ತೀರ್ಥಹಳ್ಳಿಯಲ್ಲಿ ನಡೆಯುತ್ತದೆ ಪ್ರಸಿದ್ದ ಎಳ್ಳಮವಾಸ್ಯೆ ಜಾತ್ರೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆ ಎಂದರೆ ಮಲೆನಾಡಿನ ಹಬ್ಬವಿದ್ದಂತೆ. ಸತತ ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಮಲೆನಾಡಿನ ಜನ ಸಮೂಹವೆ ಇಲ್ಲಿಗೆ ಕಾಲಿಟ್ಟಿರುತ್ತದೆ. ಮಲೆನಾಡಲ್ಲದೆ ರಾಜ್ಯದ ದೂರದೂರಿನಿಂದಲೂ ಜನರು ತೀರ್ಥಹಳ್ಳಿಯ ಸೊಗಡನ್ನು ಪರಿಚಯಿಸುವ ಜಾತ್ರೆ ಕಣ್ತುಂಬಿಕೊಳ್ಳಲು ಬರುತ್ತಾರೆ. – ರಾಹುಲ್ ಆರ್ ಸುವರ್ಣ
ಮಲೆನಾಡಿನ ತೀರ್ಥಹಳ್ಳಿಯಲ್ಲಿ ಸುಗ್ಗಿ ಹಿಗ್ಗಿನ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಸಡಗರ ಸಂಭ್ರಮ. ಎಳ್ಳಮಾವಾಸ್ಯೆ ಈ ದಿನ ನಾಡಿನ ಸಾವಿರಾರು ಭಕ್ತರು ತುಂಗಾ ನದಿಯ ಶ್ರೀರಾಮಕೊಂಡದಲ್ಲಿ ತೀರ್ಥಸ್ನಾನಗೈದು ಪುನೀತರಾಗುತ್ತಾರೆ. ನಿರ್ಮಲವಾಗಿ ಹರಿಯುವ ತುಂಗಾನದಿ ತಟದಲ್ಲಿ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಜಾತ್ರೆ ಭಕ್ತರಿಗೆ, ಸ್ಥಳೀಯರಿಗೆ ವಿಶೇಷ ಸಂಭ್ರಮ. ಎಳ್ಳಮಾವಾಸ್ಯೆ ಜಾತ್ರೆಗೆ ಪ್ರಸಿದ್ಧಿಯಾಗಿರುವ ಶ್ರೀರಾಮೇಶ್ವರ ದೇವಸ್ಥಾನ ಶೃಂಗಾರಗೊಂಡಿದೆ. ಇಲ್ಲೇ ಇರುವ ಪರುಶುರಾಮಕೊಂಡದಲ್ಲಿಅಮಾವಾಸ್ಯೆಯಂದು ತೀರ್ಥಸ್ನಾನಗೈಯ್ಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಹಿಂದಿನ ಕಥೆ
ಕೊಡಲಿಯಿಂದ ತಾಯಿ ಶಿರ ಛೇದಿಸಿದ ಶಾಪ ಹೊತ್ತ ಪರುಶುರಾಮ ವಿಮೋಚನೆಗೊಂಡ ಸ್ಥಳ ತುಂಗಾನದಿಯ ಶ್ರೀರಾಮಕೊಂಡ ಎಂಬ ಪ್ರತೀತಿ ಇದೆ. ಋುಷಿ ಜಮದಗ್ನಿ ಪತ್ನಿ ರೇಣುಕಾದೇವಿ ಶಿರಚ್ಛೇದಿಸಲು ಮಕ್ಕಳಿಗೆ ಆದೇಶ ನೀಡಿದ. ಆಜ್ಞೆ ಸ್ವೀಕರಿಸಲು ನಿರಾಕರಿಸಿದ ಮಕ್ಕಳು ಶಾಪಗ್ರಸ್ತರಾದರು. ಪರುಶುರಾಮ ತಂದೆ ಆದೇಶದಂತೆ ತಾಯಿ ರೇಣುಕಾದೇವಿ ಶಿರವನ್ನು ಕೊಡಲಿಯಿಂದ ಛೇದಿಸಿದ. ಕೊಡಲಿಗೆ ಅಂಟಿದ ರಕ್ತ ಎಷ್ಟು ಬಾರಿ ತೊಳೆದರು ಎಳ್ಳಿನಷ್ಟು ರಕ್ತದ ಕಲೆ ಕೊಡಲಿಯಲ್ಲೇ ಉಳಿದು ಬಿಡುತ್ತದೆ. ಈ ಸಂದರ್ಭ ಮಾತೃಹತ್ಯೆ ದೋಷದಿಂದ ಪಾರಾಗಲು ನಾನಾ ಊರುಗಳಲ್ಲಿ ಸಂಚರಿಸಿ ರಕ್ತದ ಕಲೆ ತೊಳೆಯಲು ಪ್ರಯತ್ನಿಸಿ ಆಯಾಸಗೊಂಡಿದ್ದ ಪರಶುರಾಮ ತೀರ್ಥರಾಜಪುರದ ತುಂಗಾನದಿಯಲ್ಲಿ ವಿಹರಿಸಿದ. ಕೈಯಲ್ಲಿದ್ದ ಕೊಡಲಿ ಆಕಸ್ಮಿಕವಾಗಿ ನದಿಯಲ್ಲಿದ್ದ ಬಂಡೆ ಮೇಲೆ ಬಿತ್ತು. ಕೊಡಲಿ ಬಿದ್ದ ತಕ್ಷಣ ಇಬ್ಭಾಗವಾದ ಬಂಡೆಯಿಂದ ಕೊಡಲಿಗೆ ನೀರಿನ ಸ್ಪರ್ಶವಾಗಿ ಅಂಟಿದ್ದ ಎಳ್ಳಿನಷ್ಟು ರಕ್ತ ಕಲೆ ಅಳಿಸಿ ಹೋಯಿತು. ಇದನ್ನು ಕಂಡು ವಿಸ್ಮಿತರಾಗಿ ಪುನೀತರಾದ ಪರಶುರಾಮ ಮಾತೃಹತ್ಯೆ ದೋಷ ಮುಕ್ತವಾಗಿಸಿದ ತೀರ್ಥರಾಜಪುರ ಕ್ಷೇತ್ರ ಬಹಳ ಪವಿತ್ರಸ್ಥಳ ಎಂದು ಭಾವಿಸಿ ಸಂತೃಪ್ತಗೊಂಡರು ಎಂಬ ನಂಬಿಕೆ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ.

ಮಾತೃಹತ್ಯೆ ದೋಷದಿಂದ ಶಾಪ ಮುಕ್ತರಾದ ಪರುಶುರಾಮ ತುಂಗಾನದಿ ಕೊಂಡದಲ್ಲಿಮಿಂದು ನದಿ ತಟದಲ್ಲಿ ಈಶ್ವರಲಿಂಗವನ್ನು ಪ್ರತಿಷ್ಠಾಪಿಸಿ ಶ್ರೀರಾಮೇಶ್ವರ ದೇವರೆಂದು ನಾಮಕರಣ ಮಾಡಿ ಪೂಜಿಸಿದರು. ಕೊಡಲಿಗೆ ಅಂಟಿದ ಎಳ್ಳಿನಷ್ಟು ರಕ್ತ ಕಲೆ ಅಳಿಸಿದ ದಿನ ಮಾರ್ಗಶಿರ ಬಹುಳ ಅಮಾವಾಸ್ಯೆ ಆಗಿತ್ತು. ಕ್ಷೇತ್ರದಲ್ಲಿಆ ದಿನ ಪ್ರತಿ ವರ್ಷ ಪರಶುರಾಮಕೊಂಡದಲ್ಲಿ ಮಿಂದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಪಾರ ಸಂಖ್ಯೆ ಭಕ್ತರು ಎಳ್ಳಮಾವಾಸ್ಯೆ ದಿನ ಪರಶುರಾಮ ಕೊಂಡದಲ್ಲಿ ತೀರ್ಥಸ್ನಾನಗೈದು ಶ್ರೀ ರಾಮೇಶ್ವರ ದೇವರ ದರ್ಶನ ಮಾಡುತ್ತಾರೆ.

ನಂತರದ ದಿನಗಳಲ್ಲಿ
ನೀವು ಇದನ್ನು ಇಷ್ಟ ಪಡಬಹುದು:ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜೇನುಕಲ್ಲು ಗುಡ್ಡ
ಪರಶುರಾಮ ಪ್ರತಿಷ್ಠಾಪಿಸಿದ ಈಶ್ವರ ಲಿಂಗಕ್ಕೆ ಕೆಳದಿ ಅರಸರ ಕಾಲದಲ್ಲಿ ಗರ್ಭಗುಡಿ, ದೇವಾಲಯ ಮುಂಭಾಗ ಛಾವಣಿ ನಿರ್ಮಾಣಗೊಂಡಿತು. ಶಿಲಾಮಯ ಶ್ರೀರಾಮೇಶ್ವರ ದೇವರ ದೇವಸ್ಥಾನದಲ್ಲಿಅಂದಿನಿಂದ ಪಾಂಚಬೌಧಿಕ ವಿಧಿ ವಿಧಾನದಲ್ಲಿ ಐದು ದಿನ ಜಾತ್ರೆ ನಡೆಯುತ್ತ ಬಂದಿದೆ. ಕೆಳದಿ ಅರಸರು ಈ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿ ಪ್ರತಿವರ್ಷ ಪೂಜೆ, ಪುನಸ್ಕಾರದಿಂದ ಆರಾಧಿಸುತ್ತಿದ್ದರು. ಹಿಂದಿನಿಂದ ಕರೆಯಲ್ಪಡುತ್ತಿದ್ದ ತೀರ್ಥರಾಜಪುರ ಕ್ರಮೇಣ ತೀರ್ಥಹಳ್ಳಿ ಎಂದು ನಾಮಕರಣಗೊಂಡಿತು. ಎಳ್ಳಮಾವಾಸ್ಯೆ ದಿನ ತುಂಗಾನದಿಯಲ್ಲಿ ಬೆಳಗ್ಗೆ 5ಗಂಟೆಗೆ ಶ್ರೀರಾಮೇಶ್ವರ ದೇವರ ಉತ್ಸವ ಪಲ್ಲಕ್ಕಿ ಪೂಜಾ ಕಾರ‍್ಯದ ನಂತರ ಸಾವಿರಾರು ಭಕ್ತರು ಪರಶುರಾಮಕೊಂಡದಲ್ಲಿ ತೀರ್ಥಸ್ನಾನಗೈಯುತ್ತಾರೆ. ವೈಭವದ ಶ್ರೀ ರಾಮೇಶ್ವರದೇವರ ರಥೋತ್ಸವ, ತುಂಗಾನದಿಯಲ್ಲಿಆಕರ್ಷಕ ತೆಪ್ಪೋತ್ಸವ ನಡೆಯುತ್ತದೆ. ಬದಲಾದ ಆಧುನಿಕ ಕಾಲಘಟ್ಟಕ್ಕೆ ಹೊಂದಿಕೊಂಡು ಜಾತ್ರೆ ಸಂಭ್ರಮದಿಂದ ಆಚರಣೆಗೊಳ್ಳುತ್ತಿದ್ದು ಸಿಡಿಮದ್ದು ಪ್ರದರ್ಶನ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ತುಂಗಾನದಿಯಲ್ಲಿ ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿ ಪೂಜಿಸಿ ದೀಪಾಲಂಕೃತಗೊಂಡ ತೆಪ್ಪದಲ್ಲಿ ಹದಿನಾಲ್ಕು ಸುತ್ತು ಪ್ರದಕ್ಷಿಣೆ ನಂತರ ಬಣ್ಣ ಚಿತ್ತಾರದ ಆಕರ್ಷಕ ಸಿಡಿಮದ್ದು ಸಿಡಿಸಲಾಗುತ್ತದೆ.

ಇಡೀ ತೀರ್ಥಹಳ್ಳಿಯೇ ಬಣ್ಣ ಬಣ್ಣದ ದೀಪಗಳಿಂದ ಅಲಂಕ್ರುತಗೊಂಡು ಯಾವ ಜಾತ್ರೆಗಳಿಗೂ ಕಡಿಮೆ ಇಲ್ಲವೆಂಬಂತೆ ಕಂಗೊಳಿಸುತ್ತಿರುತ್ತದೆ.ನಿತ್ಯ ಹರಿದ್ವರ್ಣ ಕಾಡುಗಳು,ನಡುವೆ ತುಂಗಾ ನದಿ, ದಡದಲ್ಲಿ ತಣ್ಣನ ಬೀಸುವ ಗಾಳಿಯು ಈ ಜಾತ್ರೆಗೆ ಇನ್ನಷ್ಟು ಬಣ್ಣ ಕಟ್ಟಿರುತ್ತವೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ