ವಿಂಗಡಿಸದ

300 ರೂನಲ್ಲಿ ಉಡುಪಿಯಿಂದ ಮುರುಡೇಶ್ವರ ಹೋಗಿ ಬಂದ ಕಥನ: ನವ್ಯಶ್ರೀ ಶೆಟ್ಟಿ ಮೊದಲ ರೈಲು ಪಯಣದ ಖುಷಿ

ಬಾಲ್ಯದಲ್ಲಿ ಶಾಲಾ ಪ್ರವಾಸಗಳಿಗೆ ಹೋಗುವುದಾದರೆ ಹಿಂದಿನ ದಿನ ಜಾಗರಣೆ. ಎಷ್ಟೇ ರೆಪ್ಪೆ ಮುಚ್ಚಿದರೂ ಹೋಗುವ ಖುಷಿಗೆ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ. 5 ಗಂಟೆಗೆ ಪ್ರವಾಸಕ್ಕೆ ಹೋಗುವುದಾದರೆ ಅಮ್ಮನ ಹತ್ತಿರ 50 ಸಾರಿ ಗಂಟೆ ಕೇಳಿ ತಲೆ ತಿನ್ನುತ್ತಿದ್ದೆವು. ಮರೆಯಾಗಿದ್ದ ಬಾಲ್ಯದ ಆ ನೆನಪುಗಳನ್ನು ಮತ್ತೆ ನೆನಪಿಸಿದ್ದು ಮುರುಡೇಶ್ವರ ಪ್ರವಾಸ. ಮೊದಲ ರೈಲಿನ ಪಯಣ. 

ಹಳ್ಳಿಯ ಮಕ್ಕಳಿಗೆ ರೈಲು ಒಂದು ರೀತಿಯ ಕೌತುಕ. ರೈಲು ಹೋಗುತ್ತಿದ್ದಾಗ ಆಶ್ಚರ್ಯದಿಂದ ಬೆರಗಾಗಿ ನೋಡುತ್ತಾರೆ. ರೈಲಿನ ಬಾಗಿಲ ಬಳಿ ಕುಳಿತು ಹೋಗುವವರನ್ನು ನೋಡುವುದು ಇದೆಲ್ಲ ಹಳ್ಳಿಯ ಮಕ್ಕಳಿಗೆ ಒಂದು ರೀತಿಯ ಕುತೂಹಲ.  ಅವರಲ್ಲಿ ರೈಲಿನ ಪಯಣ ಮಾಡಿದವರು ಬಹುತೇಕ ಕಡಿಮೆ. ಬಾಲ್ಯದ ಅಂತಹ ಕೌತಕಗಳ ಮಧ್ಯ ಬೆಳೆದ ನಾನು ರೈಲು ಪಯಣ ಮಾಡಿದ್ದು ನನ್ನ ಹಳ್ಳಿ ಪೇಟೆಯಾದ ನಂತರ. 

ಕಳೆದ ವರ್ಷ  ಫ್ರೆಂಡ್ಸ್ ಹಾಗೂ ಸೀನಿಯರ್ಸ್ ಮುರುಡೇಶ್ವರ(murudeshwar) ಹೋಗಬೇಕು ಎನ್ನುವ ಯೋಜನೆಯಲ್ಲಿ ಇದ್ದಾಗಲೇ ವೈರಸ್ ಒಕ್ಕರಿಸಿತ್ತು. ವರ್ಷಗಳ ಕಳೆದ ನಂತರ ನಮ್ಮ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು . ರೈಲಿನಲ್ಲಿ ಮುರುಡೇಶ್ವರ ಹೋಗಲು ಸಿದ್ದವಾಗಿದ್ದು. 

ಮುರುಡೇಶ್ವರ 100 ಕಿಮೀ ದೂರ

ನಮ್ಮೂರಿನಿಂದ ಮುರುಡೇಶ್ವರ ಕೇವಲ 100 ಕಿಮೀ.  ಬಾಲ್ಯದಲ್ಲಿ ಶಾಲಾ ಪ್ರವಾಸದಲ್ಲಿ ಒಮ್ಮೆ ಮುರುಡೇಶ್ವರ ಹೋಗಿದ್ದು ನೆನಪು. ಹೋಗಿದ್ದ ನೆನಪು ಹೊರತು ಪಡಿಸಿ ಅಲ್ಲಿ ಕಳೆದ ಯಾವ ನೆನಪುಗಳು ಕೂಡ ಇರಲಿಲ್ಲ. 6 ಜನ ಸ್ನೇಹಿತರ ತಂಡ ಮುರುಡೇಶ್ವರ ಹೋಗುವುದೆಂದು ನಿರ್ಧರಿಸಿ ಉಡುಪಿಯ ಇಂದ್ರಾಳಿ ಸ್ಟೇಷನ್ ನಲ್ಲಿ 4. 30ಗೆ ರೈಲಿನ ಟಿಕೆಟ್ ಕಾದಿರಿಸಿದ್ದೆವು

murudeshwar

ನನ್ನೂರಿನ ರೈಲ್ವೆ ನಿಲ್ದಾಣ ದೂರವಿರುವ ಕಾರಣ ಹಿಂದಿನ ದಿನವೇ ಉಡುಪಿಯ(udupi) ಸ್ನೇಹಿತೆ ಮನೆಗೆ ಹೋಗಿ ಉಳಿದಿದ್ದೆ. ಒಂದು ದಿನ ಪ್ರವಾಸ ನನಗೆ ಎರಡು ದಿನದ ಹಾಗೆ. ಹೋಗುವ ಖುಷಿ ಇಬ್ಬರ ನಿದ್ದೆಗಳನ್ನು ಕಸಿದಿತ್ತು. ನಿಮಿಷ ನಿಮಿಷಕ್ಕೆ ಗಂಟೆ ನೋಡುತ್ತಿದ್ದೆವು. ರಾತ್ರಿಯೆಲ್ಲಾ ನಿರೀಕ್ಷೆಯ ಕಾರಣಕ್ಕೆ ಜಾಗರಣೆ. ಬೆಳಿಗ್ಗೆ 4 ಗಂಟೆಗೆ ಉಡುಪಿಯ ಇಂದ್ರಾಳಿ ರೈಲ್ವೆ ಸ್ಟೇಷನ್ ಗೆ ಪಯಣ

ನನ್ನನು ಸೇರಿಸಿ ನಮ್ಮೊಡನೆ ಇದ್ದ ಮೂವರಿಗೆ ಮೊದಲ ರೈಲು ಪಯಣ. ಮೊದಲು ರೈಲು ನಿಲ್ದಾಣವನ್ನು ಹತ್ತಿರದಿಂದ ನೋಡಿದ್ದು. ರೈಲಿನ ಬೋಗಿ, ಫ್ಲಾಟ್ ಫಾರ್ಮ್ ತಲೆ ಬುಡ ಗೊತ್ತಿರಲಿಲ್ಲ. ರೈಲು ನಿಲ್ದಾಣದಲ್ಲಿ ನಿದ್ದೆ ಕೊಂಚ ಅವರಿಸ ತೊಡಗಿತ್ತು. ರೈಲಿನ ಸದ್ದು ನಿದ್ದೆಗಳನ್ನೂ ಮರೆಸಿತ್ತು. ಸಮಯಕ್ಕೆ ಸರಿಯಾಗಿ ರೈಲು ಬಂತು.  ಮೊದಲ ಬಾರಿಯ ಪಯಣ ಶುರುವಾಯಿತು. 

murudeshwar

ಸಿನಿಮಾಗಳಲ್ಲಿ ಬರುವ ಹಾಗೆ ರೈಲು ನಾನಾ ಕಥೆಗಳಿಗೆ ನಾಂದಿಯಾಗಬಹುದು ಎನ್ನುವ ಕುತೂಹಲದಿಂದ ಇದ್ದ ನಮಗೆ ಸ್ವಲ್ಪ ದೂರಗಳ ಕಾಲ ರೈಲಿನ ಪಯಣ ಯಾವ ಬದಲಾವಣೆ ತರಲಿಲ್ಲ. ಆಗಷ್ಟೇ ಸೂರ್ಯ ಉದಯಿಸುತ್ತಿದ್ದ ಕಾರಣ ಸುತ್ತಲೂ ಕತ್ತಲು. ಹಿಂದಿನ ರೈಲಿನಲ್ಲಿ ಓದಲು ಪುಸ್ತಕ  ತೆಗೆದು ಇಟ್ಟಿದ್ದ ನಾವೆಲ್ಲ ಪುಸ್ತಕ ಓದಲು ಶುರು. ನೆಚ್ಚಿನ ಲೇಖಕ ಜೋಗಿ ಸರ್ ಅವರ ಪುಸ್ತಕ ಪಯಣದ ಹಾದಿಗೆ ಜೊತೆ ಆಯಿತು. ಮೊದಲು ರೈಲು ಪಯಣ ಜೋಗಿ ಸರ್ ಅವರ ಸಹಜ ಖುಷಿ ಜೊತೆಯಲ್ಲಿ. 

ಸೂರ್ಯೋದಯ ಕಂಡ ಖುಷಿ

ಸೂರ್ಯ ಮೆಲ್ಲಗೆ ಉದಯಿಸುತ್ತಿದ್ದ ಕಾರಣ ಕತ್ತಲು ಸರಿಯ ತೊಡಗಿತು. ರೈಲು ಪಯಣ ಹಿತಕರ  ವಾತಾವರಣ ಮುದ ನೀಡಲು ಪ್ರಾರಂಭ. ಬಾಗಿಲ ಬಳಿ ನಿಂತು ಸೂರ್ಯೋದಯ ನೋಡುವ ಖುಷಿಯೇ ಬೇರೆ. ಸ್ನೇಹಿತರು ರೈಲಿನಲ್ಲಿ ಕಾಫಿ ಚೆನ್ನಾಗಿರುತ್ತೆ ಎಂದು ಹೇಳಿದ ಕಾರಣಕ್ಕೆ ಕಾಫಿ ಕೊಂಡಿದ್ದು. ಬೆಳಗಿನ ಜಾವದ ಕಾಫಿ ಸ್ವಾದ ಇಂದಿಗೂ ನಾಲಿಗೆಯ ಮೇಲೆ ಇದೆ ಎನ್ನುವಂತೆ ಭಾಸವಾಗುತ್ತಿದೆ. 

Murudeshwar

4. 30ಗೆ ಹೊರಟ ನಮ್ಮ ಪಯಣ ಮುರುಡೇಶ್ವರ  ತಲುಪುವಾಗ ಸುಮಾರು 6. 45 . ರೈಲು ನಿಲ್ದಾಣದಿಂದ ಪ್ರಸಿದ್ಧ ಶಿವನ ದೇವಸ್ಥಾನಕ್ಕೆ ಸುಮಾರು 2 ಕಿಮೀ ಅಂತರ. ಬೆಳಗಿನ ಮುಂಜಾವಿನಲ್ಲಿ ನಮಗೆಲ್ಲ ಒಂದು ರೀತಿಯ ವಾಕಿಂಗ್. ನಡೆದುಕೊಂಡೇ ಸಾಗಿದೆವು. ಅಲ್ಲಿ ಹೆಜ್ಜೆ ಹೆಜ್ಜೆಗೂ ಒಬ್ಬರಂತೆ ಪ್ರವಾಸಿಗರಿಗೆ ವಿಶ್ರಾಂತಿಗೆ ರೂಮ್ ಬಗ್ಗೆ ವಿಚಾರಿಸುವ ಅನೇಕರಿದ್ದರು. ಅವರ ಬಳಿ ಚೌಕಾಸಿ ಮಾಡಿ 500 ರೂ ಗೆ ಒಂದು ರೂಂ ಬುಕ್ ಮಾಡಿದೆವು. ಮೊದಲು ಮುರುಡೇಶ್ವರ ಕಡಲ ತೀರ ನಂತರ ದೇವಸ್ಥಾನದ ದರ್ಶನ ಬಳಿಕ ಮಿರ್ಜಾನ್ ಕೋಟೆ,(mirjan fort) ಗೋಕರ್ಣ ದತ್ತ ಪಯಣ ಎಂದು ನಿರ್ಧರಿಸಿದೆವು. ಬಟ್ಟೆ ಬದಲಾಯಿಸಿ. ಬೀಚ್(beach) ಸಮೀಪದ ಹೋಟೆಲ್ ಒಂದರಲ್ಲಿ ತಿಂಡಿ ತಿಂದು ಕಡಲಿಗೆ ಇಳಿದೆವು. ಬೆಳಿಗ್ಗೆ 8ಗಂಟೆಯ ಹೊತ್ತಿಗೆ ಕಡಲಿನಲ್ಲಿ ಅನೇಕ ಪ್ರವಾಸಿಗರು ನೆರೆದಿದ್ದರು. 

Murudeshwar Beach

ನೀವು ಇದನ್ನು ಇಷ್ಟಪಡಬಹುದು: ಬೆಳ್ಳಂಬೆಳಗ್ಗೆ ಮಟ್ಟು ಬೀಚ್, ಮಧ್ಯಾಹ್ನ ಹೊತ್ತು ಧನುಷ್ ತೀರ್ಥ: ಉಡುಪಿ ಆಸುಪಾಸಲ್ಲಿ ನೀವು ನೋಡಬಹುದಾದ 2 ಸುಂದರ ಜಾಗಗಳು

ಕಡಲೂರಿನವಳು ಆದರೂ ಕಡಲೆಂದರೆ ಭಯ ಪಡುತ್ತಿದ್ದ ನನಗೆ ಮುರುಡೇಶ್ವರ ಕಡಲು ಹೊಸ ಅನುಭವ ನೀಡಿತ್ತು. ಬಿಸಿಲು ನೆತ್ತಿ ಮೇಲೆ ಬರುತ್ತಿದ್ದಂತೆ ಜೋರಾಗಿ ಬೀಸುತ್ತಿದ್ದ ಅಲೆಗಳು ವಿಹಂಗ ನೋಟವನ್ನು ನೆಟ್ಟಿತ್ತು. ಕಡಲಿನಲ್ಲಿ ಇನ್ನೊಂದು ಅನುಭವ ನೀಡಿದ್ದು ಹೊಸಪೇಟೆಯಿಂದ ಬಂದಿದ್ದ ಪ್ರವಾಸಿಗರ ಕುಟುಂಬ.  ಆ ತಂಡ ಸುಮಾರು 5-6ತಿಂಗಳ ಪುಟ್ಟ ಕಂದಮ್ಮಗಳನ್ನು ನೀರಿನಲ್ಲಿ  ಆಡಿಸುತ್ತಿದ್ದ ರೀತಿ. ನೀರಿನ ಹಿತಕ್ಕೆ ಅಳುತ್ತಿದ್ದ ಕಂದಮ್ಮಗಳನ್ನು ಎತ್ತಿ ಆಟ ಅಡಿಸ್ಸಿದ್ದು ಖುಷಿ ನೀಡಿತ್ತು. 

ಆಟದ ನಂತರ ಬಟ್ಟೆ ಬದಲಾಯಿಸಿ ಬ್ಯಾಗ್ ತೆಗೆದುಕೊಂಡು ದೇವರ ದರ್ಶನದ ಮಾಡಿ ದೇವಸ್ಥಾನದಲ್ಲಿ ಊಟ ಮಾಡಿದೆವು.  ನಂತರ ಪಯಣ  ಹೊರಟಿದ್ದು ಮಿರ್ಜಾನ್ ಕೋಟೆಗೆ. ಮುರುಡೇಶ್ವರ ದಿಂದ ಕುಮಟಾ ಹೋದರೆ ಮಿರ್ಜಾನ್ ಕೋಟೆ ತಲುಪಹುದು. ಬಸ್ಸಿನಲ್ಲಿ ಕುಮಟಾಕ್ಕೇ(Kumata) 1.15 ನಿಮಿಷ ಕಾಲ ಪಯಣ. 67 ರೂ ಬಸ್ಸಿನ ದರ. ಕುಮಟಾ ಬಸ್ಸು ನಿಲ್ದಾಣದಲ್ಲಿ ಇಳಿದು ಬೇರೆ ಬಸ್ಸಿನಲ್ಲಿ ಮಿರ್ಜಾನ್ ಕೋಟೆಗೆ ಪಯಣ ಬೆಳೆಸಿದೆವು. ಕುಮಟಾದಿಂದ ಮಿರ್ಜಾನ್ ಗೆ 11 ಕಿಮೀ ದೂರ. 15 ರೂ ಬಸ್ಸಿನ ದರ. ಮಿರ್ಜಾನ್ ಹತ್ತಿರ ಇಳಿದು ಕೋಟೆ ತಲುಪಬೇಕಾದರೆ 1 ಕಿಮೀ ನಡೆಯಬೇಕು. ಆಟೋದಲ್ಲಿ ಹೋದರೆ 50 ರೂ ತೆಗೆದು ಕೊಳ್ಳುತ್ತಾರೆ. ಅದರ ಬದಲು ಕಾಲ್ನಡಿಗೆ ಉತ್ತಮ. 

ಸುಂದರ ಮಿರ್ಜಾನ್

ಮಿರ್ಜಾನ್ ಕೋಟೆ ಯಲ್ಲಿ ಅನೇಕ ಹಾಡುಗಳ ಚಿತ್ರೀಕರಣವಾಗಿದೆ. ಅದು ಒಂದು ರೀತಿಯ ಭವ್ಯ ಬಂಗಲೆ.  ಆ ಕಾಲದ ಕಲಾತ್ಮಕತೆಗೆ ಹಿಡಿದ ಕನ್ನಡಿ.  ಕೋಟೆಯೊಳಗೆ ಸುರಂಗ ಮಾರ್ಗಗಳು,ಬಾವಿಗಳು ದರ್ಬಾರ್ ಹಾಲ್ ಗಳು,ಅಳಿದುಳಿದ ಕೆಲ ಗೋಡೆಗಳು ಮಿರ್ಜಾನ್ ಸೌಂದರ್ಯ ಹೆಚ್ಚಿತ್ತಿತ್ತು. ಸುಮಾರು 11. 8ಎಕರೆ ವಿಸ್ತಾರದ ಹೊಂದಿರುವ ಈ ಕೋಟೆ ಕ್ರಿಶ 1608 ರಿಂದ 1640 ರ ಕಾಲದಲ್ಲಿ ಆದಿಲ್ ಶಾ ಸಾಮಂತ ಶರೀಫ್ ಉಲ್ ಮುಲ್ಕ್ ನಿರ್ಮಿಸಿದ್ದ.  ಈ ದೊಡ್ಡ ಕೋಟೆ ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಾಣವಾಗಿದ್ದು. ಉತ್ತರ ಕನ್ನಡದ ಚಿಕ್ಕ ಅರಸು ಮನೆತನಗಳು,ಹೈದರಾಲಿ,ಟಿಪ್ಪುವಿನ  ವಶದಲ್ಲಿದ್ದ ಈ ಕೋಟೆ ಟಿಪ್ಪುವಿನ ಮರಣ ನಂತರ ಬ್ರಿಟಿಷ್ ವಶಕ್ಕೆ  ಒಳಪಟ್ಟಿತ್ತು. 

Mirjan fort

ಮಿರ್ಜಾನ್ ಕೋಟೆಯಲ್ಲಿ ಒಂದಷ್ಟು ಕಾಲ ಕಳೆದು , ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಮತ್ತೆ ಮರಳಿ ಪಯಣ. ಗೋಕರ್ಣ ಕಡಲ ತೀರ, ದೇವಸ್ಥಾನಕ್ಕೆ ಹೋಗಬೇಕು ಅನ್ನುವ ಯೋಚನೆಯಿತ್ತು. ಆದರೆ ಸಮಯದ ಕಾರಣ ಹೋಗದೆ ಮರಳಿ ಕುಮಟಾದತ್ತ ಪಯಣ. ಕುಮಟಾ ಬಸ್ಸು ನಿಲ್ದಾಣದ ಹತ್ತಿರ ಅರ್ಧ ಕಿಮೀ ಹಾದಿಯಲ್ಲಿ ಸಾಗಿದರೆ ರೈಲು ನಿಲ್ದಾಣ . 6. 56 ಗೆ ಉಡುಪಿಗೆ ಮರಳಿ ಹೋಗಲು ರೈಲು ಟಿಕೆಟ್ ನಿಗದಿ ಆಗಿತ್ತು.  ಆದರೆ ರೈಲು ಬಂದದ್ದು ಅರ್ಧ ಗಂಟೆ ತಡವಾಗಿ .  ಕಾದು ಕಾದು ಕೊನೆಗೂ ರೈಲು ಬಂತು. ರೈಲಿನಲ್ಲಿ ಕೂತು ಪೂರ್ತಿ ದಿನದ ಪಯಣ ಮೆಲುಕು ಹಾಕುತ್ತಾ,ಸಮಯ ಕಳೆದದ್ದೇ ಗೊತ್ತಾಗಿಲ್ಲ. ಉಡುಪಿಯಿಂದ ಮನೆಗೆ ಮರಳಿ ಬಸ್ ಇರದ ಕಾರಣ ಬಾರ್ಕುರಿನಲ್ಲಿ ರೈಲು ಇಳಿದು ಮನೆಯತ್ತ ಪಯಣ.  ಮನೆಗೇ ಬರುವಾಗ ಸಮಯ ರಾತ್ರಿ 9.30. 

ಮನೆಯಲ್ಲಿ ಮೊದಲು ರೈಲು ಪಯಣ ಮಾಡಿದ್ದು ನಾನೇ ಅನ್ನುವ ಖುಷಿ. ಮೊದಲ ರೈಲು ಪಯಣದ ಹಿತಕರ ಅನುಭವ .  ಉತ್ತರ ಕನ್ನಡ ಜಿಲ್ಲೆಯ ಹಚ್ಚ ಹಸಿರು ,ಕಡಲುಗಳು ಮನಸಿಗೆ ಬಹಳ ಹತ್ತಿರವಾಗಿತ್ತು. ಪಯಣ ಕಳೆದು ಅದಾಗಲೇ ದಿನಗಳು ಉರುಳಿದರೂ ಅದರ ಗುಂಗಲ್ಲೇ ನಾವಿದ್ದೇವೆ. 

Mirjan fort

ಉಡುಪಿಯಿಂದ ಮುರುಡೇಶ್ವರ ಹೋಗಿ ಬರಲು 300 ರೂಪಾಯಿ ಸಾಕು

ಉಡುಪಿಯಿಂದ ಮುರುಡೇಶ್ವರ, ಮಿರ್ಜಾನ್ ಕೋಟೆಗೆ ಹೋಗಲು ಬಯಸುವವರು 300 ರೂ ನಲ್ಲಿ ಹೋಗಿ ಬರಬಹುದು. ರೂಂ ಆಯ್ಕೆ ನಿಮಗೆ ಬಿಟ್ಟಿದ್ದು. 

ಉತ್ತರ ಕನ್ನಡ ಊರು,ಮೊದಲ ರೈಲಿನ ಪಯಣ,ಬೆಳಗಿನ ಜಾವದ ಸೂರ್ಯೋದಯ ,ಕಡಲ ತೀರ ,ಮುರುಡೇಶ್ವರ ದ ಶಿವ, ಆಕಸ್ಮಿಕವಾಗಿ ಸಿಕ್ಕ ಮುದ್ದು ಪುಟಾಣಿಗಳು, ಮಿರ್ಜಾನ್ ಭವ್ಯ ಕೋಟೆ, ರೈಲಿನಲ್ಲಿ ಸಿಕ್ಕ ಸ್ವಾಧ ಭರಿತ ಕಾಫಿ, ಬಿರಿಯಾನಿ, ಪಯಣದ ಜೊತೆಯಾದ ಸಹಜ ಖುಷಿ ಪುಸ್ತಕ ಇವೆಲ್ಲವೂ ಒಂದು ದಿನದ ಪಯಣವನ್ನು ಅಚ್ಚು ಕಟ್ಟಾಗಿ ಮುಗಿಸಲು ಸಹಕಾರಿ ಆಗಿತ್ತು. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button