ಬೇರೆ ಬೇರೆ ಊರುಗಳಲ್ಲಿ ಯುಗಾದಿ ಆಚರಣೆ ಹೇಗಿರುತ್ತದೆ: ಸುವರ್ಣಲಕ್ಷ್ಮಿ ಪರಿಚಯಿಸಿದ ವಿಭಿನ್ನ ಯುಗಾದಿ
#ಯುಗಾದಿ ವಿಶೇಷ
- ಸುವರ್ಣಲಕ್ಷ್ಮೀ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಹಾಡನ್ನು ಕೇಳುತ್ತಾ ಬೆಳೆದವರು ನಾವು. ಯುಗಾದಿ ಹಬ್ಬ ಯಾವತ್ತೂ ನಮಗೆ ಸಂಭ್ರಮ. ಇಂದಿನಿಂದ ಪ್ಲವ ಸಂವತ್ಸರ ಆರಂಭ. ಈ ಶುಭ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಆಚರಿಸುತ್ತಾರೆ ಎಂದೂ ತಿಳಿಸುವ ಪ್ರಯತ್ನ ಇದು.
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಇಂದು ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಮತ್ತು ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಆಚರಿಸಲಾಗುತ್ತದೆ.
ಚೈತ್ರ ಮಾಸವೆಂದರೇನೇ ಪ್ರಕೃತಿ ಹೊಸ ಚಿಗುರ ಸೀರೆಯುಟ್ಟು ನಲಿಯುವ ಕಾಲ. ಕರ್ನಾಟಕದಲ್ಲಿ ಯುಗಾದಿಯಂದು ಬಾಗಿಲಿಗೆ ಮಾವಿನ ತೋರಣ ಕಟ್ಟಿ ಬೇವಿನ ಸೊಪ್ಪಿನಿಂದ ಅಲಂಕರಿಸಿ, ಮೈಗೆಲ್ಲಾ ಎಣ್ಣೆ ಹಚ್ಚಿ, ಅಭ್ಯಂಗನ ಸ್ನಾನ ಆಚರಿಸಿ, ಹೊಸಬಟ್ಟೆ ಉಟ್ಟು, ಇಷ್ಟದೇವರ ಗುಡಿಗೆ ಭೇಟಿ ಕೊಟ್ಟು, ತುಪ್ಪದೊಂದಿಗೆ ಒಬ್ಬಟ್ಟಿನ ಊಟ ಮಾಡಿ, ಬೇವು ಬೆಲ್ಲ ತಿಂದು, ಪಂಚಾಗ ಶ್ರವಣ ಮಾಡುತ್ತಾರೆ.
ಆಂಧ್ರ ಪ್ರದೇಶದಲ್ಲಿ ವಿಶೇಷ ಅಡುಗೆ
ಆಂಧ್ರ ಪ್ರದೇಶದಲ್ಲಿ ಇವುಗಳ ಜೊತೆಗೆ ಉಗಾದಿ ಪಚ್ಚಡಿ ಅನ್ನುವ ಷಡ್ ರುಚಿಗಳ(ಉಪ್ಪು, ಹುಳಿ, ಸಿಹಿ,ಕಾರ, ಕಹಿ, ಒಗರು) ಹುಣಸೆ ಹಣ್ಣು, ಮಾವಿನಕಾಯಿ, ಮೆಣಸು, ಬೆಲ್ಲ,
ಬೇವು, ಉಪ್ಪುಗಳ ಮಿಶ್ರಣದಿಂದ ಮಾಡಿದ ಖಾದ್ಯ ಸೇವಿಸುತ್ತಾರೆ. ಹೊಸ ಮಾವಿನಕಾಯಿಯ ಉಪ್ಪಿನಕಾಯಿ ಸಹ ಮಾಡುತ್ತಾರೆ.
ಪಂಚಾಂಗ ಶ್ರವಣದಲ್ಲಿ ಮಳೆಬೆಳೆ ಸುಮುಹೂರ್ತ ಮುಂತಾದವುಗಳ ಬಗ್ಗೆ ತಿಳಿಯುವುದರಿಂದ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು ಅನ್ನುವ ನಂಬಿಕೆ. ಬೇವು ಬೆಲ್ಲ ತಿನ್ನುವಾಗ “ಶತಾಯು ವಜ್ರ ದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಂಕದಳ ಭಕ್ಷಣಂ” ಅನ್ನುವ ಮಂತ್ರ ಹೇಳಿಕೊಳ್ಳುತ್ತಾರೆ.ಇದರ ಅರ್ಥ ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ,
ಸಂಪತ್ತು ಪ್ರಾಪ್ತಿ, ಸಕಲ ಅರಿಷ್ಟ ನಿವಾರಣೆ ಗಾಗಿ ಬೇವು ಬೆಲ್ಲ ತಿನ್ನುತ್ತೇವೆ ಅಂತ. ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವುದರ ಸಂಕೇತವಾಗಿ ಸಹ ಬೇವು ಬೆಲ್ಲ ತಿನ್ನುತ್ತೇವೆ.
ಕರಾವಳಿಯಲ್ಲಿ ಹೆಸರುಬೇಳೆ ಪಾಯಸ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಸೌರಮಾನ ಯುಗಾದಿ ಅಥವಾ ವಿಶು ಎಂದು ಈ ಹಬ್ಬವನ್ನು ಆಚರಿಸುತ್ತಾರೆ. ಆದಿನ ಖಣಿ ಇಡುವುದು ಇವರ ಆಚರಣೆಯ ವಿಶೇಷ ಒಂದು ಬಾಳೆ ಎಲೆ ಮೇಲೆ ತಟ್ಟೆಯಲ್ಲಿ ಅಕ್ಕಿ, ತೆಂಗಿನಕಾಯಿ, ಸೌತೆಕಾಯಿ, ಹೊಸ ಬಟ್ಟೆ, ರವಿಕೆಕಣ, ಚಿನ್ನ, ಭತ್ತದ ತೆನೆ, ದೇವರ ಪ್ರತಿಮೆ ಎಲ್ಲಾ ಇಟ್ಟು ಅದರ ಮುಂದೆ ಒಂದು ಕನ್ನಡಿಯನ್ನು ಅಲ್ಲಿರುವ ಎಲ್ಲಾ ವಸ್ತುಗಳು ಕಾಣುವ ಹಾಗೆ ಮೊದಲ ದಿನ ರಾತ್ರಿಯೇ ಇಡುತ್ತಾರೆ.
ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ ಕನ್ನಡಿಯಲ್ಲಿ ದೇವರನ್ನು ನೋಡುವುದು ಇವರ ಪದ್ಧತಿ. ಅಂದು ಕರಾವಳಿಯವರು ಹಸಿ ಗೇರುಬೀಜ ಹಾಕಿ ಹೆಸರುಬೇಳೆ ಪಾಯಸ ಮಾಡಿ ಸೇವಿಸುತ್ತಾರೆ.
ಮಹಾರಾಷ್ಟ್ರದಲ್ಲಿ ಗುಡಿಪಾಡ್ವ
ಇದೇ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಗುಡಿಪಾಡ್ವ ಅನ್ನುವ ಹೆಸರಿನಲ್ಲಿ ಆಚರಿಸುತ್ತಾರೆ. ಈ ಹಬ್ಬದಂದು ಬಣ್ಣ ಬಣ್ಣದ ರಂಗೋಲಿ ಹಾಕುತ್ತಾರೆ. ಪ್ರತಿಯೊಂದು ಮನೆಯವರೂ ಮನೆಯ ಮುಂದೆ ಒಂದು ಕೋಲಿಗೆ ಹಳದಿ ಹಾಗೂ ಕೆಂಪು ಬಣ್ಣದ ವಸ್ತ್ರವನ್ನು, ಹೂವು ತಾಮ್ರದ ಚೊಂಬನ್ನು ಇರಿಸಿ ಅದನ್ನೇ ಗುಡಿ ಎಂದು ಭಾವಿಸುತ್ತಾರೆ.
ನೀವು ಇದನ್ನು ಇಷ್ಟಪಡಬಹುದು: ಕೊರೋನಾ ಸೈನಿಕರಿಗೆ ಗೌರವ ಸಲ್ಲಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಮೀ ನಡೆದ ಕನ್ನಡಿಗ ಭರತ್
ಇಂತಹ ಗುಡಿಗಳನ್ನು ಹಿಡಿದು ದೊಡ್ಡ ಮಟ್ಟದ ಮೆರವಣಿಗೆ ಸಹ ಮಾಡುತ್ತಾರೆ. ಈ ಹಬ್ಬಕ್ಕೆ ಇವರು ಶ್ರೀಖಂಡ ಎಂಬ ಸಿಹಿ ತಿಂಡಿ ತಯಾರಿಸುತ್ತಾರೆ.
ಯುಗದ ಆದಿಯೇ ಯುಗಾದಿ. ಅಂದರೆ ವರುಷದ ಆರಂಭ ಇದು ಬ್ರಹ್ಮನು ಸೃಷ್ಟಿ ಆರಂಭಿಸಿದ ದಿನ. ಹಾಗಾಗಿ ಕೆಲವು ಕಡೆ ಬ್ರಹ್ಮನಿಗೂ ಪೂಜೆ ನೆರವೇರುತ್ತದೆ. ಶಾಲಿವಾಹನ ರಾಜ ಪಟ್ಟಾಭಿಷೇಕ ಮಾಡಿಕೊಂಡದ್ದೂ ಇದೇ ದಿನ, ಅಂದಿನಿಂದಲೇ ಶಾಲಿವಾಹನ ಶಕೆ ಆರಂಭವಾಯಿತು ಅಂತ ಇತಿಹಾಸ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ