ಆಹಾರ ವಿಹಾರನಮ್ ತಿಂಡಿ ರೆಸಿಪಿನಮ್ಮೂರ ತಿಂಡಿವಿಂಗಡಿಸದ

ಕರಾವಳಿ, ಮಲೆನಾಡಿಗರಿಗೆ ಊಟಕ್ಕೆ ಸಾಕು “ತಂಬುಳಿ”

ದಿನಕ್ಕೊಂದು ಅಡುಗೆ ಎಂಬಂತೆ ಮನೆ ಸುತ್ತಮುತ್ತ ಸಿಗುವ ಔಷಧೀಯ ಗುಣವುಳ್ಳ ಎಲೆ, ಹೂವುಗಳಿಂದ ಪಟಾಪಟ್ ಅಂತ ತಯಾರಿಸಬಹುದಾದ ಸುಲಭ ಪದಾರ್ಥವಿದು. ಸವಿರುಚಿಯ ಜೊತೆಗೆ ದೇಹಕ್ಕೂ ಉತ್ತಮ. ಕರಾವಳಿ, ಮಲೆನಾಡ ಜನರಿಗೆ ಊಟಕ್ಕೆ ಈ ಒಂದು ಪದಾರ್ಥವಿದ್ದರೆ ಸಾಕು ಆ ದಿನ ಭರ್ಜರಿ ಭೋಜನ ಮಾಡಬಹುದು. ಅದುವೇ “ತಂಬುಳಿ”.

  • ಚೈತ್ರಾ ರಾವ್ ಉಡುಪಿ

ಈ ಪದಾರ್ಥ ಬೇಸಿಗೆ, ಮಳೆ, ಚಳಿ ಈ ಮೂರು ಕಾಲಕ್ಕೂ ಸಲ್ಲುತ್ತದೆ. ಮನೆ ಸುತ್ತಮುತ್ತಲಿನ ಔಷಧೀಯ ಗುಣವುಳ್ಳ ಸಸ್ಯಗಳ ಪರಿಚಯವಿದ್ದರೆ ಸಾಕು. ನಿಸರ್ಗದತ್ತವಾಗಿ ಸಿಗುವ ಸೊಪ್ಪು, ಬೇರುನಾರು, ಚಿಗುರು ಮತ್ತು ಹೂವುಗಳಿಂದ ದಿನಕ್ಕೊಂದು ಎಂಬಂತೆ ತಯಾರಿಸಬಹುದಾದ ಅಡುಗೆ ತಂಬುಳಿ.

ಕರಾವಳಿ ಮಲೆನಾಡಿನಲ್ಲಿ ಕೆಲವರು ತಂಬುಳಿ ಎಂದು ಕರೆದರೆ ಇನ್ನೂ ಕೆಲವರು ಹಸಿರುಸಾರು ಎಂದು ಕರೆಯುತ್ತಾರೆ. ತಂಬುಳಿ ಸೇವನೆಯಿಂದ ನಮ್ಮ ದೇಹ ತಂಪಾಗಿರುತ್ತದೆ ಮತ್ತು ಇದನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ.

Thambuli Recipe Home made Recipe CoastalKarnataka

ಯಾವುದರಿಂದ ತಂಬುಳಿ ತಯಾರಿಸಬಹುದು?

ಸೊಪ್ಪು ತಂಬುಳಿ

ದಾಸವಾಳ ಎಲೆ, ಪುದಿನ ಸೊಪ್ಪು, ತೊಂಡೆಕಾಯಿ ಸೊಪ್ಪು, ಬ್ರಾಹ್ಮೀ ಸೊಪ್ಪು, ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಮಜ್ಜಿಗೆ ಸೊಪ್ಪು, ವಿಟಮಿನ್ ಎಲೆ, ಸಾಂಬ್ರಾಣಿ ಸೊಪ್ಪು, ಎಲ್ಸಾರ್ ಸೊಪ್ಪು, ಕರಿಬೇವು ಎಲೆ, ಕೊತ್ತಂಬರಿ ಸೊಪ್ಪು, ಕಾಕಿಸೊಪ್ಪು(ಗಣಿಕೆ ಸೊಪ್ಪು, ಕರೀಚಿ ಸೊಪ್ಪು ಅಥವಾ ಕಾಕಿ ಹಣ್ಣುಗಿಡ) ಎಂದು ಕರೆಯುತ್ತಾರೆ. ಹೀಗೆ ಹೇಳುತ್ತಾ ಹೋದರೆ ಎಲ್ಲಾ ರೀತಿಯ ಔಷಧಿ ಸೊಪ್ಪುಗಳ ಎಲೆಗಳ ದೊಡ್ಡ ಪಟ್ಟಿಯೇ ಮಾಡಬಹುದು.

ಚಿಗುರೆಲೆ ತಂಬುಳಿ

ಮೆಣಸಿನ ಸೊಪ್ಪಿನ ಚಿಗುರೆಲೆ, ಕಾಕಿ ಸೊಪ್ಪಿನ ಚಿಗುರೆಲೆ, ನಿಂಬೆ ಹಣ್ಣಿನ ಚಿಗುರೆಲೆ, ಒಂದೆಲಗ ಸೊಪ್ಪಿನ ಚಿಗುರು, ಪೇರಳೆ ಚಿಗುರೆಲೆಗಳಿಂದ ತಂಬುಳಿಯನ್ನು ತಯಾರಿಸಬಹುದು.

ಗೆಡ್ಡೆಗಳಿಂದ ತಂಬುಳಿ

ನೈಸರ್ಗಿಕವಾಗಿ ಸಿಗುವ ಶುಂಠಿ, ನೀರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳಿಂದಲೂ ರುಚಿಕರ ತಂಬುಳಿ ಮಾಡಬಹುದು. ಹಾಗೇ ಇನ್ನಿತರ ನೆಲ್ಲಿಕಾಯಿ, ಸಾಂಬಾರಬಳ್ಳಿ, ಮಾವಿನಕಾಯಿ, ಕಾಳುಗಳಾದ – ಮೆಂತೆ, ಜೀರಿಗೆ, ಓಮ. ಹೂವುಗಳು – ದಾಸವಾಳ ಮತ್ತು ದಾಳಿಂಬೆ, ಕಿತ್ತಳೆ ಸಿಪ್ಪೆಗಳಿಂದಲೂ ತಯಾರಿಸಬಹುದಾಗಿದೆ.

ತಂಬುಳಿ ಮಾಡುವ ವಿಧಾನ

ಎಲ್ಲಾ ರೀತಿಯ ತಂಬುಳಿ ತಯಾರಿಸಲು ಮೊಸರು ಅತ್ಯಗತ್ಯ. ಒಂದೆಲಗ ಹಾಗೂ ಮಾದಿರವನ್ನು ಹೊರತುಪಡಿಸಿ ಸೊಪ್ಪು, ಹೂವು, ಸಿಪ್ಪೆಗಳನ್ನು ಎಣ್ಣೆಯಲ್ಲಿ ಹುರಿದುಕೊಂಡು ನಂತರ ಮೆಣಸು, ಜೀರಿಗೆ ಮತ್ತು ತೆಂಗಿನಕಾಯಿ ತುರಿಯ ಜೊತೆಗೆ ಚೆನ್ನಾಗಿ ರುಬ್ಬಿ ನಂತರ ಅದಕ್ಕೆ ಮಜ್ಜಿಗೆಯನ್ನು ಸೇರಿಸಿ ಸಾಸುವೆ ಕರಿಬೇವಿನ ಒಗ್ಗರಣೆ ಹಾಗೂ ರುಚಿಕೆ ತಕ್ಕಷ್ಟು ಉಪ್ಪು  ಸೇರಿಸಿದರೆ ರುಚಿಕರವಾದ ತಂಬುಳಿ ತಯಾರಾಗುತ್ತದೆ. 

ಈ ರೀತಿಯಲ್ಲಿ ಸೊಪ್ಪು, ವೀಳ್ಯದೆಲೆ, ದಾಸವಾಳ, ಸಾಂಬಾರ ಬಳ್ಳಿ, ನೆಲನೆಲ್ಲಿ, ತುಂಬೆ ಹೂವು, ಬಿಲ್ವಪತ್ರೆ, ದಾಳಿಂಬೆ – ಕಿತ್ತಳೆ ಸಿಪ್ಪೆ ಮೊದಲಾದವುಗಳನ್ನು ಬಳಸುತ್ತಾರೆ.

ಹಾಗೆಯೇ ಇನ್ನೊಂದು ಬಗೆಯಲ್ಲಿ ಶುಂಠಿ, ಬೆಳ್ಳುಳ್ಳಿ ತರಹದ ಗೆಡ್ಡೆಗಳು, ಮಾವಿನ ಕಾಯಿ ತರಹದ ಕಾಯಿಗಳು ಮತ್ತು ಒಂದೆಲಗ ಸೊಪ್ಪು ( ಇದೊಂದು ಸೊಪ್ಪು ಮಾತ್ರ ವಿಭಿನ್ನ , ಇದನ್ನು ಎಣ್ಣೆಯಲ್ಲಿ ಹುರಿಯುವ ಹಾಗಿಲ್ಲ. ನೇರವಾಗಿ ಹಸಿಯಾಗೆ ಬಳಸಬೇಕು ) ಇವುಗಳನ್ನು ನೇರವಾಗಿ ಮೆಣಸು, ತೆಂಗಿನಕಾಯಿ ತುರಿ, ಉಪ್ಪಿನ ಜೊತೆಗೆ ರುಬ್ಬಿ ಮಜ್ಜಿಗೆ ಜೊತೆ ಕಲಸಿ ನಂತರ ಸಾಸುವೆ ಕರಿಬೇವಿನ ಒಗ್ಗರಣೆ ಕೊಡಲಾಗುತ್ತದೆ. ಇಷ್ಟು ಬಿಟ್ಟರೆ ಅಂತಹ ವ್ಯತ್ಯಾಸವೇನು ಇಲ್ಲ. ಹುರಿಯುವುದು ಮತ್ತು ನೇರವಾಗಿ ಸೇರಿಸುವುದು ಅಷ್ಟೇ.

ನೀವುಇದನ್ನುಇಷ್ಟಪಡಬಹುದು: ಮಳೆಗಾಲದಲ್ಲಿ ಬಾಯಿ ಚಪ್ಪರಿಸಲು ಇದನ್ನು ಟ್ರೈ ಮಾಡಿ

ಉಳಿದಂತೆ ತಂಬುಳಿಗಳು ಆಯಾ ಪರಿಸರದಲ್ಲಿ ಮತ್ತು ಕುಟುಂಬಗಳಲ್ಲಿ ಬೇರೆ ಬೇರೆಯದೇ ರೀತಿಯಲ್ಲಿ ಸಿದ್ದಪಡಿಸುವ ಕ್ರಮಗಳೂ ಇವೆ.

ThambuliRecipe HomemadeRecipe CoastalKarnataka

ತಂಬುಳಿಯ ಉಪಯೋಗ

ಇಂತಹ ಸೊಪ್ಪು, ಹೂವು, ಬೇರುಗಳಿಂದ ತಯಾರಿಸಿದ ತಂಬುಳಿಗಳು ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಉತ್ತಮ ಜೀರ್ಣಕ್ರಿಯೆಗೆ, ನಾಲಗೆಯಲ್ಲಿ ಅಗ್ರವಿದ್ದರೆ, ಹೊಟ್ಟೆ ಹುಳದ ಬಾಧೆ, ಜ್ವರ ಕೆಮ್ಮು ನಿವಾರಣೆ, ಬಾಯಿಯಲ್ಲಿ ಆಗುವ ಹುಣ್ಣು, ಮಲಬದ್ಧತೆ, ಗ್ಯಾಸ್ಟಿಕ್ ತೊಂದರೆ, ದೇಹ ತಂಪಾಗಿಸಲು, ಹಳದಿ ರೋಗ ನಿವಾರಣೆ, ಅಜೀರ್ಣದ ಸಮಸ್ಯೆ, ಸಿಹಿ ಮೂತ್ರದ ತೊಂದರೆ, ಹೊಟ್ಟೆ ನೋವಿನ ಶಮನಕ್ಕೆ ಹೀಗೆ ಎಲ್ಲಾ ಬಗೆಯ ಸಮಸ್ಯೆಗೆ ಈ ಹಸಿರು ಸಸ್ಯಗಳು ಧಿವ್ಯ ಔಷಧಿ.

ಉಪಯೋಗಿಸುವ ಮುನ್ನ ಎಚ್ಚರಿಕೆ ಅಗತ್ಯ

ಯಾವುದೇ ಗಿಡಗಳ ಎಲೆಗಳು, ಹೂವುಗಳು, ಚಿಗುರುಗಳು ಬಳಸುವ ಮೊದಲು ಸೂಕ್ಷ್ಮವಾಗಿ ಗಮನಿಸಿ, ಅದರ ಕುರಿತು ತಿಳಿದವರು ಬಳಿ ಕೇಳಿ ಉಪಯೋಗಿಸಬೇಕು. ಒಂದೇ ರೀತಿಯ ಎಲೆಗಳನ್ನು ಹೋಲುವ ಗಿಡಗಳು ಸಾಕಷ್ಟಿವೆ. ಕೆಲವೊಂದು ವಿಷಯುಕ್ತ ಎಲೆಗಳಿವೆ.

ಅಂತಹ ಎಲೆಗಳನ್ನು ತಿಳಿಯದೇ ಬಳಸಿ ಮಾಡಿದ ಪದಾರ್ಥಗಳಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆಯಾಗುವುದು ಖಂಡಿತ. ಹೀಗೆ ಯಾವುದೋ ಎಲೆಗಳನ್ನು ತಿಳಿಯದೆ ಬಳಸಿ ಸೇವನೆ ಮಾಡಿ ಸಾವನ್ನಪ್ಪಿದ ಉದಾಹರಣೆಗಳಿವೆ. ಹಾಗಾಗಿ ಎಲೆಗಳನ್ನು ಬಳಸುವಾಗ ಎಚ್ಚರವಾಗಿರಿ.

ಇವತ್ತಿನ ಬದಲಾದ ಕಾಲಘಟ್ಟದಲ್ಲಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಮಸಾಲೆ ಪದಾರ್ಥ, ಬಣ್ಣವಿರುವ ಪುಡಿಗಳು, ರೆಡಿಮೇಡ್ ಫುಡ್, ಹೊರಗಿನ ಖಾಧ್ಯಗಳಿಗೆ ಅವಲಂಬಿತರಾಗಿದ್ದೇವೆ. ಇದು ನಮ್ಮ ಆರೋಗ್ಯವನ್ನು ದಿನದಿಂದ ದಿನಕ್ಕೆ ಕ್ಷೀಣಿಸುವಂತೆ ಮಾಡುತ್ತದೆ.

ಅದರ ಬದಲು ಈ ರೀತಿಯ ತಂಬುಳಿ ಅಡುಗೆಯನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button