ಅಘನಾಶಿನಿಯ ದಡದಲ್ಲಿದೆ ಅದ್ಭುತ ಐತಿಹಾಸಿಕ “ಮಿರ್ಜಾನ್ ಕೋಟೆ”
ಯಾಣದಲ್ಲಿ (Yana) ಭೈರವೇಶ್ವರನ ದರ್ಶನ ಪಡೆದು ಸವಾರಿ ಹೊರಟ್ಟಿದ್ದು ಉತ್ತರಕನ್ನಡದ (ಕಾರವಾರ) ಕುಮಟಾ ತಾಲೂಕಿನ ಮಿರ್ಜಾನಿಗೆ (Mirjan).
ಗೋಕರ್ಣದಿಂದ (Gokarna) ಸುಮಾರು 23 ಕಿಮಿ ದೂರದಲ್ಲಿರುವ ಮಿರ್ಜಾನ್ ಕೋಟೆ, (Mirjan Fort) ಕುಮಟಾ (Kumta) ಪಟ್ಟಣದಿಂದ 10.5 ಕಿಮಿ ದೂರದಲ್ಲಿದೆ.
ಸುಮಾರು 11.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಕೋಟೆಯಿದ್ದು ನೋಡಲು ತುಂಬಾ ಆಕರ್ಷಕವಾಗಿದೆ. ಈ ಕೋಟೆಯು ಕರಾವಳಿ ಪ್ರದೇಶದಲ್ಲಿ (Coastal) ಕಂಡುಬರುವ ಜಂಬಿಟ್ಟಿಗೆ ಕಲ್ಲಿನಿಂದ ನಿರ್ಮಾಣವಾಗಿದೆ.
ಅಘನಾಶಿನಿ ನದಿಯು ಮಿರ್ಜಾನ್ ಕೋಟೆಯನ್ನು ನೈಸರ್ಗಿಕ ಪರಿಸರದ ನಡುವೆ ಹೊಂದಿದೆ. ಎತ್ತರದ ಛಾವಣಿಗಳು ಮತ್ತು ಬುರುಜುಗಳನ್ನು ಹೊಂದಿರುವ ಈ ಕೋಟೆಯು ಪ್ರಸಿದ್ಧ ವಾಸ್ತುಶಿಲ್ಪದಿಂದ ಕೂಡಿದೆ.
ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ. ಈ ಕೋಟೆಯನ್ನು ಪ್ರವೇಶಿಸುತ್ತಿದ್ದಂತೆ ಒಂದು ದೊಡ್ಡ ಮಹಾದ್ವಾರವನ್ನು ಮತ್ತು ಮೂರು ಉಪದ್ವಾರವನ್ನು ಕಾಣಬಹುದು.
ಅದಲ್ಲದೇ ಇಲ್ಲಿ ಹಲವಾರು ಕಂದಕಗಳು, ದರ್ಬಾರ ಹಾಲ್ (Darbar Hall), ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ ದೇವಸ್ಥಾನ, ಮಸಿದಿಯಂತಹ ಅವಶೇಷಗಳನ್ನು ಮತ್ತು ಈ ಕೋಟೆಯಲ್ಲಿ ದೊಡ್ಡದಾದ 9 ಭಾವಿಗಳು ನೋಡಲು ಸಿಗುತ್ತದೆ.
ಈ ಕೋಟೆ ಹಲವಾರು ಇತಿಹಾಸವನ್ನು ಹೊಂದಿದೆ. ಕರ್ನಾಟಕ ಅನೇಕ ಸ್ಮಾರಕಗಳ ನಾಡು. ಅವುಗಳಲ್ಲಿ ಹೆಚ್ಚಿನವು ಪೌರಾಣಿಕ ರಾಜರು ಮತ್ತು ರಾಜಕುಮಾರರಿಂದ ನಿರ್ಮಿಸಲ್ಪಟ್ಟಿದ್ದರೆ, ಮಹಿಳೆಯ ಸ್ಪರ್ಶವನ್ನು ಹೊಂದಿರುವ ಸುಂದರವಾದ ರಚನೆಗಳಿವೆ.
ಪ್ರಾಚೀನ ಭಾರತೀಯ ವಾಸ್ತುಶಿಲ್ಪ (Indian Architecture) ಮತ್ತು ಇತಿಹಾಸವನ್ನು (history) ವ್ಯಾಖ್ಯಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳಾ ವಾಸ್ತುಶಿಲ್ಪಿಗಳು ಇದ್ದರು.
ಮಿರ್ಜಾನ್ ಕೋಟೆಯು ಈ ವಿಶಿಷ್ಟ ರಚನೆಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಾಳುವ ವಂಶದ ಕಾಳುಮೆಣಸಿನ ರಾಣಿ (Queen of Pepper) ಎಂದೇ ಪ್ರಖ್ಯಾತಿಗೊಂಡಿದ್ದ ಗೇರುಸೊಪ್ಪೆಯ (Gerosoppe) ರಾಣಿ ಚೆನ್ನಭೈರಾದೇವಿ (Queen Chennabhairadevi) ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಹೇಳಲಾಗುತ್ತದೆ.
ಈ ಕೋಟೆಯನ್ನು ಕಟ್ಟಿರುವವರ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿದ್ದು, ಇಬ್ನಬಟೂಟ ಎಂಬ ನವಾಯತ ರಾಜ 1200 ರಲ್ಲಿ ಕಟ್ಟಿರುವುದಾಗಿ ಹೇಳುತ್ತಾರೆ.
ಇನ್ನೊಂದು ವಾದದ ಪ್ರಕಾರ ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಇದನ್ನು 1608-1640 ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಿದನೆಂದು ಹೇಳುತ್ತಾರೆ.
ಹೆಚ್ಚಿನವರ ಪ್ರಕಾರ ಇದು ಗೇರುಸೊಪ್ಪೆಯ ರಾಣಿ ಕಟ್ಟಿರುವುದು ಎಂಬ ಮಾತು ಸ್ಥಳೀಯವಲಯದಲ್ಲಿದೆ.
ರಾಣಿ ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನು ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ.
ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಈ ಪ್ರದೇಶವು ಅಕ್ಕಿ ಮತ್ತು ಕಾಳುಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು ಎಂದೆನ್ನಬಹುದು.
ಈ ಕೋಟೆ ಮಳೆಗಾಲದಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ ಮತ್ತು ಪ್ರವಾಸಿಗರನ್ನು ಸೆಳೆಯುತ್ತದೆ.
ನೀವು ವರ್ಷವಿಡೀ ಈ ಕೋಟೆಗೆ ಭೇಟಿ ನೀಡಬಹುದಾದರೂ, ಸೆಪ್ಟೆಂಬರ್‌ನಿಂದ ಫೆಬ್ರವರಿ ನಡುವಿನ ತಿಂಗಳುಗಳು ಭೇಟಿ ನೀಡುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.