ತುಳುನಾಡಿನ ಬಹುಮುಖ್ಯ ಆಹಾರ ಕೋರಿರೊಟ್ಟಿ: ಎ.ಬಿ ಪಚ್ಚು ಬರೆದ ರುಚಿಕಟ್ಟು ಬರಹ #ಕೋರಿರೊಟ್ಟಿ_ಕತೆಗಳು
ಕೋರಿರೊಟ್ಟಿ ಮಂಗಳೂರಿಗರ ಇಷ್ಟದ ಆಹಾರ. ತುಳುನಾಡಿನ ಬಹುಮುಖ್ಯ ಆಹಾರವಾದ ಕೋರಿರೊಟ್ಟಿಯ ಕುರಿತು ಮೂಡಬಿದಿರೆಯ ಎಬಿ ಪಚ್ಚು ಅಧ್ಯಯನಾತ್ಮಕ ರುಚಿಕಟ್ಟು ಬರಹ ಬರೆದಿದ್ದಾರೆ. ಓದಿ, ಯಾವಾಗಾದರೊಮ್ಮೆ ಕೋರಿರೊಟ್ಟಿ ಸವಿಯಲು ಮರೆಯದಿರಿ.
- ಎ.ಬಿ ಪಚ್ಚು
ಹಲವಾರು ತರಹದ ರೊಟ್ಟಿ ಇದ್ದರೂ ನಮ್ಮ ಮಂಗಳೂರಿಗರ ಅತೀ ಇಷ್ಟದ ರೊಟ್ಟಿ ಎಂದರೆ ಅದು ಎಂದೆಂದಿಗೂ ಕೋರಿರೊಟ್ಟಿಯೇ.ಕೋರಿ ಎಂದರೆ ತುಳುವಿನಲ್ಲಿ ಕೋಳಿ. ಕೋಳಿ ಪದಾರ್ಥಕ್ಕೆ ಹೇಳಿ ಮಾಡಿಸಿದ ಇದು ಅಕ್ಕಿಯಿಂದ ಮಾಡುವ ಒಂದು ತುಳುನಾಡಿನ ಬಲು ಜನಪ್ರಿಯ ರೊಟ್ಟಿ.

ಅಕ್ಕಿಯನ್ನು ಸಣ್ಣಗೆ ಕಡೆದು ಸ್ವಲ್ಪವೇ ಸ್ವಲ್ಪ ಉಪ್ಪು ಹಾಕಿ, ನೀರುದೋಸೆಗಿಂತಲೂ ತೆಳುವಾಗಿ ಇದನ್ನು ಕಟ್ಟಿಗೆ ಒಲೆಯ ದೊಡ್ಡದಾದ ಹೆಂಚಿನಲ್ಲಿ ಹೊಯ್ಯುತ್ತಾರೆ. ನಂತರ ಹೆಂಚಿನ ಮೇಲೆ ಲಂಬಕ್ಕೆ ಅಡ್ಡಕ್ಕೆ ಗೀಟು ಏಳೆದು ಚೌಕ ಚೌಕವಾಗಿ ಕಟ್ ಮಾಡಿ ತೆಗೆದರೆ ಕೋರಿರೊಟ್ಟಿ ರೆಡಿ. ನಂತರ ಪ್ಯಾಕೇಟ್ ಗಳಿಗೆ ತುಂಬಿಸಿದರೆ ಆಯಿತು. ಆದರೆ ಈ ರೀತಿಯಾಗಿ ಮನೆಯಲ್ಲಿ ಮಾಡುವುದಿಲ್ಲ.
ನಮ್ಮಲ್ಲಿ ಇದು Home Product ನಂತಹ ಸಣ್ಣ ಕೈಗಾರಿಕೆ. ಹೆಚ್ಚಿನವರಿಗೆ ಆದಾಯದ ಮೂಲ.ಮೇಲೆ ಹೇಳಿದ ರೀತಿಯಲ್ಲಿ ದೊಡ್ಡ ಸ್ಕೇಲ್ ನಲ್ಲಿ ಮಾರಾಟ ಮಾಡುವುದಕ್ಕಾಗಿ ಮಾಡುವಂತಹದ್ದು. ಆದರೆ ಇದನ್ನು ಮನೆಯಲ್ಲಿ ಕೂಡ ಮಾಡಿಕೊಳ್ಳಬಹುದು. ಇಲ್ಲಿ ಅಷ್ಟು ದೊಡ್ಡ ಹೆಂಚಿನ ಬದಲು ಕಬ್ಬಿಣದ ತವಾದ ಮೇಲೆ ಕಡೆದಿಟ್ಟಂತಹ ಹಿಟ್ಟು ಹಾಕಿ ತಾಳೆಮರದ ಗರಿಯಿಂದ ತೆಳುವಾಗಿ ಅಕ್ಕಿನ ಹಿಟ್ಟನ್ನು ತವಾದ ಮೇಲೆ ಎಳೆದು ತೆಳುವಾಗಿ ಕೋರಿರೊಟ್ಟಿ ಮಾಡುತ್ತಾರೆ.
ಸ್ವಲ ಹೊತ್ತು ಒಲೆಯ ಪಕ್ಕದಲ್ಲಿಯೇ ಬಿಸಿ ತಾಗಲು ಇಟ್ಟು ನಂತರ ಇದನ್ನು ಬಿಸಿಲಿಗೆ ಒಣಗಲು ಹಾಕುತ್ತಾರೆ. ಇದನ್ನು ಕೂಡ ಪ್ಯಾಕೇಟ್ ಗಳಲ್ಲಿ ಹಾಕಿ ಮಾರುತ್ತಾರೆ. ಇದಕ್ಕೆ ಸ್ವಲ್ಪ ಬೆಲೆ ಜಾಸ್ತಿಯೇ.ಒಳ್ಳೆಯ ಕೋರಿರೊಟ್ಟಿಗೆ ಇರಬೇಕಾದ ಮುಖ್ಯ Quality ಎಂದರೆ ಆದಷ್ಟು ತೆಳು ಹಾಗೂ ಆದಷ್ಟು ಉಪ್ಪು ಕಡಿಮೆ ಇರಬೇಕು.
ನೀವುಇದನ್ನುಇಷ್ಟಪಡಬಹುದು: ಕೊಟ್ಟಿಗೆಹಾರದ ನೀರುದೋಸೆ: ನಂದೀಶ್ ಬಂಕೇನಹಳ್ಳಿ ರುಚಿಕಟ್ಟು ಬರಹ
ಉಪ್ಪು ಏಕೆ ಕಡಿಮೆ ಇರಬೇಕು ಎಂದರೆ ಮುಂದೆ ಚಿಕನ್ ಕರಿಗೆ ಎಲ್ಲಾ ಬಳಸುವಾಗ Already ರೊಟ್ಟಿಯಲ್ಲೂ ಉಪ್ಪು ಇದ್ದರೆ ತಿನ್ನುವಾಗ ಉಪ್ಪು ಮತ್ತಷ್ಟು ಹೆಚ್ಚಾಗಿ ಬಿಡುವುದು ಮತ್ತು ಆಗ ಕೋರಿರೊಟ್ಟಿಯೇ ನಮಗೆ ಸಾಕಷ್ಟು ನೀರು ಕುಡಿಸಿ ಬಿಡುತ್ತದೆ.
ಕೋರಿರೊಟ್ಟಿ ತುಳುನಾಡಿನ ಸಂಸ್ಕೃತಿಯ ಭಾಗ
ಕೋರಿರೊಟ್ಟಿ ತುಳುನಾಡಿನಲ್ಲಿ ಬರೀ ರೊಟ್ಟಿಯಾಗಿ ಉಳಿದಿಲ್ಲ. ಅದೊಂದು ಇಲ್ಲಿಯ ಸಂಸ್ಕೃತಿಯ ಭಾಗವಾಗಿ ಆಳವಾಗಿ ಬೇರೂರಿ ಬಿಟ್ಟಿದ್ದೆ. ಅದರಲ್ಲೂ ಮಾಂಸಾಹಾರಿಗಳ ಬಾಳಿನ ಆಹಾರದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಇದು.(dakshina kannada recipes)ಮನೆಯಲ್ಲಿ ಯಾರೇ ನೆಂಟರು ಬಂದರೂ ಕೋರಿ ರೊಟ್ಟಿ ಆಗಲೇ ಬೇಕು ಮತ್ತು ಅಪ್ಪ ರೊಟ್ಟಿ ತರಲು ಅಂಗಡಿಗೆ ಓಡಲೇಬೇಕು. ಇಲ್ಲದಿದ್ದರೆ ಆ ಕೆಲಸಕ್ಕೆ ನಾವು ಹೋಗುತ್ತೇವೆ. ನಮಗಂತು ಅದು ಬಲು ಪ್ರಿಯ ಕೆಲಸ. ಇಂತಹ ಕೆಲಸವನ್ನು ಅದರಲ್ಲೂ ಕೋರಿರೊಟ್ಟಿ ತರುವ ಕೆಲಸವನ್ನು ನಾವುಗಳು ತಪ್ಪಿಸಿಕೊಂಡವರೇ ಅಲ್ಲ.
ಫಂಕ್ಷನ್ ಗಳಲ್ಲಿ ನಾನ್ ವೆಜ್ ಊಟವಿದ್ದರೆ ಮೆನುವಿನಲ್ಲಿ ನೀರುದೋಸೆ, ಸೆಮೆದಡ್ಡೆಯಂತೆಯೇ ಕೋರಿರೊಟ್ಟಿಯೂ ಕೂಡ Mandatory ಆಗಿ ಇರಲೇ ಬೇಕು ನಮ್ಮವರಿಗೆ. ಆಗಲೇ ನಾನ್ ವೆಜ್ ಭೂರಿ ಭೋಜನಕ್ಕೆ ಒಂದು ಕಳೆ ಬರುವುದು.ಕೋರಿರೊಟ್ಟಿ ಬರೀ ಕೋಳಿ ಸಾರಿಗೆ, ಚಿಕನ್ ಪುಳಿ ಮುಂಚಿಗೆ ಮಾತ್ರವಲ್ಲ. ಬಂಗುಡೆ ಕರಿಗೂ(ಫಿಶ್ ಕರಿ)ಕೂಡ ಒಳ್ಳೆಯ ಜೋಡಿಯೇ.
ಅಷ್ಟು ಮಾತ್ರವಲ್ಲ ಸಸ್ಯಾಹಾರಿಗಳನ್ನು ಕೂಡ ಇದು ನಿರಾಸೆ ಮಾಡಲ್ಲ. ಬಸಳೆ ಪದಾರ್ಥ, ಸೌತೆ ಪದಾರ್ಥ(ಮಂಗಳೂರು ಸೌತೆ), ಇಲ್ಲವೇ ನೀರುಳ್ಳಿ ಸಾರಿಗೂ ಕೂಡ ಹೇಳಿ ಮಾಡಿಸಿದ್ದು ಇದು.
ಕೋರಿರೊಟ್ಟಿ ತಿನ್ನುವ ನಾನಾ ವಿಧಾನ
ಕೋರಿರೊಟ್ಟಿ ತಿನ್ನುವಾಗ ಕೆಲವರು ರೊಟ್ಟಿಯನ್ನುಯ ಕಡಲಿನಲ್ಲಿ ಮುಳುಗಿಸಿ ತೆಗೆದಂತೆ ಸಂಪೂರ್ಣವಾಗಿ ಸಾರಿನಲ್ಲಿಯೇ ಮುಳುಗಿಸಿ ಬಿಡುತ್ತಾರೆ. ಆಗ ಕೋರಿರೊಟ್ಟಿ ನಸೆ ನಸೆ(ಮೆದು) ಆಗುವುದು. ಕೆಲವರಿಗೆ ಆ ರೀತಿ ತಿನ್ನುವುದು ಇಷ್ಟ. ಹಲ್ಲಿಲ್ಲದ ಅಜ್ಜಂದಿರು ಮಾತ್ರವಲ್ಲ ಯುವಕರು ಕೂಡ ಹೀಗೆಯೇ ಮಾಡಿ ತಿನ್ನುವವರಿದ್ದಾರೆ.

ಇನ್ನು ಕೆಲವರಿಗೆ ಸ್ವಲ್ಪವೇ ಸ್ವಲ್ಪ ಸಾರು ಕೋರಿರೊಟ್ಟಿಯನ್ನು ಸೋಕಿಯೂ ಸೋಕದ ಹಾಗೆ ಇರಬೇಕು. ಒಂಥರಾ Semi Solidನ ಹಾಗೇ. ಒಟ್ಟಿನಲ್ಲಿ ಅವರವರ ಅಭಿರುಚಿಗೆ ತಕ್ಕಂತೆ ಕೋರಿರೊಟ್ಟಿ ಅವರವರ ಬಾಯಿಯನ್ನು ರುಚಿಗೊಳಿಸುತ್ತದೆ.ಏನೂ ಇಲ್ಲದಿದ್ದರೆ ಸಂಜೆ ಚಹಾ ದ ಬಾಯಿಗೆ ಒಂದೊಂದೇ ಕೋರಿರೊಟ್ಟಿಯ ಪ್ಲೇಕ್ ಗಳನ್ನು ಚಹಾದಲ್ಲಿ ಅದ್ದಿ ಇಲ್ಲವೇ ಹಾಗೇ ತಿನ್ನಲ್ಲೂ ಕೂಡ ರಸ್ಕ್, ಬಿಸ್ಕೆಟ್ ಗಿಂತಲೂ ನಮ್ಮಲ್ಲಿ ಕೋರಿರೊಟ್ಟಿಯೇ ಬಹಳ ಮಜವಾಗಿರುವುದು.
ಹೇಗೆ ನಿಮಗೆ ಸುತ್ತಮುತ್ತ ಅಲ್ಲಲ್ಲಿ ಅತಿಯಾಗಿ ಬಿರಿಯಾಣಿ (ಅದೇ ಬಿರಿಯಾನಿ) ಪ್ರಿಯರು ಕಾಣಸಿಗುತ್ತಾರೋ, ಹಾಗೇ ಮಂಗಳೂರಿನಲ್ಲಿ ನನ್ನಂತಹ ಕೋರಿರೊಟ್ಟಿ ಪ್ರೀಯರು ಕೂಡ ನಿಮಗೆ ಖಂಡಿತವಾಗಿಯೂ ಕಾಣಸಿಗುತ್ತಾರೆ.
ಯಾವುದೇ ಫಂಕ್ಷನ್ ಗೆ ಹೋದರೂ ಒಂದು ಬಾರಿ ಅನ್ನ ಹಾಕಿಸಿಕೊಂಡರೂ ಕೆಲವೊಮ್ಮೆ ಅನ್ನ ಕೂಡ ಹಾಕಿಸಿಕೊಳ್ಳದಿದ್ದರೂ ಎರಡು ಬಾರಿ ಕೋರಿ ರೊಟ್ಟಿ ಹಾಕಿಸಿಕೊಳ್ಳಲು ಕೋರಿರೊಟ್ಟಿ ಪ್ರಿಯರು ಎಂದಿಗೂ ಹಿಂದೆ ಮುಂದೆ ನೋಡುವುದೇ ಇಲ್ಲ. ಕೋರಿರೊಟ್ಟಿ ಮೇಲೆ ಅಂತಹ ಪ್ರೀತಿ ನಮ್ಮದು. ಮತ್ತು ಅದು ತಿಂದರೆ ಅನ್ನ ಬೇಕು ಅಂತ ಅನ್ನಿಸುವುದೇ ಇಲ್ಲ.
ಕೋರಿರೊಟ್ಟಿಗೆ ಚಿಕನ್ ಕರಿ ಯಾವತ್ತೂ Thick ಆಗಿ ಇರಬಾರದು, ಸಾರಿನಂತೆ ಅದು ಹರಿದು ಹೋಗಬೇಕು. ಹೊಳೆಯ ಧಾವಂತ ತನ್ನದಾಗಿಸಿಕೊಂಡಿರಬೇಕು.ಮನೆಯಲ್ಲಿ ಕೋರಿರೊಟ್ಟಿಗೆ ಚಿಕನ್ ಪುಳಿ ಮುಂಚಿ ಮಾಡಿದರೂ ಕೂಡ ಅದನ್ನು ಅಸಾಂಪ್ರದಾಯಿಕವಾಗಿ ಬಹಳ ತೆಳುವಾಗಿಯೇ ಮಾಡುತ್ತಾರೆ. ಇಲ್ಲದಿದ್ದರೆ ಎಂದಿನಂತೆ ಪುಳಿಮುಂಚಿ ಗಶಿ ಜಾಸ್ತಿ ದಪ್ಪ ಇದ್ದು ಬಿಟ್ಟರೆ ಚಿಕನ್ ಪುಳಿಮುಂಚಿ ಬಲು ಬೇಗ ಸಪಾಯಿ (ಖಾಲಿ) ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿರುತ್ತದೆ. ಏಕೆಂದರೆ ಆ ಗಶಿ ಅದಕ್ಕೆ ಸಾಲುವುದೇ ಇಲ್ಲ.
ಕೋಳಿ ಸಾರು ಮತ್ತು ಕೋರಿ ರೊಟ್ಟಿ
ಅದಕ್ಕಾಗಿ ನಮ್ಮಲ್ಲಿ ಚಿಕನ್ ಸಾರ್ ಅನ್ನು ಕೋರಿರೊಟ್ಟಿಗಾಗಿಯೇ ಕಡಿಮೆ ಚಿಕನ್ ಪೀಸ್ ಹಾಕಿ, ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಪೀಸ್ ಗಳನ್ನು, ಕೋಳಿ ಕಾಲು, ವಿಂಗ್ಸ್, ನೆಕ್ ಎಲ್ಲಾ ಹಾಕಿ ಮಾಡುತ್ತಾರೆ. ಒಳ್ಳೆಯ ಪೀಸ್ ಗಳಿಗೆ ಚಿಕನ್ ಪುಳಿ ಮುಂಚಿ ಮತ್ತು ಚಿಕನ್ ಸುಕ್ಕ ಆಗುವ ರಾಜ ಮರ್ಯಾದೆ.
ಕೋಳಿ ಸಾರಿಗೆ ದೊಡ್ಡ ಪೀಸ್ ಗಳನ್ನು ತನ್ನತ್ತ ಸೆಳೆದುಕೊಳ್ಳುವ ಆ ಭಾಗ್ಯವಿಲ್ಲ. ಕೋಳಿ ಸಾರಿನಲ್ಲಿ ಸಣ್ಣಪುಟ್ಟ ಕೋಳಿ ತುಂಡುಗಳನ್ನು ಕಂಡಾಗ ಅವುಗಳು ವಿಶಾಲ ಅರಬ್ಬಿ ಸಮುದ್ರದಲ್ಲಿ ಜೊತೆಗಾರ ಇಲ್ಲದೆ ಆರಾಮವಾಗಿ ಅಲ್ಲೊಂದು ಇಲ್ಲೊಂದು ಈಜಾಡುತ್ತಿರುವಂತೆ ಭಾಸವಾಗುತ್ತದೆ.

ಚಿಕನ್ ಸುಕ್ಕದಲ್ಲಿ ಅಂತು ಈ ಕೋಳಿ ಪೀಸ್ ಗಳು ಮಸಾಲೆ ಕಚ್ಚಿಕೊಂಡಿರುವ ತೆಂಗಿನ ತುರಿಯ ಜೊತೆ ಗಟ್ಟಿಯಾದ ಸ್ನೇಹ ಬೆಳೆಸಿಕೊಂಡು ಒಂದಕ್ಕೊಂದು ಮೈಗಂಟಿ ಕೂತು ಬಿಡುತ್ತದೆ. ಬಹುಶಃ ಅವುಗಳಿಗೆ ಯಾವತ್ತೂ ಚಳಿಗಾಲವೇ. ಆದರೂ ಕೋರಿರೊಟ್ಟಿಯ ವಿಷಯ ಬಂದಾಗ ಕೋರಿ ಸುಕ್ಕ, ಕೋರಿ ಪುಳಿಮುಂಚಿ ಕೂಡ ಕೋಳಿಸಾರಿಗೆ ಸೈಡ್ ಬಿಟ್ಟು ಕೊಡಲೇ ಬೇಕು.
ಆವಾಗ ನೋಡಿ ನಮ್ಮ ಕೋಳಿ ಸಾರು ಕೋರಿರೊಟ್ಟಿಯೊಂದಿಗೆ ಅಬ್ಬರಿಸುವುದು. ಸುಕ್ಕ, ಪುಳಿಮುಂಚಿಗೆ ಅದನ್ನು ಕಂಡು ಆಗಲೇ ನಂಜಿ (ಹೊಟ್ಟೆ ಕಿಚ್ಚು) ಆಗುವುದು. ನಂತರ ಅವುಗಳು ತಮಗೆ ಜೋಡಿಯಾಗಿ ನಿರುದೋಸೆಯನ್ನೋ, ಆಪಂ ಅನ್ನೋ ಹುಡುಕತೊಡಗುತ್ತದೆ. ಜಾಸ್ತಿ ಅಂದರೆ ಅವುಗಳಿಗೆ ಎರಡೋ ಮೂರೋ ನೀರುದೋಸೆ ಅಥವಾ ಎರಡು ಆಪಂ ಸಿಗಬಹುದು ಅಷ್ಟೇ. ಆದರೆ ಕೋಳಿ ಸಾರಿಗೆ ತಟ್ಟೆ ಪೂರ್ತಿ ಕೋರಿರೊಟ್ಟಿಯೇ.
ಅದರಲ್ಲೂ ಬಡಿಸುವವರು ಕೂಡ ಕೋರಿರೊಟ್ಟಿ ಬಡಿಸಲು ಹಿಂದೆ ಮುಂದೆ ನೋಡುವುದಿಲ್ಲ. ನಾಚಿಕೆ ಮಾಡ್ಕೋಬೇಡಿ ಅಂತ ತಟ್ಟೆಗೆ ಕೋರಿರೊಟ್ಟಿ ಸುರಿಯುತ್ತಲೇ ಇರುತ್ತಾರೆ. ಆದರೆ ನೀರ್ ದೋಸೆ, ಆಪಂ ಹಾಕುವಾಗ ಅವರು ಕೈ ಚಿಕ್ಕದು ಮಾಡುತ್ತಾರೆ. ಅದನ್ನು ಕಂಡು ಸುಕ್ಕ, ಪುಳಿಮುಂಚಿಯತ್ತ ನೋಡಿ ನಮ್ಮ ಕೋಳಿಸಾರ್ ಕೇಕೇ ಹಾಕಿ ನಗುವುದು. ನೋಡಿ ಈಗ ಇಲ್ಲಿ ಯಾರಿಗೆ ರಾಜ ಮರ್ಯಾದೆ ಅಂತ.
ನನಗಿಷ್ಟದ ಬ್ರಾಂಡ್
ಕೆಲವು ಮನೆಯವರಿಗೆ ಹಿಂದಿನಿಂದಲೂ ಅವರ ಮನೆಗೆ ಯಾವ ಬ್ರಾಂಡ್ ನ ಕೋರಿರೊಟ್ಟಿ ತದಿರುತ್ತಾರೋ ಅದೇ ಬ್ರಾಂಡ್ ನ ಕೋರಿರೊಟ್ಟಿಯೇ ಬೇಕು. ಅಂಗಡಿಗೆ ಹೋಗಿ ಅದನ್ನೇ ಕೇಳ್ತಾರೆ. ನಮಗೆ ಇದು ಬೇಡ. . ಆ ರೊಟ್ಟಿ ಕೊಡಿ ಅಂತ.ನಾನು ಕೂಡ ಹಾಗೆಯೇ ಚಿಕ್ಕಂದಿನಿಂದಲೂ ಒಂದೇ ಬ್ರಾಂಡ್ ನ ಕೋರಿರೊಟ್ಟಿ ತಿಂದೇ ನನಗೆ ಅಭ್ಯಾಸ. ಮೂಡುಬಿದ್ರೆಯಲ್ಲಿ “ಅಂಚನ್” ನವರದ್ದು ಒಂದು ಕೋರಿರೊಟ್ಟಿ ಸಿಗ್ತದೆ. ಬೆಳುವಾಯಿ ಬಳಿಯ ಮಂಜನಕಟ್ಟೆ ಎಂಬಲ್ಲಿ ಅದನ್ನು ಮನೆಯಲ್ಲಿಯೇ ಮಾಡ್ತಾರೆ. ನನಗದು ಬಹಳ ಇಷ್ಟ.

ನನಗೂ ಈ ಅಂಚನ್ ಕೋರಿರೊಟ್ಟಿಗೂ ಬಾಲ್ಯದ ನಂಟು. ಅವರ ಬ್ರಾಂಡ್ ಗೆ “ಕೋಟಿ ಚೆನ್ನಯರ” ಒಂದು ಚಂದದ ಪೋಟೋ ಸಹ ಉಂಟು, ಹಾಗಾಗಿ ಅದು ಮೂಡುಬಿದಿರೆಯಲ್ಲಿ ಕೋಟಿ ಚೆನ್ನಯ ರೊಟ್ಟಿ ಎಂದೇ ಫೇಮಸ್ ಆಗಿ ಬಿಟ್ಟಿದೆ. ಜನರು ಕೂಡ ಅಂಗಡಿಗೆ ಹೋಗಿ ಹಾಗೆಯೇ ಕೇಳುವುದು. ಇನ್ನು ಕೆಲವರು ಬೆಳುವಾಯಿ ರೊಟ್ಟಿ ಎಂದೇ ಹೇಳ್ತಾರೆ.ನನಗಂತು ಆ ಅಂಚನ್ ಕೋರಿರೊಟ್ಟಿ ಎಂದರೆ ಬಾರೀ ಇಷ್ಟ.
ಈ ರೀತಿಯಾದ ಕೋರಿರೊಟ್ಟಿ ಕಥೆಗಳು ಎಲ್ಲಾ ಕೋರಿರೊಟ್ಟಿ ಪ್ರೇಮಿಗಳಿಗೂ ಇದ್ದೇ ಇರುತ್ತದೆ. ಕಾಲು ಕೆಜಿ, ಅರ್ಧ ಕೆಜಿ ಪ್ಯಾಕೇಟ್ ಗಳಲ್ಲಿ ಈ ಕೋರಿರೊಟ್ಟಿಗಳು ಅಂಗಡಿಗಳಲ್ಲಿ ಸಿಗ್ತದೆ. ಮೊದಲೇ ಹೇಳಿದಂತೆ ಕೋರಿ ರೊಟ್ಟಿ ಜಾಸ್ತಿ ದಪ್ಪ ಇರ್ಬಾರ್ದು. ತೆಳುವಾಗಿ ತುಂಬಾ crispy ಆಗಿ ಇದ್ದರೆನೆ ಅದರ ಮಜಾ.
ಬಿರಿಯಾನಿಗಿಂತ ಕೋರಿ ರೊಟ್ಟಿ ಮೇಲು
ಅಂಗಡಿಯಿಂದ ಯಾರಾದರೂ ಮನೆಗೆ ಕೋರಿ ರೊಟ್ಟಿ ತೆಗೆದುಕೊಂಡು ಹೋಗುವುದು ನಮಗೆ ದಾರಿಯಲ್ಲಿ ಕಂಡರೆ ಆಗ ನಾವು ಅವರ ಮನೆಯಲ್ಲಿ ಎಂತ ಪದಾರ್ಥ ಎಂದು ಸುಲಭವಾಗಿ ಗೆಸ್ ಮಾಡಬಹುದು ಮಾತ್ರವಲ್ಲ “ಸಂಜೀವಣ್ಣ, ಇನಿ ನಿಕ್ಲೆಗ್ ಕೊಕ್ಕ ಕಜಿಪು ಅತೆ. ” (ಸಂಜೀವಣ್ಣ, ಇವತ್ತು ನಿಮಗೆ ಕೋಳಿ ಕರಿ ಅಲ) ಎಂದು ಕೂಡ ಹೇಳಬಹುದು.ಅವರು ಕೂಡ. ಹೌದು ಹೌದು ನೆಂಟರು ಬಂದಿದ್ದಾರೆ, ಹಾಗಾಗಿ.. ಏನಾದ್ರೂ ಗಮ್ಮತ್ ಮಾಡ್ಬೇಕಲ್ಲ. . ಅಂತ ನಗ್ತಾ ಹೇಳ್ತಾರೆ.

ಒಟ್ಟಿನಲ್ಲಿ ಅಂಗಡಿಯಿಂದ ಮನೆಗೆ ಹೋಗುವಾಗ ಕೈಯಲ್ಲಿ ಕೋರಿರೊಟ್ಟಿ ಇದ್ದರೆ ಮನೆಯಲ್ಲಿ ಕೊಕ್ಕವೋ, ಮಿಮ್ಮಿ ಪದಾರ್ಥವೋ ಇದೇ ಎಂದೇ ಲೆಕ್ಕ. ಕೊಕ್ಕ ಅಂದ್ರೆ ಕೋಳಿ, ಮಿಮ್ಮಿ ಅಂದ್ರೆ ಫಿಶ್ ಆಯ್ತಾ.ಈಗಲೂ ಅಷ್ಟೇ ಮನೆಯಲ್ಲಿ ಕೋರಿರೊಟ್ಟಿ ಪ್ಯಾಕೇಟ್ ಒಂದು ಸದ್ದು ಮಾಡುತ್ತಾ ಹಾಗೇ ಒಡೆದು ಕೊಂಡಾಗ, ಫಿಶ್ ತೊಟ್ಟೆಯನ್ನು ಕಂಡು ನಮ್ಮ ಹಿಂದೆಯೇ ಓಡೋಡಿ ಬರುವ ಬೆಕ್ಕಿನಂತೆ ನನ್ನ ಮನಸ್ಸು ಕೂಡ ಕೋರಿರೊಟ್ಟಿ ಪ್ಯಾಕೇಟ್ ಕಡೆಗೆನೇ ಓಡಿ ಬಿಡುವುದು.
ಸತ್ಯ ಹೇಳ್ತೇನೆ ಸೈಡಿನಲ್ಲಿ ಎಷ್ಟೇ ಒಳ್ಳೆಯ ಬಿರಿಯಾಣಿ ಇಟ್ಟರೂ ಕೂಡ ನಮಗಂತು ಎರಡು ಪ್ಲೇಟ್ ಕೋರಿರೊಟ್ಟಿ ಹಾಗೂ ಅದರ ಮೇಲೆ ಓಡಾಡೋ ಕೋಳಿಸಾರೇ ಮತ್ತಷ್ಟು ಬೇಕೆನಿಸುತ್ತದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ