ಚಳಿಗಾಲದ ಹಿಮದಿಂದಾಗಿ ಅದ್ಭುತ ಲೋಕ ಸೃಷ್ಟಿಸಿವೆ ಭಾರತದ ಈ ತಾಣಗಳು:
ಚಳಿಗಾಲದ (Winter) ತಾಜಾ ಹಿಮಪಾತದಿಂದಾಗಿ ಭಾರತದ ಕೆಲವು ತಾಣಗಳು ಹೊಸ ಲೋಕವನ್ನೇ ಸೃಷ್ಟಿಸಿವೆ. ಈ ಅದ್ಭುತ ತಾಣಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಖುಷ್ ಆಗಿದ್ದಾರೆ.
ಇತ್ತೀಚಿನ ಹಿಮಪಾತದ (Snowfall) ನಂತರ, ಪ್ರವಾಸಿಗರು ಹಿಮಾಚಲ ಪ್ರದೇಶದ ಜನಪ್ರಿಯ ಗಿರಿಧಾಮವಾದ ಶಿಮ್ಲಾಗೆ ಭೇಟಿ ನೀಡುತ್ತಿದ್ದು, ರಾಜ್ಯದ ಹಲವು ರಸ್ತೆಗಳೂ ಹಿಮದಿಂದ ಆವೃತವಾಗಿ ಮುಚ್ಚಲ್ಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೇ ಚಂದದ ನಗರ ಕಾಶ್ಮೀರವೂ (Kashmir) ಸಹ ಇತ್ತೀಚಿಗೆ ಹಿಮಪಾತವನ್ನು ಅನುಭವಿಸುತ್ತಿದೆ. ಇದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಸಂತೋಷವನ್ನು ತಂದಿದೆ.
ನೀವೂ ಸಹ ಹಿಮವನ್ನು (Snow) ಇಷ್ಟ ಪಡುವವರಾದರೆ, ಭಾರತದ ಈ ತಾಣಗಳಿಗೆ ಭೇಟಿ ನೀಡಬಹುದು.
1.ಶ್ರೀನಗರ: (Srinagar)
ಹಿಮಪಾತದ ಸಂದರ್ಭದಲ್ಲಿ ಕಾಶ್ಮೀರದ ಶ್ರೀನಗರ ಪ್ರಶಾಂತ ಮತ್ತು ಮೋಡಿ ಮಾಡುವ ತಾಣವಾಗಿ ಮಾರ್ಪಡುತ್ತದೆ. ಏಕೆಂದರೆ ದಾಲ್ ಸರೋವರವು ಹಿಮದಿಂದಾಗಿ ಹಾಲಿನ ಸರೋವರದಂತೆ ಕಾಣುತ್ತದೆ.
ಹಿಮಾಚ್ಛಾದಿತ ಹೌಸ್‌ಬೋಟ್‌ಗಳಲ್ಲಿ ಕಳೆಯುವುದು ಮತ್ತು ಹಿಮದ ಹೊದಿಕೆಯ ಅಡಿಯಲ್ಲಿ ಐತಿಹಾಸಿಕ ಮೊಘಲ್ ಉದ್ಯಾನಗಳನ್ನು ಅನ್ವೇಷಿಸುವುದು ಸುಂದರ ಅನುಭವವನ್ನು ನೀಡುತ್ತದೆ.
2. ಲಾಹೌಲ್ ಸ್ಪಿತಿ: (Lahaul Spiti)
ಲಾಹೌಲ್ ಸ್ಪಿತಿಯು ಹಿಮಪಾತದ ಸಮಯದಲ್ಲಿ ಆಕರ್ಷಕ ದೃಶ್ಯವಾಗಿ ರೂಪಾಂತರಗೊಳ್ಳುತ್ತದೆ. ಹಿಮದಿಂದ ಆವೃತವಾದ ಮಠಗಳು, ಹೆಪ್ಪುಗಟ್ಟಿದ ಸರೋವರಗಳು ಮತ್ತು ಭೂದೃಶ್ಯಗಳು ಕಾಲ ಕಳೆಯಲು ಉತ್ತಮವಾದ ಸ್ಥಳಗಳಾಗಿವೆ.
ಪ್ರಶಾಂತತೆ ಮತ್ತು ನೈಸರ್ಗಿಕ ಸೌಂದರ್ಯದ ಆಕರ್ಷಣೆಯನ್ನು ಹುಡುಕುವವರಿಗೆ ಈ ತಾಣ ಸೂಕ್ತವಾಗಿದೆ.
3. ಶಿಮ್ಲಾ: (Shimla)
ಹಿಮಪಾತದ ಸಮಯದಲ್ಲಿ ಈ ಗಿರಿಧಾಮವು ಹಿಮಭರಿತ ಸ್ವರ್ಗವಾಗಿ ಮಾರ್ಪಡುತ್ತದೆ. ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಲು ಹಿಮಭರಿತ ಮಾಲ್ ಗಳ ರಸ್ತೆಯಲ್ಲಿ ನಡೆಯಿರಿ, ಚಳಿಗಾಲದ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಮತ್ತು ಹಿಮದಿಂದ ಆವೃತವಾದ ಕ್ರೈಸ್ಟ್ ಚರ್ಚ್ ಅನ್ನು ವೀಕ್ಷಿಸಿ.
4. ಕಲ್ಪ: (Kalpa):
ಕಿನ್ನೌರ್ ಜಿಲ್ಲೆಯಲ್ಲಿರುವ ಕಲ್ಪಾ ತಾಣವು ಹಿಮಪಾತದಿಂದ ಅಲೌಕಿಕ ಸೌಂದರ್ಯತೆಯನ್ನು ಪ್ರದರ್ಶಿಸುತ್ತದೆ. ಹಿಮದಿಂದ ಆವೃತವಾದ ಕಿನ್ನೌರ್ ಕೈಲಾಶ್ ಶ್ರೇಣಿಯು ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ.
ಹಿಮದಿಂದ ಅಲಂಕರಿಸಲ್ಪಟ್ಟ ಶಿಖರಗಳು ಮತ್ತು ಪುರಾತನ ಮಠಗಳನ್ನು ವೀಕ್ಷಿಸಲು ಉತ್ತಮವಾದ ಸಮಯ ಇದಾಗಿದೆ.
5. ಗುಲ್ಮಾರ್ಗ್: (Gulmarg)
‘ಹೂಗಳ ಹುಲ್ಲುಗಾವಲು’ ಎಂದೂ ಕರೆಯಲ್ಪಡುವ ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ಸಮಯದಲ್ಲಿ ಅದ್ಭುತಲೋಕವಾಗಿ ಮಾರ್ಪಡುತ್ತದೆ. ಗುಲ್ಮಾರ್ಗ್ ನ ಹಿಮದಿಂದ ಆವೃತವಾದ ಗೊಂಡೊಲಾ ಶಿಖರಗಳು ಚಂದದ ತಾಣವಾಗುತ್ತದೆ.
6. ಕೀಲಾಂಗ್: (Keylong)
ಲಾಹೌಲ್ ಕಣಿವೆಯಲ್ಲಿ ನೆಲೆಸಿರುವ ಕೀಲಾಂಗ್ ಎತ್ತರದ ಪರ್ವತಗಳಿಂದ ಆವೃತವಾಗಿದೆ. ಹಿಮದಿಂದ ಆವೃತವಾದ ಈ ಎತ್ತರದ ಭೂದೃಶ್ಯ ವು ರೋಮಾಂಚಕ ನೋಟವನ್ನು ನೀಡುತ್ತದೆ.
ಹಿಮಾಚಲ ಪ್ರದೇಶ, ಕಾಶ್ಮೀರ, ಲಾಹೌಲ್ ನ ಸುಮಾರು ತಾಣಗಳು ಹಿಮದಿಂದ ಆವೃತವಾಗಿದ್ದು, ಸುಂದರ ತಾಣವಾಗಿ ಮಾರ್ಪಟ್ಟಿದೆ. ಈ ಸಮಯದಲ್ಲಿ ಈ ತಾಣಗಳಿಗೆ ಭೇಟಿ ನೀಡುವುದು ಅದ್ಭುತ ಅನುಭವ ನೀಡುತ್ತದೆ.
ಆದರೆ ಹಿಮದಿಂದ ಅತಿಯಾಗಿ ಆವೃತವಾಗಿ ಕೆಲವು ಪ್ರದೇಶಗಳ ರಸ್ತೆಗಳು ಮುಚ್ಚಲ್ಪಟ್ಟಿವೆ. ಭೂಕುಸಿತಗಳು ಕಂಡು ಬಂದಿದೆ. ಅತಿಯಾದ ಕೊರೆಯುವ ಚಳಿಯು ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ.
ನೀವು ಭೇಟಿ ನೀಡುವ ಮೊದಲು ಈ ಪ್ರದೇಶಗಳ ಕುರಿತು ಸರಿಯಾದ ಮಾಹಿತಿ ಕಲೆ ಹಾಕುವುದು ಉತ್ತಮ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.