ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಬೆಳ್ಳಂಬೆಳಗ್ಗೆ ಮಟ್ಟು ಬೀಚ್, ಮಧ್ಯಾಹ್ನ ಹೊತ್ತು ಧನುಷ್ ತೀರ್ಥ: ಉಡುಪಿ ಆಸುಪಾಸಲ್ಲಿ ನೀವು ನೋಡಬಹುದಾದ 2 ಸುಂದರ ಜಾಗಗಳು

  • ನವ್ಯಶ್ರೀ ಶೆಟ್ಟಿ

ಅದು ಪದವಿಯ ಮೂರನೇ ಸೆಮಿಸ್ಟರ್ ಕೊನೆಯ ದಿನ. ಶನಿವಾರ ಆಗಿರುವುದರಿಂದ ಮದ್ಯಾಹ್ನ ರಜೆ. ಇನ್ನು ಪರೀಕ್ಷೆಗೆ ಓದಲು 2 ವಾರ ರಜೆ. ವಾರಕೊಮ್ಮೆ ನಮ್ಮದೇ ಒಂದು ರೀತಿಯ ವೀಕೆಂಡ್ ಟೂರ್ ಅಂತೆಲ್ಲಾ ಇರುತ್ತಿದ್ದ ನಮಗೆಲ್ಲ 2 ವಾರ ಎಲ್ಲ ಮಿಸ್ ಆಗುತ್ತೆ ಅನ್ನುವ ಬೇಜಾರು. 15 ದಿನಗಳ ಕಾಲ ಫ್ರೆಂಡ್ಸ್ ಸಿಗಲ್ಲ ಅವರೆಲ್ಲ ಊರಿಗೆ ಹೋಗುತ್ತಾರೆ. ಆ ಕಾರಣಕ್ಕಾಗಿ ಕೊನೆ ದಿನ ಎಲ್ಲಿಗಾದರೂ ಹೋಗುವ ಅನ್ನುವ ಚರ್ಚೆಗಳು ಶುರುವಾಯಿತು. ಉಡುಪಿಯ ಬಸ್ ಸ್ಟ್ಯಾಂಡ್ ನಲ್ಲಿ ಬರೋಬ್ಬರಿ 1 ಗಂಟೆಗಳ ಕಾಲ ಸ್ಥಳದ  ಆಯ್ಕೆಯೇ ದೊಡ್ಡ ಚರ್ಚೆ. ಹತ್ತಾರು ಜಾಗಗಳ ಮಧ್ಯ ಕಡೆಯದಾಗಿ ಹೊಳೆದಿದ್ದು ಮಟ್ಟು ಬೀಚ್ . 

ಆದರೆ ಹೋಗಲು ಸರಿಯಾದ ಗಾಡಿಯಿಲ್ಲದೆ, ಹೋಗುವುದಾ? ಬೇಡವಾ? ಅನ್ನುವ ಚರ್ಚೆಯ ನಡುವೆ ಇಂಟರ್ನ್ಶಿಪ್ ಸಮಯದಲ್ಲಿ ಪರಿಚಯ ಆಗಿದ್ದ ತೇಜು ಅಣ್ಣನ ಬೈಕ್ ತಗೊಂಡು 3 ಬೈಕ್ ನಲ್ಲಿ  6 ಜನ ಸ್ನೇಹಿತರು ಉಡುಪಿಯಿಂದ ಪಯಣ ಬೆಳೆಸಿದೆವು. 

ಅದು ಮಧ್ಯಾಹ್ನದ ಸುಡು ಬಿಸಿಲು. ಆದರೂ ಪಯಣ ಹೊರಟಿದ್ದು ಮಾತ್ರ ಬೀಚ್ ಗೆ. ಆದರೆ ಮಟ್ಟು ಬೀಚ್ ಗೆ ತಲುಪಿದ ನಂತರ ಅಲ್ಲಿ ಆಕಸ್ಮಿಕವಾಗಿ ನೆನಪಾಗಿದ್ದು ಇನ್ನಂಜೆ ಸಮೀಪದ ಧನುಷ್ ತೀರ್ಥ. ಅಲ್ಲಿಗೆ ಹೋಗಲು ಒಕ್ಕೊರಲ ಕೂಗು. ಎರಡು ಸ್ಥಳಗಳಿಗೆ ನಾನು ಹಿಂದೆ ಹೋಗಿರಲಿಲ್ಲ. ಒಂದು ಸ್ಥಳಕ್ಕೆ ಹೋಗಿ ಎರಡು ಸ್ಥಳಗಳ ದರ್ಶನ. 

ನೀವು ಇದನ್ನು ಇಷ್ಟಪಡಬಹುದು: ಮಾಗೋಡು ಜಲಪಾತಕ್ಕೆ ಹೋದ ಕತೆ ಕೇಳಿ: ಶಶಾಂಕ್ ಕೆಮ್ಮಿಂಜೆ ಬರಹ

ಮಟ್ಟು

ಉಡುಪಿಯಿಂದ ಕಟಪಾಡಿಯತ್ತ ಸಾಗಿ ಶಂಕರಪುರ ಹೋಗುವ ಎದುರಿಗಿನ ರಸ್ತೆಯಲ್ಲಿ ಹೋದರೆ ನೀವು ಮಟ್ಟು ಬೀಚ್ ತಲುಪಬಹುದು. ಉಡುಪಿಯಿಂದ ಮಟ್ಟು ಬೀಚ್ ಸುಮಾರು 14ಕಿಮೀ ದೂರವಿದೆ. ಕಟಪಾಡಿಯಿಂದ ಸುಮಾರು 8-10 ಕಿಮೀ ದೂರ. ಮಟ್ಟು, ಗುಳ್ಳಗಳಿಗೆ ಪ್ರಸಿದ್ದಿ. ಮಟ್ಟು ಪ್ರದೇಶದಲ್ಲಿ ಮಾತ್ರ ಬೆಳೆಯುವ ಗುಳ್ಳ “ಮಟ್ಟು ಗುಳ್ಳ” ಅಂತಾನೆ ಫೇಮಸ್ . ಹಾಗೆಯೇ ಕರಾವಳಿಯ ಕಡಲ ಪ್ರಿಯರಿಗೆ ಮಟ್ಟು ಬೀಚ್ ಇಷ್ಟ. ನೀವು  ಮಟ್ಟು ಬೀಚ್ ಗೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಮಟ್ಟು ಗುಳ್ಳ ಬೆಳೆಗಳನ್ನು ನೋಡಬಹುದು. ಸುತ್ತ ಹಸಿರಿನ ನಡುವೆ ಸಾಗಿದರೆ ಮಟ್ಟು ಬೀಚ್ ನೀವು ತಲುಪಬಹುದು . 

ಮಧ್ಯಾಹ್ನ 3 ಗಂಟೆಯ ಸುಡು ಬಿಸಿಲಿನಲ್ಲಿ ಕೂಡ ಮಟ್ಟು ತಂಪೆರೆಯುತ್ತಿತ್ತು. ಖಾಲಿ ಹೊಟ್ಟೆಯಲ್ಲಿ ಹೋಗಿದ್ದವರಿಗೆ ಊಟದ ನೆನಪು ಮರೆಸುವಂತೆ ಇತ್ತು. ತೀರದಲ್ಲಿ ಬೃಹತ್ ಬಂಡೆಗಳು. ನೆರಳು ನೀಡುವ ತೆಂಗಿನ ಮರಗಳು. ಕಡಲಿನ ತಡಿಯಲ್ಲಿ ನಿಂತುಕೊಂಡ ದೋಣಿಗಳು ಮಟ್ಟುವಿನ ಸೌಂದರ್ಯವನ್ನು ಆಕರ್ಷಿಸುತ್ತಿತ್ತು. ಬೀಚ್ ಹತ್ತಿರದಲ್ಲಿಯೇ ಒಂದು ಹೋಟೆಲ್ ಇದೆ. ಅಲ್ಲಿ ಬರುವ ಪ್ರವಾಸಿಗರು ಶುಚಿ ರುಚಿ ಊಟ ಮಾಡಬಹುದು. 

ಬೀಚ್ ನಲ್ಲಿ ಆಡುತ್ತಾ, ಸ್ನೇಹಿತೆಯ ಮೊಬೈಲ್ ಅಕಸ್ಮಾತ್ ಆಗಿ ನೀರಿಗೆ ಬಿದ್ದು, ಬೀಚ್ ಗೆ ಹೋದ ಸಿಹಿ ನೆನಪೋ? ಕಹಿ ನೆನಪೋ ಎನ್ನುವಂತೆ ಮೊಬೈಲ್ ಹಾಳಾಗಿದ್ದು ಮಟ್ಟುವಿನ ನೆನಪು. 3 ಗಂಟೆಯ ಬಿಸಿಲಲ್ಲಿ ಕೂಡ ಮಟ್ಟು ವಿನಲ್ಲಿ ಸಾಕಷ್ಟು ಜನ ನೆರೆದಿದ್ದರು. 

ಮಟ್ಟುವಿನಿಂದ ಧನುಷ್ ತೀರ್ಥ ಹೋಗುವುದು ನಮ್ಮೊಂದಿಗೆ ಬಂದಿದ್ದ ಕೆಲವರ ಬಯಕೆ. ಆ ಕಾರಣಕ್ಕಾಗಿ ನಮ್ಮ ಪಯಣ ಹೊರಟಿದ್ದು ಧನುಷ್ ತೀರ್ಥದತ್ತ. ಆದರೆ ಬಂದ ಹಾದಿ ತಪ್ಪಿ ಹೋಗಿ ಯಾವುದೋ ದಾರಿಯಲ್ಲಿ ಸಾಗಿ ಹೇಗೋ ರಾಷ್ಟ್ರೀಯ ಹೆದ್ದಾರಿ ತಲುಪಿ ಧನುಷ್ ತೀರ್ಥ ದತ್ತ ಪಯಣ

ಧನುಷ್ ತೀರ್ಥ

ಕಟಪಾಡಿಯಲ್ಲಿ ಶಂಕರಪುರ, ಕುಂಜರಗಿರಿ ಹೋಗುವ ರಸ್ತೆಯಲ್ಲಿ ಸಾಗಿದರೆ ಧನುಷ್ ತೀರ್ಥ ತಲುಪಬಹುದು. ಉಡುಪಿಯಿಂದ 14 ಕಿಮೀ ದೂರದಲ್ಲಿದೆ. ಕಟಪಾಡಿಯಿಂದ ಸುಮಾರು 5 ಕಿಮೀ ದೂರ. ಶಂಕರಪುರದಿಂದ ಇನ್ನಂಜೆ ಮಾರ್ಗವಾಗಿ ಮುಡುಂಬ  ಅಜ್ಜೀಲಕಾಡು ಮೂಲಕ ತಲುಪಹುದು. 

ಧನುಷ್ ತೀರ್ಥ ಪುಟ್ಟ ಹಳ್ಳಿಯ ಕಾಡು ಪ್ರದೇಶದಲ್ಲಿ ಇರುವ ಸುಂದರ ತಾಣ. ಹೆಚ್ಚಾಗಿ ಜನ ಮಾನಸದಿಂದ ದೂರವಿರುವ ಸ್ಥಳ. ಬಂಟಕಲ್ಲು ರಸ್ತೆಯಿಂದ ಮುಡುಂಬ ಅಜ್ಜೀಲಕಾಡು ರಸ್ತೆಯಲ್ಲಿ ಬಲಕ್ಕೆ ಸುಮಾರು 300ಮೀ ಹಾದಿಯಲಿ ಕಾಡುಗಳ ಮಧ್ಯೆ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಧನುಷ್ ತೀರ್ಥ ನಾವು ತಲುಪಬಹುದು. ಮಡುಂಬದ ಜನ ವಸತಿ ಪ್ರದೇಶ, ಮಜುರು ಗ್ರಾಮದ ಕಲ್ಲುಗುಡ್ಡೆ ಎಂಬ ಪ್ರದೇಶದಿಂದ ಧನುಷ್ ತೀರ್ಥ ಸುತ್ತುವರೆದಿದೆ. 

ಧನುಷ್ ತೀರ್ಥ ಧಾರ್ಮಿಕ ಕ್ಷೇತ್ರ. ತನ್ನ ಸಹಜ ಪ್ರಕೃತಿ ಸೌಂದರ್ಯದಿಂದ ಮೈ ಮನಗಳನ್ನು ಸೂರೆಗೊಳಿಸಬಲ್ಲ ತಾಣ. 

ಜನಪ್ರಿಯವಲ್ಲದ ಕಾರಣ ಜನಜಂಗುಳಿ ಕಡಿಮೆ. ಸುಮಾರು 60-70 ಅಡಿ ಎತ್ತರ. 150, ಮೀ ಉದ್ದ. 40-50 ಅಡಿ ಅಗಲದ ಏಕಶಿಲಾ ರಚನೆ. ಕಾಡಿನ ಮಧ್ಯ ಪ್ರಶಾಂತತೆ ಸಿಗುವ ಧನುಷ್ ತೀರ್ಥ. ನೀವು ಧನುಷ್ ತೀರ್ಥದ ತೀರ್ಥ ತಲುಪಬೇಕಾದರೆ ಸುಮಾರು 98-100 ಮೆಟ್ಟಿಲು ಹತ್ತಿ ಸಾಗಬೇಕು. ಸುತ್ತಲಿನ ಹಸಿರ ಶ್ರೇಣಿಗಳನ್ನು ನೀವು ಅನುಭವವಿಸುತ್ತಾ ಹೋದಂತೆ ನಿಮಗೆ  ಮೆಟ್ಟಿಲು ಹತ್ತಿದ ಪ್ರಯಾಸ ಆಗುವುದಿಲ್ಲ. ಮೆಟ್ಟಿಲು ಹತ್ತಿ ಸಾಗಿದಂತೆ ನಿಮ್ಮನ್ನು ಮೊದಲು ಸ್ವಾಗತಿಸುವುದು  ಎಂದೂ ಬತ್ತದ ತೀರ್ಥ. ಸುತ್ತಲೂ ರೆಂಜಲ ಗಿಡಗಳು ಜಾಸ್ತಿಯಿದ್ದರಿಂದ ಅಲ್ಲಿಗೆ ಧನುಷ್ ತೀರ್ಥ ಅನ್ನುವ ಹೆಸರು ಬಂತು ಎನ್ನುವುದು ಕೆಲವರ ಮಾತು. 

ಇತಿಹಾಸ ಪ್ರಸಿದ್ಧ ಕುಂಜರಗಿರಿಯ 4 ತೀರ್ಥಗಳಲ್ಲಿ ಧನುಷ್ ತೀರ್ಥ ಕೂಡ ಒಂದು. ಇಲ್ಲಿ ಅನೇಕ ಶಿಲಾ ಗುರುತುಗಳಿವೆ. ಕುಂಜರಗಿರಿಗೂ ಇಲ್ಲಿಗೂ ಸಂಬಂಧಿಸಿದಂತೆ ಐತಿಹಾಸಿಕ ಕಥೆಗಳಿವೆ. ಧನುಷ್ ತೀರ್ಥದ ಬಂಡೆಯ ಮೇಲೆ ಹತ್ತಿ ಸುತ್ತಲೂ ನೋಡಿದಾಗ ಎರಡು ಗ್ರಾಮಗಳ ಹಸಿರು ಕಾಡು ತೋಟ,ಮನೆಗಳು ನಿಮ್ಮ ಕಣ್ಮುಂದೆ ಬರುತ್ತದೆ. ಬದುಕಿನ ಜಂಜಾಟಗಳ ನಡುವೆ ನೆಮ್ಮದಿ ಬಯಸುವವರಿಗೆ ಹೇಳಿ ಮಾಡಿಸಿದ ತಾಣ. ಎಲ್ಲಾ ಕಾಲದಲ್ಲೂ ಬೀಸುವ ತಂಗಾಳಿ. ದೈವಿಕ ಅನುಭವ ನೀಡುವ ಸೂರ್ಯೋದಯ, ಸೂರ್ಯಾಸ್ತ ಧನುಷ್ ತೀರ್ಥದ ಸೊಬಗು. 

ಇಲ್ಲಿಗೆ ಹೆಚ್ಚಾಗಿ  ಸ್ಥಳೀಯ ಪ್ರವಾಸಿಗರು, ವಿದ್ಯಾರ್ಥಿಗಳು ಬರುತ್ತಾರೆ. ಹೆಚ್ಚಿನ ಜನ ಇಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಜನ ಜಂಗುಳಿಯಿಂದ ದೂರ ಉಳಿದ ಕಾರಣಕ್ಕೆ ಇನ್ನೂ ಸಹಜತೆ ಉಳಿಸಿಕೊಂಡಿದೆ ಧನುಷ್ ತೀರ್ಥ. ಸೂರ್ಯ ಮೆಲ್ಲಗೆ ಜಾರುವ ಹೊತ್ತಾಗುತ್ತಿದ್ದಂತೆ ಪಯಣ ಹೊರಟಿದ್ದು ಮರಳಿ ಉಡುಪಿಗೆ. ತಿರುವುಗಳ ನಡುವೆ ಧನುಷ್ ತೀರ್ಥ ಮತ್ತೆ ಹಾದಿ ತಪ್ಪಿಸಿತ್ತು. ಗೂಗಲ್ ಮ್ಯಾಪ್ ಸಹಾಯ. ತಿರುವುಗಳ ನಡುವೆ ಅಲ್ಲಿ ಸ್ಥಳೀಯರನ್ನು  ಕೇಳಿಕೊಂಡು ಕೊನೆಗೂ ರಾಷ್ಟ್ರೀಯ ಹೆದ್ದಾರಿ ಸಂದಿಸಿ ಉಡುಪಿ ತಲುಪುವಾಗ ಗಂಟೆ 5.30 . 

ಯಾವುದೇ ಖರ್ಚು ಇಲ್ಲದೆ ಸಲೀಸಾಗಿ ಹೋಗಿ ಬರಲು ಸಹಾಯ ಆಗಿದ್ದು ತೇಜು ಅಣ್ಣ ಕೊಟ್ಟಿದ್ದ ಬೈಕ್ ನಿಂದ. ಬೈಕ್ ಕೊಟ್ಟವರಿಗೆ ಉಡುಪಿಯಲ್ಲಿ ಬೈಕ್ ಮರಳಿ ನೀಡಿ ಒಂದು ಧನ್ಯವಾದಾದ ನಗು ಬೀರಿದೆವು. ಯಾವಾಗಲೂ ಅನಿರೀಕ್ಷಿತ ಯೋಜನೆ ಹಾಕುವ ನಮಗೆ ಈ ಬಾರಿಯ ಯೋಜನೆ ನಮ್ಮ ಜಿಲ್ಲೆಯ ಮತ್ತೆರಡು ಸ್ಥಳಗಳನ್ನು  ನೋಡುವಂತೆ ಆಯಿತು. ಊರಿಗೆ ಮರಳುವ ಕೆಲವು  ಗೆಳೆಯ, ಗೆಳತಿಯರು ಪರೀಕ್ಷೆಯ ದಿನಕ್ಕೂ ಮುಂಚೆಯ ಕೊನೆ ಭೇಟಿ ಸಿಹಿ ನೆನಪು ಗಳಿಂದ ಕೂಡಿತ್ತು. ಪರೀಕ್ಷೆಗೂ ಮುನ್ನ ಮತ್ತೊಂದು ರೈಲು ಪಯಣ   ಮಾಡುವ  ಯೋಜನೆಗೆ ಮಟ್ಟು ಪ್ರಯಾಣ ನಾಂದಿ ಆಗಿತ್ತು. 

ನೀವು ಕೃಷ್ಣನ ನಗರಿಗೆ ಬಂದಾಗ ಮಟ್ಟುವಿನ ಕಡಲ ತೀರ ಹಾಗೂ ಧನುಷ್ ತೀರ್ಥ ಗೆ ಮರೆಯದೇ ಭೇಟಿ ನೀಡಿ, ಅಲ್ಲಿನ ಸೌಂದರ್ಯ ಸವಿಯಿರಿ. ಉಡುಪಿಯ ಕಡಲು,ಕಾಡಿನ ಮಧ್ಯ ಇರುವ ಸುಂದರ ತಾಣದ ಕಥೆಗಳನ್ನು ಸವಿಯಿರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button