ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಪೊಡವಿಗೊಡೆಯನ ನಾಡಲ್ಲಿ ಪರ್ಯಾಯ ಸಂಭ್ರಮ; ಏನಿದು ಪರ್ಯಾಯ..?

ಉಡುಪಿ ಎಂದಾಗ ನಿಮಗೆ ತಟ್ಟನೆ ನೆನಪಾಗುವುದು ಕೃಷ್ಣಮಠ. ಸದ್ಯ ಮಠದ ರಾಜಬೀದಿ ತುಂಬೆಲ್ಲ ರಾಜಕಳೆ ತುಂಬಿದೆ. ಪೊಡವಿಗೊಡೆಯನ ನಾಡು 2 ವರ್ಷಕ್ಕೊಮ್ಮೆ ನಡೆಯುವ ಮಹಾ ಉತ್ಸವಕ್ಕೆ ಸಿದ್ಧವಾಗಿದೆ.

ಕೃಷ್ಣನೂರಿನ ಮಂದಿ ಪರ್ಯಾಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರರಾಗಿದ್ದಾರೆ. ಪರ್ಯಾಯ ಈ ಹೆಸರು ಒಂದಷ್ಟು ಮಂದಿಗೆ ಗೊತ್ತಿರಬಹುದು.ಇನ್ನೂ ಕೆಲವರಿಗೆ ಅಪರಿಚಿತ ಇರಬಹುದು. ಆದ್ರೆ ಈ ಉತ್ಸವ ಅಷ್ಟಮಠಗಳ ಬೀಡು, ಕೃಷ್ಣ ಮಠದ ಸಂಪ್ರದಾಯದ ಪ್ರತೀಕ.

2 ವರ್ಷಗಳಿಗೊಮ್ಮೆ ಜನವರಿ ತಿಂಗಳ 18 ರಂದು ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವ ನಡೆಯುತ್ತದೆ.

ಚುಮುಚುಮು ಚಳಿಯ ನಡುವೆಯೂ ರಾತ್ರಿಯಿಡಿ ನಡೆಯುವ ಈ ಆಚರಣೆಗೆ ರಾಜ ಬೀದಿ ತುಂಬೆಲ್ಲ ಜನಸಾಗರವೇ ನೆರೆದಿರುತ್ತದೆ.

ಉಡುಪಿಯಲ್ಲಿ ಒಟ್ಟು 8 ಮಠಗಳಿವೆ. ಕೃಷ್ಣಮಠದ ಪೂಜೆ, ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಅಧಿಕಾರವನ್ನ ಹಸ್ತಾಂತರ ಮಾಡುವುದೇ ಈ ಪರ್ಯಾಯ ಪೂಜೆ.

ಸ್ವಾಮೀಜಿಗಳ ಶ್ರೀಕೃಷ್ಣನ ಪೂಜಾನುಷ್ಠಾನ ಅಧಿಕಾರ ಹಸ್ತಾಂತರ ಮಾತ್ರವೇ ಆಗಿದ್ದರೆ ಪರ್ಯಾಯಕ್ಕೆ ಇಷ್ಟೊಂದು ಮಹತ್ವ ಬರುತ್ತಿತ್ತೋ ಇಲ್ವೋ?

ಆದ್ರೆ ಪರ್ಯಾಯ (Udupi Paryaya Utsav) ಎಂದರೆ ಕೇವಲ ಸ್ವಾಮೀಜಿಗಳ ಬದಲಾವಣೆ ಮಾತ್ರ ಆಗಿರದೇ ಅದು ಉಡುಪಿಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಬದಲಾವಣೆಯೂ ಹೌದು.

ಪೀಠಾರೋಹಣ ಮಾಡಿರುವ ಶ್ರೀಗಳು ಹಾಗೂ ಅವರ ಮಠವು ಕೃಷ್ಣ ಮಠದ ಆಡಳಿತವನ್ನು ನೋಡಿಕೊಳ್ಳುತ್ತದೆ. ಮತ್ತು ಅದರಂತೆ ಮಠದಲ್ಲಿ ಕೊಡುವ ಭೋಜನ ಪ್ರಸಾದದಿಂದ ಹಿಡಿದು ಮಠದಲ್ಲಿ ನಡೆಯುವ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು, ವಿಚಾರ, ಆಸಕ್ತಿ ಎಲ್ಲವೂ ಬದಲಾಗುತ್ತದೆ.

ಅಲ್ಲದೆ, ಪರ್ಯಾಯಕ್ಕೆ 500ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಪರ್ಯಾಯವನ್ನು ಉಡುಪಿಯ ಪ್ರಮುಖ ಉತ್ಸವಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ. ಎಲ್ಲಾ ಸಮುದಾಯದ ಬಂಧುಗಳು ಈ ಸಂಭ್ರಮಕ್ಕೆ ಜೊತೆಯಾಗುತ್ತಾರೆ. ಸಹಕಾರ ನೀಡುತ್ತಾರೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಜನವರಿ 18ರಂದು ನಡೆಯುವ ಈ ಉತ್ಸವ, ಉಡುಪಿಯ (Udupi) ಪ್ರಾತಿನಿಧಿಕ ಹಬ್ಬವಾಗಿ, ಜನರ ಹಬ್ಬವಾಗಿಯೂ ಹತ್ತಿರವಾಗಿದೆ.

ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ನಂತರ ಅದರ ಪೂಜೆಯ ಅಧಿಕಾರವನ್ನು ಕೂಡ ತಮ್ಮ ಪರಂಪರೆಯ ಯತಿಗಳಿಗೆ ನೀಡಿದರು. ಕೃಷ್ಣ ಮಠದ ಪೂಜಾನುಷ್ಠಾನಗಳನ್ನು ಮಧ್ವ ಪರಂಪರೆಯ ಯತಿಗಳು ನಡೆಸಿಕೊಂಡು ಬರುತ್ತಿದ್ದಾರೆ.

ಉಡುಪಿಯ ಅಷ್ಟಮಠಗಳ (Ashta Math) ಯತಿಗಳಿಗೆ ಪರ್ಯಾಯ ಪೂಜೆಯ ಅಧಿಕಾರವನ್ನು ನೀಡಿ ಹರಸಿದವರು ಮಧ್ವಾಚಾರ್ಯರು. ಆ ಬಳಿಕ ಮೊದಲಿಗೆ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು. ಅದನ್ನು ಮುಂದೆ ಸೋದೆ ಮಠಾಧೀಶರಾಗಿದ್ದ ಶ್ರೀವಾದಿರಾಜತೀರ್ಥರು ಎರಡು ವರ್ಷಗಳ ಅವಧಿಗೆ ವಿಸ್ತರಿಸಿದರು.

ವಾದಿರಾಜ ಯತಿಗಳ ಕಾಲದಿಂದ ಇಲ್ಲಿಯವರೆಗೆ 251 ಪರ್ಯಾಯಗಳನ್ನು ಕಂಡಿರುವ ಉಡುಪಿ ಈ ಬಾರಿ 252ನೇ ಪರ್ಯಾಯ ಮಹೋತ್ಸವದ ಖುಷಿಯಲ್ಲಿದೆ.

ಈ ಬಾರಿ ಪುತ್ತಿಗೆ ಮಠ (Puthige mutt) ಪರ್ಯಾಯವನ್ನು ನಡೆಸಲಿದ್ದು, ಪುತ್ತಿಗೆ ಮಠದ 30ನೇ ಯತಿ ಶ್ರೀ ಸುಗುಣೇಂದ್ರ ತೀರ್ಥರು ಪರ್ಯಾಯ ಪೀಠವನ್ನು ಏರಲಿದ್ದಾರೆ.

ಉಡುಪಿ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ (Vishwageetha Paryaya) ಎಂದು ಈ ಬಾರಿ ಕರೆಯಲಾಗುತ್ತಿದ್ದು, ಪ್ರಪಂಚ ಪರ್ಯಟನ ನಡೆಸಿರುವ ಪುತ್ತಿಗೆ ಶ್ರೀಗಳು ಪರ್ಯಾಯ ಪೀಠವನ್ನೇರಲಿರುವ ಕಾರಣ, ಇಡೀ ವಿಶ್ವದ ಆಸ್ತಿಕರ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮದ ಯಶಸ್ಸಿಗೆ ಮೆರವಣಿಗೆಯಲ್ಲಿ ಪ್ರತಿದಿನವೂ ಹೊರೆಕಾಣಿಕೆ ಸಾಗಿಬರುತ್ತಿದೆ. ಉಡುಪಿ ಪರ್ಯಾಯ ಹಿನ್ನೆಲೆಯಲ್ಲಿ ಉಡುಪಿಗೆ ಆಗಮಿಸುವ ಭಕ್ತರ ಆಹಾರ ವ್ಯವಸ್ಥೆ ಸಿದ್ಧಗೊಳಿಸಲು ಅಕ್ಕಿ, ಬೇಳೆ, ತರಕಾರಿ ಇತ್ಯಾದಿಯನ್ನು ಹೊರೆಕಾಣಿಕೆಯಲ್ಲಿ ಪ್ರತಿದಿನವೂ ತರಲಾಗುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button