ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ವೆನಿಸ್ ಗೆ ಹೋದ ಕತೆ ಹೇಳುವೆ ಕೇಳಿ: ಶ್ರೀಕೃಷ್ಣ ಕುಳಾಯಿ ಬರೆಯುವ ವಿಶ್ವ ಪರ್ಯಟನೆ ಭಾಗ 2

ಮಧ್ಯಯುಗದ ಬೀದಿಗಳಲ್ಲಿ, ಕಳೆದು ಹೋದ ಇತಿಹಾಸ ಹುಡುಕುತ್ತ, ಕಟ್ಟಡಗಳ  ವಿನ್ಯಾಸ, ಗೊಂಡೋಲಾ…. ಹೀಗೆ ಹತ್ತು ಹಲವು ವಿಚಾರಗಳಿಂದ ಆಪ್ತವಾಗುವ ತೇಲುವ ನಗರ ವೆನಿಸ್ ಪ್ರವಾಸ ಕಥನ

ಮಧ್ಯಯುಗದ ನೆನಪು ಹೊತ್ತ ತೇಲುವ ನಗರ ವೆನಿಸ್. ಇಟಲಿಗೆ ಹೋದರೆ ನೋಡಬಹುದಾದ ಮುಖ್ಯ ಸ್ಥಳ ವೆನಿಸ್. ಊರಿಡೀ ನೀರು, ದ್ವೀಪ ಸಮೂಹ, ನೀರಲ್ಲಿ ತೇಲಿದಂತೆ ಕಾಣುವ ಮನೆಗಳು, ದೋಣಿಯಲ್ಲಿ ಸಾಗಾಟ, ಚಂದನೆಯ ಬಣ್ಣ ಬಣ್ಣ ಕಟ್ಟಡದ ಕಟ್ಟಡಗಳು.. ಇಟಾಲಿಯನ್ ಜಾಬ್  ಸಿನಿಮಾ ನೆನಪಾಯಿತು…

ನಾವು ಬೆಳಗ್ಗೆ ಮೇಸ್ಟ್ರೆ ಯಿಂದ ಬಸ್ ಮೂಲಕ ಹೊರಟು, ವೆನಿಸ್ ನಗರ ತಲುಪಲು 20 ನಿಮಿಷ ತೆಗೆದುಕೊಂಡಿದ್ದು. ವೆನಿಸ್ ಬಹಳಷ್ಟು ದ್ವೀಪಗಳ ಸಮೂಹ. ವೆನಿಸ್ ಹೊರ ಭಾಗದಲ್ಲಿ ರುವ ಊರಿಗೆ ಮೇಸ್ಟ್ರೆ ಎನ್ನುವ ಹೆಸರು. ವೆನಿಸ್ ನಗರವಿಡೀ ನೀರಿನಿಂದ ಸುತ್ತುವರಿದ್ದು. ರಸ್ತೆಗಳಿರುವಂತೆ ಎಲ್ಲೆಡೆ ನೀರಿನ ಕಾಲುವೆಗಳಿವೆ. ಎಲ್ಲೆಡೆ ಬೋಟ್, ದೋಣಿಗಳ ಓಡಾಟ. ವಾಟರ್ ಟ್ಯಾಕ್ಸಿ ಇಲ್ಲಿದೆ. ನಾವು ನಗರವನ್ನು ನಡೆಯುತ್ತ ನೋಡಿ ಬಿಡೋಣ ಎಂದು ಕೊಂಡು, ಮ್ಯಾಪ್ ಹಿಡಿದು ಹೊರಟೆವು. ಒಂದು ದ್ವೀಪದಿಂದ, ಮತ್ತೊಂದು ದ್ವೀಪಕ್ಕೆ ಸಣ್ಣ ಕಾಲು ದಾರಿಯ ಮೂಲಕ ನಡೆದು ಸಾಗುತ್ತ ಕೊನೆಯ ದ್ವೀಪ ತಲುಪಬಹುದು. 

ಹೆಜ್ಜೆಯಿಡುತ್ತ ಹೋದಂತೆ, ಸಿಗುವ ಚರ್ಚ್ ಗಳು  ವಿವಿಧ ವಿನ್ಯಾಸದ ಬಂಗಲೆಗಳು, ರೆಸ್ಟೋರೆಂಟ್ ಗಳು. ಕಟ್ಟಡಗಳ ನಡುವೆ ಹೋದಂತೆ ಎಲ್ಲೋ ಮಧ್ಯ ಯುಗದಲ್ಲಿ ಇದ್ದೇವೆಯೋ ಅನಿಸುತ್ತದೆ. ವೆನಿಸ್ ನಲ್ಲಿ ಎಲ್ಲರೂ ಹೇಳುವಂತೆ ಸಣ್ಣ ರಸ್ತೆಯ ನಡುವೆ ಕಳೆದುಬಿಡಬಹುದಾದ ಚಂದನೆಯ ಅನುಭವ ಎಂದು. 

ಸೇಯಿಂಟ್ ಮಾರ್ಕ್ ಸ್ಕ್ವೇರ್  

ಮೊದಲು ಹೋಗಿದ್ದು ಸೇಯಿಂಟ್   ಮಾರ್ಕ್  ಸ್ಕ್ವೇರ್ (ಪಿಯಾಝ್ಯೇ  ಸ್ಯಾನ್  ಮಾರ್ಕೋ ). ಒಂದೆಡೆ ಇಲ್ಲಿನ ಶಕ್ತಿ ಕೇಂದ್ರವಾಗಿದ್ದ ಡಾಡ್ಜ್ ಅರಮನೆ ಮತ್ತು ಸೇಯಿಂಟ್ ಮಾರ್ಕ್ ಬೆಸಿಲಿಕಾ.. ಬಹಳಷ್ಟು ಕೆಫೆಗಳು, ರೆಸ್ಟೋರೆಂಟ್ ಗಳು, ಮುಖವಾಡಗಳ ಸಾಲುಗಳನ್ನು ಹೊತ್ತ ಅಂಗಡಿಗಳು. ಪಕ್ಕದಲ್ಲಿ ಹಾದು ಬರುವ ಒಂದಷ್ಟು ಗೊಂಡೋಲಾ ಎಂದು ಕರೆಯಲ್ಪಡುವ ಇಲ್ಲಿನ ಬೋಟ್ ಗಳು. 

ಆಮೇಲೆ ಇಲ್ಲಿನ ಇತಿಹಾಸದ ಒಂದು ವಾಕಿಂಗ್ ಟೂರ್ ಶುರುವಾಯಿತು. ಚಂದನೆಯ ಯೂರೋಪಿಯನ್ ತರುಣಿ ನಗುತ್ತ ಪರಿಚಯಿಸಿಕೊಂಡು ನಮ್ಮನ್ನು ಸ್ವಾಗತಿಸಿದಳು. ಒಳಗೊಳಗೇ ಕಳ್ಳ ನಗುವಿನ ಮನಸ್ಸು. ನಮ್ಮ ತಂಡದಲ್ಲಿ 12 ಜನ ಇದ್ದರು. ನಿಧಾನವಾಗಿ ವೆನಿಸ್ ನ ಇತಿಹಾಸದ ಬಗ್ಗೆ ಹೇಳುತ್ತಾ ಒಂದೊಂದಾಗಿ ಇಲ್ಲಿನ ಸ್ಕ್ವೇರ್ ಗಳನ್ನೂ, ಕಟ್ಟಡಗಳನ್ನು, ಅರಮನೆಗಳನ್ನು, ತೇಲುವ ನಗರದ ಹಿಂದಿದ್ದ ವೈಭವವನ್ನು ಹೇಳುತ್ತಾ ಹೋದಳು.

ನೀವು ಇದನ್ನು ಇಷ್ಟಪಡಬಹುದು: ಇಟಲಿ ತೋರಿಸ್ತೀನಿ ಬನ್ನಿ: ಶ್ರೀಕೃಷ್ಣ ಕುಳಾಯಿ ಬರೆಯುವ ವಿಶ್ವ ಪರ್ಯಟನೆ ಸರಣಿ ಭಾಗ 1

ವೆನಿಸ್ ಇತಿಹಾಸ 

ವೆನಿಸ್ ನ್ನು ಮೇನ್ ಲ್ಯಾಂಡ್ ಮತ್ತು ಲಗೂನ್ ಎಂದು ಎರಡು ಮುಖ್ಯ ಭಾಗ ಮಾಡಲಾಗಿದೆ. ಮೇನ್ ಲ್ಯಾಂಡ್ ನಲ್ಲಿ ನಾಲ್ಕು ಭಾಗ ಇದ್ದು. ಹೊರಭಾಗದಲ್ಲಿರುವ ದ್ವೀಪ ಭಾಗವನ್ನು ಎರಡು ಭಾಗವಾಗಿ ವಿಭಾಗಿಸಲಾಗಿದೆ. ಇಲ್ಲಿ ಸುಮಾರು 118 ಪುಟ್ಟ ದ್ವೀಪ ಸಮೂಹಗಳು, ಸಣ್ಣ ಸಣ್ಣ ಸೇತುವೆಗಳಿಂದ ಸೇರಿಸಲ್ಪಟ್ಟಿದೆ. ಒಂದಕ್ಕಿಂತ ಒಂದು ಸೇತುವೆ ಚಂದ. ಹಿಂದೆ ಸುಮಾರು 7ನೆಯ ಶತಮಾನದಿಂದ ಇಲ್ಲಿ ಗಣರಾಜ್ಯ ಆಡಳಿತ ಶುರುವಾಗಿ, ಇಲ್ಲಿನ ಆಡಳಿತಾಧಿಕಾರಿಯನ್ನು ಡಾಡ್ಜ್ ಎಂದು ಕರೆಯುತಿದ್ದರು. ಡಾಡ್ಜ್ ಜೀವನಪರ್ಯಂತ ಅಧಿಕಾರದಲ್ಲಿದ್ದರು. 

ಹಂತ ಹಂತವಾಗಿ ವೆನಿಸ್ ಬೆಳೆಯುತ್ತ ಮಧ್ಯ ಯುಗದಲ್ಲಿ ವ್ಯಾಪಾರದಲ್ಲಿ ನಗರದ ಸಂಪತ್ತು ಬಹಳ ಬೆಳೆಯುತ್ತ ಹೋಯಿತು. ಯುರೋಪ್ ಮತ್ತು ಪೂರ್ವ ಜಗತ್ತಿನ ಭಾಗಗಳಿಗೆ ಇದು ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು. ಮಸಾಲೆ ಪದಾರ್ಥಗಳ ವ್ಯಾಪಾರ ವಹಿವಾಟು, ಎಲ್ಲೆಡೆಯಿಂದ ಬರುವ ಹಡಗಗಳು.. ರೋಮನ್ ಸಾಮ್ರಾಜ್ಯದ ಸಿರಿವಂತ ನಗರ ಇದಾಗಿತ್ತು. ಈಗಿನ ಟರ್ಕಿಯ ರಾಜಧಾನಿ ಇಸ್ತಾಂಬುಲ್ (ಹಿಂದೆ ಕರೆಯಲ್ಪಡುತ್ತಿದ್ದ) ಕೊನ್ಸ್ಟಾಟಿನೋಪಲ್ ತರ್ಕರ ವಶವಾಗುವುದೊಂದಿಗೆ ಅನಂತರ ಭಾರತಕ್ಕೆ ಹೊಸ ಜಲ ಮಾರ್ಗ ಕಂಡು ಹಿಡಿಯುವುದರೊಂದಿಗೆ ಜಗತ್ತಿನ ಮಾರುಕಟ್ಟೆಯ ಮೇಲೆ ವೆನಿಸ್ ಇದ್ದ ಹಿಡಿತ ಸಡಿಲವಾಗುತ್ತ ಬಂತು. ಒಂದು ಕಾಲದಲ್ಲಿ ಪ್ರವಾಸಿಗರಿಂದ, ವ್ಯಾಪಾರ ವಹಿವಾಟಿನಿಂದ ಕಿಕ್ಕಿರಿದ ನಗರ,ಹಂತ ಹಂತವಾಗಿ ಖಾಲಿಯಾಗುತ್ತ, ಕೆಲವೊಂದು ಭಾಗ ಪಾಳು ಬೀಳುತ್ತಾ ಬಂತು. ಪಕ್ಕದ ಆಸ್ಟ್ರಿಯಾದಿಂದ ದಾಳಿ ಬೇರೆ. ಕೊನೆಗೆ ನೆಪೋಲಿಯನ್ ದಾಳಿಯ ಸಮಯದಲ್ಲಿ ಕೊನೆಯ ಡಾಡ್ಜ್ ಆಡಳಿತ ಕೊನೆಗೊಂಡು, ಮುಂದೆ ಇಟಲಿ ದೇಶದ ಭಾಗವಾಯಿತು.

ಆಮೇಲೆ ಇಲ್ಲಿನ ಕಟ್ಟಡಗಳ ನವೀಕರಣ ಆಗಿ, ಈಗ ಮುಖ್ಯ ಪ್ರವಾಸಿ ತಾಣವಾಗಿದೆ.  

ಗೊಂಡೋಲಾ ರೈಡ್

ಹಿಂದೆ ವಿಶಿಷ್ಟವಾಗಿ ಸಿರಿವಂತರು ಪಯಣಿಸುತ್ತಿದ್ದ ಗೊಂಡೋಲಾ ಎಂದು ಕರೆಯಲ್ಪಡುವ ದೋಣಿಗಳಲ್ಲಿ ನಾವು ಕೂತು ಸುಂದರ ವಿಹಂಗಮ ನೋಟ. ದೋಣಿ ನಡೆಸುವವನು ನಿಂತುಕೊಂಡು ದೋಣಿ ನಡೆಸುತ್ತಿದ್ದಾರೆ, ವೆನಿಸ್ ನ ಮನೆಗಳ ನಡುವೆ, ಸಣ್ಣ ಕಿರಿದಾದ ಕಾಲುವೆಗಳ ಓಣಿಗಳಲ್ಲಿ ನಮ್ಮ ಓಡಾಟ. ಮುಖ್ಯವಾಗಿ ಕಾಣುವ ಗ್ರಾಂಡ್ ಕೆನಾಲ್, ಸುಂದರ ನೋಟ….ಗ್ರಾಂಡ್ ಕೆನಾಲ್ ನ ಸವಿ ನೋಟ ಸವಿದು, ಪುನಃ ಮರಳಿದ್ದು ಸೇಯಿಂಟ್ ಮಾರ್ಕ್ ಬೆಸಿಲಿಕಾಕ್ಕೆ.

ಸೇಯಿಂಟ್ ಮಾರ್ಕ್ ಬೆಸಿಲಿಕಾ

ಹನ್ನೊಂದನೆಯ ಶತಮಾನದಲ್ಲಿ ಕಟ್ಟಿಸಲ್ಪಟ್ಟ ಕಟ್ಟಡ, ಮಧ್ಯಯುಗಲ್ಲಿ ಗೋಥಿಕ್ ಶೈಲಿಯಲ್ಲಿ ಎರಕ ಹೊಯ್ದು ಪ್ರತಿಷ್ಠೆ ಹೆಚ್ಚಿಸಿದ ಸುಂದರ ಕ್ಯಾಥೆಡ್ರೆಲ್. ರೋಮನ್ ಯುಗದ ಚರ್ಚ್. ಒಳ ಭಾಗದಲ್ಲಿ ಮಧ್ಯಯುಗದ ಸುಂದರ ಚಿತ್ರಗಳನ್ನು, ಮೇಲ್ಭಾಗದ ಛಾವಣಿಯಲ್ಲಿ ಉತ್ತಮ ವಿನ್ಯಾಸವನ್ನು ನೋಡಬಹುದು. ಬಹಳ ಬಂಗಾರ ಉಪಯೋಗಿಸಲಾಗಿದೆ. ಸ್ವಲ್ಪ ದುಡ್ಡು ಕೊಟ್ಟು ಇನ್ನೊಂದು ಟಿಕೆಟ್ ಕೊಂಡರೆ, ಚರ್ಚ್ ನ ಆಭರಣಗಳನ್ನೂ, ಸಾಂಪ್ರದಾಯಿಕ ಚಿನ್ನದ ಕಿರೀಟಗಳನ್ನು ನೋಡಬಹುದು. ಬಹಳ ಚಿನ್ನ ಉಪಯೋಗಿಸಲಾದ ಕಾರಣ ಚಿನ್ನದ ಚರ್ಚ್ ಎಂದು ಕರೆಯುತಿದ್ದರು.. 

ಹಿಂದೆ ಕಾಂಸ್ಟ್ಯಾಂಟಿನೋಪಲ್ ನಿಂದ ವಶ ಪಡಿಸಿಕೊಂಡ ನಾಲ್ಕು ಕುದುರೆಗಳ ಭವ್ಯ ಲೋಹದ ಮೂರ್ತಿಯನ್ನು ಗತಕಾಲದ ವಿಜಯದ ಸಂಕೇತವಾಗಿ ಈಗಲೂ ಸಂತ ಪೀಟರ್ ಬೆಸಿಲಿಕಾ ಒಳ ಭಾಗದಲ್ಲಿ ಕಾಣಬಹುದು. ಅದರ ಪ್ರತಿಕೃತಿ ಹೊರ ಭಾಗದ ಛಾವಣಿಯಲ್ಲಿ ಕಾಣಬಹುದು. ಹೊರಭಾಗದ ಮಹಡಿ ಹತ್ತಿದರೆ ಸುಂದರ  ಸ್ಕ್ವೇರ್ ನೋಟ. ಹಿಂದೆ ನಡಿಯುತಿದ್ದ ವೈಭವೋಪೇತ ಉತ್ಸವಗಳಿಗೆ, ಕಾರ್ನಿವಾಲ್ ಗಳಿಗೆ ಸಾಕ್ಷಿಯಾಗಿದ್ದ ಸ್ಕ್ವೇರ್, ಪಕ್ಕದಲ್ಲಿ ಡಾಡ್ಜ್ ಅರಮನೆಯ ನೋಟ, ಮತ್ತೊಂದೆಡೆ ಇದಕ್ಕೆಲ್ಲ ಸಾಕ್ಷಿಯಾದ ಸಮುದ್ರವನ್ನು ಕಾಣಬಹುದು. 

ಡಾಡ್ಜ್ ಅರಮನೆ

ವೆನಿಸ್ ಗಣರಾಜ್ಯದ ಶಕ್ತಿಕೇಂದ್ರವಾಗಿದ್ದ ಕಟ್ಟಡ. 12ನೇ ಶತಮಾನದಿಂದ ಕಟ್ಟಿಸಲ್ಪಟ್ಟ ಕಟ್ಟಡವಾಗಿದ್ದರೂ, ಬಹಳ ಮಾರ್ಪಾಟು ಆಮೇಲೆ ಆಗಿದೆ. ಇದರೊಳಗೆ ನಾವು ಪ್ಯಾಲೇಸ್ ಟೂರ್ ತೆಗೆದುಕೊಂಡಿದ್ದೆವು. ಗೈಡ್ ಇಲ್ಲಿನ ಕಥಾನಕಗಳನ್ನು ಹೇಳುತ್ತಿದ್ದಳು. ಹೊರಭಾಗದಲ್ಲಿ ಸುಂದರ ಛಾವಣಿ ಉಳ್ಳ ಬಾಲ್ಕನಿ ಹೊಂದಿದ್ದು, ವೆನಿಸ್ ವ್ಯಾಪಾರ ವಹಿವಾಟಿನ ವೈಭವಕ್ಕೆ, ಆಡಳಿತಾಧಿಕಾರಿಗಳ ವಿಲಾಸಕ್ಕೆ ಸಾಕ್ಷಿ ಆಗಿದೆ. ಈಗ ಸುಂದರ ವಸ್ತು ಸಂಗ್ರಹಾಲಯ ಆಗಿದೆ. ಒಳ ಹೋದಂತೆ ದೊಡ್ಡ ಹಾಲ್ ಗಳು, ಚಿತ್ತಾರಗಳು, ಸುಂದರವಾದ ಪೇಂಟಿಂಗ್ ಗಳು ಹೊಂದಿವೆ. ಡಾಡ್ಜ್ ನ ಆಫೀಸ್ ಬಹಳ ಸುಂದರ ಸಭಾಂಗಣ. ಹಿಂದೆ ಎಲ್ಲ ಮುಖ್ಯ ಪತ್ರಗಳು ಇಲ್ಲಿ ಇದ್ದವು. ಬಹಳಷ್ಟು ಕಪಾಟುಗಳು ಇವೆ. ಒಂದಕ್ಕಿಂತ ಒಂದು ಚೆನ್ನಾಗಿರುವ ಚಿತ್ರಗಳ ಪ್ರದರ್ಶನ.

ಡಾಡ್ಜ್ ಗಳಾಗಿದ್ದವರ ಖಾಸಗಿ ನಿವಾಸಗಳು, ಪುಟ್ಟ ಅರಮನೆಗಳು ಸಹ ಸಾಕಷ್ಟಿವೆ. ಕೆಲವೊಂದು ಹೋಟೆಲ್ ಗಳಾಗಿವೆ.

ಕ್ಯಾಸನೋವಾ: ಡಾಡ್ಜ್ ಪ್ಯಾಲೇಸ್ ನಿಂದ ಎಸ್ಕೇಪ್

ಕ್ಯಾಸನೋವಾ ಎನ್ನುವ ಕಥಾನಾಯಕ ವೆನಿಸ್ ನ ಪ್ರಸಿದ್ಧ ಮಾತುಗಾರ, ಸಾಹಸಪ್ರಿಯ, ಪ್ರವಾಸಿಗ. 18ನೇ ಶತಮಾನದಲ್ಲಿ ವೆನಿಸ್ ನಲ್ಲಿ ಬದುಕಿ ಬಾಳಿದ ಈತ, ತನ್ನ ಆತ್ಮಕಥೆಯನ್ನು ಪುಸ್ತಕ ರೂಪದಲ್ಲಿ ಬರೆದ್ದಾನೆ. ಅವನ ಆತ್ಮಕಥೆ, ಆ ಕಾಲದ ವಿವರಗಳನ್ನು ತಿಳಿದುಕೊಳ್ಳಲು ಬಹಳ ಸಹಕಾರಿಯಾಗಿದೆ.

ಕ್ಯಾಸನೋವಾ  ಇಲ್ಲಿನ ಜಮೀನ್ದಾರ ಮನೆತನದವನು. ವಿಲಾಸಿ ವ್ಯಕ್ತಿಯಾಗಿದ್ದ. ದೊಡ್ಡ ಜೂಜುಗಾರನಾಗಿದ್ದ. ವಕೀಲನಾಗಿದ್ದ. ಬಹಳಷ್ಟು ದೇಶಗಳನ್ನು ಸುತ್ತಾಡಿದ್ದ. ಅವನು ಆ ಕಾಲದಲ್ಲಿ ಬಹಳ ಪ್ರಸಿದ್ದಿ ಹೊಂದಿದ್ದು ಬಹಳಷ್ಟು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಕ್ಕೆ. ಇವನ ವ್ಯಕ್ತಿತ್ವಕ್ಕೆ ಮಹಿಳೆಯರು ಆಕರ್ಷಿತರಾಗಿದ್ದರು. ಇವನ ಮೇಲೆ ಬಹಳಷ್ಟು ಜನ ದ್ವೇಷ ಹೊಂದಿ, ಇದೆ ಡಾಡ್ಜ್ ಅರಮನೆಯಲ್ಲಿ ಬಂಧಿಸಿ ಇಡಲಾಯಿತಂತೆ. ನಮ್ಮ ಗೈಡ್ ಆ ಜಾಗವನ್ನು ತೋರಿಸಿ, ಇಲ್ಲಿ ಅವನನ್ನು ಕೂಡಿ ಹಾಕಲಾಯಿತು. ಬಹಳ ಬಾರಿ ತಪ್ಪಿಸಿಕೊಳ್ಳಲು, ಪ್ರಯತ್ನಿಸಿ, ಕೊನೆಗೆ ಯಶಸ್ವಿಯಾದ. ಅವನು ತಪ್ಪಿಸಿಕೊಂಡದ್ದು ಸಹ ಅಷ್ಟೇ ಕುತೂಹಲಕರ, ಮುಂಬಾಗಿಲನ್ನು ತಲುಪಿ ಬಚ್ಚಿಟ್ಟುಕೊಂಡು, ಬೆಳಗ್ಗೆ ಅರಮನೆಯ ದ್ವಾರ ತೆರೆದಾಗ, ಮಾಮೂಲಿ ಭೇಟಿಗೆ ಬಂದ ವ್ಯಕ್ತಿಯಂತೆ ಹೊರ ಬಂದು, ಊರು ಬಿಟ್ಟು ಓಡಿ ಹೋದ. ಅಷ್ಟು ದೊಡ್ಡ ವ್ಯವಸ್ಥೆ ಇದ್ದರೂ, ಅವನು ತಪ್ಪಿಸಿಕೊಂಡದ್ದು ಯುರೋಪ್ ಇಡೀ ಸುದ್ದಿ ಹರಡಿ, ಬಹಳ ಪ್ರಸಿದ್ಧ ವ್ಯಕ್ತಿ ಆದ. ಕೊನೆಗೆ ಎಷ್ಟೋ ವಸರಹಗಳ ಮೇಲೆ ವೆನಿಸ್ ಗೆ ವಾಪಾಸ್ ಬಂದ. ಇವನ ಬಗ್ಗೆ ಸಿನಿಮಾ ಸಹ ಮಾಡಲಾಗಿದೆ.

ಡಾಡ್ಜ್ ಅರಮನೆಯಲ್ಲಿ ಗೈಡ್ ರಸವತ್ತಾಗಿ ಇವನು ಎಸ್ಕೇಪ್ ಆದ ಜಾಗವನ್ನು ವಿವರಿಸುತ್ತಾ ಹೋದಾಗ ನಮ್ಗಲ್ಲ ಥ್ರಿಲ್ ಅನುಭವ.

ವೆನಿಸ್ ಕಾರ್ನಿವಾಲ್.. ವೆನಿಸ್ ಮಾಸ್ಕ್

ಇಲ್ಲಿ ಹಿಂದೆ ಪ್ಲೇಗ್ ನಂತಹ ಕಾಯಿಲೆಗಳು ಬಂದು, ಇಡೀ ನಗರ ನಲುಗಿ ಹೋಗಿತ್ತು. ಆ ಸಮಯದಲ್ಲಿ ವೈದ್ಯರು ಮರದ ಮುಖವಾಡ ಧರಿಸಿ ಬಂದು ಮದ್ದು ಕೊಡುತಿದ್ದರು. ಉದ್ದನೆಯ ಮೂಗು ಇದ್ದ ವಿಚಿತ್ರ ಮುಖವಾಡ. ಆಮೇಲೆ ಜನ ಸಹ ನಿಧಾನವಾಗಿ ಮುಖವಾಡ ಧರಿಸತೊಡಗಿದರು. ಕಾಯಿಲೆ ಮುಗಿದ ಮೇಲೆ ಸಂಭ್ರಮಾಚರಣೆಯ ಕಾರ್ನಿವಲ್ ಸಮಯದಲ್ಲಿ ಮುಖವಾಡಗಳನ್ನು ಧರಿಸಿ ಜನ ಸಂಭ್ರಮಿಸಿದರು. ಹೀಗೆ ವೆನಿಸ್ ನ ಮುಖವಾಡ ಪ್ರಸಿದ್ದಿ ಬಂತು. ಮುಖವಾಡಗಳ ರಾಶಿ ಯ ಅಂಗಡಿಗಳು.. ನಾವು ನೆನಪಿಗೆಂದು ಎರಡು ಮುಖವಾಡ ಕೊಂಡುಕೊಂಡೆವು. 

ಮಾರ್ಕೋ ಪೋಲೊ 

ಜಗತ್ತಿನ  ಪ್ರಸಿದ್ಧ ಅನ್ವೇಷಕ,  ಮಾರ್ಕೊ ಪೋಲೊ ಈ ಊರಿನವ. ಅವನ ಮನೆಯನ್ನು ಸಹ ಕಂಡೆವು. ಅವನ ಪ್ರವಾಸದ ದಾಖಲೆಗಳು ಜಗತ್ತಿಗೆ. ವಾಸ್ಕೋಡಗಾಮನಂತವರಿಗೆ ಸ್ಫೂರ್ತಿ ಆಗಿದ್ದ. ಅವನ ಹೆಸರನ್ನು ವೆನಿಸ್ ನಿಂದ ಹೊರ ಭಾಗದಲ್ಲಿರುವ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದಾರೆ.

ವೆನಿಸ್ ನ ಸಂಜೆ ರಾತ್ರಿ

ವೆನಿಸ್ ನ ಸಂಜೆ ಸಹ ಚಂದ.. ಚಂದನೆಯ ಸೂರ್ಯಾಸ್ತ.. ಸುತ್ತ ನೀರು… ನೀರು… ಒಂದು ಬಿಯರ್ ಮಗ್ ಅಥವಾ ಇಲ್ಲಿನ ಸ್ಥಳೀಯ ಡ್ರಿಂಕ್ ಹಿಡಿದು ಕೂಟ ಜನ… ಗತಕಾಲದ ನೆನಪುಗಳು.  ರಾತ್ರಿಯೂ ಚಂದನೇ..ಎರಡು ದಿನಗಳಿಂದ ವೆನಿಸ್ ನಲ್ಲಿ ಅಲೆಯುತ್ತ, ಇಲ್ಲಿನ ಮಧ್ಯಯುಗದ ಬೀದಿಗಳಲ್ಲಿ, ಕಳೆದು ಹೋದ ಇತಿಹಾಸ ಹುಡುಕುತ್ತ, ಕಟ್ಟಡಗಳ  ವಿನ್ಯಾಸ, ಗೊಂಡೋಲಾ…. ಹೀಗೆ ಹತ್ತು ಹಲವು ವಿಚಾರಗಳಿಂದ ತೇಲುವ ನಗರ ಬಲು ಆಪ್ತವಾಗಿಬಿಡುತ್ತದೆ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button