ದೂರ ತೀರ ಯಾನಮೋಟಾರ್ ಸೈಕಲ್ ಡೈರಿವಿಂಗಡಿಸದ

ಜಲಪಾತಗಳ ನಾಡು ಯೆಲ್ಲಾಪುರದ ಅಚ್ಚರಿಯ ದೇಗುಲಗಳು: ಬೈಕರ್ ಪ್ರದೀಪ್ ತುಮ್ಮರಮಟ್ಟಿ ಪರಿಚಯಿಸಿದ ಬೆರಗಿನ ಸ್ಥಳಗಳು

ವಾರದ ರಜೆಯ ಸಮಯ ನನ್ನ ಗಮನವನ್ನು ಪ್ರವಾಸದ ಕಡೆಗೆ ಸೆಳೆಯುತ್ತಿತ್ತು. ಆ ಹಿಂದಿನ ರಾತ್ರಿ ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಕುಳಿತುಕೊಂಡು ಎಷ್ಟೆಲ್ಲ ಪ್ಲಾನ್ ಮಾಡಿ ಕೊನೆಗೆ ಯೆಲ್ಲಾಪುರಕ್ಕೆ ಹೋಗಲು ಸಿದ್ಧರಾದೆವು.

ಮುಂಜಾವಿನ ಮಂಜು:

ಇಬ್ಬನಿಯಿಂದ ಕೂಡಿದ ಮುಂಜಾವು ನಮ್ಮನು ಪ್ರಯಾಣಕ್ಕೆ ಬರಮಾಡಿತ್ತು. ಹೀಗೆ ಬೈಕ್ ಹತ್ತಿ ಹೊರಟ ನಮಗೆ ಆ ಮುಂಜಾವು ತುಂಬಾ ಹಿತವೆನಿಸುತ್ತಿತ್ತು. ಬೆಳಿಗ್ಗೆ 6 ಗಂಟೆಗೆ ಶುರುವಾದ ನಮ್ಮ ಪಯಣ ಪ್ರಕೃತಿ ಸೊಬಗಿನ ರಾಶಿ ಯೆಲ್ಲಾಪುರಕ್ಕೆ ಬಂದು ನಿಂತಿತು. ಯೆಲ್ಲಾಪುರದಿಂದ ಮುಂದೆ ಗಂಟೆ ಗಣಪತಿಯ ದರುಶನಕ್ಕೆ ಪಯಣ ಬೆಳೆಸಿದೆವು. 

ಆ ಕಡಿದಾದ ದಾರಿ ಮತ್ತು ಸುತ್ತಲೂ ಹಚ್ಚ ಹಸಿರನ್ನು ಹೊದ್ದು ನಿಂತ ಎತ್ತರದ ಮರಗಳ ಸ್ವಾಗತ ನಮ್ಮನ್ನು ಪುಳಕಿತಗೊಳಿಸುತ್ತಿತ್ತು. ಆಗಾಗ ಸೂರ್ಯ ನಮ್ಮ ಹಾದಿಯಲ್ಲಿ ಇಣುಕಿ ನೋಡುವ ತವಕ ಅದ್ಭುತವಾಗಿತ್ತು. ದಾರಿಯುದ್ದಕ್ಕೂ ಸೂರ್ಯನಿಗೂ ಸಹ ಇಣುಕಿ ನೋಡಲು ಬಿಡದ ಹಾಗೆ ಬೆಳೆದು ನಿಂತ ಮರಗಳು. ಹೀಗೆ ರಮ್ಯ ವಾತಾವರಣವನ್ನು ಅನುಭವಿಸುತ್ತ ಕೊನೆಗೆ ಗಂಟಿ ಗಣಪತಿಯ ದೇಗುಲ ತಲುಪಿದೆವು.

ಈ ದೇವಸ್ಥಾನವು ಉತ್ತರ ಕನ್ನಡ ಜಿಲ್ಲೆ ಯೆಲ್ಲಾಪುರದ ಚಂದಗುಳಿ ಗ್ರಾಮದಲ್ಲಿದೆ. ನೋಡಲು ಅದ್ಭುತ ಎನ್ನುವ ಹಾಗೆ ದೇಗುಲದ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನದ ವಿಶೇಷ ಗಣಪನಿಗೆ ಗಂಟೆಗಳನ್ನು ಅರ್ಪಿಸುವುದು. ಸುತ್ತಲೂ ಹಚ್ಚ ಹಸಿರಿನಿ ವಾತಾವರಣದಿಂದ ಕೂಡಿದ ಈ ಪ್ರದೇಶ ನಮ್ಮ ಮನಸಿಗೆ ಮುದ ನೀಡುತ್ತದೆ. ಇಲ್ಲಿ ಬರುವ ಭಕ್ತರ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಈ ನಮ್ಮ ಬಾಲಗಣಪ. ಕೇವಲ ಗಂಟೆಯ ಹರಕೆಯಷ್ಟೇ ಇವನಿಗೆ ಮೀಸಲು.

ನೀವು ಇದನ್ನು ಇಷ್ಟಪಡಬಹುದು: ಹುಬ್ಬಳ್ಳಿ-ಧಾರವಾಡದ ಅತಿ ಸುಂದರ ಜಲಪಾತ ವರವಿ ಸಿದ್ದೇಶ್ವರ ಕೊಳ್ಳ: ಬೈಕರ್ ಪ್ರದೀಪ್ ತುಮ್ಮರಮಟ್ಟಿ ಪರಿಚಯಿಸಿದ ಅಚ್ಚರಿ ತಾಣ

ಈ ದೇವಸ್ಥಾನವು ತುಂಬಾ ಪುರಾತನದ ಇತಿಹಾಸ ಇದ್ದರೂ 1992ರಲ್ಲಿ ನೂತನ ಕಟ್ಟಡ ಸ್ಥಾಪನೆಗೊಂಡು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳಿಂದ ನೂತನ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ.

ಈ ದೇವಸ್ಥಾನದ ಸುತ್ತ ಅದ್ಭುತ ಮನಮೋಹಕ ತಾಣಗಳ ಪರಿಚಯವೂ ನಿಮಗಾಗುತ್ತದೆ. ಈ ದೇವಸ್ಥಾನದ ಸನಿಹವೇ ಇರುವ ಮಾಗೋಡು ಜಲಪಾತ, ಕುಳಿ ಮಾಗೋಡು ಜಲಪಾತ, ಜೇನುಕಲ್ಲು ಗುಡ್ಡ ಹೀಗೆ ಸುಂದರ ತಾಣಗಳ ವೀಕ್ಷಣೆಯನ್ನು ಕೂಡ ನೀವು ಮಾಡಬಹುದು.

ದೇವರ ದರುಶನ ಸಿಕ್ಕ ಖುಷಿಯಲ್ಲಿ ಮತ್ತು ನಾವು ತಂದಂತಹ ತಿಂಡಿ ತಿನಿಸುಗಳನ್ನು ತಿಂದು ಮತ್ತೆ ಸುತ್ತಲಿನ ಅದ್ಭುತ ತಾಣಗಳನ್ನು ನೋಡಿಕೊಂಡು ಮತ್ತೆ ಯೆಲ್ಲಾಪುರಕ್ಕೆ ಹೊರಟೆವು.

ದಾರಿಮಧ್ಯ ಕಂಡ ಐತಿಹಾಸಿಕ ಪರಂಪರೆಯ ದೇಗುಲ

ದಾರಿ ಮಧ್ಯ ನಮಗೊಂದು ಸುಂದರ ಮತ್ತು ಅಚ್ಚರಿಯ ತಾಣ ಕೈಬೀಸಿ ಕರೆಯುತ್ತಿತ್ತು ಈ ಸ್ಥಳವನ್ನು ಕೂಡ ನೋಡೇ ಹೋಗೋಣ ಎಂದು ನಮ್ಮ ಬೈಕ್ ಗಳನ್ನು ಅತ್ತ ತಿರುಗಿಸಿದೆವು.

ಹೋದಹೋದಂತೆ ದಾರಿಯು ಪ್ರಶಾಂತತೆಯಿಂದ ಕೂಡಿತ್ತು ಮತ್ತು ಪಕ್ಷಿಗಳ ಕಲರವ ನಮ್ಮನ್ನು ಮತ್ತಷ್ಟು ಹುರುಪುಗೊಳಿಸಿತ್ತು. ಮೊದಲಿಗೆ ಒಂದು ದೊಡ್ಡ ಸರೋವರದಂತಹ ಕೆರೆ ನಮ್ಮನ್ನು ಸ್ವಾಗತಿಸಿತು. ಕೆರೆಯ ಪಕ್ಕದಲ್ಲಿ ವಿಶಾಲವಾದ ದೇವಸ್ಥಾನವಿತ್ತು. ನಮ್ಮ ಬೈಕ್ ಗಳನ್ನ ಅಲ್ಲೇ ನಿಲ್ಲಿಸಿ ದೇವಸ್ಥಾನಕ್ಕೆ ಹೊರಟೆವು. ಸುತ್ತಲೂ ಪ್ರಶಾಂತವಾದ ವಾತಾವರಣ ಆಹ್ಲಾದಕರವಾಗಿತ್ತು.

ಆ ಪ್ರದೇಶದ ಹೆಸರು ಕವಡಿಕೆರೆ ಯೆಲ್ಲಾಪುರದಿಂದ ಕೇವಲ 8 km ದೂರದಲ್ಲಿದೆ. ಈ ಪುರಾತನ ದೇವಸ್ಥಾನದ ಇತಿಹಾಸ ತಿಳಿದ ನಮಗೆ ಅಚ್ಚರಿಯ ಜೊತೆಗೆ ಧನ್ಯತೆಯ ಭಾವ ಮೂಡಿತು.

ಪುರಾಣ ಪ್ರಸಿದ್ಧ ಸರೋವರ ದೇವಾಲಯ:

ಒಮ್ಮೆ ಪಾಂಡವರು ವನವಾಸಕ್ಕೆಂದು ಬಂದಾಗ ಭೀಮಸೇನ ಹಣ್ಣು ಹಂಪಲುಗಳನ್ನು ಹುಡುಕುತ್ತ ಬರುತ್ತಾನೆ. ಆಗ ಭೀಮಸೇನನಿಗೆ ದೂರದ ಗುಹೆಯಿಂದ ಇಂಪಾದ ನಾದಸ್ವರ ಕೇಳಲಾರಂಭಿಸುತ್ತದೆ. ಆಗ ಭೀಮಸೇನ ಆ ಸುಮಧುರ ಧ್ವನಿಯನ್ನು ಹಿಂಬಾಲಿಸುತ್ತ ಒಂದು ಗುಹೆಯ ಹತ್ತಿರ ಹೋದಾಗ ಅಲ್ಲಿ ಅವನಿಗೆ ಸ್ವತಃ ದುರ್ಗಾದೇವಿಯು ದರ್ಶನ ಭಾಗ್ಯವನ್ನು ಕೊಡುತ್ತಾಳೆ.

ಆಗ ದೇವಿಯ ಆದೇಶದಂತೆ ಸಕಲ ಜೀವರಾಶಿಗಳ ದಾಹ ನೀಗಲು ಅನುಕೂಲವಾಗುವಂತೆ ಭೀಮಸೇನನು ಕವಡೆಯಿಂದ ನೀರನ್ನು ತಂದು ಇಲ್ಲಿ ಒಂದು ಕೆರೆಯನ್ನು ನಿರ್ಮಾಣ ಮಾಡುತ್ತಾನೆ ಮತ್ತು ಪಕ್ಕದಲ್ಲೇ ಕೆರೆಯ ದಡದಲ್ಲಿ ಶ್ರೀ ಧುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಕೂಡ ಮಾಡುತ್ತಾನೆ. ಆಗಿನಿಂದ ಈ ಪ್ರದೇಶಕ್ಕೆ ಕವಡೆಕೆರೆ ಎಂದು ಕರೆಯುತ್ತಾರೆ.

ವಾಯುಪುತ್ರ ವೃಕೋದರನು ಇಲ್ಲಿ ಕಾಶಿಯನ್ನು ಕಂಡ ಕಾರಣ ಇಲ್ಲಿ ದೇವಸ್ಥಾನದ ಎದುರಿಗೆ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯವು ಕೂಡ ಇದೆ. ಇಷ್ಟೆಲ್ಲ ಕಂಡ ನಮಗೆ ಆ ಪ್ರಶಾಂತತೆಯಿಂದ ಕೂಡಿದ ಸ್ಥಳವನ್ನು ಬಿಟ್ಟು ಹೋಗಲು ನಮಗೆ ಮನಸೇ ಬರುತ್ತಿರಲಿಲ್ಲ.

ಮಾತನಾಡುತ್ತ ದೇವಸ್ಥಾನದ ಹತ್ತಿರ ಕುಳಿತಾಗ ದೂರದಿಂದ ಎಲ್ಲೋ ಯಕ್ಷಗಾನದ ನಿನಾದ ಕೇಳಲಾರಂಭಿಸಿತು ನಮಗೆ ಒಂದು ಕಡೆ ಆಶ್ಚರ್ಯ ಮನೆಮಾಡಿತ್ತು. ಮತ್ತೆ ಅಲ್ಲಿ ಬಂದ ಒಬ್ಬ ಭಕ್ತನಿಗೆ ಕೇಳಿದಾಗ ಹೌದು ಇಲ್ಲಿ ದೂರದಲ್ಲಿ ಕೆರೆಯ ದಡದಲ್ಲಿ ಯಕ್ಷಗಾನದ ಅಭ್ಯಾಸ ಮಾಡುತ್ತಾರೆ ಎಂದಾಗ ನಮಗೆ ಅದನ್ನು ನೋಡುವ ಹಂಬಲವಿದ್ದರೂ ದೂರವಿದ್ದ ಕಾರಣ ಮತ್ತು ಸಮಯದ ಅಭಾವದ ಕಾರಣ ಮತ್ತೆ ನಾವು ಅಲ್ಲಿಂದ ಮರಳಿ ಹೊರಟೆವು.

ಸಂಜೆಯ ಆ ಸುಂದರ ಸ್ಥಳದ ಭೇಟಿ ನಮ್ಮ ಮನದಲ್ಲಿ ಅಂದು ಏನೋ ವಿಶೇಷ ಅನುಭವ ಕೊಡುತ್ತಿತ್ತು. ನಾವು ನೋಡಲು ಹೋದ ಜಾಗದಲ್ಲಿ ಹೀಗೆ ಅನೇಕ ಅದ್ಭುತ ಮತ್ತು ಸುಂದರ ಸ್ಥಳಗಳನ್ನು ಅನ್ವೇಷಿಷಿದಾಗ ನಮಗೊಂದು ಮಾಹಿತಿ ಸಿಗುತ್ತದೆ ಮತ್ತು ಪ್ರವಾಸ ಕೇವಲ ಮಜಾ ಕೊಡುವ ಪಯಣವಾಗದೆ ಹೀಗೆ ನಮ್ಮ ಸಂಸ್ಕೃತಿಯ ಮತ್ತು ಪರಂಪರೆಯನ್ನು ಸಾರುವ ಜ್ಞಾನದ ಪಯಣವಾಗಲಿ ಎಂದು ನನಗೆ ಅನಿಸಿತು.

ನಾವು ಎಲ್ಲೇ ಹೋದರು ಪರಿಸರವನ್ನು ಹಾಳುಮಾಡದೆ ಸ್ವಚ್ಛತೆಯಿಂದ ಇಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

 ಮತ್ತೆ ನನ್ನ ಮುಂದಿನ ಪಯಣದಬಗ್ಗೆ ಮತ್ತು ಅಷ್ಟೇನು ಪರಿಚಯವಿಲ್ಲದ ಎಲೆಮರಿಚೀಕೆ ಎಂಬಂತೆ ಇರುವ ಸುಂದರ ಸ್ಥಳಗಳ ಅನ್ವೇಷಣೆಯ ಬಗ್ಗೆ ಮುಂದಿನ ಲೇಖನದಲ್ಲಿ ಭೇಟಿಯಾಗೋಣ..

ಹೆಚ್ಚಿನ ಮಾಹಿತಿ ಮತ್ತು ಈ ನಮ್ಮ ಪಯಣದ ವಿಡಿಯೋ ನೋಡಲು YouTube ಜಾಲತಾಣದ FFG DWD Channel ನಲ್ಲಿ ನೋಡಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button