ನರ್ಪೇತ್ ಹೊಂಡದ ರಹಸ್ಯ: ಮನೋಜ್ ಆಚಾರ್ಯ ಹೇಳಿದ ಚಾರಣ ಕಥನ
ಡಿಪ್ಲೊಮಾ ಪದವಿ ಹೊಂದಿದ್ದರೂ ನಗರ ತೊರೆದು ಹಳ್ಳಿಗೆ ಹೋಗಿ ವ್ಯವಸಾಯ ಅಪ್ಪಿಕೊಂಡಿರುವ ತೀರ್ಥಹಳ್ಳಿಯ ತುಂಬೇಸರದ ತರುಣ ಮನೋಜ್ ಆಚಾರ್ಯರಿಗೆ ಚಾರಣ ಅಂದ್ರೆ ಖುಷಿ. ತುಂಬಾ ಜನರಿಗೆ ಪರಿಚಯವಿರದ ನರ್ಪೇತ್ ಹೊಂಡದ ಕತೆಯನ್ನು ಅವರು ಹೇಳಿದ್ದಾರೆ.
ಮನೋಜ್ ಆಚಾರ್ಯ ಎಂಬ ಉತ್ಸಾಹಿ ಯುವಕನ ಕಥೆ ಇದು.
ಇವರು ಮೂಲತಃ ಮಲೆನಾಡ ಉಪ್ಪರಿಗೆ ತೀರ್ಥಹಳ್ಳಿಯ ತುಂಬೇಸರ ಎಂಬ ಪುಟ್ಟ ಹಳ್ಳಿಯ ಹುಡುಗ, ತೀರ್ಥಹಳ್ಳಿ ಅಲ್ಲಿ ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ವ್ಯಾಸಂಗ ಮುಗಿಸಿ ವ್ಯವಸಾಯದ ಕಡೆಗೆ ಮುಖ ಮಾಡಿ ಹೊರಟವರು.
ಅಡಿಕೆ, ಕಾಳು ಮೆಣಸು, ಬಾಳೆ, ಭತ್ತ ಹೀಗೆ ಇವರು ಬೆಳೆಯುವ ಬೆಳೆಗಳ ಪಟ್ಟಿ ಸಾಗುತ್ತಾ ಹೋಗುತ್ತದೆ. ಸಮಯ ಸಿಕ್ಕಾಗ ಪಶ್ಚಿಮ ಘಟ್ಟಗಳ ಚಾರಣ ಮಾಡುವುದು ಇವರ ಹವ್ಯಾಸ, ಜೊತೆಗೆ ಟ್ರಾವೆಲ್ ಫೋಟೋಗ್ರಫಿ ಎಂದರೆ ಅಚ್ಚುಮೆಚ್ಚು.
ಬಹಳಷ್ಟು ಸಲ ಸ್ನೇಹಿತರು ಹಾಗೂ ಸೋದರರೊಂದಿಗೆ ಸೇರಿ ಕವಲೇದುರ್ಗ,(Kavale durga) ಬಲ್ಲಾಳರಾಯನ ದುರ್ಗ(Ballalarayana durga) ಇನ್ನೂ ಹಲವು ಪ್ರವಾಸಿ ತಾಣಗಳ ಸ್ವಚ್ಛತೆ ಕಾರ್ಯವನ್ನು ನಿರ್ವಹಿಸಿದ್ದಾರೆ.
ಇವರು ಒಂದು ಚಾರಣದ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಚಾರಣದ ಚಟ
ಒಂದಿನ ಕಳಸದಿಂದ(Kalas) 15 ಕಿಮೀ ದೂರ ಇರುವ ನಮ್ಮ ಅತ್ತೆ ಮನೆ ‘ಕಳಕೋಡು’ ಎಂಬ ಸಣ್ಣ ಕಾಡೂರಿಗೆ ಹೋದೆವು. ಇದುವರೆಗೂ ಕಚ್ಚಾ ರೋಡನ್ನು ಕಾಣದ ಊರು.
ಕಳಕೋಡಿಗೆ ಹೋಗಬೇಕಂದರೆ ಕಲ್ಲು ಮುಳ್ಳಿನ ಹಾದಿ, ತೂಗುಸೇತುವೆ, ಹೊಳೆ ದಾಟಿ ಹೋಗಬೇಕು. ಸುಲಭ ದಾರಿ ಅಂತೂ ಅಲ್ಲ. ಆದರೂ ಆ ಊರಿಗೆ ಹೋಗಲು ಅದೇನೋ ಕುತೂಹಲ. ಆ ಊರಿನಲ್ಲಿ ಇರುವುದು ಒಂದು ಎರಡು ಮನೆ, ಅಲ್ಲಿಯ ಊರಿನವರಿಗೆ ಯಾರಾದ್ರು ನೆಂಟರು ಬಂದ್ರೆ ತುಂಬಾ ಖುಷಿ.
ಮದ್ಯಾಹ್ನ 2 ಗಂಟೆ ಆಗಿತ್ತು. ಹೇಗೋ ಊಟದ ಸಮಯಕ್ಕೆ ಸರಿಯಾಗಿ ತಲುಪಿದ್ದೆವು. ಊಟಕ್ಕೆ ಅಲ್ಲೇ ಗದ್ದೆಯಲ್ಲಿ ಬೆಳೆದ ಸೌತೆ ಕಾಯಿಯ ಸಾಂಬಾರ್ ಮಾಡಿದ್ದರು, ಚೆನ್ನಾಗಿ ಊಟ ಮಾಡಿ ಕೂತೆವು.
ಹಾಗೆ ಸುಮ್ಮನೆ ಗದ್ದೇಬೈಲು ಕಡೆ ಸುತ್ತಾಡಲು ಹೋದಾಗ ಅವರ ಮನೆಯ ಮುಂದೆಯೇ ಕುದುರೆಮುಖ ಪರ್ವತ ಶ್ರೇಣಿಗಳ ಸಾಲು ಹಸಿರು ಗೋಡೆಗಳಂತೆ(ಶೋಲಾ ಕಾಡು) ಕಂಡವು. ಆ ಗುಡ್ಡಗಳ ಆಚೆ ಏನಿರಬಹುದು ಎಂದು ಕುತೂಹಲ ಉಂಟಾಯಿತು. ಹಾಗೆ ಅಲ್ಲಿನ ಹಿರಿಯರ ಜೊತೆ ಆ ಗುಡ್ಡಗಳ ಬಗ್ಗೆ ಚರ್ಚಿಸ ತೊಡಗಿದೆವು.
ನರ್ಪೇತ್ ಹೊಂಡ
ನರ್ಪೇತ್ ಹೊಂಡ
ಆ ಗುಡ್ಡದ ಹೆಸರು ‘ನರ್ಪೇತ್ ಹೊಂಡ’, ಎಂದು ತಿಳಿಯಿತು, ಹೆಸರು ಕೇಳಿ ಕುತೂಹಲ ಇನ್ನೂ ಹೆಚ್ಚಾಯಿತು. ಇವತ್ತು ಆ ಗುಡ್ಡಕ್ಕೆ ಚಾರಣ ಹೋಗ್ಲೇ ಬೇಕು ಅಂತ ಯೋಚಿಸಿದೆವು.
ಹೇಗೋ ದಾರಿ ಕೇಳಿಕೊಂಡು ಹೊರಟೇ ಬಿಟ್ಟೆವು, ಸ್ವಲ್ಪ ದೂರ ಗದ್ದೆ ಹಳ್ಳ ಸಂಕ ದಾಟಿಕೊಂಡು 2 ರಿಂದ 3 ಕಿ.ಮೀ ನಡೆದೇ ಬಿಟ್ಟೆವು.
ಮಧ್ಯದಲ್ಲಿ ಸ್ವಲ್ಪ ದಾರಿ ತಪ್ಪಿ ಹೋದೆವು, ಹರ ಹರ ಅಂತ ದೇವರು ಸಿಕ್ಕ ಹಾಗೆ ಅಲ್ಲಿಯ ಊರಿನ ಒಬ್ಬ ಯುವಕ ಕಟ್ಟಿಗೆ ಕಡಿಯಲೆಂದು ಬಂದಿದ್ದ. ಪುಣ್ಯಾತ್ಮ ಮತ್ತೆ ಬಂದ ದಾರಿಯಲ್ಲೇ ವಾಪಸ್ ಕರೆದುಕೊಂಡು ಬಂದು ದಾರಿ ತೋರಿಸಿ ಹೀಗೆ ಸೀದಾ ಹೋಗಿ ಎಂದು ಹೇಳಿ ಅವನ ದಾರಿ ಹಿಡಿದ.
ನೀವು ಇದನ್ನು ಇಷ್ಟ ಪಡಬಹುದು:ಮಕ್ಕಳನ್ನು 3 ತಿಂಗಳಲ್ಲಿ 13 ಸಾವಿರ ಕಿಮೀ ಸುತ್ತಾಡಿಸಿ ರೋಡ್ ಸ್ಕೂಲಿಂಗ್ ಕಾನ್ಸೆಪ್ಟ್ ಪರಿಚಯಿಸಿದ ಗಂಗಾಧರ್- ರಮ್ಯಾ ದಂಪತಿ
ಕಲ್ಲು, ಮುಳ್ಳು, ತಲೆಯಷ್ಟು ಎತ್ತರವಿರುವ ಪೊದೆಗಳು, ಪ್ರಾಣಿಗಳ ಮಲ, ಪಕ್ಷಿಗಳ ಕಲರವ, ಶೂ ಮತ್ತು ಬಟ್ಟೆಗೆ ಚುಚ್ಚಿಕೊಂಡ ಚುಂಗುಗಳು ಇನ್ನೇನು ಮುಳುಗಲು ಕಾತುರದಿಂದ ಕಾಯುತ್ತಿದ್ದ ಸೂರ್ಯ.
ಕತ್ತಿಯಿಂದ ಸವರಿ ದಾರಿ ಮಾಡಿಕೊಂಡು 6 ಕಿಮೀ ದಾರಿಯನ್ನು ಸಾಗಿದೆವು. ನನ್ನ ಪ್ರಕಾರ ನಾನು ಹೋದ ಚಾರಣಗಳಲ್ಲಿ ಇದೇ ಅತೀ ಕಠಿಣವಾದ ಹಾದಿ ಅಂದುಕೊಂಡೆ.
ಅಂತೂ ಇಂತೂ ಗುಡ್ಡದ ಮೇಲೆ ತಲುಪಿದೆವು. ಎತ್ತ ನೋಡಿದರೂ ಪರ್ವತ ಶ್ರೇಣಿಗಳು, ಶೋಲಾ ಕಾಡುಗಳು. ಅಲ್ಲೇ ನಿಂತು ಒಂದೆರಡು ಫೋಟೋ ಕ್ಲಿಕ್ಕಿಸಿ ಇವತ್ತು ಇಲ್ಲೇ ಟೆಂಟ್ ಹಾಕಿ ಮಲಗೋಣ ಎಂದು ನಿರ್ಧರಿಸಿದೆವು.
ಇನ್ನೇನು ಸೂರ್ಯ ಮುಳುಗುವ ಹೊತ್ತು ಅಷ್ಟರಲ್ಲೇ ಸ್ವಲ್ಪ ಭಯ ಶುರುವಾಯಿತು ಹೇಗೆ ಬೆಳಗ್ಗಿನವರೆಗೆ ಹೇಗೆ ಕಾಲಹರಣ ಮಾಡುವುದೆಂದು ತಲೆ ಓಡಲಿಲ್ಲ. ಜಾಸ್ತಿ ನೀರು ಮತ್ತೆ ತಿನ್ನಲು ಏನೂ ತೆಗೆದುಕೊಂಡು ಹೋಗಿರಲಿಲ್ಲ. ಮೊದಲೇ ಮನೆಯಿಂದ ಹೊರಡಬೇಕಾದರೆ ಹುಲಿ ಇದೆ, ಮತ್ತೆ ಮೊದಲೆಲ್ಲ ನಕ್ಸಲ್ ಹಾವಳಿ ಜಾಸ್ತಿ ಇತ್ತು ಅಂತ ಹೇಳಿದ್ದರು.
ಸ್ವಲ್ಪ ಹೊತ್ತು ಅಲ್ಲೇ ಕಾಲಹರಣ ಮಾಡಿ ಮತ್ತೆ ಕತ್ತಲಾಗುವ ಒಳಗೆ ಹೊರಡೋಣ ಅಂತ ನಿರ್ಧರಿಸಿದೆವು.
ಈ ಪಶ್ಚಿಮ ಘಟ್ಟ ಎಷ್ಟು ನಿಗೂಢ, ಎಷ್ಟು ಸುಂದರ ಎಂದು ಬೆಟ್ಟ/ಪರ್ವತಗಳ ಮೇಲೆ ಮೈಮರೆತು ನಿಂತವನಿಗೆ ಗೊತ್ತು.
ಅಲ್ಲೇ ಸ್ವಲ್ಪ ಹೊತ್ತು ಕೂತು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಕಾಲಹರಣ ಮಾಡಿ ಮನೆ ಕಡೆ ವಾಪಸ್ ಹೊರಟೆವು.
ಕಡಿದಾದ ದಾರಿ
ಇಳಿಯುವಾಗ ತುಂಬಾ ಕಡಿದಾದ ಜಾಗ ಚೂರು ಜಾರಿದ್ರೂ ಸೀದಾ ಮನೆಗೆ, ಇಲ್ಲ ಯಾವ್ದಾದ್ರೂ ಮುಳ್ಳಿನ ಮೊಟ್ಟು, ಅಂತ ಹಾಸ್ಯ ಮಾಡುತ್ತಾ ಅರ್ಧ ದಾರಿ ಸಾಗಿದೆವು. ಕತ್ತಲಾಯಿತು, ಮೊಬೈಲ್ ಟಾರ್ಚ್ ಅನ್ನು ಹಿಡಿದು ಮುಂದೆ ಸಾಗಿದೆವು.
ಸ್ವಲ್ಪ ದೂರ ಬಂದ ನಂತರ ದೂರದಲ್ಲಿ ಒಂದು ಮನೆ ಕಾಣಿಸಿತು ಒಂದ್ಸಲ ಜೀವ ಬಂದ ಹಾಗೆ ಆಯ್ತು.
ಹಾಗೆ ಹೋಗುತ್ತಾ ದಾರಿ ಸರಿಯಾಗಿ ಕಾಣದೆ ತೋಟದ ಕಪ್ಪಿನಲ್ಲಿ ಕಾಲು ಹಾಕ್ತಾ ಯಾರದೋ ಮನೆ ಬೇಲಿ ಹಾರ್ತಾ ಹೇಗೋ ಮನೆಗೆ ಬಂದು ಸುರಕ್ಷಿತವಾಗಿ ಸೇರಿದೆವು. ಇಷ್ಟೆಲ್ಲ ಸಾಹಸ ಮಾಡಿದ ಮೇಲೆ ಸುಮ್ನೆ ಇರೋಕ್ ಅಂತೂ ಆಗಲ್ಲ, ಎಲ್ಲರಿಗೂ ಚಾರಣದ ಕಥೆ ಹೇಳಿ ಅವರ ತಲೆ ತಿಂದು ಊಟ ಮಾಡಿ ಮಲಗಿದೆವು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ