ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಉಡುಪಿಯಲ್ಲಿ ನೀವು ಅಡ್ಡಾಡಬೇಕಾದ 4 ಕಡಲ ತೀರಗಳು

ಕರಾವಳಿ ಎಂದಾಗ ನಮಗೆ ತಟ್ಟನೆ ನೆನಪಾಗುವುದು ಕಡಲ ತೀರ.ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಜನರು ಕಡಲ ತಡಿಯಲ್ಲಿ ಕಾಲ ಕಳೆಯಲೆಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಾರೆ.

ಜೀವನದ ಖುಷಿ, ನಶ್ವರತೆ ಕೆಲವೊಮ್ಮೆ ನಮ್ಮ ಅರಿವಿಗೆ ಬರುವುದು ಕಡಲ ತಡಿಯಲ್ಲಿ. ಕರಾವಳಿಯ ಹಲವು ಬೀಚ್, ಸೀ ವಾಕ್, ಹ್ಯಾಂಗಿಂಗ್ ಬ್ರಿಡ್ಜ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೀವು ಕೃಷ್ಣನ ಊರಿಗೆ ಬೀಚ್ ನೋಡಲು ಬಂದಾಗ ಮರೆಯದೇ ಈ ಸ್ಥಳಗಳಿಗೆ ಭೇಟಿ ನೀಡಿ.

  • ನವ್ಯಶ್ರೀ ಶೆಟ್ಟಿ

ನಮ್ಮ ಪ್ರಶಾಂತತೆ, ಪ್ರಕ್ಷುಬ್ಧತೆಗೆ ಕೆಲವೊಮ್ಮೆ ಬೀಚ್ ಸಾಕ್ಷಿಯಾಗುತ್ತದೆ. ಪ್ರಕೃತಿಯ ಎಲ್ಲಾ ಸೊಬಗನ್ನು ತನ್ನ ಮಡಿಲಿನಲ್ಲಿ ಬಾಚಿಕೊಂಡಿರುವ ಕರಾವಳಿಯ ಹಲವು ಬೀಚ್, ಸೀ ವಾಕ್, ಹ್ಯಾಂಗಿಂಗ್ ಬ್ರಿಡ್ಜ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಕೃತಿಯ ಎಲ್ಲಾ ಸೊಬಗನ್ನು ತನ್ನ ಮಡಿಲಿನಲ್ಲಿ ಬಾಚಿ ಕೊಂಡಿರುವ ಈ ಕಡಲ ತೀರಗಳನ್ನು ಉಡುಪಿಗೆ ಹೋದಾಗ ನೋಡಲು ಮರೆಯಬೇಡಿ.

ಮಲ್ಪೆ(malpe)
ಕರಾವಳಿಯ ಬೀಚ್ ಗಳಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಬೀಚ್ ಮಲ್ಪೆ. ಮಲ್ಪೆ ಬೀಚ್ ನಲ್ಲಿ ಮಸ್ತಿ ಮಾಡಲೆಂದೇ ಸಾಕಷ್ಟು ಜನ ಪ್ರವಾಸಿಗರು ಬರುತ್ತಾರೆ. ಕರಾವಳಿಯ ಸುಂದರ ತಾಣ ಮಲ್ಪೆ ಕಡಲ ತೀರ.ಮಲ್ಪೆಯಲ್ಲಿ ಸೂರ್ಯಾಸ್ತ ನೋಡುವುದೇ ಸೊಬಗು. ನೀವು ಮಲ್ಪೆ ಹೋದರೆ ಮೂರು ತಾಣಗಳನ್ನು ನೋಡಿಕೊಂಡು ಬರಬಹುದು.

Malpe Beaches of Udupi Sunset Malpe Sea walk
ಚಿತ್ರ ಕೃಪೆ: ಷಣ್ಮುಖ ಅತ್ರಿ ಎಲ್

ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಬೀಚ್. ಕಡಲಿನ ಅಲೆಗಳು ಕೆಲವೊಮ್ಮೆಎಷ್ಟು ಪ್ರಕ್ಷುಬ್ಧತೆಗೊಂಡಿರುತ್ತದೆಯೋ ಕೆಲವೊಮ್ಮೆ ಅಷ್ಟೇ ಶಾಂತತೆ. ಸಾಕಷ್ಟು ಸಿನಿಮಾಗಳ ಶೂಟಿಂಗ್ ಕೂಡ ಇಲ್ಲಿ ನಡೆದಿದೆ. ಇಲ್ಲಿ ಕನ್ನಡದ ಅದೆಷ್ಟೋ ಸುಂದರ ಹಾಡುಗಳ ಚಿತ್ರೀಕರಣವಾಗಿದೆ. ಬೀಚ್ ನಲ್ಲಿ ಮೋಜು ಮಸ್ತಿಗೆ ಒಂದಷ್ಟು ಅವಕಾಶವಿದೆ. ಇಲ್ಲಿ ಪ್ಯಾರಾಚೂಟ್ ನಲ್ಲಿ, ನೀವು ಆಗಸದೆತ್ತರಕ್ಕೆ ಹಾರಬಹುದು. ಬೀಚ್ ಸಮೀಪದ ಹೋಟೆಲ್ ನಲ್ಲಿ ಕರಾವಳಿಯ ರುಚಿ ರುಚಿ ಮೀನಿನ ಖಾದ್ಯ ಕೂಡ ಸವಿಯಬಹುದು

ಮಲ್ಪೆ ಬಂದರು

ಮಲ್ಪೆ ಬೀಚ್ ಜೊತೆಗೆ ಇಲ್ಲಿ ನಿಮ್ಮನ್ನು ಆಕರ್ಷಿಸುವ ತಾಣ ನೈಸರ್ಗಿಕ ಬಂದರು. ವಿವಿಧ ಮೀನುಗಳು, ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಮೀನುಗಾರರು, ತರಾವರಿ ಬೋಟ್, ಹಡಗು ನಿಮ್ಮಲ್ಲಿ ನೈಸರ್ಗಿಕ ಬಂದರಿನ ಸುಂದರ ಪರಿಕಲ್ಪನೆ ಮೂಡಿಸುತ್ತದೆ

The Port of Malpe Malpe Beach Malpe Sea walk Beaches of Udupi
ಚಿತ್ರ ಕೃಪೆ: ಷಣ್ಮುಖ ಅತ್ರಿ ಎಲ್

ಮಲ್ಪೆ ಸೀ ವಾಕ್ (malpe seawalk)

ಮಲ್ಪೆಯಲ್ಲಿ ನೀವು ನೋಡಲೇಬೇಕಾದ ಇನ್ನೊಂದು ತಾಣ ಸೀ ವಾಕ್. ರಾಜ್ಯದ ಮೊದಲ ಸೀ ವಾಕ್ ವೇ ಉದ್ಯಾನವನ. ಪುಟಾಣಿಗಳಿಗೆ ಆಟ ಆಡಲು ಜಾರುಬಂಡಿ ಜೊತೆಗೆ 250 ಜನ ಕುಳಿತುಕೊಳ್ಳಬಹುದಾದ ಬಯಲು ರಂಗ ಮಂದಿರ. ಮಧ್ಯದಲ್ಲೊಂದು ಆಕರ್ಷಕ ಮೂರ್ತಿ.

ಯಕ್ಷಗಾನ ಮಾದರಿಯ 15 ಅಡಿ ಎತ್ತರದ ಚಂದದ ಗರುಡ. ಮೀನುಗಾರನ ಬದುಕನ್ನು ಬಿಂಬಿಸುವ ಸುಂದರ ಕಲಾಕೃತಿಗಳು, ಸ್ಥಳೀಯ, ಸಮುದ್ರ ಬದಿಯಲ್ಲಿ ಬೆಳೆಯಬಹುದಾದ ಸಸ್ಯಗಳ ವೃಂದಾವನ, ತೆಂಗಿನ ಸಸಿಗಳು, ವಿಶಾಲ ಪಾರ್ಕಿಂಗ್ ವ್ಯವಸ್ಥೆ. ಇತ್ತೀಚೆಗೆ ಹೆಚ್ಚು ಅಭಿವೃದ್ಧಿ ಕಂಡಿರುವ ಸೀ ವಾಕ್ ಹೈಟೆಕ್ ಆಗಿದೆ. ಇಲ್ಲಿ ಪಾರ್ಕಿಂಗ್ ಗೆ ಚಾರ್ಜ್ 10 ರೂ. ಸೀವಾಕ್ ನಲ್ಲಿರುವ ವಿವಿಧ ಭಂಗಿಯ ಪ್ರತಿಮೆ ನಿಮ್ಮನ್ನು ಆಕರ್ಷಿಸುತ್ತದೆ.

Malpe Seawalk First sea walk park of Karnataka Beaches of Udupi Karnataka Tourism

ತಲುಪುವ ಹಾದಿ

ನೀವು ಉಡುಪಿಯ ಕರಾವಳಿಯ ಬೈಪಾಸ್ ನಿಂದ ಆದಿ ಉಡುಪಿ ಮಾರ್ಗವಾಗಿ ಮಲ್ಪೆ ತಲುಪಬಹುದು. ಉಡುಪಿಯಿಂದ ಬಸ್ ಮೂಲಕ ಹೋಗುವವರಿಗೆ ಉಡುಪಿಯ ಸರ್ವೀಸ್ ಬಸ್ ನಿಲ್ದಾಣಗಳಲ್ಲಿ 10-15 ನಿಮಿಷ ಅಂತರದಲ್ಲಿ ಸಿಟಿ ಬಸ್ ಲಭ್ಯವಿದೆ.

ಹೂಡೆ ಬೀಚ್ (hoode beach)

ಇತ್ತೀಚಿನ ದಿನಗಳಲ್ಲಿ ಸದ್ದಿಲ್ಲದೆ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಬೀಚ್. ವಿದ್ಯಾರ್ಥಿಗಳಿಗೆ ಹೂಡೆ ನೆಚ್ಚಿನ ಜಾಗ . ಹೂಡೆಯಲ್ಲಿ ನೀವು ಇಳಿದು ಕಡಲ ತೀರದ ಕಲ್ಲಿನ ಬಂಡೆಗಳ ಮೇಲೆ ನಡೆಯುತ್ತಾ ಕೆಲವು ದೂರ ಸಾಗಿ ಆಮೇಲೆ ಬೀಚ್ ಇಳಿದರೆ , ನಿಮಗೆ ಸಿಗುವ ಖುಷಿ ಕೊಂಚ ಜಾಸ್ತಿನೇ. ಬೀಚ್ ಇಳಿದಂತೆ ಕೆಲವು ಪುಟ್ಟ ಪುಟ್ಟ ಜಲಚರ ಜೀವಿಗಳೂ ನಿಮ್ಮನ್ನು ಸ್ವಾಗತಿಸುತ್ತದೆ. ಆದರೆ ಕೆಲವೊಂದು ಅಪಾಯಕಾರಿ. ಕೊಂಚ ಎಚ್ಚರವಿರಲಿ.

Hoode Beach Beaches of Udupi Karnataka Tourism Beach
ಚಿತ್ರ ಕೃಪೆ: ಷಣ್ಮುಖ ಅತ್ರಿ ಎಲ್

ತಲುಪುವ ಹಾದಿ

ಉಡುಪಿಯಿಂದ ಸಂತೆಕಟ್ಟೆ ಮಾರ್ಗವಾಗಿ ಕೆಮ್ಮಣ್ಣು ಹಾದಿಯಲಿ ನೀವು ಹೂಡೆ ಬೀಚ್ ತಲುಪಬಹುದು. ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ನೀವು ಹೂಡೆ ಬಸ್ ಹತ್ತಿದರೆ ಬೀಚ್ ತಲುಪಬಹುದು. ಬಸ್ಸಿನ ದರ ಕೇವಲ 25 ರೂ. ಕೆಲವೊಂದು ಬಸ್ ಬೀಚ್ ತನಕ ಹೋಗುತ್ತದೆ. ಕೆಲವೊಂದು ಹೋಗುವುದಿಲ್ಲ. ಆ ಸಮಯದಲ್ಲಿ ನೀವು ಬೀಚ್ ತಲುಪಬೇಕಾದರೆ 2-3 ಕಿಮೀ ನಡೆಯಬೇಕು

ಹ್ಯಾಂಗಿಂಗ್ ಬ್ರಿಡ್ಜ್ (hanging bridge)

ನೀವು ಹೂಡೆ ಹೋಗುವ ಮಾರ್ಗದಲ್ಲಿಯೇ ಇನ್ನೊಂದು ತಾಣ ನಿಮ್ಮನ್ನು ಆಕರ್ಷಿಸುತ್ತದೆ.ಅದುವೇ ಹ್ಯಾಂಗಿಂಗ್ ಬ್ರಿಡ್ಜ್ . ಹೂಡೆ ಬೀಚ್ ಗಿಂತ ಸ್ವಲ್ಪ ಹಿಂದೆ. ಹ್ಯಾಂಗಿಂಗ್ ಬ್ರಿಡ್ಜ್ ತಲುಪುವ ಹಾದಿ ಬಹು ಸೊಗಸು.

ಹಚ್ಚ ಹಸಿರಿನ ತಾಣದ ಮಧ್ಯೆ ಇರುವ ಸುಂದರ ಬ್ರಿಡ್ಜ್, ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ತಾಣ. ತೂಗು ಸೇತುವೆಯಲ್ಲಿ ನಡೆಯುತ್ತಾ ಸಾಗುತ್ತಿದ್ದಂತೆ ಸುತ್ತಲಿನ ಕಡಲು ನಿಮಗೆ ನಿರಾಳತೆ ಭಾವ ಮೂಡಿಸುತ್ತದೆ. ಮೊದಲ ಬಾರಿ ತೂಗು ಸೇತುವೆ ಮೇಲೆ ನಡೆಯುವರಿಗೆ ಕೊಂಚ ಭಯವಾಗಬಹುದು.

ನೀವುಇದನ್ನುಇಷ್ಟಪಡಬಹುದು: ಕೃಷ್ಣನೂರಿನ ಸುಂದರ ತಾಣಗಳಿವು. ನೀವೂ ಒಮ್ಮೆ ಭೇಟಿ ನೀಡಿ.

Hanging Bridge Beaches of Udupi Karnataka Tourism Beach
ಚಿತ್ರ ಕೃಪೆ: ಷಣ್ಮುಖ ಅತ್ರಿ ಎಲ್

ಇಲ್ಲಿ ನೀವು ಬೋಟಿಂಗ್ ಕೂಡ ಮಾಡಬಹುದು . ಒಬ್ಬರಿಗೆ 50 ರೂಪಾಯಿ.ಎಲ್ಲ ಮುನ್ನೆಚ್ಚರಿಕೆ ಯೊಂದಿಗೆ ಬೋಟಿಂಗ್ ಅವಕಾಶವಿದೆ. ನೀವೂ ಒಮ್ಮೆ ಪ್ರಯತ್ನಿಸಿ. ದಣಿದು ಬಂದವರು ಕರಾವಳಿಯ ಪ್ರಸಿದ್ಧ ಗೋಲಿ ಸೋಡಾ ಸವಿಯಬಹುದು. ಒಂದು ಗೋಲಿ ಸೋಡಾ ಗೆ 10 ರೂಪಾಯಿ.

ಕರಾವಳಿ ಮಂದಿಯ ನೆಚ್ಚಿನ ಕಲ್ಪರಸ ರುಚಿ ಕೂಡ ಸವಿಯಬಹುದು. ಹ್ಯಾಂಗಿಂಗ್ ಬ್ರಿಡ್ಜ್ ಸಮೀಪದ ಪುಟ್ಟ ಅಂಗಡಿಯಲ್ಲಿ ಕಲ್ಪರಸ ಲಭ್ಯ. ಲೀಟರ್ ಲೆಕ್ಕದಲ್ಲಿ ಮಾರುತ್ತಾರೆ. ಕಲ್ಪರಸ ಕುಡಿಯಲೆಂದೇ ಒಂದಷ್ಟು ಮಂದಿ ಇಲ್ಲಿಗೆ ಬರಲು ಕಾತುರರಾಗಿರುತ್ತಾರೆ.

ತಲುಪುವ ಹಾದಿ

ಉಡುಪಿಯಲ್ಲಿ ನೀವು ಹೂಡೆ ಹೋಗುವ ಬಸ್ ಹತ್ತಿದರೆ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಇಳಿಯಬಹುದು.

ಕೋಡಿ ಕಿನಾರೆ

ಕೋಡಿ ಕಿನಾರೆ ಕುಂದಾಪುರ ತಾಲೂಕಿನಲ್ಲಿದೆ. ಈ ಕಡಲ ತೀರ ಇತ್ತೀಚಿಗೆ ಹೆಚ್ಚು ಮುನ್ನಲೆಗೆ ಬರುತ್ತಿರುವ ಬೀಚ್. ಕೋಡಿ ಕಿನಾರೆ ತಲುಪುತ್ತಿದ್ದಂತೆ ನಿಮ್ಮನ್ನು ಐ ಲವ್ ಕೋಡಿ ಎನ್ನುವ ಫಲಕ ಸ್ವಾಗತಿಸುತ್ತದೆ.ಕುಂದಾಪುರ ಭಾಗದ ಕಾಲೇಜ್ ವಿದ್ಯಾರ್ಥಿಗಳ ನೆಚ್ಚಿನ ಜಾಗ.

ಕೋಡಿ ಕಿನಾರೆಯಲ್ಲಿ ಸೀವಾಕ್ ಕೂಡ ಇದೆ. ಇಳಿ ಸಂಜೆ ಹೊತ್ತಲ್ಲಿ
ಕಿಲೋ ಮೀಟರ್ ದೂರದ ಸೀವಾಕ್ ನಿಮ್ಮನ್ನು ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. 7.30ಗಂಟೆ ನಂತರ ಇಲ್ಲಿ ಸೀ ವಾಕ್ ಗೆ ಪ್ರವೇಶ ನಿಷಿದ್ಧ. ಭಾಸ್ಕರ
ಅಸ್ತಂಗತ ಆಗುವ ಸಮಯದಲ್ಲಿ ಇಲ್ಲಿ ಅಂಬರ ನೋಡುವುದೇ ಚೆಂದ.

Kodi Sea Walk Beaches of Udupi Kundapura I Love Kodi

ತಲುಪುವ ಹಾದಿ

ಕೋಟೇಶ್ವರ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಸಮೀಪದ ಹಾದಿಯಲ್ಲಿನ 5-6 ಕಿಮೀ ತಲುಪಿದರೆ ನೀವು ಬೀಚ್ ತಲುಪಬಹುದು. ಕುಂದಾಪುರದ ವಿನಾಯಕ ಟಾಕೀಸ್ ಪಕ್ಕದ ರಸ್ತೆಯಿಂದ ಕೂಡ ತಲುಪಬಹುದು.

ಮರವಂತೆ (maravante)

ಬಹುಶಃ ಈ ಹೆಸರನ್ನು ಕೇಳದವರೇ ಇಲ್ಲ. ಒಂದೆಡೆ ಸಮುದ್ರ ಇನ್ನೊಂದೆಡೆ ನದಿ. ಮಧ್ಯ ರಾಷ್ಟೀಯ ಹೆದ್ದಾರಿ. ಎಂತಹ ಅದ್ಭುತ. ನದಿ, ಸಮುದ್ರ ಹತ್ತಿರ ಬಂದರೂ ಸೇರದೆ ಇರುವ ಭೌಗೋಳಿಕ ತಾಣ . ಇಂತಹ ದೃಶ್ಯ ಬೇರೆಲ್ಲೂ ಕಾಣ ಸಿಗುವುದಿಲ್ಲ. ಕಡಲ ಸೊಬಗಿಗೆ ಕಳಶಪ್ರಾಯ.

ಕುಂದಾಪುರದ ಜನರ ಪವಿತ್ರ ಆಚರಣೆಯಾದ ಆಟಿ ಅಮಾವಾಸ್ಯೆಯ ದಿನ ಈ ಕಡಲಿನಲ್ಲಿ ವಿಶೇಷ ಧಾರ್ಮಿಕ ಆಚರಣೆ ನಡೆಯುತ್ತದೆ. ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಈ ಬೀಚ್ ಗೆ ಆ ದಿನ ಸಹಸ್ರಾರು ಜನ ಆಗಮಿಸುತ್ತಾರೆ. ಒಮ್ಮೆಯಾದರೂ ಮರವಂತೆಗೆ ಭೇಟಿ ನೀಡಿ. ಜೀವನದಲ್ಲಿ ಪ್ರಾದೇಶಿಕ ಸೊಬಗು ಹೆಚ್ಚು ಖುಷಿ ನೀಡುತ್ತದೆ ಎನ್ನುವ ಅರಿವು ನಿಮಗೆ ಮೂಡುತ್ತದೆ.

Maravante Beach Beaches of Udupi Kundapura National Highway

ತಲುಪುವ ಹಾದಿ

ನೀವು ಮರವಂತೆ ತಲುಪುವ ಹಾದಿ ಬಹು ಸುಲಭ. ಕುಂದಾಪುರದಿಂದ ಬೈಂದೂರು ಮಾರ್ಗವಾಗಿ ರಾಷ್ಟೀಯ ಹೆದ್ದಾರಿ ಯಲ್ಲಿ ಸಾಗಿದರೆ ಮರವಂತೆ ತಲುಪಬಹುದು.ಕುಂದಾಪುರದಿಂದ ಮರವಂತೆಗೆ 18-20 ಕಿಮೀ ದೂರ.

ಇವುಗಳು ಮಾತ್ರವಲ್ಲ ಕಡಲ ನಗರಿಯಲ್ಲಿ ನೀವು ಭೇಟಿ ನೀಡಬಹುದಾದ ಇನ್ನೂ ಸಾಕಷ್ಟು ಬೀಚ್ ಗಳಿವೆ, ಸುಂದರ ತಾಣಗಳಿವೆ. ಪ್ರತಿ ಕಡಲು ನಿಮ್ಮೊಳಗಿನ ಒಂದೊಂದೇ ಕಥೆ, ಪ್ರಶಾಂತತೆ, ಪ್ರಕ್ಷುಬ್ಧತೆಗೆ ಮೌನ ಸಾಕ್ಷಿ. ಸದ್ದಿಲ್ಲದೆ ತನ್ನ ಅಲೆಗಳ ಏರಿಳಿತದ ಮೂಲಕ ನಿಮ್ಮೊಳಗಿನ ಭಾವನೆಗಳ ಅಲೆದಾಟ ತಣಿಸಿ ಖುಷಿ ನೀಡುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button