ಮ್ಯಾಜಿಕ್ ತಾಣಗಳುವಿಂಗಡಿಸದ

ಕೊರ್ಗಿ, ಹೆಸ್ಕುತ್ತೂರಿನ ಮನೆ ಮಕ್ಕಳೆಲ್ಲಾ ಮರಳಿದ್ದಾರೆ, ಕುಂದಾಪುರ ಸಮೀಪದ ನಮ್ಮೂರು ಶಾಂತವಾಗಿದೆ.

ಹಸಿರುಟ್ಟ ಊರು, ಸೈಕಲ್ ಗಳೇ ಕಾರುಬಾರು ನಡೆಸುತ್ತಿರುವ ಊರು, ಮೂರು ನಾಲ್ಕು ಬಸ್ಸುಗಳಷ್ಟೇ ಬರುವ ಊರು, ನನ್ನೂರು ಕುಂದಾಪುರ ಸಮೀಪದ ಕೊರ್ಗಿ, ಹೆಸ್ಕುತ್ತೂರು. ಕೊರೋನಾದಿಂದಾಗಿ ಮಹಾನಗರ ಸೇರಿದ್ದ ಮನೆ ಮಕ್ಕಳು ಮರಳಿ ಬಂದಿದ್ದಾರೆ. ಬಸ್ಸುಗಳು ಓಡಾಟ ನಿಲ್ಲಿಸಿವೆ. ಊರು ಶಾಂತವಾಗಿದೆ. ಇದು ನನಗಿಷ್ಟದ ನಮ್ಮೂರಿನ ಚಿತ್ರ-ಕತೆ.

  • ನವ್ಯಶ್ರೀ ಶೆಟ್ಟಿ   

ಪ್ರತಿಯೊಂದು ಊರಿಗೂ ಒಂದೊಂದು ಕಥೆ ಇರುತ್ತದೆ. ಅದೆಷ್ಟೋ ಜನರಿಗೆ ತಮ್ಮ ಊರು ಬದುಕಿನ ಭಾಗ. ಗ್ರಾಮೀಣ ಭಾಗದ ಜನರಿಗಂತೂ ಹೇಳಲಾಗದ ಅವ್ಯಕ್ತ ಭಾವನೆಗಳನ್ನು ಕಟ್ಟಿಕೊಡುವುದು ತಮ್ಮೂರು. ಎಲ್ಲರಿಗೂ ಹುಟ್ಟಿ ಬೆಳೆದ ಜಾಗ ಅದ್ಭುತ.  ಅವಿಸ್ಮರಣೀಯ ನೆನಪು ಕಟ್ಟಿಕೊಡುವ ತಾಣ. ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನೂರು ತನಗೆ ಹಿತ ಎನ್ನುವುದನ್ನು ಕೊರೊನಾ ನಮಗೆಲ್ಲ ಕಲಿಸಿದೆ. ಹುಟ್ಟಿ ಬೆಳೆದ ಊರು ಎಂದಿಗೂ ನಮಗೆ ಸ್ಪೆಷಲ್. ನನಗೂ ನಾನು ಹುಟ್ಟಿ ಇಂದಿಗೂ ಜೀವಿಸುತ್ತಿರುವ ನನ್ನೂರು ಎಂದಿಗೂ ಸ್ಪೆಷಲ್.

ಕೊರ್ಗಿ, ಹೆಸ್ಕುತ್ತೂರು ಅಂದ್ರೆ ನಂಗಿಷ್ಟ

ಅಪ್ಪಟ ಕುಂದ ಕನ್ನಡವನ್ನು(Kundagannada) ಮಾತನಾಡುವ ಕುಂದಾಪುರದ(Kundapur) ಪುಟ್ಟ ಊರು ನನ್ನೂರು. ಹೊಯ್ಕ್ ಬರ್ಕ್ ಎಂದು ಮಾತನಾಡುತ್ತಾ ತಮ್ಮೂರಿಗೆ ಬರುವ ಜನರಿಗೆ ರಾಶಿ ರಾಶಿ ಪ್ರೀತಿ ಕೊಡುವ ಸೊಗಸಾದ ಊರು. ಕೊರ್ಗಿ, ಹೆಸ್ಕುತ್ತೂರು ಕುಂದಾಪುರದ ಅಕ್ಕ ಪಕ್ಕದ ಊರು.

ಕೊರ್ಗಿ ಹುಟ್ಟೂರು, ಹೆಸ್ಕುತ್ತೂರು ಹೈಸ್ಕೂಲ್ ಹಾಗೂ ಜೀವನದ ಪಾಠ ಕಲಿಸಿದ ಊರು. ಎರಡೂ ಊರು ನಂಗಿಷ್ಟ. ನನ್ನೂರು ದೊಡ್ಡ ಸಿಟಿಯಲ್ಲ. ಆದರೆ, ಇರುವುದರಲ್ಲಿ ಖುಷಿ ಪಟ್ಟು ಬದುಕುವ ಜೀವಗಳಿಲ್ಲಿವೆ.

Heskuttu Highschool
Praveen heskutturu

ಹಳ್ಳಿಗಳು ಒಂದಷ್ಟು ಕಥೆ ಕಟ್ಟಿ ಕೊಡುತ್ತದೆ. ಆ ಕಥೆ ನಮ್ಮ ಬದುಕಿನ ಪಯಣಕ್ಕೆ ಮುನ್ನುಡಿಯಾಗಿರುತ್ತದೆ. ಕೊರ್ಗಿ ಹೆಸ್ಕುತ್ತೂರು ಅಂತಹ ಹತ್ತಾರು ಕಥೆಗಳನ್ನು ಕಟ್ಟಿಕೊಂಡು ನೂರಾರು ಜನರ ಬದುಕಿನ ಪಯಣಕ್ಕೆ ಮುನ್ನುಡಿಯಾಗಿದ್ದ ಊರು. ಎರಡು ಅಕ್ಕ ಪಕ್ಕದ ಊರಾದರೂ ಒಂದೇ ಊರು ಅನ್ನುವ ಭಾವನೆ. ಓದು ಮುಗಿಸಿ, ಉದ್ಯೋಗಕ್ಕಾಗಿ ನಗರಕ್ಕೆ ತೆರಳಿದ್ದರು ನನ್ನೂರಿನ ಯುವ ಸಮುದಾಯ. ಬಹುತೇಕ ಮಧ್ಯ ವಯಸ್ಕರು ವಾಸಿಸುವ ತಾಣವಾಗಿದ್ದ ನನ್ನೂರು, ಮರಳಿ ಯುವ ಸಮುದಾಯ ವಾಸಿಸುವ ತಾಣವಾಗುತ್ತಿದೆ. ಹುಟ್ಟೂರು ಲೇಸು ಅಂತಾನೇ ಕೊರೊನಾ ಕಾಲದಲ್ಲಿ ನನ್ನೂರಿನ ಬಹುತೇಕ ಯುವಕರು ಊರಿಗೆ ಮರಳುತ್ತಿದ್ದಾರೆ. ಊರು ಲೇಸು ಎನ್ನುತ್ತಿದ್ದಾರೆ. ಲಾಕೌಡೌನ್ ನಿಶಬ್ದತೆ ನಡುವೆ ನನ್ನೂರಿನ ಒಂದು ಆಶಾ ಭಾವನೆ.

Korgi

ಟಿವಿಎಸ್, ಸ್ಕೂಟಿಗಳದೇ ಕಾರುಬಾರು

ಕೊರ್ಗಿ,(Korgi) ಹೆಸ್ಕುತ್ತೂರು ನಗರವಲ್ಲ, ಪಟ್ಟಣವೂ ಅಲ್ಲ. ಸಹಜತೆಯನ್ನು ಊಳಿಸಿಕೊಂಡಿರುವ ಪುಟ್ಟ ಹಳ್ಳಿ. ಕುಂದಾಪುರದಿಂದ 20-25 ಕಿಮೀ ದೂರ. ಇಲ್ಲಿ ಐಷಾರಾಮಿ ಕಾರುಗಳು ಓಡಾಡುವುದು ಬೆರಣಿಕೆಯಷ್ಟು. ಬುಲೆಟ್ ಇಲ್ಲಿನ ಜನರಿಗೆ ಅಪರೂಪಕ್ಕೆ ಕಾಣ ಸಿಗುವ ವಸ್ತು ಇದ್ದಂತೆ.

ಟಿವಿಎಸ್,(TVS) ಸ್ಕೂಟಿಯದ್ದೇ ಜಮಾನ. ಇಲ್ಲಿಯೇ ಬದುಕಿ, ಇಲ್ಲಿಯೇ ಜೀವನ ಕಟ್ಟಿಕೊಂಡಿರುವ ವಯಸ್ಕರು ಹಳೆ ಮಾಡೆಲ್ ಸೈಕಲ್ ನೆಚ್ಚಿಕೊಂಡಿದ್ದಾರೆ. ಇವರಿಗೆ ಸೈಕಲ್ ಯಾವ ಐಷಾರಾಮಿ ಕಾರುಗಳಿಗೆ ಕಮ್ಮಿಯಿಲ್ಲದ ಅನುಭವ. ಕಿ.ಮೀಗಟ್ಟಲೇ ಸೈಕಲ್‍ನಲ್ಲೇ ಪಯಣಿಸುತ್ತಾ ಖುಷಿ ಪಡುತ್ತಾರೆ ಹಿರಿ ಜೀವಗಳು. ಮುಂಜಾನೆ ಇರಲಿ, ಕಗ್ಗತ್ತಿರಲಿ ನನ್ನೂರಿನ ಅಜ್ಜಂದಿರಿಗೆ ಸೈಕಲ್ ಪ್ರಯಾಣವೇ ಸುಖಕರ.

Korgi primary

ವಿದ್ಯಾರ್ಥಿಗಳಿಗಂತೂ ಅಕ್ಕ ಪಕ್ಕದ ಊರೂ ಸಾಲು ಸಾಲು ಅನುಭವಗಳನ್ನು ಕಟ್ಟಿಕೊಡುವ ಊರು. ಇಲ್ಲಿ ಯಾವುದೇ ಆಂಗ್ಲ ಮಾಧ್ಯಮ ಶಾಲೆಯಿಲ್ಲ. ಆದರೆ ಯಾವ ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದ ಹಾಗೆ ಕನ್ನಡ ಶಾಲೆಯಿದೆ. ಇಲ್ಲಿ ಶತಮಾನದ ಅಂಚಿನಲ್ಲಿರುವ ಒಂದು ಪ್ರಾಥಮಿಕ ಶಾಲೆ, ವಜ್ರ ಮಹೋತ್ಸವ ಸಂಭ್ರಮಿಸಿದ ಪ್ರಾಥಮಿಕ ಶಾಲೆ, ದಶಕ ಸಂಭ್ರಮಿಸಿದ ಪ್ರೌಢ ಶಾಲೆಯಿದೆ. ಇಲ್ಲಿ ಕಲಿತು ಹೋದ ಪ್ರತಿಭೆಗಳು ಹಲವರು.

Heskutturu primary

ನಮ್ಮೂರಿಗೆ ಬರುವುದು ಕೆಲವೇ ಬಸ್ಸುಗಳು

ನನ್ನೂರಿಗೆ ಬರುವುದು 3-4 ಬಸ್.  ಅದು ಕೂಡ ಖಾಸಗಿ ಬಸ್. ನನ್ನ ಚಿಕ್ಕ ವಯಸ್ಸಿನಿಂದ ಮಿತ್ರಾ, ದಿಯಾ ನಾನು ನೋಡಿದ ಬಸ್. ಇಂದಿಗೂ ಈ ಬಸ್ ಗಳು ಕೊರ್ಗಿ ಜನರಿಗೆ ಆಪತ್ಬಾಂಧವರು. ಹೆಸ್ಕುತ್ತೂರಿಗೆ ಕುಲದೀಪ ಪಯಣಕ್ಕೆ ಸಾರಥಿ. ಜೊತೆಗೆ ಎರಡೂ ಊರಿಗೂ ಅಂಬಾಜಿ ಅಚ್ಚುಮೆಚ್ಚು.

ಕಾಲೇಜು ಮುಗಿದು ಬಳಿಕ ಗಂಟೆಗಟ್ಟಲೇ ವಿದ್ಯಾರ್ಥಿಗಳು ನಗರಗಳಲ್ಲಿ ಬಸ್ ಕಾಯಬೇಕು. ನನ್ನೂರಿನ ಜನರಿಗೆ ಕಾಯುವಿಕೆ ಖುಷಿ. ಕೊರೊನಾ ಆ ಅಪತ್ಭಾಂಧವರ ಮೇಲೂ ಕರಿಛಾಯೆ ಆವರಿಸಿ ಬಿಟ್ಟಿದೆ. ಆನ್ ಲೈನ್ ತರಗತಿಗಳ ಭರಾಟೆ ನಡುವೆ ನೆಟ್ವರ್ಕ್‍ಗಾಗಿ ಕಾಡು ಮೇಡು ಅಲೆಯುವ ನಮಗೆ ಆದೊಂದು ಹೊಸ ಖುಷಿ.

Bus stand

ನೀವು ಬೆಳ್ಳಂಬೆಳಿಗ್ಗೆ ನನ್ನೂರಿನ ಸುತ್ತಾ ಒಮ್ಮೆ ಪಯಣಿಸಿದರೆ, ತಲೆಗೊಂದು ಮುಂಡಾಳೆ ಹಾಕಿಕೊಂಡು ತಮ್ಮ ಗುಂಪಿನೊಂದಿಗೆ ದನಗಳಿಗೆ ಸೊಪ್ಪು ತರುವ ಹೆಂಗಸರ ಗುಂಪು, ಮುಂಡಾಳೆ ತೊಟ್ಟು ಗದ್ದೆಗೆ ಹೋಗುವ, ಫ್ಯಾಕ್ಟರಿ ಕೆಲಸಕ್ಕೆ ಹೋಗುವವರು ಅನೇಕರು ನಿಮ್ಮ ಕಣ್ಮುಂದೆ ಸಾಗುತ್ತಾರೆ.

ಹಸಿರುಟ್ಟು ನಿಂತ ನಮ್ಮೂರು

ಹೊರಗಡೆಯಿಂದ ಮೊದಲ ಬಾರಿ ಬರುವವರಿಗೆ ನನ್ನೂರು ಕಾಡು ಎನ್ನುವ ಭಾವನೆ. ದಿನ ಕಳೆದಂತೆ ಈ ಊರು ಖುಷಿ ಕೊಡುತ್ತದೆ. ಇಲ್ಲಿನ ಪ್ರತಿಯೊಬ್ಬರ ಮನೆಯಂಗಳ ಹಸಿರು. ಗದ್ದೆ ತೋಟಗಳೆಲ್ಲ ಹಸಿರ ಚೆಲುವು ಆವರಿಸಿಕೊಂಡಿದೆ. ಇಲ್ಲಿ ಯಾವ ಸಂತೆ ನಡೆಯಲ್ಲ. ಯಾವುದೇ ಸೂಪರ್ ಮಾರ್ಕೆಟ್‍ಗಳಿಲ್ಲ.

ನೀವು ಇದನ್ನು ಇಷ್ಟಪಡಬಹುದು: ಹೆಬ್ರಿ ಬಳಿ ಇದೆ 300 ಅಡಿ ಎತ್ತರದಿಂದ ಧುಮುಕುವ ಸುಂದರ ಜಲಪಾತ ಕೂಡ್ಲುತೀರ್ಥ

The garden

ಎರಡು ಊರುಗಳಲ್ಲಿರುವ 7-8 ಅಂಗಡಿಗಳು ನಮಗೆ ಸೂಪರ್ ಮಾರ್ಕೆಟ್. ಇಲ್ಲಿ ಯಾವುದೇ ಚಿತ್ರ ಮಂದಿರವಿಲ್ಲ. ಅದರೆ ಚಿತ್ರ ಪ್ರೇಮಿಗಳಿದ್ದಾರೆ. ಗ್ರಂಥಾಲಯ ಇಲ್ಲ. ಆದರೆ ಪುಸ್ತಕವನ್ನು ಪ್ರೀತಿಸುವ ಪುಸ್ತಕ ಪ್ರೇಮಿಗಳಿದ್ದಾರೆ. ಕರಾವಳಿಯ ಗಂಡುಕಲೆ ಯಕ್ಷಗಾನದ ಮೇರು ಪ್ರತಿಭೆ  ಚಂದ್ರಶೇಖರ್ ಕೆದ್ಲಾಯರು ಆಡಿ ಬೆಳದ ಊರು ನನ್ನೂರು.

ಹಿಂದೆ ನೀವು ಕುಂದಾಪುರ ಹೋಗಿ ಕೊರ್ಗಿ, ಹೆಸ್ಕುತ್ತೂರು ಹೆಸರು ಹೇಳಿದರೆ ಯೋಚನೆ ಮಾಡಿ, ಗೊತ್ತಿಲ್ಲ ಎನ್ನುತ್ತಿದ್ದರು. ಆದರೆ ಇಂದು ನನ್ನೂರು ಬಹು ಮುಂದುವರೆದಿದೆ. ಒಂದಷ್ಟು ವ್ಯಕ್ತಿಗಳು, ಕನ್ನಡ ಶಾಲೆಗಳು ನನ್ನೂರಿನ ಹೆಸರನ್ನು ಪಸರಿಸುತ್ತಿದೆ.

Kannada school
Ashok Thekatte

ಕೊರೊನಾ ಕಾರ್ಮೋಡ ನಡುವೆ ನನ್ನೂರು ಶಾಂತವಾಗಿದೆ. ಊರಿನಿಂದ ದೂರವಾಗಿದ್ದ ಯುವಕರು ನನ್ನೂರಿಗೆ ಮರಳಿದ್ದಾರೆ ಎನ್ನುವ ಖುಷಿ ನನ್ನೂರಿಗೆ ಇದ್ದರೂ ಖಾಲಿಯಾಗಿರುವ ರಸ್ತೆಗಳು, ಮಕ್ಕಳೇ ಇಲ್ಲದ ಶಾಲಾ ಮೈದಾನಗಳು. ಬಸ್ ಇಲ್ಲದೇ ಖಾಲಿ ಹೊಡೆಯುತ್ತಿರುವ ಬಸ್ ಸ್ಟ್ಯಾಂಡ್ ನೋಡಿ ನನ್ನೂರು ಒಳಗೊಳಗೆ ವ್ಯಥೆ ಪಡುತ್ತಿದೆ.

Road

ಶಾಲಾ ಮಕ್ಕಳು ಮತ್ತೆ ಲವಲವಿಕೆಯಿಂದ ನನ್ನೂರಿನ ಶಾಲಾ ಮೈದಾನದಲ್ಲಿ ಮತ್ತೆ ಓಡಾಡುವಂತೆ ಆಗಲಿ, ದಿಯಾ, ಮಿತ್ರ, ಕುಲದೀಪ, ಅಂಬಾಜಿ ಪುನಃ ಪಯಣ ಹೊರಡಲಿ. ಹೊಸದಾಗಿಯಾದ ರಸ್ತೆಗಳು ಹೊಸ ಪಯಣಿಗರಿಂದ ಕಂಗೊಳಿಸುವಂತೆ ಆಗಲಿ ಎನ್ನುವುದು ನನ್ನೂರಿನ ಆಸೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button