ಜಗತ್ತಿನ ಮಹಾ ಅಚ್ಚರಿಯ ತಾಣಗಳಿವು.
ಪ್ರಪಂಚದಲ್ಲಿನ ವಿಸ್ಮಯಗಳ ಬಗ್ಗೆ ಅರಿಯುತ್ತಾ ಹೋದಷ್ಟು ಇನ್ನಷ್ಟು ಹೊಸ ಹೊಸ ವಿಷಯಗಳು ಅರಿವಿಗೆ ಬರುತ್ತವೆ. ಪ್ರಪಂಚದ ಕೆಲವು ವಿಸ್ಮಯಕಾರಿ ಸ್ಥಳಗಳನ್ನು ನೋಡಿದ್ರೆ ಇವು ನೈಸರ್ಗಿಕವೇ ಕೃತಕವೇ ಎಂಬ ಅನುಮಾನ ಕಾಡುತ್ತವೆ.
ಅಂತಹ ಕೆಲವು ಅತ್ಯದ್ಭುತ ಜಾಗಗಳು ಇಲ್ಲಿವೆ ನೋಡಿ. ಈ ಜಾಗಗಳು ರೀಲ್ ಅಲ್ಲ ರಿಯಲ್ ಅಂದ್ರೆ ನೀವು ನಂಬಲೇಬೇಕು.
ಸಲಾರ್ ಡಿ ಯುಯುನಿ, ಬೊಲಿವಿಯಾ:
ಇಲ್ಲಿನ ಸಮುದ್ರಗಳು ಬಂಡೆ ಕಲ್ಲಿನಷ್ಟು ಗಟ್ಟಿಯಾಗಿದ್ದು, ಸಮುದ್ರದ ಮಧ್ಯದವರೆಗೂ ನಡೆದುಕೊಂಡು ಹೋಗಬಹುದು. ಇತಿಹಾಸ ಪೂರ್ವದಲ್ಲೇ ಇಲ್ಲಿ ಸಮುದ್ರ ಹೆಪ್ಪುಗಟ್ಟಿತ್ತು ಎಂದು ಹೇಳಲಾಗುತ್ತದೆ.
ಸೊಕೊಟ್ರಾ, ಯೆಮೆನ್:
ಹಿಂದೂ ಮಹಾಸಾಗರದಲ್ಲಿರುವ ಈ ಅಜ್ಞಾತ ದ್ವೀಪವು ವಿಶಿಷ್ಟ ಸಸ್ಯ ಹಾಗೂ ಪ್ರಾಣಿಗಳ ನೆಲೆಯಾಗಿದೆ. ಈ ಮರುಭೂಮಿಯಲ್ಲಿ ಡ್ರ್ಯಾಗನ್ ಬ್ಲಡ್ ಟ್ರೀ ಹಾಗೂ ಸೊಕೊಟ್ರಾ ಸಸ್ಯಗಳು ಬೆಳೆಯುತ್ತವೆ.
ಝಾಂಗೈ ದಾಂನ್ಷಿಯಾ ಲ್ಯಾಂಡ್ಫಾರ್ಮ್, ಚೀನಾ:
ಹಲವಾರು ವರ್ಷಗಳ ಖನಿಜ ನಿಕ್ಷೇಪಗಳ ಪರಿಣಾಮವಾಗಿ ಇಲ್ಲಿ ಬಣ್ಣಗಳ ಬೆಟ್ಟಗಳು ನಿರ್ಮಿತವಾಗಿದೆ. ಜಗತ್ತಿನಲ್ಲಿ ಎಲ್ಲೂ ಕಾಣದ ಬಣ್ಣದ ಬೆಟ್ಟಗಳು ಇಲ್ಲಿ ಮಾತ್ರ ಇವೆ. ಈ ವರ್ಣರಂಜಿತ ಬೆಟ್ಟಗಳನ್ನು ಕಣ್ತುಂಬಿಕೊಳ್ಳಲು ಚೀನಾಕ್ಕೆ ಹೋಗಬೇಕು. ,
ವೈಟೊಮೊ ಗ್ಲೋವರ್ಮ್ ಗುಹೆಗಳು, ನ್ಯೂಜಿಲೆಂಡ್:
ಈ ಗುಹೆಗಳು ಮಿಂಚು ಹುಳುಗಳಿಂದ ಆವೃತವಾಗಿವೆ. ಇಲ್ಲಿ ನೈಸರ್ಗಿಕವಾಗಿ ಸೂರ್ಯನ ಬೆಳಕು ಬಾರದಿದ್ದರೂ ಮಿಂಚು ಹುಳುಗಳು ನೈಸರ್ಗಿಕ ಬೆಳಕನ್ನು ಹರಡುತ್ತವೆ., ಇದು ಪ್ರಪಂಚದ ಅದ್ಭುತ ಹಾಗೂ ಅಚ್ಚರಿಯ ಜಾಗಗಳಲ್ಲಿ ಒಂದು.
ಕಪಾಡೋಸಿಯಾ, ಟರ್ಕಿ:
ಈ ಪ್ರದೇಶವು ಅಸಾಮಾನ್ಯವಾದ ಬಂಡೆಗಳ ರಚನೆಗಳಿಗೆ ಹೆಸರುವಾಸಿಯಾಗಿದೆ, ಇಲ್ಲಿ ಬಂಡೆಗಳನ್ನು ಕೊರೆದು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇದು ಫ್ಯಾಂಟಸಿ ಚಲನಚಿತ್ರದಂತೆ ಕಾಣುತ್ತದೆ.
ಪಮುಕ್ಕಲೆ, ಟರ್ಕಿ:
ಬಿಸಿ ನೀರಿನ ಚಿಲುವೆಗಳಿಂದ ಈ ಜಾಗ ಖ್ಯಾತಿ ಗಳಿಸಿದೆ. ಹಿಮಗಡ್ಡೆಗಳ ನಡುವೆ ಅಲ್ಲಲ್ಲಿ ಚಿಕ್ಕ ಕೊಳದಂತೆ ಕಾಣುವ ಬುಗ್ಗೆಗಳು ಈ ಜಾಗದ ಅಂದ ಹೆಚ್ಚಿಸಿವೆ. ಈ ಜಾಗವು ಆಕಾಶ ಹಾಗೂ ಮೋಡದ ಸಂಯೋಜನೆಯಂತೆ ಕಾಣುತ್ತದೆ.
ಯೆಲ್ಲೊಸ್ಟೋನ್ ನ್ಯಾಶನಲ್ ಪಾರ್ಕ್:
ಅಮೆರಿಕಾದ ವ್ಯಾಮಿಂಗ್ನಲ್ಲಿರುವ ಯೆಲ್ಲೊಸ್ಟೋನ್ ಪಾರ್ಕ್ 1872ರಲ್ಲಿ ಸ್ಥಾಪಿತವಾಯಿತು. ಇಲ್ಲಿ ಯೆಲ್ಲೊ ಸ್ಟೋನ್ ನದಿಯ ಹರಿವಿನ ಕಾರಣದಿಂದ ಈ ಜಾಗಕ್ಕೆ ಆ ಹೆಸರು ಬಂದಿದೆ. ಈ ಜಾಗವು ಬಿಸಿನೀರಿನ ಬುಗ್ಗೆಗಳಿಂದ ಖ್ಯಾತಿ ಪಡೆದಿದೆ. ಇದು ವಿಶ್ವದ ಮೊದಲ ನ್ಯಾಷನಲ್ ಪಾರ್ಕ್ ಕೂಡ ಹೌದು.
ಕ್ರೂಕಡ್ ಫಾರೆಸ್ಟ್, ಪೋಲ್ಯಾಂಡ್
ಇದೊಂದು ಅಪರೂಪದ ಅರಣ್ಯ. ಇಲ್ಲಿರುವ ಮರಗಳೇ ಭಿನ್ನ…! ಯಾಕೆಂದರೆ, ಇಲ್ಲಿರುವ ಮರಗಳ ಕಾಂಡ ನೇರವಾಗಿಲ್ಲ…! ಕೆಲವೇ ಅಡಿಗಳಷ್ಟು ನೇರವಾಗಿ ಬರುವ ಕಾಂಡ ಬಳಿಕ ಡೊಂಕಾಗಿ ಮೇಲೆ ಸಾಗುತ್ತದೆ. ಹಾಗಂತ, ಇದು ಒಂದು ಮರದ ಕಥೆಯಲ್ಲ. ಇಲ್ಲಿರುವ ಸಾಕಷ್ಟು ಮರಗಳು ಇರುವುದು ಇದೇ ಶೈಲಿಯಲ್ಲಿ…! ವಿಚಿತ್ರವಾದ ಪೈನ್ ಮರಗಳಿವು.
ಕ್ರೂಕಡ್ ಫಾರೆಸ್ಟ್ನಲ್ಲಿರುವ ನೂರಾರು ಇಂತಹ ಪೈನ್ ಮರಗಳನ್ನು ನಮ್ಮನ್ನು ವಿಸ್ಮಯಗೊಳಿಸುತ್ತದೆ. ದಾಖಲೆಗಳ ಪ್ರಕಾರ ಇವುಗಳನ್ನು 1930ರ ದಶಕದಲ್ಲಿ ನೆಡಲಾಗಿದೆ.
ಬುಡಕ್ಕಿಂತ ಸ್ವಲ್ಪ ಮೇಲೆ ಈ ಮರ ಡೊಂಕಾಗಿ ಬೆಳೆಯುವುದನ್ನು ಇಲ್ಲಿ ನೋಡಬಹುದು. ಈ ಮರಗಳು ಯಾಕೆ ಹೀಗೆ ಬೆಳೆಯುತ್ತಿವೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.
ಈ ಮರಗಳು ವ್ರಕ್ರವಾಗುವಂತೆ ನಿರ್ದಿಷ್ಟ ತಂತ್ರ ಅಥವಾ ಸಾಧನಗಳನ್ನು ಬಳಸಲಾಗಿತ್ತು ಎಂದು ಕೆಲವರು ನಂಬಿದರೆ, ಚಳಿಗಾಲದ ಚಂಡಮಾರುತದ ಕಾರಣದಿಂದ ಇವುಗಳು ಈ ರೀತಿ ಬೆಳೆದಿವೆ ಎಂಬುದು ಇನ್ನೊಂದಷ್ಟು ಮಂದಿಯ ಅಂಬೋಣ. ಆದರೆ, ಕಾರಣಗಳೇನೇ ಇದ್ದರೂ ಈ ಮರಗಳು ಈಗ ಎಲ್ಲರ ಕುತೂಹಲ ಕೆರಳಿಸಿದ್ದಂತೂ ಸತ್ಯ.
ಮೋಯಿ ದ್ವೀಪ
ಚಿಲಿಯಲ್ಲಿರುವ ದ್ವೀಪವಿದು. ಇಲ್ಲಿ ಸುಮಾರು 900 ವರ್ಷಗಳ ಹಿಂದೆ ನಿರ್ಮಿಸಲಾದ ಕಲ್ಲಿನ ಕೆತ್ತನೆಗಳಿವೆ. ಈ ದ್ವೀಪ ರಾಪಾ ನುಯಿ ನಾಗರಿಕೆಯನ್ನು ಹೊಂದಿತ್ತು. ಈ ಸಂದರ್ಭದಲ್ಲಿ ಕೆತ್ತಲಾದ ಕಲ್ಲಿನ ಪ್ರತಿಮೆಗಳು ಇವುಗಳು ಎಂದು ಹೇಳಲಾಗುತ್ತಿದೆ. ಇದನ್ನು ಮೋಯಿ ಎಂದು ಕರೆಯಲಾಗುತ್ತದೆ.
ನೂರಾರು ಇಂತಹ ಪ್ರತಿಮೆಗಳು ಇಲ್ಲಿವೆ. ಸರಾಸರಿ 13 ಅಡಿ ಎತ್ತರ ಮತ್ತು 14 ಟನ್ ತೂಕದ ಇರುವ ಪ್ರತಿಮೆಗಳು ಇವುಗಳು. ಈ ಪ್ರತಿಮೆಗಳು 1722ರಲ್ಲಿ ಮೊದಲ ಬಾರಿಗೆ ಈ ದ್ವೀಪಕ್ಕೆ ಬಂದಿದ್ದ ಯುರೋಪಿಯನ್ ಪರಿಶೋಧಕರನ್ನು ಬಹುವಾಗಿ ಆಕರ್ಷಿಸಿದ್ದವು.
ಆದರೆ, ಈ ಪ್ರತಿಮೆಗಳನ್ನು ಯಾಕೆ ಕೆತ್ತಲಾಗಿತ್ತು ಮತ್ತು ಅವುಗಳನ್ನು ಇಲ್ಲಿ ಯಾಕೆ ಇರಿಸಲಾಗಿದೆ ಎಂಬುದಕ್ಕೆ ಇದುವರೆಗೆ ಯಾವುದೇ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ.
ಒಂದು ಅಂದಾಜಿನ ಪ್ರಕಾರ ಸಿಹಿನೀರಿನ ಜಾಗಗಳನ್ನು ಗುರುತಿಸುವ ಸಲುವಾಗಿ ಆ ಕಾಲದ ಜನರು ಇಂತಹ ಪ್ರತಿಮೆಗಳನ್ನು ಇರಿಸಿದ್ದರು ಎಂದು ಹೇಳಲಾಗುತ್ತಿದೆ. ಸಹಜವಾಗಿಯೇ ಈ ಜಾಗ ಇಂದಿಗೂ ಎಲ್ಲರಿಗೂ ಕುತೂಹಲದ ಮೂಟೆಯಾಗಿದೆ.
ಡೆವಿಲ್ಸ ಟವರ್
ಅಮೇರಿಕಾದಲ್ಲೊಂದು ರಾಷ್ಟ್ರೀಯ ಸ್ಮಾರಕವಿದೆ. ಅದೇ ಡೆವಿಲ್ಸ್ ಟವರ್. ಈಶಾನ್ಯ ವ್ಯೋಮಿಂಗ್ನ ಕ್ರೂಕ್ ಕೌಂಟಿ ಬಳಿಯ ಹುಲೆಟ್ ಮತ್ತು ಸನ್ಡಾನ್ಸ್ ಬಳಿ ಈ ಶಿಖರವಿದೆ. ಬೆಲ್ಲೆ ಫೋರ್ಚೆ ನದಿಯ ಮೇಲೆ ಇದನ್ನು ನೋಡಬಹುದಾಗಿದೆ.
ಇದು ಅಮೇರಿಕಾದ ಮೊದಲ ರಾಷ್ಟ್ರೀಯ ಸ್ಮಾರಕವಾಗಿದ್ದು, 1906ರ ಸೆಪ್ಟೆಂಬರ್ 24ರಂದು ಅಂದಿನ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್ ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ್ದರು. ಇದು ಪ್ರಬಲವಾದ ಪರ್ವತದಂತೆ ತೋರುತ್ತಿದ್ದರೂ ಇದು ವಾಸ್ತವವಾಗಿ ಕರಗಿದ ಬಂಡೆಯಿಂದ ಮಾಡಲ್ಪಟ್ಟಿದ್ದು ಎಂದು ಹೇಳಲಾಗುತ್ತಿದೆ. ಹೈಕಿಂಗ್ ಮತ್ತು ರಾಕ್ ಕ್ಲೈಂಬಿಂಗ್ಗೆ ಇದು ಜನಪ್ರಿಯ ತಾಣವಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.