ಕಾಡಿನ ಕತೆಗಳುಕಾರು ಟೂರುವಿಸ್ಮಯ ವಿಶ್ವ

ಚಾಮರಾಜನಗರದ ವಿಸ್ಮಯಗಳು: ಈ ನಿಗೂಢ, ಚಂದದ ಜಿಲ್ಲೆಗೆ ಹೊರಡುವವರು ಈ ಮಾಹಿತಿ ಓದಿ ಹೊರಡಿ

ಕಾಡಿನ ದಾರಿ ಯಾವತ್ತೂ ನಿಗೂಢವಾಗಿರುತ್ತದೆ. ದಾರಿ ಸಾಗಿದಷ್ಟೂ ಖುಷಿ ಮತ್ತು ಕುತೂಹಲ. ಅಂಥಾ ದಾರಿಯೊಂದು ಬೇಕಿದ್ದರೆ ನೀವು ಚಾಮರಾಜನಗರದ ದಾರಿ ಹಿಡಿಯಬೇಕು. ಅಲ್ಲಿ ಜಲಪಾತವಿದೆ, ಬೆಟ್ಟ ಗುಡ್ಡವಿದೆ, ಹಸಿರಿದೆ, ಬೈಕರ್ ಗಳಿಗೆ ಒಳ್ಳೆ ಹಾದಿ ಇದೆ, ವೈಲ್ಡ್ ಲೈಫ್ ಮಂದಿಗೆ ಸಫಾರಿ ಇದೆ. ಪ್ರೀತಿ ಹುಟ್ಟಿಸುವ ಜನರಿದ್ದಾರೆ. ದಿನಗಟ್ಟಲೆ ಕೂತು ಕೇಳಬಹುದಾದ ಕತೆಗಳಿವೆ. ಅತ್ತ ಬೆಟ್ಟಗಳೂ ಇತ್ತ ನದಿಗಳೂ ಅವೆಲ್ಲದರ ಜತೆ ಜನಪದ ಹಾಡುಗಳು ಮತ್ತು ವಿಶಿಷ್ಟ ನೃತ್ಯಗಳು ಸೇರಿರುವ ಶ್ರೀಮಂತ ಸಂಸ್ಕೃತಿಯನ್ನು ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ ಚಾಮರಾಜನಗರ. ಈ ಜಿಲ್ಲೆಯಲ್ಲಿ ನೋಡಬೇಕಾದ, ತಿಳಿದುಕೊಳ್ಳಬೇಕಾದ ವಿಸ್ಮಯ ತಾಣಗಳ ಪರಿಚಯ ಇಲ್ಲಿದೆ.

ಬಿಳಿಗಿರಿಬೆಟ್ಟವೆಂಬ ನಿಗೂಢ ವಿಸ್ಮಯ

ಚಾಮರಾಜನಗರ ಎಂದ ಕೂಡಲೇ ತಕ್ಷಣ ನೆನಪಾಗುವ ಬೆಟ್ಟವಿದು. ಬೈಕರ್ ಗಳಿಗೆ, ಪ್ರವಾಸಿಗರಿಗೆ, ಕುಟುಂಬಸ್ಥರಿಗೆ ಎಲ್ಲರಿಗೂ ಆಸಕ್ತಿ ಹುಟ್ಟಿಸುವ ಬೆಟ್ಟವಿದು. ಈ ಬೆಟ್ಟದ ಸುತ್ತಲೂ ಹಬ್ಬಿರುವ ಸಮೃದ್ಧ ಅರಣ್ಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಬೆಳಗ್ಗೆ ಈ ಬೆಟ್ಟಕ್ಕೆ ಹೋದರೆ ಗಿರಿ ಶಿಖರಗಳಿಗೆ ಮೋಡ ಚುಂಬಿಸಿದಂತೆ ಭಾಸವಾಗುವ ದೃಶ್ಯ ಮೋಹಕ. ಮಳೆ ಬಿದ್ದಾಗ ಇಡೀ ಬೆಟ್ಟಹಸುರುಡಿಗೆಯುಟ್ಟ ಸುಂದರಿಯಂತೆ ತನ್ನ ಸೌಂದರ್ಯ ಪ್ರದರ್ಶಿಸುತ್ತದೆ. ರಾಜ ಗೋಪುರ, ರಂಗಪ್ಪನ ಸನ್ನಿಧಿ ಅರಣ್ಯದ ನಡುವಿನ ಆಕರ್ಷಣೀಯ ಸ್ಥಳಗಳು. ಸುಮಾರು 640 ಚದರ ಕಿ.ಮೀ ಸುತ್ತಳತೆಯ ಈ ಕಾಡನ್ನು ಹುಲಿ ರಕ್ಷಿತಾರಣ್ಯವೆಂದು ಘೋಷಿಸಲಾಗಿದೆ. ಇಲ್ಲಿ ವಿಶೇಷ ಪಕ್ಷಿಗಳು, ಸಸ್ಯ ಸಂಕುಲವಿದೆ. ಅಪರೂಪದ ಔಷಧೀಯ ಗುಣವುಳ್ಳ ಸಸ್ಯಗಳನ್ನು ಹೊಂದಿರುವ ಅರಣ್ಯವಿದು. ಹಾಗಾಗಿ ಪ್ರೀತಿಯಿಂದ ಹೋಗಿ ಹುಷಾರಾಗಿ ಬರಬೇಕು. ಬೆಟ್ಟ ಹತ್ತುವವರಿಗೆ ಸಮಯ ಸಂದರ್ಭ ಉಂಟು. ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಬೆಟ್ಟದ ಮೇಲೆ ಹೋಗಬಹುದು. ಬೆಟ್ಟ ಹತ್ತುವ ಮಧ್ಯೆ ಎಲ್ಲೂ ನಿಲ್ಲುವಂತಿಲ್ಲ. ಅರಣ್ಯದ ಅಲ್ಲಲ್ಲಿ ಸೋಲಿಗರ ಪೋಡುಗಳಿದ್ದು, ಸೋಲಿಗ ಸಂಸ್ಕೃತಿಯನ್ನು ಬಿಂಬಿಸುತ್ತವೆ. ದೇವಾಲಯದ ಬಳಿ ಇರುವ ಕಂದಕ ಹಾಗೂ ಹೆಬ್ಬಂಡೆ ಪ್ರವಾಸಿಗರ ನೆಚ್ಚಿನತಾಣ. ದೇವಾಲಯಕ್ಕೆ ಭೇಟಿ ಕೊಟ್ಟವರು ಕಂದಕದ ಬಳಿ ನಿಂತು ಅರಣ್ಯ ಸೌಂದರ್ಯವನ್ನು ಆಸ್ವಾದಿಸದೇ ಹೋದರೆ ಅವರ ಪ್ರವಾಸವೇ ಅಪೂರ್ಣ. ಇನ್ನು ಬೆಟ್ಟದಿಂದ ಚಾ.ನಗರದ ಕಡೆಗೆ ಬಂದರೆ ಕೆ.ಗುಡಿ ಪ್ರದೇಶವಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಅರಣ್ಯದಲ್ಲಿ ಸುತ್ತಾಡಿಸುವ ಸಫಾರಿ ವ್ಯವಸ್ಥೆಯೂ ಉಂಟು. ಅದಕ್ಕೆ ಶುಲ್ಕ ತೆರಬೇಕು. ದೇವಾಲಯ ಪ್ರದೇಶದ ಸ್ಥಳ ಹಾಗೂ ಕೆಲ ನಿಗದಿತ ಪ್ರದೇಶಗಳನ್ನು ಬಿಟ್ಟು ಇನ್ನೆಲ್ಲೂ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಅರಣ್ಯ ಪ್ರವೇಶಿಸುವಂತಿಲ್ಲ. ಇದು ರಕ್ಷಿತಾರಣ್ಯವಾದ್ದರಿಂದ ಕಾಡನ್ನು ಪ್ರವೇಶಿಸಲು ಅನುಮತಿ ಕಡ್ಡಾಯ. 

ಎಲ್ಲಿದೆ: ಯಳಂದೂರು ತಾಲೂಕಿನಲ್ಲಿ

ಹೋಗೋದು ಹೀಗೆ: ಚಾಮರಾಜನಗರದಿಂದ  ಹೊಂಡರಬಾಳು ಮಾರ್ಗವಾಗಿ,  ಯಳಂದೂರುನಿಂದ ಗುಂಬಳ್ಳಿ ಮಾರ್ಗವಾಗಿ ಬಿಆರ್‌ಟಿ ಅರಣ್ಯ ಪ್ರವೇಶ ಮಾಡಬಹುದು. ಚಾಮರಾಜನಗರದಿಂದ 44 ಕಿ.ಮೀ. ಯಳಂದೂರಿನಿಂದ 24 ಕಿ.ಮೀ ದೂರದಲ್ಲಿದೆ.

ಮಹದೇಶ್ವರ ಬೆಟ್ಟ

ಮಾದಪ್ಪನ ಬೆಟ್ಟ, ಮಾದಯ್ಯನ  ಗಿರಿ, ಎಂಎಂ ಹಿಲ್ಸ್ ಎಂದೆಲ್ಲಾ ಕರೆಯಲ್ಪಡುವ ಮಹದೇಶ್ವರ ಬೆಟ್ಟ ಚಾಮರಾಜನಗರ ಜಿಲ್ಲೆಯ ಹೆಮ್ಮೆ. ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ. ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿಯ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನ ದಾರಿ, ಬಸವನ ದಾರಿ ಎಂಬ ಎರಡು ಮಾರ್ಗಗಳಿವೆ. ಈ ಬೆಟ್ಟಕ್ಕೆ ಸೇರಿಕೊಂಡಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ, ಕೊಂಗುಮಲೆ ಮೊದಲಾಗಿ 77 ಮಲೆಗಳಿವೆ. ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ ಇರುವ ಶಿವ ದೇವಾಲಯವೇ ಪ್ರಧಾನವಾದ್ದು. 

ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲಪ್ರದೇಶದ ಹಲವು ಜನಾಂಗಗಳ ಕುಲದೈವವಾಗಿ ಪೂಜಿಸಲ್ಪಡುವ ಮಹದೇಶ್ವರ 15ನೇ ಶತಮಾನದಲ್ಲಿ ಜೀವಿಸಿದ್ದರೆಂದು ಇತಿಹಾಸ ಗ್ರಂಥಗಳಿಂದ ತಿಳಿದುಬರುತ್ತದೆ. ಲೋಕ ಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡ ಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ಪ್ರತೀತಿ ಇದೆ.

ಸುಮಾರು 600 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು, ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪಸ್ಸನ್ನಾಚರಿಸಿದರೆಂದೂ, ತಮ್ಮ ದಿವ್ಯ ತಪಃಶಕ್ತಿಯಿಂದ ಜನರ ಸಂಕಷ್ಟಗಳನ್ನು ನಿವಾರಿಸುತ್ತಿದ್ದರೆಂದು ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಇಲ್ಲಿನ ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚಿನ ವಿಸ್ತಾರ ಪ್ರದೇಶದಲ್ಲಿ ಹಬ್ಬಿದೆ. ಮಾದೇಶ್ವರರ ಕುರಿತು ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾಪುರುಷ, ಪವಾಡ ಪುರುಷ ಎಂದು ಕಾವ್ಯಗಳಲ್ಲಿ ಉಲ್ಲೇಖಿತವಾಗಿದೆ. 

ಎಲ್ಲಿದೆ: ಕೊಳ್ಳೇಗಾಲ ತಾಲೂಕಿನ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮಹದೇಶ್ವರ ಬೆಟ್ಟವಿದೆ.

ಹೋಗೋದು  ಹೇಗೆ: ಮಹದೇಶ್ವರ ಬೆಟ್ಟ ಕೊಳ್ಳೇಗಾಲದಿಂದ 80 ಕಿಲೋಮೀಟರ್ ಹಾಗೂ ಮೈಸೂರಿನಿಂದ 150 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು, ಮೈಸೂರು ಮತ್ತು ಕೊಳ್ಳೇಗಾಲದಿಂದ ಸಾಕಷ್ಟು  ಬಸ್ ಸೌಕರ್ಯಗಳಿದ್ದು,  ತಮಿಳುನಾಡಿನಿಂದ ಪಾಲಾರ್ ಮಾರ್ಗವಾಗಿ ಬರಬಹುದು. ಬೆಟ್ಟದ ಮೇಲೆ ಉಟೋಪಚಾರಗಳಿಗೆ ಹಾಗೂಉಳಿದುಕೊಳ್ಳಲು ಸಾಕಷ್ಟು ವ್ಯವಸ್ಥೆಯಿದೆ.

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಬೇಡಗುಳಿ ಎಂಬ ಬೆರಗು

ಕೊಳ್ಳೇಗಾಲ ತಾಲೂಕಿಗೆ ಸೇರಿರುವ ಅತ್ತಿಖಾನೆ ಗ್ರಾಮ ಅತಿಸುಂದರ ಗಿರಿಕಣಿವೆಗಳ ಆಗರ. ಚಾಮರಾಜನಗರದಿಂದ  ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿರುವ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿ ಕರ್ನಾಟಕ- ತಮಿಳುನಾಡು ರಾಜ್ಯಗಳ ಸೀಮಾರೇಖೆಯಾಗಿದ್ದು, ನಿತ್ಯಹರಿದ್ವರ್ಣ ಪರಿಸರದ ವನ್ಯಜೀವಿಧಾಮವಾಗಿ ಪ್ರಖ್ಯಾತಿಗೊಂಡಿದೆ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ಗಿರಿಜನರು ವಾಸಿಸುತ್ತಾರೆ. ಯುರೋಪಿಯನ್ನರ ಕಾಲದ ಕಾಫಿ ತೋಟಗಳು ಇಲ್ಲಿನ ಮತ್ತೊಂದು ವಿಶೇಷ. ಇಲ್ಲಿನ ಗಿರಿಜನರ ಹಾಡಿಗಳು, ಅವರ ಹಾಡುಪಾಡು, ಜೀವನ ಶೈಲಿ, ಸಂಸ್ಕೃತಿ, ಸಂಪ್ರದಾಯಗಳು ಅಧ್ಯಯನ ಯೋಗ್ಯ. ವೈವಿಧ್ಯಮಯ ವನ್ಯಜೀವಿಗಳು, ಸುಂದರ ಗಿರಿಶ್ರೇಣಿಗಳು, ಅದ್ಭುತ ಕಣಿವೆಗಳು, ಮನೋಹರ ಜಲಪಾತಗಳು ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತವೆ. ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾದುದ್ದು. ವನ್ಯಜೀವಿ ಪ್ರದೇಶವಾಗಿರುವುದರಿಂದ ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ. ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು ಜಿಲ್ಲೆಯಲ್ಲೇ ಅತಿ ಎತ್ತರ(ಸಮುದ್ರ ಮಟ್ಟದಿಂದ 1816 ಮೀ) ಬೆಟ್ಟ. ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳು ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ರೂಪುಗೊಳ್ಳುತ್ತದೆ.

ಎಲ್ಲಿದೆ: ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಸೇರಿದೆ. ಸಂರಕ್ಷಿತ ಅರಣ್ಯದಲ್ಲಿರುವುದರಿಂದ ಅನುಮತಿ ಇಲ್ಲದೆ ಪ್ರವೇಶಿಸುವಂತಿಲ್ಲ.

ಹೋಗೋದು ಹೀಗೆ: ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪುಣಜನೂರು ಮಾರ್ಗವಾಗಿ ತೆರಳಬಹುದು.

ಮುದ ಕೊಡುವ ಕಾವೇರಿ ವನ್ಯಧಾಮ

ಪ್ರಕೃತಿ ಪ್ರಿಯರ ಪಾಲಿಗೆ ಕಾವೇರಿ ವನ್ಯಧಾಮ ಸ್ವರ್ಗದಂತೆ. ದೇಶದ ಅತೀ ಅಪರೂಪದ ಪ್ರಾಣಿ ಮತ್ತು  ಪಕ್ಷಿ ಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿನ ಅಪೂರ್ವ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ರಾಜ್ಯ ಸರ್ಕಾರ 1987 ಜನವರಿ 14ರಂದು ಈ ಪ್ರದೇಶವನ್ನು ವನ್ಯಜೀವಿ ಧಾಮವನ್ನಾಗಿ ಘೋಷಣೆ ಮಾಡಿತು.

ಪ್ರಮುಖವಾಗಿ ಕಾವೇರಿ  ವನ್ಯಧಾಮ ಆನೆಗಳ ಸಂಚಾರಕ್ಕೆ ಮುಖ್ಯ ಕೊಂಡಿಯಾಗಿರುವ ಕಣಿಯನಪುರ ಆನೆ ಕಾರಿಡಾರ್ ಇರುವುದು ಕೂಡ ಇದೇ ಅಭಯಾರಣ್ಯದಲ್ಲೇ ಎಂಬುದು ವಿಶೇಷ. ಆನೆಗಳ ಆಹಾರ ವ್ಯವಸ್ಥೆಗೆ ಕಾವೇರಿ ವನ್ಯಧಾಮದಲ್ಲಿ ಸಾಕಷ್ಟು ಪೂರಕ ವಾತಾವರಣವಿದ್ದು, ಇದೇ ಕಾರಣಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ಆನೆಗಳು ಇಲ್ಲಿ ಜೀವಿಸುತ್ತವೆ. ಆಹಾರಗಳನ್ನು ಅರಸುತ್ತಾ ಮತ್ತು ಸಂತಾನೋತ್ಪತ್ತಿಗಾಗಿ ಆನೆಗಳು ಇಲ್ಲಿಂದ ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಸತ್ಯಮಂಗಲ ಅರಣ್ಯ ಪ್ರದೇಶ ಮತ್ತು ಬಿಳಿಗಿರಿರಂಗನ ಬೆಟ್ಟದ  ಅರಣ್ಯ ಪ್ರದೇಶಗಳಿಗೆ ಹೋಗಿಬಂದು  ಮಾಡುತ್ತಿರುತ್ತವೆ.

ಈ ಅರಣ್ಯದ ಮಧ್ಯದಲ್ಲಿಯೇ ಕಾವೇರಿ ನದಿ ಹರಿಯುವುದರಿಂದ ಇಲ್ಲಿನ ವನ್ಯಜೀವಿಗಳಿಗೆ ನೀರಿನ ಕೊರತೆ ಅಷ್ಟಾಗಿ ಕಾಣುವುದಿಲ್ಲ. ಇನ್ನು ಈ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಸಳೆಗಳಿದ್ದು, ನಾನಾ ಜಾತಿಯ ಅಪರೂಪದ ಆಮೆಗಳು, ಮಾರ್ಷಿ ಜಾತಿಗೆ ಸೇರಿದ ಅಪರೂಪದ ಮೀನುಗಳು ಕಂಡುಬರುತ್ತವೆ. ಆನೆಗಳು, ಹುಲಿಗಳು, ಚಿರತೆ, ಜಿಂಕೆ, ಕಡವೆ, ಅಪರೂಪದ ಮಲರ್ಬಾ  ಅಳಿಲು, ಮುಳ್ಳುಹಂದಿ ಸೇರಿದಂತೆ ಹೆಬ್ಬಾವುಗಳ ದೊಡ್ಡ ಸಂತತಿಯೇ ಇಲ್ಲಿದೆ. ಕಾವೇರಿ ವನ್ಯಧಾಮದಲ್ಲಿ ಹಲವು ಪ್ರಕೃತಿ ವಿಶೇಷಗಳಿದ್ದು, ಸಾಕಷ್ಟು ಸಣ್ಣ-ಪುಟ್ಟ ಬೆಟ್ಟಗುಡ್ಡಗಳಿವೆ. ಈ  ಬೆಟ್ಟಗುಡ್ಡಗಳಲ್ಲಿ ನರಿಗಳು ಮತ್ತು ಕರಡಿಗಳು ಹೇರಳವಾಗಿ ವಾಸಿಸುತ್ತಿವೆ.

ಎಲ್ಲಿದೆ: ಕಾವೇರಿ ವನ್ಯಧಾಮ ಕನಕಪುರದಿಂದ ಆರಂಭಗೊಂಡು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನವರೆವಿಗೂ ಹರಡಿಕೊಂಡಿದೆ. ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆ ಗಡಿಯಲ್ಲಿದ್ದು, ವನ್ಯಧಾಮ ಕೇಂದ್ರ ಕಚೇರಿ ಕೊಳ್ಳೇಗಾಲದಲ್ಲಿದೆ. 

ಹೋಗೋದು  ಹೇಗೆ: ಕಾವೇರಿ ವನ್ಯದಾಮ ಬೆಂಗಳೂರು ಮತ್ತು ಮೈಸೂರು ಹೊರವಲಯದಲ್ಲಿ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ಬೆಂಗಳೂರಿನ ಪ್ರವಾಸಿಗರು ಕನಕಪುರ ಮಾರ್ಗವಾಗಿ, ಮೈಸೂರು- ಚಾಮರಾಜನಗರ ಭಾಗದ ಪ್ರವಾಸಿಗರು ಕೊಳ್ಳೇಗಾಲ ಮಾರ್ಗವಾಗಿ ಹೋಗಬಹುದು.

ಭೀಮೇಶ್ವರಿ ಫಿಶಿಂಗ್ ಕ್ಯಾಂಪ್ ಮತ್ತಿತರ ಕತೆಗಳು

ಕಾವೇರಿ ವನ್ಯಧಾಮದ ಕೆಲವೇ ಕಿ.ಮೀಗಳ ಸಮೀಪದಲ್ಲಿಯೇ ಕೆಲ ಪ್ರಮುಖ ಪ್ರವಾಸಿ ತಾಣಗಳಿದ್ದು, ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಐತಿಹಾಸಿಕ ಮುತ್ತತ್ತಿ, ಮೇಕೆದಾಟು, ಭೀಮೇಶ್ವರಿ, ಗಾಳಿಬೋರೆ ಮತ್ತು ಸಂಗಮ ಪ್ರವಾಸಿ ತಾಣಗಳಿವೆ. ಇದರ ಮತ್ತೊಂದು ಭಾಗದಲ್ಲಿ ಹೊಗೇನಕಲ್ ಜಲಪಾತವಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಅಸಂಖ್ಯ ಪ್ರವಾಸಿಗರು ನಿತ್ಯ ಇಲ್ಲಿಗೆ

ಭೇಟಿ ನೀಡುತ್ತಾರೆ. ಕಾವೇರಿ ವನ್ಯಧಾಮದ ಕೆಲ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಫಿಶಿಂಗ್‌ಗೆ ಅನುಮತಿ ಇದ್ದು, ಪ್ರವಾಸಿಗರು ಗೈಡ್‌ಗಳ ಸಹಾಯದ ಮೇರೆಗೆ ಫಿಶಿಂಗ್  ಮಾಡಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button