಲಿ ಕೈಕಟ್ಟಿ ಕುಳಿತು ವಿನಯ್ ಹತ್ತಿರ ಅಲ್ಲಿನ ಬಿಸಿಬೇಳೆ ಬಾತ್ ಬೆಗ್ಗೆ ಸ್ವಲ್ಪ ಮಾರ್ಕೆಟಿಂಗ್ ಮಾಡುವ ಕೆಲಸದಲ್ಲಿರುವಾಗ ಥಟ್ಟನೆ ನಮ್ಮ ಉಪಹಾರ ನಮ್ಮ ಮೇಜು ಸೇರಿಯಾಗಿತ್ತು. ಪೊಂಗಲ್ ಜೊತೆ ಅವರು ಕೊಡುವ ಹುಣಸೆ ಹುಳಿ ಹಾಗು ಈರುಳ್ಳಿ ಸೌತೆಕಾಯಿ ಸೇರಿಸಿದ ಮೊಸರಿನ ಜೊತೆ ಸವಿದು ಯಾಕೋ ಹೊಟ್ಟೆ ತುಂಬಲಿಲ್ಲ ಅಂತ ಮತ್ತೆ ಉಪ್ಪಿಟ್ಟು ಕೇಸರಿಬಾತ್ ತಿಂದು ಇಬ್ಬರೂ ಕಾಫಿ ಹಾಗೂ ಲೆಮನ್ ಟೀ ಸವಿದು ಅಲ್ಲಿಂದ ಹೊರಟು ಮೈಸೂರು ರಸ್ತೆಯ ಅಭಿವೃದ್ಧಿಯಿಂದಾಗುತ್ತಿರುವ ಕಿರಿಕಿರಿ ಹಾಗೂ ಅದರ ಅತಿವೇಗದ ಗತಿಯಲ್ಲಿ ಸಾಗುತ್ತಿರುವ ಕೆಲಸದ ಕುರಿತು ನಾವು ಮಾತಾಡುತ್ತ ಕೃಷ್ಣರಾಜ ಸಾಗರ ರಸ್ತೆಯ ಮಾರ್ಗವಾಗಿ ಸಾಗಿ ಮತ್ತೆ ವಿರಾಮ ಪಡೆದಿದ್ದು ಹುಣಸೂರು ಹೊರವಲಯದ ರಸ್ತೆಯ ನಕ್ಷತ್ರ ಫ್ಯಾಮಿಲಿ ರೆಸ್ಟೋರೆಂಟ್ ಬಳಿ. 

ನನ್ನ ಇಷ್ಟು ವರ್ಷಗಳ ಮಡಿಕೇರಿ ಮತ್ತು ಕೇರಳ ಪ್ರವಾಸದಲ್ಲಿ ಒಮ್ಮೆಯೂ ಅಲ್ಲಿ ವಿರಾಮ ತೆಗೆದುಕೊಳ್ಳದೆ ಹೋಗಿದ್ದು ನೆನಪಿಲ್ಲ. ಅಲ್ಲಿ ಲೆಮನ್ ಟೀ ಕುಡಿದು ನಂತರ ಅಲ್ಲಿಂದ ನೇರವಾಗಿ ಹೊರಟಿದ್ದೆ ಕಾವೇರಿ ಪೊಲೆಕೆರೆ ಕಾಫಿ ತೋಟದ ಕಡೆಗೆ. 

ಹುಣಸೂರಿನಿಂದ ವಿರಾಜಪೇಟೆಯ ಕಡೆಗೆ ಸಂರಕ್ಷಿತ ನಾಗರಹೊಳೆ ರಾಷ್ಟ್ರೀಯ ವನ್ಯಜೀವಿ ಉದ್ಯಾನವನದ ಮಾರ್ಗವಾಗಿ ಸುಮಾರು 44 ಕಿಲೋ ಮೀಟರ್ ಕ್ರಮಿಸಿದರೆ ನಮಗೆ ಸಿಗುವುದೇ ಗೋಣಿಕೊಪ್ಪಲು. ಅಲ್ಲಿಂದ ನಾವು ಬಲಕ್ಕೆ ತಿರುವು ಪಡೆದು ಅಮ್ಮತ್ತಿಯ ಮಾರ್ಗವಾಗಿ 20 ಕಿಲೋ ಮೀಟರ್ ಉದ್ದಕ್ಕೂ ಹಚ್ಚ ಹಸುರಿನ ಕಾಫಿ ತೋಟದ ಮಧ್ಯೆ ಸಾಗುವ ದಾರಿ ಸ್ವಲ್ಪ ಹಾಳಾಗಿದ್ದರೂ ಆ ಹಸಿರು ಕಣ್ಣಿಗೆ ಮತ್ತು ಮನಸ್ಸಿಗೆ ಕೊಡುವ ಆನಂದದ ಮುಂದೆ ಏನೇನು ಅನ್ನಿಸುವುದಿಲ್ಲ ಆದರೆ ನಮ್ಮ ಕಾರಿಗೆ ಸ್ವಲ್ಪ ಬೇಜಾರಾದುದರಲ್ಲಿ ಸಂದೇಹವಿಲ್ಲ. ಸುಮಾರು ಮುವ್ವತ್ತು ನಿಮಿಷಗಳ ಆ ಸುಂದರ ಪ್ರಯಾಣದಲ್ಲಿ ನಾವು ಕಾವೇರಿ ಪೊಲೆಕೆರೆ ಕಾಫಿ ತೋಟ ತಲುಪಿದೆವು ಹಾಗಾಗಿ ಅಲ್ಲಿಗೆ ತ್ರಿವಿಗಳ ಸಂಗಮವಾಯಿತು.

ಕಾವೇರಿ ಪೊಲೆಕೆರೆ ಕಾಫಿ ತೋಟ ಒಂಥರಾ ನನ್ನ ನೆಚ್ಚಿನ ಮನೆಯಾಗಿದೆ ಅಂದರೆ ತಪ್ಪಾಗದು. ತೋಟದ ಮಾಲೀಕರೆಂದರೆ ನನಗೆ ಅಚ್ಚು ಮೆಚ್ಚು. ಹಾಗಾಗಿ ನಾನು ಅವರ ಪರಿಚಯ ಮಾಡಿಲ್ಲವೆಂದರೆ ಈ ಪ್ರವಾಸಕ್ಕೆ ಬೆಲೆಯಿಲ್ಲದಂತಾಗಬಹುದು. 

1982 – 95 ಆರ್ಟಿ ರೆಜಿಮೆಂಟ್ ನ ನಿವೃತ್ತ ಸೈನಿಕರಾದ  ಹರೀಶ್ ಕುಶಾಲಪ್ಪ ಹಾಗು ಅವರ ಧರ್ಮಪತ್ನಿ ಮೈನಾ ಹರೀಶ್ ಅವರು ತಮ್ಮನ್ನು ಸದಾ ತೊಡಗಿಸಿಕೊಂಡಿರಲು ಹಾಗು ಹೊಸ ಅತಿಥಿಗಳನ್ನು ಬರಮಾಡಿಕೊಂಡು ಸತ್ಕರಿಸಲು ತಾವೇ ತಮ್ಮ ಮನೆಯ ಮೇಲೆ ನಿರ್ಮಿಸಿಕೊಂಡಿರುವ ಮೂರು ಸುಸಜ್ಜಿತ ರೂಮುಗಳು, ಊಟ ಮಾಡಲು ವಿಶಾಲವಾದ ಜಾಗ ಹಾಗೂ ಬೆಟ್ಟ ಗುಡ್ಡದ ಜೊತೆಯಾಗಿರುವ ಕಾಫಿ ತೋಟಕ್ಕೆ ಮುಖ ಮಾಡಿ ಕುಳಿತು ಪ್ರಕೃತಿಯನ್ನು ಸವಿಯಲು ನಿರ್ಮಿಸಿರುವ ಸುಮಾರು ಹತ್ತು ಜನ ಕುಳಿತುಕೊಳ್ಳುವ ವ್ಯವಸ್ಥೆಯುಳ್ಳ  ಪಡಸಾಲೆ ಒಂದು ಥರ ಬೆಟ್ಟದ ಮೇಲಿನ ತುದಿಯಲ್ಲಿರುವ ದೇವಸ್ಥಾನದಂತೆ. ವಿಶೇಷವಾಗಿ ಈ ಅತಿಥಿ ಗೃಹವು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದ್ದಾಗಿದೆ ಹಾಗಾಗಿ ಅತಿಯಾದ ಮುತುವರ್ಜಿಯಿಂದ ತಮ್ಮ ಅತಿಥಿಗಳನ್ನು ಸತ್ಕರಿಸುವ ಸಜ್ಜನ ಮನೋಭಾವದ ಅವರು ನನಗೆ ಸದಾ ಅಚ್ಚು ಮೆಚ್ಚು. ಅವರು 2020 ರಲ್ಲಿ ನನ್ನನ್ನು ಸೇರಿ, ನನ್ನ ಸ್ನೇಹಿತರು ಮತ್ತು ನನ್ನ ಕುಟುಂಬದವರನ್ನು ಮೂರುಬಾರಿ ಸತ್ಕರಿಸಿದ್ದಾರೆಂಬುದೇ ಒಂದು ಸಂತೋಷ. ಯಾರಿಗಾದರೂ ಅಲ್ಲಿಗೆ ಹೋಗಬೇಕೆನ್ನುವ ಇಚ್ಛೆ ಇದ್ದರೆ ಕಾವೇರಿ ಪೊಲೆಕೇರಿ ಎಂದು ಗೂಗಲ್ ಮಾಡಿ ನಿಮಗೆ ಅದರ ಪೂರ್ಣ ವಿವರ ಸಿಕ್ಕೀತು. 

ನಾವು ಮಧ್ಯಾಹ್ನಊಟಕ್ಕೆ ಬರುವ ಸುದ್ದಿ ಅವರಿಗೆ ತಿಳಿಸದಿದ್ದರಿಂದ ನಾವು ಅಲ್ಲೇ ಸುಮಾರು ಆರು ಕಿಲೋಮೀಟರು ದೂರದಲ್ಲಿದ್ದ ಮೂರ್ನಾಡು ಎಂಬ ಸಣ್ಣ ಪಟ್ಟಣಕ್ಕೆ ಹೋಗಿ ತುಂಬಾ ಒಲ್ಲದ ಮನಸ್ಸಿನಿಂದ ಸಸ್ಯಾಹಾರಿ ಹೋಟೆಲ್ನಲ್ಲಿ ಮೀಲ್ಸ್ ಜೊತೆ ಅಣಬೆ ಮಂಚೂರಿಯನ್ ಬಾರಿಸಿ ಸ್ವಲ್ಪ ಹಸಿವನ್ನು ಕಡಿಮೆ ಮಾಡಿ ತೋಟದ ಮನೆ ಸೇರಿಕೊಂಡು ನಮ್ಮಷ್ಟಕ್ಕೆ ನಾವು ಛೇ ಕೊಡಗಿಗೆ ಬಂದು ಸಸ್ಯಾಹಾರ ಊಟ ತಿನ್ನೋದು ಅಂದ್ರೆ ನಮಗೆ ಸ್ವಲ್ಪ ಅವಮಾನ ಅಂದುಕೊಂಡು ಕುಳಿತಿರುವಾಗಲೇ ಇನ್ನು ನಾಲ್ಕು ಜನ ಮನೀಶನ ಸ್ನೇಹಿತರು ನಮ್ಮ ಜೊತೆಯಾದರು, ಅವರೆಲ್ಲರೂ ನಮಗೆ ಪರಚಯಸ್ಥರೇ ಹಾಗಾಗಿ ನಾವೆಲ್ಲ ಒಟ್ಟಿಗೆ ಬಿಸಿ ಬಿಸಿ ಕಾಫಿ ಕುಡಿದು ಇಳಿ ಸಂಜೆಯ ಹೊತ್ತಿಗೆ ಕಾವೇರಿ ನದಿಯ ಕಡೆ ಹೊರಡುವ ಮನಸ್ಸು ಮಾಡಿದೆವು. 

ಆ ಕಾಫಿ ತೋಟಕ್ಕೆ ಹೊಂದಿಕೊಂಡಂತೆ ಕಾವೇರಿ ನದಿ ಹರಿಯೋದು ಆ ತೋಟದ ವಿಶೇಷ ಅದಕ್ಕಾಗೇ ಅವರು ತಮ್ಮ ಮನೆಗೆ ಕಾವೇರಿ ಪೊಲೆಕೆರೆ ಅಂತಲೇ ನಾಮಕರಣ ಮಾಡಿರೋದು. ಸುಮಾರು 40 ಅಡಿ ಆಳ, ನೂರು ಮೀಟರ್ ಅಗಲ ಹಾಗೂ ಅನಿಯಮಿತ ಉದ್ದದ ನದಿಯಾಗಿರುವುದರಿಂದ ನಾವು ಮುಂಜಾಗ್ರತಾ ಕ್ರಮವಾಗಿ ಜೀವರಕ್ಷಕ ಹೊದಿಕೆಯೊಂದಿಗೆ ಈಜಲು ಹೋಗಲು ನಿರ್ಧರಿಸಿದ್ದೆವು. (ಯಾವುದೇ ಅಪರಿಚಿತ ನೀರಿನ ಸ್ಥಳಗಳಲ್ಲಿ ಜೀವರಕ್ಷಕ ಸಾಧನಗಳು ಬಹುಮುಖ್ಯ) ಹರೀಶ್ ಅಂಕಲ್ ತಮ್ಮ ಸುಮಾರು 40 ವರ್ಷಗಳ ಮಹಿಂದ್ರಾ ಜೀಪ್ನಲ್ಲಿ ಎಲ್ಲಾ ಸಾಮಗ್ರಿಗಳನ್ನು ಅಡುಕಿ ಏರಿಳಿತದ ಜಾಗಗಳಲ್ಲಿ ತಮ್ಮ ಜೀಪ್ ತಂದು ನಿಲ್ಲಿಸಿ ನಮಗೆಲ್ಲ ಆ ನದಿ ನೀರಿನ ಬಗ್ಗೆ ವಿವರಿಸಿ ನಮ್ಮನ್ನು ನದಿಗೆ ಧುಮುಕಲು ಪ್ರೇರೇಪಿಸಿದರು, ಯಾಕೆಂದರೆ ಅಲ್ಲಿ ಸುಮಾರು ಅರ್ಧ ಜನಕ್ಕೆ ನೀರೆಂದರೆ ಪ್ರಾಣ ಆದರೆ ಅವರಿಗೆ ಪ್ರಾಣಭಯ! 

ನೋಡುತ್ತಿದ್ದಂತೆ ಹರೀಶ್ಅವರ ಮಗ ದಿಶನ್ ಬೋಪಣ್ಣ, ಇಪ್ಪತ್ತರ ಹರೆಯದ ಸ್ಫುರದ್ರೂಪಿ ಯುವಕ. ಸದ್ಯ ವಿಮಾನ ಓಡಿಸುವ ವಿದ್ಯಾಭ್ಯಾಸವನ್ನು ನ್ಯೂಜಿಲ್ಯಾಂಡ್ ದೇಶದಲ್ಲಿ ಕೋವಿಡ್ ಕಾರಣದಿಂದ ಅಂತರ್ಜಾಲದ ಮುಖೇನ ಅಭ್ಯಾಸ ಮಾಡುತ್ತಿದ್ದು ಪರೀಕ್ಷೆ ಮುಗಿಸಿ ಸ್ವಲ್ಪ ವಿಶ್ರಾಂತಿಗಾಗಿ ಮನೆಯಲ್ಲಿ ಇದ್ದು ಬೇಜಾರಾಗಿತ್ತೇನೋ. ಹಾಗಾಗಿ ಅವರು ಕಾವೇರಿ ನದಿಯಲ್ಲಿ ಈಜಲು ನಮ್ಮ ಜೊತೆಯಾದರು. 

ಸುಮಾರು ಒಂದೂವರೆ ಗಂಟೆಗಳ ಕಾಲ ನಾವು ಅಲ್ಲೇ ನೀರಿನಲ್ಲಿ ಸ್ನೇಹತರೆಲ್ಲ ಒಟ್ಟಾಗಿ ಆಡಿ, ಮತ್ತೆ ದಿಶನ್ ಹಾಗೂ ವಿನಯ್ ಜೊತೆಗೂಡಿ ನದಿಯ ದಡದಲ್ಲಿ ಬಿದ್ದಿದ್ದ ಬೃಹದಾಕಾರದ  ಮರದ ಒಣಗಿದ ಬೇರಿನ ತುಂಡನ್ನು ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಕೊಂಡೊಯ್ಯುವ ಹಾಗು ಅದರ ಮೇಲೆ ಏರಿ ಕೂರುವ ಸಾಹಸ ಮಾಡಿದ್ದೆ ಒಂದು ಮಹದಾನಂದ.  ಸಾಮಾನ್ಯವಾಗಿ ಒಣಗಿದ ಮರದ ತುಂಡು ನೀರಿನಲ್ಲಿ ತೇಲುತ್ತದೆ ಆದರೆ ಅದರ ಮೇಲೆ ನಮ್ಮ ತೂಕ ಬಿದ್ದಾಗ ಅದು ವಿರುದ್ಧವಾಗಿ ಮಗುಚಿಬಿದ್ದು ನಮ್ಮನ್ನು ನೀರಿನಲ್ಲಿ ಮುಳುಗಿಸುತ್ತದೆ, ಅದೇ ಆ ಆಟದ ಮಜಾ ಯಾಕೆಂದರೆ ನೀರಿನಲ್ಲಿ ಮುಳುಗಿ ಹೊಟ್ಟೆತುಂಬ ನೀರು ಕುಡಿದು ಕಣ್ಣು ಮೂಗನ್ನು ಉರಿಯೆಬ್ಬಿಸಿ ಸುಧಾರಿಸಿಕೊಳ್ಳೋದೇ ಒಂದು ಖುಷಿ. ನೋಡ ನೋಡುತ್ತಲೇ ಇಳಿ ಸಂಜೆ ಹೋಗಿ ರಾತ್ರಿಯಾಗತೊಡಗಿತು ಹಾಗಾಗಿ ನಾವೆಲ್ಲ ಮನೀಶನ ಮದುವೆಗೆ ಹೋಗೋ ತಯಾರಿ ಮಾಡಿಕೊಂಡು ಅಲ್ಲಿಂದ ಸುಮಾರು ಒಂಬತ್ತು ಕಿಲೋ ಮೀಟರ್ ದೂರದಲ್ಲಿರುವ ಮದುವೆಮನೆಗೆ ಸೇರಿಕೊಂಡು ಸ್ನೇಹಿತರೆಲ್ಲ ಕೂಡಿ ತಿಂದು ತೇಗಿದ್ದು ಬಿಟ್ಟರೆ ಮನೀಶನ ಬಗ್ಗೆ ಮಾತಾಡಿದ್ದು ಸ್ವಲ್ಪ ಕಡಿಮೆಯೇ. ಕೊಡಗಿನ ಮದುವೆಯೆಂದರೆ ಹಾಗೇ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಎಲ್ಲರೂ ಒಟ್ಟಾಗಿ ಸೇರಿ ಗುಂಡು ತುಂಡು ಹೊಡೆದು ಕುಣಿತದಲ್ಲಿ ತಲ್ಲೀನರಾಗಿರುವುದು ಸಹಜ. ಹೇಗೋ ಮನೀಶನ ತಂದೆಯಿಂದ ಬಚಾವಾಗಿ ನಾನು ಮತ್ತು ವಿಶ್ರಾಂತ್ ಗುಂಡಿನ ದಾಳಿಯಿಂದ ಹೊರಗುಳಿದದ್ದು ದೊಡ್ಡ ಸಾಹಸವೇ ಸರಿ. ತಡರಾತ್ರಿ ನಾವು ನಮ್ಮ ಕಾಫಿ ತೋಟದ ಮನೆಗೆ ಬಂದು ಮಲಗಿದೆವು.

ಬೆಳಿಗ್ಗೆಯೇ ಎದ್ದರೆ ದೇಹಕ್ಕೆ ಚುಮು ಚುಮು ಚಳಿ, ನಮ್ಮ ಕಣ್ಣಿಗೆ ಕಂಡಿದ್ದು ಎಲ್ಲೆಲ್ಲೂ ಮಂಜು ಮುಸುಕಿ ಹಿಮದ ಹನಿಗಳಿಂದ ಮುಚ್ಚಿದ ಹಸಿರುಹಾಸಿನಂತಹ  ಕಾಫಿ ತೋಟ, ಮರಗಿಡಗಳು, ಬೆಟ್ಟ ಗುಡ್ಡಗಳು, ಹಾಗೇ ಹಚ್ಚ ಹಸಿರಿನ ಎಲೆಗಳಿಂದ ಮುಚ್ಚಿಕೊಂಡಿದ್ದರು ಕದ್ದು ಮುಚ್ಚಿ ಇಣುಕಿ ನೋಡುವ ಕಟಾವಿಗೆ ಬಂದಿರುವ ಕಡುಗೆಂಪಿನ ಹಾಗೂ ಹಸಿರಿನ ಕಾಫಿ ಹಣ್ಣು ಕಾಯಿಗಳು. ಅವನ್ನೆಲ್ಲ ನೋಡಲಿಕ್ಕೆ ಕಣ್ಣಿಗೆ ಒಂಥರಾ ಹಬ್ಬ ಹಾಗು ಸುತ್ತಲೂ ಹಕ್ಕಿ ಪಕ್ಷಿಗಳ ಕಿಚಿಗುಡುವ ಕಲರವದ ಸದ್ದು ಕೇಳಲಿಕ್ಕೆ ಕಿವಿಗೆ ಕಂಪು ಇವೆಲ್ಲದರ ಮಧ್ಯೆ ಹರೀಶ್ ಅವರ ಬಿಸಿ ಬಿಸಿ ಕಾಫಿ ಅದರ ಮಜವನ್ನು ವರ್ಣಿಸಲಸಾಧ್ಯ, ಅದನ್ನು ಅನುಭವಿಸಿಯೇ ನೋಡಬೇಕು. ನಾನು, ವಿನಯ್, ವಿಶ್ರಾಂತ್ (ತ್ರಿವಿಗಳು) ಒಟ್ಟಾಗಿ ಒಂದು ದೀರ್ಘ ನಡಿಗೆ ಹೋಗೋಣವೆಂದು ಅಲ್ಲೇ ಮನೆಯ ಮಗ್ಗುಲಲ್ಲಿ ಸೀಬೆಯ ಮರದಲ್ಲಿದ್ದ ಹಣ್ಣನ್ನು ಕಿತ್ತು ತಿನ್ನುತ್ತಾ ಹೊರಟು ಸುಮಾರು ಮೂರು ಕಿಲೋ ಮೀಟರ್ ನಡೆದು ಹಿಂದಿರುಗುವಾಗ ಹಸಿರು ಬಣ್ಣದ ಹಸಿ ಕಾಳು ಮೆಣಸಿನ ಸವಿಯನ್ನು ಕಾಫಿ ಹಣ್ಣಿನೊಂದಿಗೆ ಸುತ್ತ ಮುತ್ತಲಿನ ಪ್ರಕೃತಿಯನ್ನು ಸವಿದು ಮತ್ತೆ ಮನೆ ಸೇರಿಕೊಂಡೆವು.  

ಹೇಗೋ ಮನಸ್ಸು ಮಾಡಿ ಆ ಚಳಿಯಲ್ಲಿ ಸರತಿಯಾಗಿ ಬಿಸಿ ನೀರಿನ ಸ್ನಾನ ಮಾಡಿ ಎಲ್ಲರು ಒಟ್ಟಾಗಿ ಕುಳಿತು ಬಿಸಿ ಬಿಸಿ ಮಸಾಲೆ ದೋಸೆ, ಅಕ್ಕಿ ರೊಟ್ಟಿಯನ್ನು ಹಸಿ ತೆಂಗಿನಕಾಯಿಯ ಚಟ್ನಿಯ ಜೊತೆ ಸವಿದು ಮನೀಶನ ಮದುವೆಯ ಸಂಭ್ರಮ, ಸಡಗರ, ಊಟೋಪಚಾರದ ಕಡೆಗೆ ಮತ್ತೆ ಪ್ರಯಾಣ. ಎಲ್ಲ ಮುಗಿದಮೇಲೆ ನಮ್ಮನ್ನ ಉಪಚರಿಸುತ್ತಿರುವ ಕಾವೇರಿ ಪೊಲೆಕೆರೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ ಏನಾದರು ಕೊಡಿಸಬೇಕೆಂದೆನಿಸಿ ನನ್ನ ಮಗಳಿಗೆ ಏನು ಇಷ್ಟವೋ ಅದನ್ನೆಲ್ಲ ಅಲ್ಲಿ ಇದ್ದ ಹನ್ನೆರಡು ಮಕ್ಕಳಿಗೂ ಕೊಂಡೋಗಿ ಕೊಟ್ಟಾಗ ಅವರ ಮುಖದಲ್ಲಿದ್ದ ಸಂತಸ ಹೇಳತೀರದು. ನಮ್ಮನ್ನು ಮುಟ್ಟಲು ಹಾಗೂ ಜೊತೆಯಲ್ಲಿ ನಿಲ್ಲಲು ಆ ಮುಗ್ಧ ಕಾಡಿನ ಸ್ವಚ್ಛಂದದ ಹೂವಿನಂತ ಮನಸ್ಸಿನ ಮಕ್ಕಳಿಗೆ  ಏನೋ ಒಂದು ಅಂಜಿಕೆ, ಭಯ. ಆದರೆ ಅವರ ಜೊತೆ ನಿಂತು ಒಂದು ಫೋಟೋ ತೆಗಿಸಿಕೊಂಡು ಅವರಿಗೆ ಸ್ವಲ್ಪ ಓದಿನಕಡೆ ಗಮನಕೊಡಲು ಹೇಳಿದೆವು. ಯಾಕೆಂದರೆ ಹನ್ನೆರೆಡರಲ್ಲಿ ಒಂದೆರಡು ಮಕ್ಕಳು ಮಾತ್ರ ಶಾಲೆ ನೋಡಿರೋದು. ತದನಂತರ ಮತ್ತೆ ಇಳಿ ಸಂಜೆಯ ಕಾವೇರಿ ನೀರಿನೊಡನೆ ಒಡನಾಟ ಹೀಗೆ ಎರಡನೇ ದಿನವೂ ಮುಗಿದೋಯ್ತು. 

ಮೂರನೆಯ ದಿನ ನಮ್ಮ ಮನಸ್ಸಿನ ಒಂದೇ ಯೋಚನೆ ಮತ್ತದೇ ಬೆಂಗಳೂರಿನೆಡೆಗಿನ ಪ್ರಯಾಣ, ಅಯ್ಯೋ ಇಷ್ಟು ಬೇಗ ಹೋಗಬೇಕೆ, ಯಾರಾದರೂ ಶುಕ್ರವಾರ ಕೊಡಗಿನಿಂದ ಬೆಂಗಳೂರಿಗೆ ಹೋಗೋರುಂಟ ಎಂಬ ಮಾತುಕತೆ. ನೆಚ್ಚಿನ ಹರೀಶ್ ಹಾಗೂ ಮೈನಾ ದಂಪತಿಗಳು ಕುಟುಂಬ ಸಮೇತ ನಮ್ಮನ್ನ ಮತ್ತೆ ಬನ್ನಿ ಎಂದು ಹಸನ್ಮುಖಿಗಳಾಗಿ ಬೀಳ್ಕೊಟ್ಟದ್ದು ಮರೆಯಲಾರದ ಗಳಿಗೆ. ಪ್ರಕೃತಿಯ ಮಡಿಲಿನಿಂದ ಪಟ್ಟಣದಕಡೆಗೆ ಮುಖ ಮಾಡುವುದು ನನಗಂತೂ ಕಷ್ಟಸಾಧ್ಯ ಯಾಕೆಂದರೆ ನಮ್ಮ ಹೊಟ್ಟೆಯನ್ನು ತಣಿಸುತ್ತಿರುವುದು ಅದೇ ಪಟ್ಟಣ, ಹಾಗಾಗಿ ನನಗೆ ಸಾಧ್ಯವಾದಷ್ಟು ವಾರಾಂತ್ಯಗಳನ್ನು ಹಸಿರಿನ ಕಾಡು ಮೇಡುಗಳಲ್ಲಿ ಕಳೆಯೋ ಹಂಬಲ. ತಿಂಗಳ ಒಂದು ವಾರಾಂತ್ಯವನ್ನಾದರೂ ನಾವು ಹೀಗೆ ನಿಸರ್ಗದ ಜೊತೆಯಲ್ಲಿ ಬೆರೆಯುವುದರಿಂದ ನಮ್ಮ ದೇಹ ಹಾಗು ಮನಸ್ಸು ಎರಡು ಚೈತನ್ಯಗೊಳ್ಳುವುದರಲ್ಲಿ ಎರಡನೇ ಮಾತೇ ಇಲ್ಲ. ನಮ್ಮ ಕನ್ನಡಿಗರ ಪುಣ್ಯವೆಂದರೆ ಬೆಂಗಳೂರಿನಿಂದ ಒಂದೆರಡು ಗಂಟೆಗಳಲ್ಲಿ ತಲುಪಬಹುದಾದ ಸುಮಾರು ಕಾಡು, ಮೇಡು, ಬೆಟ್ಟ ಗುಡ್ಡಗಳು ಇರುವುದು.

ನಾನು ಹಾಗೂ ವಿನಯ್ ನಮ್ಮಷ್ಟಕ್ಕೆ ಮಾತಾಡಿಕೊಂಡದ್ದು, ನಮ್ಮ ಒಂದು ವಿಚಿತ್ರ ಅನುಭವವೇನೆಂದರೆ ಪ್ರವಾಸ ಹೋಗುವಾಗ ನಿರ್ಧಾರಿತ ಸ್ಥಳ ತಲುಪಲು ತುಂಬಾ ಸಮಯ ತೆಗುದುಕೊಳ್ಳುತ್ತೆ. ಆದರೆ ಮರಳಿ ಬರುವಾಗ ತುಂಬಾ ಬೇಗನೆ ಮನೆ ಸೇರಿದ ಹಾಗೆ ಅನ್ನಿಸುತ್ತದೆ! ನನಗನಿಸಿದ್ದು ಜೀವನವೇ ಹಾಗೇ ಗುರಿಯೊಂದನ್ನು ಗುರುತಾಗಿಸಿ ತಲುಪಲು ಸುಮಾರು ವರ್ಷಗಳೇ ಕಳೆದುಹೋಗುತ್ತವೆ. ಆದರೆ ಎಚ್ಚರ ತಪ್ಪಿದರೆ ಆ ಗುರಿಯೆಂಬ ತುತ್ತ ತುದಿಯಿಂದ ಬುಡಕ್ಕೆ ಬೀಳಲು ಅಂತಹ ಹೇಳಿಕೊಳ್ಳುವ ಸಮಯ ಬೇಕಾಗುವುದಿಲ್ಲ!

Related Articles

Leave a Reply

Your email address will not be published. Required fields are marked *

Back to top button