ಆಹಾರ ವಿಹಾರನಮ್ ತಿಂಡಿ ರೆಸಿಪಿನಮ್ಮೂರ ತಿಂಡಿವಿಂಗಡಿಸದ

ತುಳುವರ ಮನೆ ಮನದ ತಿಂಡಿ ಈ ತೆಳ್ಳವ್ (ನೀರು ದೋಸೆ)

‘ನೀರು ದೋಸೆ’ ಕರಾವಳಿಗರ ಮೆಚ್ಚಿನ ತಿಂಡಿ. ದಿನವೂ ತಿಂದರೂ ಬೋರು ಹೊಡೆಸದ ತೆಳ್ಳನೆಯ ನೀರು ದೋಸೆ, ಚಟ್ನಿ ಅಥವಾ ಮೀನು ಸಾರಿನೊಂದಿಗೆ ಬೆಸ್ಟ್ ಕಾಂಬಿನೇಷನ್!

  • ಎ.ಬಿ. ಪಚ್ಚು

ತೆಳ್ಳವ್ ಅಂದ್ರೆ ತುಳು ಭಾಷೆಯಲ್ಲಿ ನೀರುದೋಸೆ. ಯಾಕೋ ಗೊತ್ತಿಲ್ಲ ತೆಳ್ಳವ್ ಎಂದರೆ ನಮಗೆ ಅದೊಂದು ಫೀಲಿಂಗ್, ಎಮೋಷನ್ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅದೊಂದು ತುಂಬಾನೇ ಸ್ಪೆಷಲ್ ಎನಿಸುವ ಲವ್.

Neer Dose

ಹೇಗೆ ಎಲ್ಲರಿಗೂ ಮನೆ ದೇವರು ಅಂತ ಒಂದು ಇರುತ್ತಾರೋ, ಹಾಗೆಯೇ ತುಳುನಾಡಿನಲ್ಲಿ “ಮನೆ ತಿಂಡಿ” ಅಂತ ಒಂದು ಇದ್ದರೆ ಅದು ಬಹುಶಃ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಈ ನೀರುದೋಸೆಯೇ ಆಗಿರುತ್ತದೆ.

ನಮ್ಮಲ್ಲಿ ನೀರ್ದೋಸೆ ಮಾಡದ ಮನೆಯೇ ಇಲ್ಲ.ನನ್ನಂತವರ  ಮನೆಯಲ್ಲಿ ತಿಂಡಿಗೆ ನಿತ್ಯವೂ ನೀರುದೋಸೆಯೇ. ಗಮ್ಮತ್ ಎಂತ ಗೊತ್ತುಂಟಾ… ಎಷ್ಟೇ ಸಲ ತಿಂದರೂ, ಹೇಗೆ ತಿಂದರೂ ನಮಗೆ ನಿರ್ದೋಸೆ ಎಂದಿಗೂ ಬೋರ್ ಹುಟ್ಟಿಸುವುದೇ ಇಲ್ಲ.. ಅದರ ಮೇಲಿನ ಪ್ರೀತಿ ಮತ್ತು ಅಭಿಮಾನ ಒಂದು ಚೂರು ಯಾವತ್ತೂ ಕಡಿಮೇ ಆದದ್ದೇ ಇಲ್ಲ.

ಬಹಳ ಸುಲಭವಾಗಿ ಮಾಡಬಹುದಾದ ಇದು ಒಂದು ಕಾಲದ  ಬಡವರ ಬಂಧು ಎಂದರೆ ತಪ್ಪಾಗಲಿಕ್ಕಿಲ್ಲ.ಅಕ್ಕಿ ಒಂದನ್ನು ಹೊರತು ಬೇರೆ ಯಾವ ಬೇಳೆ ಕಾಳುಗಳು ಕೂಡ ಇದು ಬಯಸುವುದಿಲ್ಲ.ನೀರುದೋಸೆ ಮಾಡುವುದು ಸುಲಭವೇ.. ಆದರೆ ಅನುಭವ ಇರದಿದ್ದರೆ ತೆಳ್ಳಗಿನ ನೀರುದೋಸೆ ಮಾಡುವುದು ಕೂಡ ಅಷ್ಟು ಸುಲಭದ ಮಾತೇ ಅಲ್ಲ. It demands Experience.

ವಿಷಯ ಎಂತ ಗೊತ್ತುಂಟಾ ನಮ್ಮಲ್ಲಿ ಲೇಡಿಸ್ ಗಿಂತ ಜಂಟ್ಸ್ ಕೂಡ ಬಹಳ ಚೆನ್ನಾಗಿಯೇ ನೀರುದೋಸೆ ಮಾಡುತ್ತಾರೆ. ನಮ್ಮ ಮನೆಯಲ್ಲಿ ಅಮ್ಮ ಇತರ ಕಾರ್ಯಗಳಲ್ಲಿ Busy ಆದಾಗ ಅಪ್ಪ ಬಹಳ ಇಷ್ಟಪಟ್ಟೇ ನೀರುದೋಸೆ ಮಾಡುತ್ತಾರೆ ಮತ್ತು ಅವರು ಮಾಡುವ ನೀರ್ದೋಸೆ ಎಂದಿಗೂ ಬಹಳ ಅಂದರೆ ಬಹಳನೇ ತೆಳ್ಳಗೆಯೇ ಇರುತ್ತದೆ..ಸ್ವತಃ ನೀರುದೋಸೆಯೇ ಬಹುವಾಗಿ ಮೆಚ್ಚುವಂತೆ.

ಇಷ್ಟು ಹೇಳಿದ ಮೇಲೆ ಈಗ ಒಂದೊಳ್ಳೆಯ ನೀರುದೋಸೆ ಮಾಡುವುದು ಕೂಡ  ಹೇಗೆ ಎಂದು ನೋಡುವ.ಮೊದಲಿಗೆ ಮಾಮೂಲಿ ವೈಟ್ ರೈಸ್ ಅನ್ನು ಒಂದು ನಾಲ್ಕು ಗಂಟೆ ಚೆನ್ನಾಗಿ ತೊಳೆದು ನೆನೆಸಿಡಿ.

ಆ ನಂತರ ಇದನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ನಿಮಗೆ ಇನ್ನಷ್ಟು ರುಚಿ ಬೇಕಾದರೆ ಸ್ವಲ್ಪ ತೆಂಗಿನತುರಿಯನ್ನು ಕೂಡ ಸೇರಿಸಿಕೊಳ್ಳಿ.ಸೇರಿಸದಿದ್ದರೆ ಕೂಡ ಏನೂ ಪ್ರಾಬ್ಲಂ ಇಲ್ಲ. ಅದು ನಿಮ್ಮಿಷ್ಟ.

ಮನೆಯಲ್ಲಿ ಕಡೆಯುವ ಕಲ್ಲು ಇದ್ದರೆ ನೀರುದೋಸೆಗೆ ರುಚಿ ಹೆಚ್ಚು. ಅದು ಇಲ್ಲದಿದ್ದರೆ ಮಿಕ್ಸರ್ ಕೂಡ ಆಗುತ್ತದೆ. ಒಟ್ಟಿನಲ್ಲಿ ಹಿಟ್ಟು ಮಾತ್ರ ತುಂಬಾನೇ ಫೈನ್ ಪೇಸ್ಟ್ ತರಹ ಆಗಬೇಕು.ಇಲ್ಲದಿದ್ದರೆ ನೀರುದೋಸೆ ಚೆನ್ನಾಗಿ ಬರುವುದಿಲ್ಲ.

ಈಗ ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಂಡು ನೀರುದೋಸೆ ಮಾಡುವ ಹದಕ್ಕೆ ನೀರು ಸೇರಿಸಿ. ನೋಡಿ ಇದೇ ಪ್ರಮುಖ ಘಟ್ಟ. ಇಲ್ಲಿ ಸೇರಿಸುವ ನೀರು ಜಾಸ್ತಿಯೂ ಆಗಬಾರದು, ಕಡಿಮೆ ಆಗಿ ಹಿಟ್ಟು ದಪ್ಪ ಕೂಡ ಆಗಿರಬಾರದು.

ನೀವುಇದನ್ನುಇಷ್ಟಪಡಬಹುದು: ತುಳುನಾಡಿನ ಬಹುಮುಖ್ಯ ಆಹಾರ ಕೋರಿರೊಟ್ಟಿ: ಎ.ಬಿ ಪಚ್ಚು ಬರೆದ ರುಚಿಕಟ್ಟು ಬರಹ #ಕೋರಿರೊಟ್ಟಿ_ಕತೆಗಳು

ಎಷ್ಟು ನೀರು ಸೇರಿಸಬೇಕೆಂದರೆ ಕಾವಲಿ ಮೇಲೆ ಹಿಟ್ಟು ಹೊಯ್ಯುವಾಗ ಅದು ಹಾಗೇ ಓಡಾಡಿಕೊಂಡಿರಬೇಕು.. ಅಷ್ಟು ನೀರು ಸೇರಿಸಿ. ಒಮ್ಮೇಲೆ ತುಂಬಾ ನೀರು ಮೊದಲಿಗೆಯೇ  ಹಾಕಬೇಡಿ. ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಚೆಕ್ ಮಾಡುತ್ತಾ ಹೋಗಿ. ಉಪ್ಪು ಕೂಡ ಒಮ್ಮೆ ಪರೀಕ್ಷಿಸಿ ನೋಡಿ. ಕಮ್ಮಿ ಇದ್ದರೆ ಸ್ವಲ್ಪ ಹಾಕಿ.ಯಾವತ್ತು ಕೂಡ ಜಾಸ್ತಿ ಉಪ್ಪು ಹಾಕಬೇಡಿ.. ಏಕೆಂದರೆ ಮುಂದೆ ಯಾವುದಾದರೂ ಪಲ್ಯ, ಚಟ್ನಿ, ಕರಿಯೊಂದಿಗೆ ಸೇವಿಸುವಾಗ ನೀರುದೋಸೆಯ ಉಪ್ಪು ಇನ್ನೂ ಹೆಚ್ಚಾಗಿ ಬಿಡುವುದು.

ಈಗ ಕಾವಲಿಯ ಮ್ಯಾಟರ್. ನೀವು ನಾನ್ ಸ್ಟಿಕ್ ತವಾದಲ್ಲಿಯೇ ಮಾಡುತ್ತೀರಿ ಎಂದಾದರೆ ಅದೂ ಕೂಡ ನೋ ಪ್ರಾಬ್ಲಂ. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿಯ ನೀರುದೋಸೆಯಂತೆ ನೀವು ನೀರುದೋಸೆ ಮಾಡಬೇಕಾದರೆ ನೀವು ಕಬ್ಬಿಣದ ಕಾವಲಿಯನ್ನೇ ಬಳಸಬೇಕಾಗುತ್ತದೆ. ಮಾರ್ಕೆಟ್ ನಲ್ಲಿ ಸಿಗ್ತದೆ.. ನೀರ್ದೋಸೆ ಕಾವಲಿ ಕೊಡಿ ಎಂದು ಕೇಳಿದರೆ ಕೊಡ್ತಾರೆ.

ಇನ್ನೊಂದು ವಿಷಯ… ಕಾವಲಿಯ ಟೆಂಪರೇಚರ್. ನೀವು ಮೊದಲಿನಿಂದ ಕೊನೆಯವರೆಗೂ ಕಾವಲಿಯಲ್ಲಿ ಒಂದೇ ಟೆಂಪರೇಚರ್ ಅನ್ನು ಮೈಂಟೇನ್ ಮಾಡಿದರೆ ನಿಮಗೆ ನಿರುದೋಸೆ ಬಹಳ ಸುಲಭವಾಗಿ ಎದ್ದು ಬರುತ್ತದೆ.

ನೀವು ಕಬ್ಬಿಣದ ಕಾವಲಿಗೆ ಎಳ್ಳೆಣ್ಣೆಯನ್ನು ಬಳಸಿದರೆ… ನೀರುದೋಸೆಗೆ ರುಚಿ ಹೆಚ್ಚು. ನಾನ್ ಸ್ಟಿಕ್ ತವಾದಲ್ಲಿ ಮಾಡುವುದಾದರೆ ಯಾವ ಎಣ್ಣೆ ಕೂಡ ಓಕೆ.ಬೇಕಾದರೆ ಅದಕ್ಕೆ ತೆಂಗಿನೆಣ್ಣೆಯನ್ನು ಬಳಸಿ.. ಚೆನ್ನಾಗಿರುತ್ತದೆ.ಎಣ್ಣೆ ಕಾವಲಿಗೆ ಸವರಲು ಬಾಳೆ ಎಲೆಯ ದಂಟನ್ನು ಬಳಸಿ. ಕಟ್ ಮಾಡಿದ ನೀರುಳ್ಳಿಯ ಭಾಗ, ತೆಂಗಿನಕಾಯಿಯ ಜುಟ್ಟು ಕೂಡ ಆಗುತ್ತದೆ.

ಕಾವಲಿ ಚೆನ್ನಾಗಿ ಕಾದ ನಂತರ ನೀರುದೋಸೆಯನ್ನು  ಚುಂಯ್ಯ್ ಎಂದು ಹೊಯ್ಯುವುದು ಕೂಡ ಒಂದು ಕಲೆಯೇ. ನೀರುದೋಸೆಯನ್ನು ಆದಷ್ಟು ತೆಳುವಾಗಿ ಹೊಯ್ಯಬೇಕು. ಒಮ್ಮೆ ಹಿಟ್ಟು ಹೊಯ್ದ ನಂತರ ಅದರ ಮೇಲೆ ಮತ್ತೊಮ್ಮೆ ಹಿಟ್ಟು ಹೊಯ್ಯಬಾರದು. ಇಲ್ಲದಿದ್ದರೆ ನೀರುದೋಸೆ ದಪ್ಪ ಆಗಿಬಿಡುವುದು. ನೀರುದೋಸೆ ಯಾವತ್ತೂ ತೆಳ್ಳಗೆ ಇದ್ದರೇನೇ ಅದು ಚಂದ ಹಾಗೂ ಅದು ನಾವು ಅದಕ್ಕೆ ನೀಡುವ ಮರ್ಯಾದೆ.

ತೆಳುವಾಗಿ ನೀರುದೋಸೆ ಮಾಡುತ್ತಾ ಹೋದರೆ ನಿಮಗೆ ಸ್ವಲ್ಪ ಹಿಟ್ಟಿನಲ್ಲಿಯೇ ಬೇಕಾದಷ್ಟು ನೀರು ದೋಸೆ ಮಾಡಬಹುದು.

ಇದನ್ನು ಒಂದೇ ಬದಿಗೆ ಕಾವಲಿಯಲ್ಲಿ ಕಾಯಿಸುವುದು. ತುಂಬಾ ತೆಳು ಇರುವ ಕಾರಣ ಎರಡು ಬದಿಯನ್ನು  ಕಾಯಿಸುವುದು ಬೇಕಾಗಿಲ್ಲ.ಇದನ್ನು ಮಡಚುವುದಕ್ಕೂ ಒಂದು ಕ್ರಮ ಇದೆ. ನೀವು ಹಾಗೇ ಇಡೀ ನೀರುದೋಸೆಯನ್ನೇ ಕಾವಲಿಯಿಂದ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಕಾವಲಿಯಲ್ಲಿಯೇ ಸೈಡಿನಿಂದ ನಡುವಿಗೆ ಅರ್ಧ  ಭಾಗವನ್ನು ಮೊದಲು ಮಡಚಿ, ನಂತರ ಆ ಅರ್ಧ ಭಾಗವನ್ನು ಮತ್ತೆ ಅರ್ಧ ಆಗುವಂತೆ ಅಂದರೆ ಕರ್ಚೀಪಿನಂತೆ ಮಡಚಿ ಸೌಟಿನಿಂದ ನೀವು  ತೆಗೆದುಕೊಳ್ಳಬಹುದು.

ಒಂದು ಅಗಲ ಬಾಯಿಯ ಪಾತ್ರೆಯಲ್ಲಿ ಇಲ್ಲವೇ ಹರಿವಾಣದಲ್ಲಿ ಅಥವಾ ಬಾಣಲೆಯಲ್ಲಿ ಮಡಚಿಟ್ಟ ನೀರುದೋಸೆಗಳನ್ನು ಸುತ್ತಲೂ ಜೋಡಿಸಿಡುತ್ತಾ ಹೋದರೆ ಅದು ನೋಡಲು ಕೂಡ ತುಂಬಾ ಚಂದವೇ.

ಈ ನೀರುದೋಸೆ ಉಂಟಲ್ಲಾ… ಎಲ್ಲಾ ರೀತಿ ಆಹಾರಿಗಳ ಬಹಳ ದೊಡ್ಡ ದೋಸ್ತಿ. ಸಸ್ಯಾಹಾರಿಗಳಿಗೆ, ಮತ್ಸ್ಯಾಹಾರಿಗಳಿಗೆ,ಕುಕ್ಕುಟಾಹಾರಿಗಳಿಗೆ, ಮೊಟ್ಟೆಹಾರಿಗಳಿಗೆ ಎಲ್ಲರಿಗೂ ನೀರು ದೋಸೆಯ ಮೇಲೆ ಬಹಳ ಅಂದರೆ ಬಹಳನೇ ಪ್ರೀತಿ.

ನಾನ್ ವೆಜ್ ಪ್ರೀಯರಿಗೆ ಕೋರಿ ಸುಕ್ಕ, ಬಂಗುಡೆ ಪುಳಿಮುಂಚಿ, ಮೊಟ್ಟೆ ಕರಿಯಂತಹ ವೆರೈಟಿ ಇದ್ದರೆ, ಶುದ್ಧ ಸಸ್ಯಾಹಾರಿಗಳಿಗೆ ಕೂಡ ನೀರ್ದೋಸೆ ಎಂದಿಗೂ ಮೋಸ ಮಾಡಿಲ್ಲ. ಇದನ್ನು ಹಾಗೇ ಸಕ್ಕರೆ ಹಾಕಿಕೊಂಡು ತಿನ್ನಬಹುದು. ಖಾರದ ಉಪ್ಪಿನಕಾಯಿ ಜೊತೆ ಮುರಿಯಬಹುದು.

ಬಿಸಿ ಬಿಸಿ ಸಾಂಬಾರ್ ಗೆ ಕೂಡ ಓಕೆ. ಬೆಲ್ಲ ಕಾಯಿ ಜೊತೆಗೆ ನೆಂಚಿಕೊಂಡು ಸುಖವಾಗಿ ತಿನ್ನಬಹುದು. ತೆಂಗಿನಕಾಯಿ ಚಟ್ನಿ ಅಂತು  ಸೂಪರ್. ರಸಾಯನ ಹಾಗೂ ತೆಂಗಿನ ಸಿಹಿಹಾಲು…ಆಹಾ…ಬಾಯಿ ಚಪ್ಪರಿಸಿಕೊಂಡು ತಿನ್ನಬಹುದಾದ ಕಾಂಬಿನೇಶನ್ ಅಂದರೆ ಅದುವೇ.

ನಮ್ಮ ಮನೆಯಲ್ಲಿ ಒಂದು ಮುಂಜಾನೆ ಹೆಚ್ಚಾಗಿ ಅರಳುವುದೇ ನೀರುದೋಸೆಯ ಚುಂಯ್ಯ್ ಸದ್ದಿನೊಂದಿಗೆಯೇ.ಹಿಂದೆ ಅಪ್ಪ ಅಡುಗೆ ಮನೆಯಲ್ಲಿ ಸೌಟು ಹಿಡಿಯುತ್ತಿದ್ದರು.

ಈಗ ಅದರೆಡೆಗೆ ನನ್ನ ಒಲವು ಹೆಚ್ಚಾಗಿದೆ. ಹಾಗಾಗಿ ಶ್ರದ್ಧೆಯಿಂದ ನಾನೂ ಕೂಡ ಈಗ ತೆಳ್ಳವ್ ಮಾಡುವುದರ ಮೇಲಿನ ನನ್ನ ಲವ್ ಅನ್ನು ಹೆಚ್ಚಿಸಿಕೊಂಡಿದ್ದೇನೆ. ಎಣ್ಣೆ ಸವರಿದ ಬಿಸಿ ಕಾವಲಿ, ತೆಳುವಾದ ಹಿಟ್ಟು, ಹಿತ ಎನಿಸುವ ಆ ಚುಂಯ್ಯ್ ಸದ್ದು.. ಒಂದರ ನಂತರ ಒಂದು ತೆಳ್ಳವ್..ಶ್ರದ್ಧೆಯಿಂದ ಮಾಡಿ ಮಾಡಿ  ಪಕ್ಕದಲ್ಲಿಯೇ ನಾನು ಅಟ್ಟಿ ಹಾಕುತ್ತಿದ್ದೇನೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button