ಸಣ್ಣ ಸಣ್ಣ ಪ್ರವಾಸದಲ್ಲಿರುವ ಖುಷಿ ; ಮಧುರಾ ಎಲ್ ಭಟ್ ಬರೆದ ಚೆಂದದ ಬರಹ.

ಲಾಕ್ ಡೌನಿನ ಕಾರಣದಿಂದ ಬೇಸತ್ತ ಕುಟುಂಬವೊಂದು, ಲಾಕ್ ಡೌನ್ ತೆರೆದ ನಂತರ ಭೇಟಿ ನೀಡಿದ್ದು ದೇವರಬೋಳೇ ದೇವಸ್ಥಾನಕ್ಕೆ. ಆ ಪುಟ್ಟ ಪ್ರವಾಸದ ಖುಷಿ ಹಂಚಿಕೊಂಡಿದ್ದಾರೆ ಮಧುರಾ.
• ಮಧುರಾ ಎಲ್ ಭಟ್
ನನಗಂತು ಇತ್ತೀಚಿನ ದಿನಗಳಲ್ಲಿ ಪ್ರವಾಸ ಅಥವಾ ಪಿಕ್ನಿಕ್ ಮಾಡೋದರಲ್ಲಿ ತುಂಬಾ ಆಸಕ್ತಿ ಮತ್ತು ಕುತೂಹಲ ಬೆಳೆದು ಬಿಟ್ಟಿದೆ. ಆಸಕ್ತಿ ಏಕೆಂದರೆ ಈ ಲಾಕ್ ಡೌನ್ ಅಲ್ಲಿ ಮನೆಯಲ್ಲೇ ಕುಳಿತು ಕುಳಿತು ಸಾಕಾಗಿ ಬಿಟ್ಟಿದೆ. ಯಾರಾದರೂ ಎಲ್ಲಿಗಾದರೂ ಹೋಗುತ್ತಾರೆ ಎಂದರೇ ನಾನು ಅಲ್ಲಿ ಹಾಜರಿರುತ್ತೇನೆ. ಕುತೂಹಲ ಏಕೆಂದರೆ ಯಾವದೇ ಪ್ರದೇಶ ಅಥವಾ ಪ್ರವಾಸಿ ತಾಣಗಳನ್ನು ನೋಡಿದಾಗ ಅದರ ಹಿನ್ನಲೆಯನ್ನು ತಿಳಿದುಕೊಳ್ಳಬೇಕೆಂದೆನಿಸುತ್ತದೆ.
ಈ ಪ್ರವಾಸಕ್ಕೆ ಹೋಗದೆ ಹಲವಾರು ದಿನಗಳಾದ್ದರಿಂದ ಅದು ಬೆಟ್ಟವಾಗಲಿ, ನದಿಯಾಗಲಿ, ದೇವಸ್ಥಾನವಾಗಲಿ, ಅಥವಾ ದಿಕ್ಕೆ ಇಲ್ಲದ ಪ್ರವಾಸವಾಗಲಿ ನನಗೆ ಹೋಗುವುದು ಎಂದರೇ ಹೋಗುವುದಷ್ಟೇ ಗೊತ್ತು ಎನ್ನುವ ಹಾಗಾಗಿದೆ.
ಈ ಎರಡನೆಯ ಲಾಕ್ ಡೌನ್ ತೆರೆದಾಗ ನಾನು ಹೋದ ಮೊದಲ ಜಾಗ, ನನ್ನ ಮೊದಲ ಯಾನ ಅಂದರೆ ಅದು ದೇವರಬೋಳೇ ದೇವಸ್ಥಾನ.

ಎರಡನೇ ಲಾಕ್ ಡೌನ್ ತೆರವಾದ ಮೇಲೆ ನಮ್ಮ ಮನೆಗೆ ಅಥಿತಿಗಳು ಬಂದಿದ್ದರು. ಅವರಿಗೂ ಎಲ್ಲಿಗೂ ಹೋಗದೆಯೇ ಬೇಸರವಾಗಿದ್ದರಿಂದ ನಾವು ಮನೆಯವರೆಲ್ಲ ಸೇರಿ ಎಲ್ಲಾದರೂ ಹೋಗಬೇಕು ಎಂದೂ ಯೋಚಿಸುತ್ತಿರುವಾಗ ನಾವೇಕೆ ದೇವರಬೋಳೇ ದೇವಸ್ಥಾನಕ್ಕೆ ಹೋಗಬಾರದು ಎನಿಸಿತು. ಹಾಗೆ ಆ ದೇವಸ್ಥಾನಕ್ಕೆ ಹೋಗುವ ನಿರ್ಧಾರಮಾಡಿ ಒಂದು ಪ್ಲಾನ್ ಮಾಡಿದೆವು. ಮಾರನೆ ದಿನ ಬೆಳಗ್ಗೆ ಬೇಗ ಎದ್ದು ಸ್ನಾನವನೆಲ್ಲ ಮಾಡಿ ನಮ್ಮ ಮನೆಯಲ್ಲಿ ಇರುವ ಕಾರು ಮತ್ತು ಸಂಬಂಧಿಕರ ಕಾರನ್ನು ತೆಗೆದುಕೊಂಡು ದೇವಸ್ಥಾನ ನೋಡಲು ಹೊರಟೆವು.

ದೇವರಬೋಳೇ ದೇವಸ್ಥಾನ ನಮ್ಮ ಮನೆಯಿಂದ ಸುಮಾರು 15 ಕಿಲೋಮೀಟರ್ ಇರಬಹುದು ಅಷ್ಟೇ. ನಾವು ಎರಡು ಕಾರಿನಲ್ಲಿ ಒಂದನ್ನು ಇನ್ನೊಂದು ಹಿಂಬಾಲಿಸುತ್ತಾ ದೇವಸ್ಥಾನಕ್ಕೆ ಹೋದೆವು. ಹೋಗುವ ದಾರಿಯ ಅಕ್ಕ ಪಕ್ಕದಲ್ಲಿ ಗದ್ದೆ ನೆಟ್ಟಿ ಮಾಡಿದ್ದರಿಂದ ಅದು ತುಂಬಾ ಸುಂದರವಾಗಿ ಕಾಣುತಿತ್ತು. ಹಾಗೆ ಮುಂದೆ ಸಾಗಿ ಕೊನೆಗೆ ದೇವಸ್ಥಾನಕ್ಕೆ ಬಂದು ತಲುಪಿದೆವು.
ನೀವುಇದನ್ನುಇಷ್ಟಪಡಬಹುದು: ಇನ್‌ಕ್ರಿಡಿಬಲ್ ಯಲ್ಲಾಪುರದಲ್ಲೊಂದು ಇಂಪಾಸಿಬಲ್ ಜರ್ನಿ
ಆದರೆ ಅಲ್ಲಿ ಯಾರು ಇರಲಿಲ್ಲ ಏಕೆಂದರೆ ಯಾರಿಗೂ ದೇವಸ್ಥಾನಕ್ಕೆ ಬರಲು ಅನುಮತಿಗಳಿರಲಿಲ್ಲ. ಹಾಗೆ ದೇವಸ್ಥಾನದ ಹೊರಗೆ ಒಂದು ಪೂಜೆಯನ್ನು ಮಾಡುವಂತೆ ಹೇಳಿ ಅಲ್ಲಿಂದಲೇ ಅಲ್ಲಿರುವ ಶಿವನ ಮೂರ್ತಿಗೆ ನಮಸ್ಕಾರ ಹಾಕಿದೆವು. ನಂತರ ಆ ದೇವಾಲಯದ ಎದುರು ಕಾಣುವ ಸುಂದರವಾದ ದೃಶ್ಯವನ್ನು ಕಣ್ಣಿಗೆ ತುಂಬಿಸಿಕೊಂಡೆವು. ಆ ದೇವಾಲಯದ ಎದುರು ಒಂದಿಷ್ಟು ಕಾಡು, ಹಳ್ಳ, ನದಿ ಬೆಟ್ಟ ಇದೆಲ್ಲವೂ ಕಾಣಿಸುತ್ತಿತ್ತು.

ಅದೊಂದು ಬರಿಯ ದೇವಾಲಯದ ಸ್ಥಳವಾಗಿರದೆ, ನಿಸರ್ಗವನ್ನು ಸವಿಯಲು ಒಂದು ಒಳ್ಳೆಯ ಸ್ಥಳವಾಗಿತ್ತು. ಅಲ್ಲದೆ ಆಗ ತಾನೆ ಮಳೆ ಬಿದಿದ್ದರಿಂದ ಎಲ್ಲವೂ ಹಸಿರು ಹಸಿರಾಗಿ ಕಾಣುತಿತ್ತು. ಅಲ್ಲೆ ಸ್ವಲ್ಪ ಹೊತ್ತಿನ ವರೆಗೆ ಕೂತು ಮನಸ್ಸಿಗೆ ತೃಪ್ತಿಯಾದ ಮೇಲೆ ಮನೆಯ ದಾರಿಯ ಕಡೆಗೆ ಅಲ್ಲಿಂದ ಪ್ರಯಾಣ ಬೆಳೆಸಿದೆವು. ನಮಗೆ ದೊಡ್ಡ ದೊಡ್ಡ ಪ್ರವಾಸ ನೀಡುವಷ್ಟೇ ಖುಷಿ ಸಣ್ಣ ಸಣ್ಣ ಪ್ರವಾಸಗಳು ನೀಡುತ್ತವೆ ಎಂದೂ ಇನ್ನೂ ಖುಷಿಯಾಯಿತು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ