ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಶಿಕ್ಷಕ ವೃತ್ತಿ ತೊರೆದು ಒಂಟಿಯಾಗಿ ಜಗತ್ತು ಸುತ್ತುವ ಪೂರ್ವಿ: ಕನ್ನಡ ಮಾತನಾಡುವ ಗುಜರಾತಿ ಹುಡುಗಿಯ ಸ್ಫೂರ್ತಿ ಕತೆ

#ಮಹಿಳಾ ದಿನ ವಿಶೇಷ

ಪ್ರವಾಸದ ಹುಚ್ಚು ಒಮ್ಮೊಮ್ಮೆ ಕೆಲಸವನ್ನೂ ಬಿಡಿಸುತ್ತದೆ. ಅದಕ್ಕೆ ಸಾಕ್ಷಿ ಈ ಹುಡುಗಿ ಪೂರ್ವಿ ಕಮಲಿಯ. ಮೂಲತಃ ಗುಜರಾತಿನ ಹುಡುಗಿ. ಕನ್ನಡದ ಹುಡುಗನನ್ನು ಮದುವೆಯಾದ ಮೇಲೆ ಕನ್ನಡ ಮಾತನಾಡುವ ಕನ್ನಡತಿ. ಬೆಂಗಳೂರಿನಲ್ಲಿ ವಾಸ. ಫ್ರೀಲಾನ್ಸರ್ ಆಗಿ ದುಡಿದು ಒಂಟಿಯಾಗಿ ಜಗತ್ತು ಸುತ್ತುವ ಈ ಹುಡುಗಿ ಅನೇಕರಿಗೆ ಮಾದರಿ.

  • ಸಿಂಧೂ ಪ್ರದೀಪ್

ಆಕಾಶದ ನೀಲಿಯಲ್ಲಿ

ಚಂದ್ರ ತಾರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಎಂದರೆ ಅಷ್ಟೇ ಸಾಕೆ.. 

ಎಂದು ಜಿ ಎಸ್ ಶಿವರುದ್ರಪ್ಪನವರ ಕವಿತೆಯೇ ಹೇಳುವ ಹಾಗೆ ಹೆಣ್ಣು ಎಂದರೆ ಅದು ಕೇವಲ ಎರಡು ಅಕ್ಷರವಲ್ಲ ಬದಲಿಗೆ ಹೆಣ್ಣು ಎಂದರೆ ಬೆಳಕು, ಹೆಣ್ಣು ಎಂದರೆ ಶಕ್ತಿ, ಹೆಣ್ಣು ಎಂದರೆ ಜ್ಞಾನ.

@the.traveling.hippie

ಮಾರ್ಚ್ 8ರಂದು ವಿಶ್ವ ಮಹಿಳಾ ದಿನ ಆಚರಿಸುತ್ತಾರೆ. ಈ ದಿನದ ಪ್ರಯುಕ್ತ ಈಗಿನ ಯುವಪೀಳಿಗೆಗೆ ಮಾದರಿಯಾಗಿರುವ ಒಬ್ಬ ಪ್ರವಾಸಿ ಮಹಿಳೆಯನ್ನು ಪರಿಚಯಿಸುತ್ತಿದ್ದೇವೆ. ಅವರೇ ಟ್ರಾವೆಲಿಂಗ್ ಹಿಪ್ಪಿ ಎಂದೇ ಹೆಸರು ಪಡೆದಿರುವ ಪೂರ್ವಿ ಕಮಲಿಯ.

ಮೂಲತಃ ಉತ್ತರ ಭಾರತದವರಾದ ಪೂರ್ವಿ ಹುಟ್ಟಿ ಬೆಳೆದಿದ್ದು ಗುಜರಾತ್ ನಲ್ಲಿ(gujarath). ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕೆ ಮುಂಬೈ ಇವರ ಕೈ ಬೀಸಿ ಕರೆಯಿತು ಹಾಗೂ ಇಲ್ಲಿಂದಲೇ ಅವರ ಟ್ರಾವೆಲ್ಲಿಂಗ್ ಶುರುವಾಯಿತು. ಖುಷಿಯ ಸಂಗತಿ ಎಂದರೆ ಇವರು ನಮ್ಮ ಕರ್ನಾಟಕದ ಹುಡುಗನನ್ನು ಮೆಚ್ಚಿ ಮದುವೆ ಆಗಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಮಾತನಾಡುವುದನ್ನೂ ಕೂಡ ಕಲಿತಿದ್ದಾರೆ.

ಇಲ್ಲಿಯವರೆಗೆ ಸುಮಾರು 10 ದೇಶಗಳನ್ನು ಸುತ್ತಿರುವ ಪೂರ್ವಿ ಅವರಿಗೆ ಎಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದೀರ ಎಂದು ಕೇಳಿದರೆ ಅವರು ಕೊಡುವ ಉತ್ತರ ವಿಭಿನ್ನ, ನನಗೆ ಬಕೆಟ್ ಲಿಸ್ಟ್ ಅಂತ ಯಾವುದೂ ಇಲ್ಲ, ಪ್ರವಾಸದಲ್ಲಿ ಮುಖ್ಯವಾಗುವುದು ಅನುಭವ. ಈ ಅನುಭವಗಳಿಂದ ಸಿಗುವ ತೃಪ್ತಿ ಬಕೆಟ್ ಲಿಸ್ಟ್ ಮಾಡಿಕೊಂಡು ಪ್ರವಾಸ ಮಾಡುವುದರಲ್ಲಿ ಸಿಗುವುದಿಲ್ಲ. ಆದರಿಂದ ನಾನು ಭೇಟಿ ನೀಡಿದ ಯಾವುದೇ ಸ್ಥಳಗಳ ಎಣಿಕೆ ಮಾಡುವುದಿಲ್ಲ ಎಂದು ಹೇಳುತ್ತಾರೆ.

 ಬಹಳಷ್ಟು ಕಡೆ ಒಂಟಿಯಾಗಿ (solo travel) ಪ್ರವಾಸ ಮಾಡುವ ಪೂರ್ವಿ ಒಬ್ಬ ಸ್ವತಂತ್ರ ಮಹಿಳೆ. ಮುಂಚೆಯಿಂದಲೂ ಪ್ರವಾಸದಲ್ಲಿ ಆಸಕ್ತಿ ಹೊಂದಿದ್ದ ಇವರು ತಮಗಾಗಿ ಸ್ವಲ್ಪ ಪ್ರಮಾಣದ ಹಣವನ್ನು ಕೂಡಿಟ್ಟುಕೊಂಡು ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಪ್ರವಾಸ ಶುರುಮಾಡಿದರು. ಸದ್ಯಕ್ಕೆ ಪೂರ್ಣ ಪ್ರಮಾಣದ ಟ್ರಾವೆಲರ್ ಆಗಿದ್ದಾರೆ. ಕೆಲವು ನಿಯತಕಾಲಿಕೆಗಳಿಗೆ ಪ್ರವಾಸ ಬರಹಗಳನ್ನು ಬರೆಯುವ ಮೂಲಕ ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇದರಿಂದ ಗಳಿಸುವ ಹಣವನ್ನು ತಮ್ಮ ಪ್ರವಾಸಕ್ಕೆ ಬಳಸಿಕೊಳ್ಳುತ್ತಾರೆ.

ನೀವು ಇದನ್ನು ಇಷ್ಟಪಡಬಹುದು: ಮಾನಸ ಸರೋವರ, ಕಿಲಿಮಂಜಾರೋ ಏರಿದ ಸಾಹಸಿ ಗೃಹಿಣಿ ಬೆಂಗಳೂರಿನ ವಾರುಣಿ

ಯುರೋಪಲ್ಲಿ ಒಂಟಿ ಪ್ರವಾಸ

ಒಮ್ಮೆ ಅವರು ಒಂಟಿಯಾಗಿ ಯುರೋಪ್ ಪ್ರವಾಸ ಮಾಡಿದ್ದಾಗ ಒಂದು ಘಟನೆ ನಡೆಯಿತು. ಅದನ್ನು ಅವರ ಮಾತಲ್ಲೇ ಕೇಳುವುದು ಚಂದ. 

ಇದು ನನ್ನ ‘ಒನ್ಸ್ ಇನ್ ಎ ಲೈಫ್‌ಟೈಮ್’ ಅನುಭವ. ಆಸಲ ನಾನು ಯುರೋಪನ್ನು ಸ್ಥಳೀಯ ರೀತಿಯಲ್ಲಿ ಅನ್ವೇಷಿಸಲು ಆಸೆ ಪಟ್ಟಿದ್ದೆ. ನಾನು ಸ್ಥಳೀಯರೊಂದಿಗೆ ಉಳಿದುಕೊಂಡಿದ್ದೆ. ಕೆಲವು ಸ್ಥಳೀಯ ಅಡುಗೆಗಳನ್ನು ಕಲಿತೆ, ಕೆಲವು ಭಾರತೀಯ ಅಡುಗೆಯನ್ನೂ ಕಲಿಸಿದೆ, ಅಪರಿಚಿತರೊಂದಿಗೆ ಸ್ನೇಹ ಬೆಳೆಸಿದೆ ಮತ್ತು ಪ್ರವಾಸಕಿಂತ ಹೆಚ್ಚಿನದನ್ನು ಅರ್ಥಮಾಡಿಕೊಳ್ಳಲು ಇತಿಹಾಸ ವಿದ್ಯಾರ್ಥಿಗಳೊಂದಿಗೆ ಸುತ್ತಾಡಿದೆ ಸ್ಥಳದ ಬಗ್ಗೆ ವಿಷಯ ತಿಳಿದುಕೊಂಡೆ. 

ಯುರೋಪಿಯನ್ ಹಾಸ್ಟೆಲ್‌ಗಳಲ್ಲಿ(European Hostel) ಸ್ವಯಂ ಸೇವಕಳಾಗಿ ಉಳಿದುಕೊಂಡು ಸ್ಥಳೀಯರಂತೆ ಸಮಯ ಕಳೆದೆ, ಸ್ಥಳೀಯರೊಂದಿಗೆ ಸೇರಿ ಶಾಪಿಂಗ್ ಮಾಡಿದೆ ಮತ್ತು ಪ್ರಪಂಚದಾದ್ಯಂತದ ಜನರೊಂದಿಗೆ ಸಂವಹನ ನಡೆಸುವ ಮತ್ತು ಯುರೋಪಿನ ಪ್ರವಾಸೋದ್ಯಮದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುವ ನನ್ನ ಈ ಪ್ರವಾಸದ ಅನುಭವ ಯಾವತ್ತೂ ನೆನಪಿಗೆ ಉಳಿಯುವಂತದ್ದು.

ಮಧ್ಯ ಮತ್ತು ಉತ್ತರ ಯುರೋಪಿನ ಹಲವಾರು ಪ್ರವಾಸೋದ್ಯಮ ಮಂಡಲಿಗಳೊಂದಿಗೆ ನಾನು ಮಾತುಕತೆ ನಡೆಸಿದೆ. ಬ್ಲಾಗರ್ ಆಗಿರುವುದು ಮತ್ತೊಂದು ಹೆಚ್ಚುವರಿ ಪ್ರಯೋಜನವಾಯಿತು. ಅಲ್ಲಿನ ಪ್ರವಾಸೋದ್ಯಮ ಅಧಿಕಾರಿಗಳೊಂದಿಗೆ, ಮಾರ್ಗದರ್ಶಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಗಳ ಟ್ರಾವೆಲ್ ಬ್ಲಾಗರ್ ಆಗಿ ಅನುಭವ ಪಡೆಯಲು ಅವಕಾಶ ಸಿಕ್ಕಿತು. ಈ ಪ್ರವಾಸಿ ಹಾಸ್ಟೆಲ್ ಗಳು ಹಾಗೂ ಪ್ರವಾಸಿಗರಿಗೆ ವಸತಿ ಒದಗಿಸುವ (CouchSurfing) ಸ್ಥಳೀಯರ ಬಳಿ ತಂಗುವುದರಿಂದ ಅಲ್ಲಿನ ಸಂಸ್ಕೃತಿ, ಆಚರಣೆಗಳ ಮಾಹಿತಿ ತಿಳಿಯಲು ಸುಲಭವಾಗುತ್ತದೆ ಹಾಗೂ ಪ್ರಪಂಚದ ನಾನಾ ಭಾಗಗಳಲ್ಲಿರುವ ಜನರ ಭೇಟಿ ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.

 ಪೂರ್ವಿ ಅವರ ಜೀವನ ಶೈಲಿಯೇ ಬಹಳ ವಿಭಿನ್ನ, ಬಹಳಷ್ಟು ಜನ ಪ್ಲಾಸ್ಟಿಕ್ ಬಳಸಬೇಡಿ, ತ್ಯಾಜ್ಯ ನಿರ್ವಹಣೆ ಮಾಡಿ ಎಂದು ಬರೀ ಬಾಯಿ ಮಾತಲ್ಲಿ ಹೇಳುವ ಜನಗಳ ಮಧ್ಯ ಪೂರ್ವಿ ಎಲ್ಲರಿಗೂ ಸ್ಫೂರ್ತಿ.

ತಮ್ಮ ದಿನ ನಿತ್ಯದ ಅವಶ್ಯಕತೆಯಿಂದ ಹಿಡಿದು ಪ್ರವಾಸದಲ್ಲಿ ಇರುವಾಗಲೂ ಪ್ಲಾಸ್ಟಿಕ್ ಬಳಸುವುದಿಲ್ಲ, ಝೀರೋ ವೇಸ್ಟೇಜ್ ನಿಯಮವನ್ನು ಪಾಲಿಸುವ ಇವರು ಇತ್ತೀಚೆಗೆ ತಮ್ಮ ಶೂನ್ಯ ತ್ಯಾಜ್ಯ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಸೋಲೋ ಟ್ರಾವೆಲ್ ಮಾಡಬಯಸುವ ಹುಡುಗಿಯರಿಗೆ ಕಿವಿಮಾತು

 ಸೋಲೋ ಟ್ರಾವೆಲ್ಲಿಂಗ್ ಮಾಡುವ ಹೆಣ್ಣುಮಕ್ಕಳಿಗೆ ಕೆಲವು ಸಲಹೆಗಳನ್ನು ಅವರು ಹಂಚಿಕೊಂಡಿದ್ದಾರೆ.

 1. ‘ಅಪರಿಚಿತರೊಂದಿಗೆ ಮಾತನಾಡಿ’. ಇದೊಂದು ಮುಖ್ಯವಾದ ನಿಯಮ ಇದನ್ನು ಅನುಸರಿಸಿ. 

 2. ಯಾವುದೇ ಸ್ಥಳೀಯ ತಾಣಗಳಿಗೆ ಹೋದಾಗ ಒಂದೇ ಪ್ರಶ್ನೆಯನ್ನು ಪದೇ ಪದೇ ಬೇರೆ ಬೇರೆ ವ್ಯಕ್ತಿಗಳಿಗೆ ಕೇಳುತ್ತಲೇ ಇರಿ. ಏಕೆಂದರೆ ಒಬ್ಬ ವ್ಯಕ್ತಿ ತಪ್ಪು ಮಾಹಿತಿ ನೀಡಬಹುದು. ಆದರೆ 10 ವ್ಯಕ್ತಿ ಗಳು ಒಂದೇ ತರಹ ತಪ್ಪು ಮಾಹಿತಿ ನೀಡಲು ಸಾಧ್ಯವಿಲ್ಲ. ಇದರಿಂದ ನಿಮ್ಮ ಸಂದೇಹ ನಿವಾರಣೆ ಆಗುತ್ತದೆ. ಕೇವಲ ಒಂದು ಪ್ರಶ್ನೆಗೆ ನಿಮ್ಮನ್ನು ಸೀಮಿತಗೊಳಿಸಬೇಡಿ.

 3. ಕೆಲವು ಮೂಲಭೂತ ಸುರಕ್ಷತಾ ಭಿನ್ನತೆಗಳನ್ನು ಕಲಿತುಕೊಳ್ಳಿ, ಮಾನಸಿಕವಾಗಿ ನಿಮನ್ನು ತಯಾರು ಮಾಡಿಕೊಳ್ಳಿ.

 4. ಶಾಲಾ ಮಕ್ಕಳು ನಿಮ್ಮ ಅತ್ಯುತ್ತಮ ಸ್ನೇಹಿತರಾಗುತ್ತಾರೆ. ಅವರ ಸಹಾಯ ಅನುಮಾನವಿಲ್ಲದೆ ಪಡೆದುಕೊಳ್ಳಿ. 

 5. ಕೆಲವು ಬಾರಿ ನೀವು ಪ್ರಯಾಣಿಸುವ ಬಸ್ ನಿರ್ವಾಹಕರು ಕೂಡ ಸಹಾಯ ಮಾಡುತ್ತಾರೆ. ಅವರೊಂದಿಗೆ ನಿಮ್ಮ ಯೋಜನೆಯನ್ನು ಹಂಚಿಕೊಳ್ಳಿ.

6. ಭಾರತದಲ್ಲಿನ ಹಿಚ್‌ ಹೈಕಿಂಗ್ ನಿಯಮಗಳು ತುಂಬಾ ಸಹಾಯವಾಗುತ್ತದೆ. ಅದನ್ನು ಬಳಸಿಕೊಳ್ಳಿ. ಇದರಿಂದ ಹಲವು ಜನರ ಪರಿಚಯವಾಗುತ್ತದೆ.

 7. ಸ್ಥಳೀಯ ಹಾಸ್ಟೆಲ್ ಗಳಲ್ಲಿ ತಂಗುವ ವ್ಯವಸ್ಥೆ ಮಾಡಿಕೊಳ್ಳಿ.

 8. ಹಣದ ತೊಂದರೆ ಆದರೆ ನಮ್ಮ ಭಾರತದಲ್ಲಿ ಹಲವಾರು ದೇವಾಲಯಗಳು, ಗುರುದ್ವಾರಗಳು, ಧರ್ಮಶಾಲೆಗಳು ಇವೆ. ಅವುಗಳ ಮೊರೆ ಹೋಗಿ, ಬಹಳಷ್ಟು ಕಡೆ ಉಚಿತ ಊಟ ವಸತಿ ಒದಗಿಸುತ್ತಾರೆ.

ಪೂರ್ವಿ ಪೂರ್ಣ ಪ್ರಮಾಣದ ಪ್ರವಾಸಿಯಾಗುವುದರ ಜೊತೆಗೆ “ಟ್ರಾವೆಲಿಂಗ್ ಹಿಪ್ಪೀಸ್” ಎಂಬ ಪ್ರವಾಸಿ ಜಾಲತಾಣ ನಿರ್ವಹಿಸುತ್ತಾರೆ. ಇತ್ತೀಚೆಗೆ ಯುೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ. ತಮ್ಮ ಹವ್ಯಾಸವಾದ ಛಾಯಾಗ್ರಹಣ ವನ್ನು ಬೆಳೆಸುವ ಆಸಕ್ತಿ ಇಟ್ಟುಕೊಂಡಿದ್ದಾರೆ. ಹೆಣ್ಣು ಎಂದರೆ ಕೇವಲ ಮನೆ, ಮಕ್ಕಳನ್ನು ನೋಡಿಕೊಳ್ಳಲು ಅಷ್ಟೇ ಮೀಸಲು ಎಂದು ಹೇಳುವ ಎಷ್ಟೋ ಜನರಿಗೆ ಪೂರ್ವಿ ಅವರು ನಿಜಕ್ಕೂ ಮಾದರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button