ಪುಟಾಣಿ ವಾಹನದಲ್ಲಿ ಜಗವ ಸುತ್ತುವ ವಿಶಿಷ್ಟ ಜೋಡಿ
ಪ್ರವಾಸವೆಂಬುದು ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಸಮ್ಮೋಹನಗೊಳಿಸುವ ಅತ್ಯುನ್ನತ ಕ್ರಿಯೆ. ಇನ್ನೂ ಈ ಪ್ರವಾಸಕ್ಕೆ ಅಲೆಮಾರಿತನದ ನೂಲುಗಳನ್ನು ಹೆಣೆದು ಸುಂದರ ಸಾಹಸಗಾಥೆಯನ್ನ ಸಿದ್ಧಪಡಿಸಿದ ಅಪರೂಪದ ಜೋಡಿಯ ಕಥೆಯಿದು.
- ಆದಿತ್ಯ ಯಲಿಗಾರ
ಕಳೆದ ಕೆಲ ವರ್ಷಗಳಿಂದ ವ್ಯಾನ್ ಲೈಫ್ ಎಂಬ ಪರಿಕಲ್ಪನೆ ಪ್ರಾಪಂಚಿಕವಾಗಿ ಬಹಳ ಜನಪ್ರಿಯವಾಗುತ್ತಿದೆ. ಒಂದು ವಾಹನಕ್ಕೆ ಮನೆಯ ರೂಪವನ್ನು ಕೊಟ್ಟು, ಜೀವನವನ್ನು ಸಾಗಿಸಲು ಅವಶ್ಯಕ ಸಾಮಾನು ಸರಂಜಾಮುಗಳನ್ನೂ ಹೇರಿಕೊಂಡು ಮತ್ತು ಬದುಕಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು, ರಹದಾರಿಗಳನ್ನ ಅರಸುತ್ತಾ, ಅಸಂಖ್ಯ ಮೈಲಿಗಳನ್ನ ಪಯಣಿಸುತ್ತ, ಪ್ರತಿಯೊಂದು ತಾಣದಲ್ಲಿಯೂ ವಿಶಿಷ್ಟ ಅನುಭೂತಿಗಳನ್ನ ಪಡೆಯುತ್ತಾ ಜೀವನದ ಹೆಚ್ಚು ಕಾಲ ಬರೀ ಪ್ರಯಾಣ ಮಾಡುವುದು ಈ ಪರಿಕಲ್ಪನೆಯ ಒಂದು ಪ್ರಕ್ರಿಯೆ. ಇಂತಹ ವಾಹನಗಳಿಗೆ ರಿಕ್ರಿಯೇಷನ್ ವೆಹಿಕಲ್ (Recreation Vehicle) ಎಂದು ಹೆಸರು.
ಅಂದುಕೊಂಡಷ್ಟು ಸುಲಭವಲ್ಲ ಈ ಪಯಣ
ಈ ತರಹದ ಜೀವನ ಚಿತ್ರಣ ಓದಿದಷ್ಟು, ಕೇಳಿದಷ್ಟು,ನೋಡಿದಷ್ಟು ಸುಲಭವಲ್ಲ. ಈ ಪರಿಯ ಬಾಳುವೆಯ ಬಾಳಲು ಭಂಡ ಧೈರ್ಯ ಬೇಕು. ಸಮಸ್ತ ಜೀವನವನ್ನ ಸಾಹಸಗಾಥೆಯ ಪಾತ್ರಧಾರಿಯಾಗಿ ನಿರೂಪಿಸಿಕೊಳ್ಳಬೇಕು. ಪ್ರಕೃತಿ ಒಡ್ಡುವ ಎಲ್ಲ ಸವಾಲುಗಳನ್ನು ಎದುರಿಸಿ, ಗುರಿ ತಲುಪಿ ಮತ್ತೊಂದು ಗುರಿಯ ನೀಲಿನಕ್ಷೆ ಸಿದ್ದಪಡಿಸಬೇಕು. ಜಗವನ್ನ ಹುಚ್ಚು ಅಲೆಮಾರಿಯಂತೆ ಪರ್ಯಟನೆ ಮಾಡಬೇಕು.
ಈ ಅಲೆಮಾರಿತನದ ಗೀಳನ್ನ ಕನಸಿನಂತೆ ಸಾಧಿಸಿದ ಜೋಡಿ ಕಾರ್ತಿಕ್ ವಾಸನ್ ಮತ್ತು ಸ್ಮೃತಿ ಭಡೋರಿಯಾ. ಇವರು 2020ರಲ್ಲಿ ತಮ್ಮ ಪ್ರಯಾಣವನ್ನು ಕಂದು ಬಣ್ಣದ ಪುಟಾಣಿ ವ್ಯಾನಿನಲ್ಲಿ ಪ್ರಾರಂಭಿಸಿದರು, ಸದ್ಯ 12,400 ಮೈಲುಗಳಿಗಿಂತ ಹೆಚ್ಚು ಮೈಲಿಗಳನ್ನ ಕ್ರಮಿಸಿದ್ದಾರೆ. ಈ ಪಯಣವನ್ನ ನಿಲ್ಲಿಸುವ ಆಲೋಚನೆ ಸದ್ಯಕ್ಕಂತೂ ಈ ಜೋಡಿಗಿಲ್ಲ.
ಪಯಣ ಶುರುವಾದ ಬಗೆ
ಹಿಂದೆಂದೂ ಈ ಕ್ಯಾಂಪರ್ ವ್ಯಾನ್ ಅಲ್ಲಿ ಪಯಣ ಬೆಳೆಸಿದ ಅನುಭವ ಹೊಂದದ ಈ ಜೋಡಿಗೆ, ಮೊದಲ ಬಾರಿ ಈ ಯೋಜನೆಯ ಬಗ್ಗೆ ತಮ್ಮ ತಮ್ಮ ಪೋಷಕರಿಗೆ ಹೇಳಿದಾಗ, ಕುಟುಂಬ ಅದನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ಅದನ್ನ ಒಂದು ವಾರಾಂತ್ಯದ ಪ್ರವಾಸವೆಂದಷ್ಟೆ ತಿಳಿದಿದ್ದರು ಬದಲು ಇದೊಂದು ದೀರ್ಘಾವಧಿಯ ಜೀವನಶೈಲಿ ಎಂಬ ಕಲ್ಪನೆ ಅವರಿಗಿರಲಿಲ್ಲ, ತದನಂತರ ಯೋಜನೆಯ ನಿಜಾಂಶ ತಿಳಿದಾಗ ಅಚ್ಚರಿಗೊಂಡರು. ಆಗ ಕಾರ್ತಿಕ ಮತ್ತು ಸ್ಮೃತಿ ಮದುವೆಯೂ ಆಗಿರಲಿಲ್ಲ.
“ನಾವು ಸರಿಯಾದ ಮನೆಯನ್ನ ಹೊಂದಿರುವಾಗ ಏಕೆ ಹೊರಗೆ ಹೋಗಿ ಕಾಡಿನಲ್ಲಿ, ಟೆಂಟ್‌ನಲ್ಲಿ ವಾಸಿಸುವ ಪರಿಕಲ್ಪನೆ ಅವರಿಗೆ ಅರ್ಥವಾಗಲಿಲ್ಲ. ನಾವು ಅವರಿಗೆ ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ತೋರಿಸಿದಾಗ ನಾವು ಕ್ಯಾಂಪಿಂಗ್ ಅನ್ನು ಏಕೆ ಇಷ್ಟು ಇಷ್ಟಪಡುತ್ತೇವೆ ಎಂದು ಅವರು ಅರ್ಥಮಾಡಿಕೊಂಡರು” ಎನ್ನುತ್ತಾರೆ ಕಾರ್ತಿಕ್. ಮನೆಯವರ ಆಜ್ಞೆಯಂತೆ ಈ ಜೋಡಿ ಮೊದಲು ಮದುವೆಯಾಗಿ ನಂತರ ತಮ್ಮ ಪಯಣದ ಕನಸನ್ನ ನನಸು ಮಾಡಿಕೊಳ್ಳಲು ಯೋಚಿಸಿದರು.
ನೀವುಇದನ್ನುಇಷ್ಟಪಡಬಹುದು: ಮನೆ, ಕೆಲಸ, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನು ಕೈಬಿಟ್ಟು ಜೀವನವನ್ನೇ ಪ್ರವಾಸವಾಗಿ ಪರಿವರ್ತಿಸಿದ ವಿಭಿನ್ನ ಕಥೆ
ಕನಸಿಗೆ ಅಡ್ಡಿಯಾದ ಕೊರೋನಾ ಪಿಡುಗು
ಮದುವೆಯಾಗಿ ಇನ್ನೇನೂ ಕ್ಯಾಂಪರ್ ವ್ಯಾನ್ ಅಲ್ಲಿ ದೇಶ ವಿದೇಶಗಳನ್ನು ಕಾಣುವ ಕನಸಿಗೆ ಕೊರೋನಾ ಸಾಂಕ್ರಾಮಿಕ ಪಿಡುಗು ತಣ್ಣೀರೆರಚಿತು. ಆಗ ಈ ಜೋಡಿ ತಮ್ಮ ಸಂಪೂರ್ಣ ಸಮಯವನ್ನ ತಮ್ಮ ವಾಹನವನ್ನು ಪಯಣಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸಿದರು. ಸುಮಾರು ಮೂರು ತಿಂಗಳಷ್ಟು ಪಯಣಕ್ಕೆ ಯಾವುದೇ ಅಡ್ಡಿಯಾಗದಂತೆ ವಾಹನದ ಯಂತ್ರೋಪಕರಣಗಳ ಮೇಲೆ, ಕಿರಿದಾದ ಸರಳ ಪೀಠೋಪಕರಣಗಳ ಮೇಲೆ ಕೆಲಸ ಮಾಡಿದರು. ಈ ಎಲ್ಲ ಕೆಲಸಗಳನ್ನ ಹೆಚ್ಚಾಗಿ ಈ ಜೋಡಿಯೇ ನಿರ್ವಹಿಸಿದ್ದು ಇನ್ನೊಂದು ವಿಶೇಷ.
ಕೆನಡಾ ದೇಶಕ್ಕೆ ಮೊದಲ ಸವಾರಿ
ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್ ಡೌನ್ ಸಡಿಲಗೊಂಡ ನಂತರ, ಸೆಪ್ಟೆಂಬರ್ ತಿಂಗಳಿನಲ್ಲಿ ಈ ಜೋಡಿ ಕ್ಯಾಂಪರ್ ವ್ಯಾನಿನಲ್ಲಿ ಪಯಣ ಬೆಳೆಸಿದ ಮೊದಲ ತಾಣ ಕೆನಡಾ. ಅವರ ಈ ಸವಾರಿಗೆ ನಾಯಿಯೊಂದು ಜೊತೆಯಾದದ್ದು ಇನ್ನೂ ವಿಶೇಷ. ಸುಮಾರು ನೂರು ದಿನಗಳ ಕಾಲ ರಸ್ತೆಯ ಮೂಲಕ ಪಯಣ ನಡೆಸಿ ಕೆನಡಾ ತಲುಪುವಲ್ಲಿ ಯಶಸ್ವಿಯಾದರು.
ಕೆನಡಾದ ಮನಮೋಹಕ ಭೂದೃಶ್ಯಗಳನ್ನ, ಭವ್ಯವಾದ ಹಿಮಪರ್ವತಗಳನ್ನ, ಅಲ್ಲಿಯ ಸುಂದರ ಪಾಚಿಗಟ್ಟಿದ ಸರೋವರಗಳನ್ನು, ಕೆನಡಾದ ವಿಲಕ್ಷಣ ಭೂತ ನಗರ ಇವೆಲ್ಲದರ ಅನುಭವವನ್ನ ಮನದಲ್ಲಿ ಅಚ್ಚಳಿಯದಂತೆ ಆಸ್ವಾದಿಸಿದರು. ಕೆನಡಾ ದೇಶವನ್ನ ಸುತ್ತಾಡಿದ ನಂತರ ಈ ಜೋಡಿ ಮೆಕ್ಸಿಕೋ ದೇಶಕ್ಕೆ ಪಯಣ ಬೆಳೆಸಿದರು. ಅಲ್ಲಿ ಜರುಗುವ ಎಲ್ಡಿಯಾಬ್ಲೋ ಎಂಬ ಬೈಕರ್ ಉತ್ಸವದಲ್ಲಿ ಪಾಲ್ಗೊಂಡರು.
“ನಾವು ಈ ಸಾಹಸವನ್ನು ಪ್ರಾರಂಭಿಸಿದಾಗ, ಅದರ ಅನುಭವ ಏನೆಂದು ತಿಳಿಯಲು ನಮ್ಮಂತೆಯೇ ಇರುವ ಇತರ ವ್ಯಾನ್‌ಲಿಫರ್‌ಗಳನ್ನು ನಾವು ತೀವ್ರವಾಗಿ ಹುಡುಕುತ್ತಿದ್ದೆವು. ಆದರೆ ನಮಗೆ ಯಾರೂ ಸಿಗಲಿಲ್ಲ. ಆದ್ದರಿಂದ ನಾವು ನಮ್ಮದೇ ಆದ ಹಾದಿಯನ್ನು ಮತ್ತು ನಮ್ಮ ದಿನಚರಿಯನ್ನು ಹೊಂದಲು ಪ್ರಯತ್ನಿಸಿದ್ದೇವೆ” ಎಂದು ಸ್ಮೃತಿಹೇಳುತ್ತಾರೆ.
ಈ ಜೋಡಿಯು ದೇಶ ಸುತ್ತಿ, ಅದ್ಭುತ ಅನುಭವಗಳನ್ನು ಹೊಂದುವ ಸಾಹಸಗಾಥೆ ಇನ್ನೂ ಹಲವರಿಗೆ ಸ್ಫೂರ್ತಿಯಾಗಲಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ
Amazing story..